ಪ್ರತಿಭಟನೆ ಜಾಗ ತೆರವುಗೊಳಿಸುವಂತೆ ಯೋಗಿ ಸರಕಾರದಿಂದ ದೌರ್ಜನ್ಯ
ಹೊಸದಿಲ್ಲಿ ಜ 29 : ಕೆಂಪುಕೋಟೆ ಬಳಿ ರೈತರ ಮೇಲೆ ನಡೆಸಿದ ಹಿಂಸಾಚಾರದ ಬೆನ್ನಲ್ಲೇ ಉತ್ತರ ಪ್ರದೇಶ ಸರಕಾರವು ಘಾಜಿಪುರ ಗಡಿಯಿಂದ ಪ್ರತಿಭಟನ ನಿರತ ರೈತರನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಜಮಾವಣೆಯಾಗಿದ್ದಾರೆ.
ಉತ್ತರ ಪ್ರದೇಶ ಸರಕಾರ ಕಠಿಣ ನಿಲುವು ತಾಳಿದ್ದು, ರೈತರನ್ನು ಗುರುವಾರ ರಾತ್ರಿಯೇ ತೆರವು ಮಾಡಲು ಮುಂದಾಗಿದೆ. ಐಪಿಸಿ ಸೆಕ್ಷನ್ 133ರ ಪ್ರಕಾರ ರೈತರಿಗೆ ನೋಟಿಸ್ ನೀಡಲಾಗಿದೆ. ಇಲ್ಲಿ ನೀರು ಮತ್ತು ವಿದ್ಯುತ್ ಸರಬರಾಜು ಕಡಿತ ಮಾಡಲಾಗಿದೆ. ರೈತ ನಾಯಕ ರಾಕೇಶ್ ಟಿಕಾಯತ್ ಬಂಧನಕ್ಕೂ ಪೊಲೀಸರು ಮುಂದಾಗಿದ್ದು, ನೋಟಿಸ್ ನೀಡಿದ್ದಾರೆ. ಇದನ್ನು ಪ್ರಶ್ನಿಸಿದ ರೈತರ ಮೇಲೆ ಮನಬಂದಂತೆ ಪೊಲೀಸರು ಥಳಿಸಿದ್ದಾರೆ. ಟೆಂಟ್ ಖಾಲಿ ಮಾಡುವಂತೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಈ ನಡುವೆ ಪೊಲೀಸರು ಸಿಂಘು ಗಡಿ ಬಳಿ ಜೆಸಿಬಿ ಬಳಸಿ ರಸ್ತೆ ಅಗೆದಿದ್ದಾರೆ. ಹರಿಯಾಣದ ಕರ್ನಾಲ್‌ನಲ್ಲೂ ಸ್ಥಳ ತೆರವು ಮಾಡುವಂತೆ ರೈತರಿಗೆ ಪೊಲೀಸರು ಸೂಚಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗೆಳು ಹೋರಾಟ ನಿರತ ರೈತರನ್ನು ಘಾಸಿಗೊಳಿಸಿವೆ. ಸರಕಾರ ಮತ್ತು ಪೊಲೀಸರ ದೌರ್ಜನ್ಯದಿಂದ ರೈತರು ರೋಸಿಹೋಗಿದ್ದಾರೆ. ಪೊಲೀಸ್ ಏಟುಗಳು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಕಾಯ್ದೆ ರದ್ದಾಗುವ ವರೆಗೂ ಹೋರಾಟ ನಿಲ್ಲುವುದಿಲ್ಲ. ಪೊಲೀಸರು ಗುಂಡು ಹಾಕಿದರು ನಾವು ಕದಲುವುದಿಲ್ಲ. ಸಾಮೂಹಿಕವಾಗಿ ಪೊಲೀಸರು ನಮ್ಮ ಮೇಲೆ ದಾಳಿ ನಡೆಸಲಿ ಚಿಂತೆ ಇಲ್ಲ. ದೇಶದ ಜನ, ರೈತರು ನಮ್ಮೊಟ್ಟಿಗಿದ್ದಾರೆ. ಕಾಯ್ದೆ ರದ್ದು ಮಾಡಿ ಎಂಬ ನಮ್ಮ ಶಾಂತಿಯುತ ಹೋರಾಟವನ್ನು ಮುಂದುವರೆಸುವುದಾಗಿ ರೈತ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.