ಅನ್ನದಾತನ ಕೋಪಕ್ಕೆ ಕಾರಣವೇನು? ಸರಕಾರದ ಲೋಪವೇನು? ಹೀಗಿದೆ ವಾಸ್ತವ! 

ಎರಡು ತಿಂಗಳ ಹಿಂದೆ ಕೇಂದ್ರ ಸರಕಾರ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಮೂರು ಬಹುಮುಖ್ಯ ಕಾನೂನುಗಳನ್ನು ಜಾರಿಗಳಿಸಿತು. ಈ ಮೂಲಕ ‘ದೇಶದ ರೈತರು ಮಧ್ಯವರ್ತಿಗಳ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಲಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮೊಳಗಿಸಿದ್ದರು. ಆದರೆ, ನಂತರ ನಡೆದದ್ದೇ ಬೇರೆ. ನೆಮ್ಮದಿಯ ನಿಟ್ಟುಸಿರು ತರಬೇಕಿದ್ದ ಕಾನೂನುಗಳು ರೈತರಲ್ಲಿ ಗೊಂದಲ ಸೃಷ್ಟಿಸಿದವು. ಅದರ ಪರಿಣಾಮವೇ ಇಂದು ಕೋಟ್ಯಂತರ ರೈತರು ಸರಕಾರದ ವಿರುದ್ಧ ಬಂಡೆದ್ದು, ದಿಲ್ಲಿಯಲ್ಲಿ ಪ್ರತಿಭಟನೆಗೆ ನಿಂತಿರುವುದು.

ಮೊದಲಿಗೆ ಸ್ಪಷ್ಟಪಡಿಸುವುದೇನೆಂದರೆ, ದೇಶದ ರೈತ ಅಥವಾ ಕೃಷಿ ವರ್ಗವನ್ನು ಯಾವುದೇ ಪಕ್ಷದ ಚೌಕಟ್ಟಿನಲ್ಲಿ ನೋಡುವಂತಿಲ್ಲ. ಅಲ್ಲದೆ, ಕೋಟ್ಯಂತರ ಸಂಖ್ಯೆಯಲ್ಲಿ ಸರಕಾರದ ಯಾವುದೇ ಶಿಸ್ತು ಕ್ರಮಕ್ಕೆ ಜಗ್ಗದೆ ಪ್ರತಿಭಟಿಸಿ ನಿಲ್ಲುತ್ತಾರೆ ಎಂದರೆ, ಇದು ಕೇವಲ ರಾಜಕೀಯ ಪ್ರೇರಿತ ಅಲ್ಲ. ಹೊಸ ಕಾನೂನುಗಳು ಸೃಷ್ಟಿಸಿರುವ ಅಸ್ಪಷ್ಟತೆ ಮತ್ತು ಗೊಂದಲಗಳೇ ಪ್ರತಿಭಟನೆಯ ಕೇಂದ್ರ ಬಿಂದು ಎಂಬುದು ಸುಸ್ಪಷ್ಟ. ತಮಗೂ ಕಾನೂನಾತ್ಮಕ ಭದ್ರತೆ ಬೇಕೆಂಬುದು ರೈತರ ಹಕ್ಕೊತ್ತಾಯ. ಇದಕ್ಕಾಗಿಯೇ ಪ್ರತಿಭಟನೆಯ ಅಸ್ತ್ರ.

ಬಹುತೇಕ ರೈತರಲ್ಲಿ ಹೊಸ ಕಾನೂನುಗಳಿಂದ ರೈತರಿಗೆ ಲಾಭಕ್ಕಿಂತಲೂ ನಷ್ಟವೇ ಹೆಚ್ಚಾಗಲಿದೆ ಎಂಬ ಭಾವನೆ ಇದೆ. ಹೊಸ ಕಾನೂನುಗಳ ನಿಜವಾದ ಫಲಾನುಭವಿಗಳು‌ ಕಾರ್ಪೊರೇಟ್‌ ಕಂಪನಿಗಳಾಗಲಿವೆ ಎಂಬುದು ರೈತರ ವಾದವಾಗಿದೆ.

ಕಾನೂನು ಜಾರಿಯಾಗಿದ್ದು ಸೆಪ್ಟೆಂಬರ್ನಲ್ಲಿ, ಈಗೇಕೆ ಪ್ರತಿಭಟನೆ?

