ಕೇಂದ್ರ ಸರ್ಕಾರ ಪುಕ್ಕಟ್ಟೆಯಾಗಿ ಅಕ್ಕಿ ಕೊಡಲ್ಲ, ರಾಜ್ಯದಿಂದ ಹಣ ಕೊಡ್ತಿವಿ – ಸಿದ್ದರಾಮಯ್ಯ

ಹಾಸನ: ಕೇಂದ್ರ ಸರ್ಕಾರವು ಪುಕ್ಕಟ್ಟೆಯಾಗಿ ಅಕ್ಕಿ ಕೊಡಲ್ಲ. ರಾಜ್ಯ ಸರ್ಕಾರದಿಂದ ಹಣ ಕೊಡ್ತಿವಿ. ಆದರೂ, ಅಕ್ಕಿ ಕೊಡಲ್ಲ ಎನ್ನುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಾಸನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದವರು ನಮ್ಮ ಮೇಲಿನ ಕೋಪಕ್ಕೆ ಬಡವರ ಮೇಲೆ ಗದಾಪ್ರಹಾರ ಮಾಡಲು ಹೊರಟಿದ್ದಾರೆ. ಬಿಜೆಪಿ ಎಂದರೆ ಬಡವರ ವಿರೋದಿ ಪಕ್ಷ. ಹೀಗಾಗಿ, ನಾವು ಬೇರೆ ಕಡೆಯಿಂದ ಅಕ್ಕಿ ತರಲು ಪ್ರಯತ್ನ ಮಾಡುತ್ತಿದ್ದೇವೆ. ಈ ಬಗ್ಗೆ ಬುಧವಾರ (ಜೂನ್‌ 28) ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು.

ಅಕ್ಕಿ ತರಲು ಪ್ರಯತ್ನ ಮಾಡಿದರು ಅಗತ್ಯ ಪ್ರಮಾಣದ ದಾಸ್ತಾನು ಸಿಕ್ಕಿಲ್ಲ. ಅಕ್ಕಿ ಸಿಕ್ಕಿದ ಕೂಡಲೆ ನಾವು ಈ ಯೋಜನೆ ಜಾರಿ ಮಾಡ್ತೇವೆ. ಯಾವುದೇ ಕಾರಣಕ್ಕೂ ಯೋಜನೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ಚುನಾವಣಾ ಖಾತ್ರಿ ಜಾರಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಬಿಜೆಪಿಯ ನೈತಿಕ ಹಕ್ಕನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ‘ಅಧಿಕಾರದಲ್ಲಿದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತಂದಿದ್ದಾರಾ?. ಯಡಿಯೂರಪ್ಪ (ಮಾಜಿ ಸಿಎಂ) ಅವರ ಅವಧಿಯಲ್ಲಿ ಮತ್ತು ಬಸವರಾಜ ಬೊಮ್ಮಾಯಿ (ಮಾಜಿ ಸಿಎಂ) ಅವಧಿಯಲ್ಲಿ ಎಷ್ಟು ಭರವಸೆಗಳನ್ನು ಜಾರಿಗೊಳಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ರಾಜಕೀಯ ಗಿಮಿಕ್ ಮಾಡಬಾರದು. ಬಡವರ ಪರ ಬದ್ಧತೆ ಇದ್ದರೆ ಪ್ರತಿಭಟನೆ ಮಾಡುವ ಬದಲು ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರದಿಂದ ಅನ್ನ ಕೊಡಿಸಲಿ’ ಎಂದರು.

2022-23 ನೇ ಸಾಲಿನಲ್ಲಿ ಯುವ ನಿಧಿ ಕಾರ್ಯಕ್ರಮದಡಿ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಮಾಡಿದವರಿಗೆ 6 ತಿಂಗಳೊಳಗೆ ಕೆಲಸ ದೊರೆಯದೇ ಹೋದರೆ, ಪದವೀಧರರಿಗೆ 3 ಸಾವಿರ ಹಾಗೂ ಡಿಪ್ಲೊಮಾ ಮಾಡಿದವರಿಗೆ 1500 ರೂ.ಗಳನ್ನು 24 ತಿಂಗಳು ನೀಡಲಾಗುವುದು ಎಂದು ತಿಳಿಸಿದರು.

ಮೆಡಿಕಲ್ ಕಾಲೇಜು ನಿರ್ಮಾಣದಲ್ಲಿ ಹಗರಣ : ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣದಲ್ಲಿನ ಅಕ್ರಮ ಸೇರಿದಂತೆ ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಹಗರಣಗಳು ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ. ‘ನಾವು ಹಗರಣಗಳ ಬಗ್ಗೆ ವಿಚಾರಣೆ ನಡೆಸುತ್ತೇವೆ. ನಾಲ್ಕು ಮೆಡಿಕಲ್ ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದ್ದು, ತನಿಖೆ ನಡೆಸುತ್ತೇವೆ. ಅಲ್ಲದೆ, ಶೇ 40ರಷ್ಟು ಕಮಿಷನ್‌ ಕುರಿತಾಗಿಯೂ ತನಿಖೆ ನಡೆಸುತ್ತೇವೆ. ಕೋವಿಡ್-19 ಅವಧಿಯಲ್ಲಿ ಆರೋಗ್ಯ ಪರಿಕರಗಳ ಖರೀದಿಗಳಲ್ಲಿ ಅಕ್ರಮಗಳು, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಅಕ್ರಮಗಳು ಮತ್ತು ಬಿಟ್‌ಕಾಯಿನ್ ಹಗರಣಗಳು ನಡೆದಿವೆ. ಅವುಗಳೆಲ್ಲವನ್ನೂ ತನಿಖೆ ನಡೆಸಲಾಗುವುದು’ ಎಂದು ಹೇಳಿದರು.

 

 

Donate Janashakthi Media

Leave a Reply

Your email address will not be published. Required fields are marked *