ಕೇಂದ್ರ ಸರಕಾರ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲೇ ಸೂಗ್ರೀವಾಜ್ಞೆ ಮೂಲಕ ಕಾನೂನುಗಳನ್ನು ಜಾರಿಗೊಳಿಸಿತ್ತು. ನಂತರ ಸೆಪ್ಟೆಂಬರ್‌ನಲ್ಲಿ ಸಂಸತ್‌ನಲ್ಲಿ ಅಂಗೀಕರಿಸಿತು. ದೇಶದ ಬಹುಸಂಖ್ಯಾತರಾಗಿರುವ ರೈತರಿಗೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೆ ತರುವಲ್ಲಿ ಸರಕಾರ ರೈತರ ಅಭಿಪ್ರಾಯ ತೆಗೆದುಕೊಳ್ಳದಿರುವುದು ಕೂಡ ಗೊಂದಲಕ್ಕೆ ಕಾರಣವಾಗಿದೆ. ಕಾನೂನು ಜಾರಿಯಾದ ಆರಂಭದಲ್ಲೇ ಆಯಾ ರಾಜ್ಯಗಳಲ್ಲಿ ರೈತ ಪ್ರತಿಭಟನೆಗಳು ನಡೆದವು. ಆದರೆ, ಇದಕ್ಕೆ ಸರಕಾರ ಕಿವಿಗೊಡದ ಕಾರಣ ರೈತರು ದಿಲ್ಲಿಗೆ ಮುತ್ತಿಗೆ ಹಾಕಿದ್ದಾರೆ.

ರೈತ ಪ್ರತಿಭಟನೆಗಳು ಹೊಸದೇನಲ್ಲದೇಶದಲ್ಲಿ ರೈತ ಚಳವಳಿಗಳು ಇದೇ ಮೊದಲೇನಲ್ಲ. 1946 ರಿಂದ 1950ರವರೆಗೆ ಅಖಿಲ ಭಾರತ ಕಿಸಾನ್‌ ಸಭಾದ ಅಡಿಯಲ್ಲಿ ಬಂಗಾಳದಲ್ಲಿ ನಡೆದ ತೇಭಾಗ ಚಳವಳಿ,  ತೆಲಂಗಾಣ ಪ್ರಾಂತದಲ್ಲಿ 1946ರಿಂದ 1951ರವರೆಗೆ ನಡೆದ ತೆಲಂಗಾಣ ರೈತ  ಹೋರಾಟ, 1944-1946ರ ವಾರ್ಲಿ ಆದಿವಾಸಿಗಳ ಹೋರಾಟ, ಪುನ್ನಪ್ರ ವಯಲಾರ್‍ ಹೋರಾಟಗಳು ಸೇರಿದಂತೆ  ದೇಶದ ವಿವಿಧೆಡೆ ನಡೆದ ರೈತ ಹೋರಾಟಗಳ ಶ್ರೀಮಂತ ಇತಿಹಾಸವಿದೆ.

1970ರ ದಶಕದಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ವಲಯವಾರು ನಿರ್ಬಂಧಗಳಿದ್ದವು. ರೈತರು ತಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಉತ್ಪನ್ನಗಳನ್ನು ಮಾರುವಂತಿರಲಿಲ್ಲ. ಉತ್ಪಾದನೆ ಹೆಚ್ಚಿದಾಗ ಬೆಲೆ ಕುಸಿದು ಅಪಾರ ನಷ್ಟವಾಗುತ್ತಿತ್ತು. ಇದನ್ನು ವಿರೋಧಿಸಿ 1976ರಲ್ಲಿ ಪಂಜಾಬ್‌ ಮತ್ತು ಹರಿಯಾಣಗಳಲ್ಲಿ ಬೃಹತ್‌ ಚಳವಳಿಯೇ ನಡೆದಿತ್ತು. ಸುಮಾರು 1500 ಮಂದಿ ರೈತರನ್ನು 40 ದಿನಗಳವರೆಗೆ ಜೈಲಿನಲ್ಲಿ ಇರಿಸಲಾಗಿತ್ತು. 1976 ರ ನವೆಂಬರ್‌ನಲ್ಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿ, ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರು ಮಾರಾಟ ಮಾಡಬಹುದು. ಅವರನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಹೇಳಿತು. 1977 ರಲ್ಲಿ ಜನತಾ ಪಕ್ಷ ಸರ್ಕಾರವು ಇಡೀ ದೇಶವನ್ನು ಒಂದೇ ವಲಯ ಎಂದು ಘೋಷಿಸಿತ್ತು. ಇದೀಗ ಅಂತಹದೇ ಒಂದು ಬೃಹತ್‌ ಚಳವಳಿ ಆರಂಭವಾಗಿದೆ.

ರೈತರ ಆತಂಕಗಳೇನು?
ಹೊಸ ಕಾನೂನುಗಳಲ್ಲಿನ ಕೆಲವು ಅಂಶಗಳ ಕುರಿತು ರೈತರಲ್ಲಿ ಆತಂಕ ಉಂಟಾಗಿದೆ ಇದೇ ಅವರನ್ನು ಪ್ರತಿಭಟನೆಗೆ ಧುಮುಕುವಂತೆ ಮಾಡಿದೆ.
ಕಾನೂನಿನ ಭದ್ರತೆ ಇಲ್ಲಹೊಸ ಕಾನೂನಿನಲ್ಲಿ ಕೃಷಿ ಸಂಬಂಧಿತ ವಿವಾದಗಳನ್ನು ರಾಜಿ ಸಂಧಾನ ಮಂಡಳಿ, ಜಿಲ್ಲಾ ಮಟ್ಟದ ಆಡಳಿತಾಧಿಕಾರಿಗಳು ಅಥವಾ ಮೇಲ್ಮನವಿ ಪ್ರಾಧಿಕಾರಗಳಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಹೊಸ ಕಾನೂನಿನಲ್ಲಿ ತಿಳಿಸಲಾಗಿದೆ. ಇಲ್ಲಿ ಪ್ರಕರಣಗಳನ್ನು ಸಾಮಾನ್ಯ ನ್ಯಾಯಾಲಯದಲ್ಲಿ ಪರಿಹರಿಸಬಹುದು ಎಂದು ತಿಳಿಸಿಲ್ಲ. ಅಲ್ಲದೆ ಕೃಷಿ ವಿವಾದಗಳಿಗೆ ಸಂಬಂಧಿಸಿದಂತೆ ಯಾವುದೇ ಶಾಸನಾತ್ಮಕ ಕಾನೂನುಗಳಿಲ್ಲ. ಹೀಗಾಗಿ ಕಾರ್ಪೊರೇಟ್‌ ಕಂಪನಿಗಳಿಂದ ರೈತರಿಗೆ ಅನ್ಯಾಯವಾದಾಗ ಅವರು ನ್ಯಾಯಕ್ಕಾಗಿ ಹೋರಾಡಲೂ ಸೂಕ್ತ ವೇದಿಕೆಯೇ ಇಲ್ಲದ ಸ್ಥಿತಿ ಉಂಟಾಗಬಹುದು ಎಂಬ ಆತಂಕವಿದೆ.

ಕನಿಷ್ಠ ಬೆಂಬಲ ಬೆಲೆಯೇ ಇಲ್ಲವಾಗಬಹುದು?
ಹೊಸ ಕಾನೂನಿನಲ್ಲಿ ಎಪಿಎಂಸಿ ಹೊರತಾದ ಮಾರುಕಟ್ಟೆಗೆ ಪ್ರಾಧಾನ್ಯತೆ ನೀಡುವುದರಿಂದ ಮುಂದೆ ಎಪಿಎಂಸಿ ಮಂಡಿಗಳು ಅಸ್ತಿತ್ವ ಕಳೆದುಕೊಳ್ಳಬಹುದು. ಈ ಮೂಲಕ ಕನಿಷ್ಠ ಬೆಂಬಲ ಬೆಲೆಯೂ ನಿಲ್ಲಬಹುದು. ಅಲ್ಲದೆ, ಕೃಷಿಕರಿಂದ ಕನಿಷ್ಠ ಬೆಂಬಲ ಬೆಲೆಗೇ ಕೊಳ್ಳಬೇಕೆಂಬ ಯಾವುದೇ ಕಾನೂನುಗಳಿಲ್ಲ. ಪರಿಸ್ಥಿತಿ ಹೀಗಿದ್ದಾಗ ಕಂಪನಿಗಳು ಕೇಳಿದ ಬೆಲೆಗೆ ಕೊಡಬೇಕಾದ ಪರಿಸ್ಥಿತಿ ಬರಬಹುದು ಎಂಬುದು ರೈತರ ಆತಂಕ.

ಕೊನೆಯ ಮಾತು: ಚುನಾವಣೆಯಲ್ಲಿ ಗೆದ್ದ ನಂತರ ಯಾವುದೇ ಪಕ್ಷದ ಪ್ರಧಾನಿಯಾದರೂ, ಅವರು ಭಾರತದ ಪ್ರಧಾನಿ ಎನಿಸುತ್ತಾರೆ. ಅದರಲ್ಲೂ ದೇಶದ ಬಹುಸಂಖ್ಯಾತ ಜನತೆ ಅವಲಂಬಿಸಿರುವ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಕಕ್ಕಿಟ್ಟು ನಿರ್ಧಾರ ಕೈಗೊಳ್ಳಬೇಕು. ಇದು ಇಡೀ ದೇಶಕ್ಕೆ ಸಂಬಂಧಿಸಿದ ಪ್ರಕರಣವಾಗಿದ್ದು, ಇದನ್ನು ಬಿಡಿಯಾಗಿ ನೋಡದೇ, ಇಡಿಯಾಗಿ ನೋಡಬೇಕಿದೆ. ಕಾನೂನುಗಳ ಬಗ್ಗೆ ಅಧ್ಯಯನ ಆಗಬೇಕಿದೆ. ಚರ್ಚೆಗಳು ನಡೆಯಬೇಕಿದೆ. ಲಾಭ-ನಷ್ಟಗಳ ವಿಶ್ಲೇಷಣೆ ನಡೆಸಬೇಕಿದೆ. ಕಾನೂನಿನಲ್ಲಿ ಸಮಗ್ರ ಸುಧಾರಣೆಯಾಗಿ ರೈತರಿಗೂ ಕಾನೂನಾತ್ಮಕ ಭದ್ರತೆ ದೊರೆಯಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *