ವಿಜಯನಗರ: ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯವು ಬಿ.ಇಡಿ 4ನೇ ಸೆಮಿಸ್ಟರ್ನ ಫಲಿತಾಂಶ ಬಿಡುಗಡೆ ಮಾಡಿದೆ, ಆದರೆ ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣ ಪತ್ರಗಳನ್ನು ಇಲ್ಲಿವರೆಗೂ ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡದೆ ವಿಳಂಬ ಮಾಡಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ರಾಜ್ಯ ಸಮಿತಿ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಬಳ್ಳಾರಿ ವಿಜಯನಗರ, ಕೊಪ್ಪಳ ಜಿಲ್ಲೆಯ ಸುಮಾರು 21 ಬಿ.ಇಡಿ ಕಾಲೇಜಿನಲ್ಲಿ 80ಕ್ಕೂ ಅಧಿಕ ವಿದ್ಯಾರ್ಥಿಗಳು ಬಿ.ಇಡಿ ಮೂರನೇ ಸೆಮಿಸ್ಟರ್ ಓದುತ್ತಿರುವಾಗ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆದು ಉತ್ತೀರ್ಣರಾಗಿ ಶಿಕ್ಷಕರ ಹುದ್ದೆಗೆ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ.
ರಾಜ್ಯ ಸರಕಾರವು ನಾಲ್ಕು ವರ್ಷಗಳ ನಂತರ 15,000 ಶಿಕ್ಷಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಿದ್ದು ಅರ್ಜಿ ಹಾಕಲು ಕೊನೆಯ ದಿನಾಂಕ ಏಪ್ರಿಲ್ 22 ಆಗಿದೆ. ಶಿಕ್ಷಕರ ಹುದ್ದೆಗೆ ಅರ್ಜಿ ಹಾಕಬೇಕಾದರೆ ವಿದ್ಯಾರ್ಥಿಗಳ ನಾಲ್ಕನೆಯ ಸೆಮಿಸ್ಟರ್ ನ ಮೂಲ ಅಂಕಪಟ್ಟಿ ಹಾಗೂ ಉತ್ತೀರ್ಣ ಪ್ರಮಾಣ ಪತ್ರ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ. ಇತರೆ ವಿಶ್ವವಿದ್ಯಾಲಯಗಳು ಈಗಾಗಲೇ ಅಂಕಪಟ್ಟಿ ಹಾಗೂ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಮುದ್ರಿಸಿ, ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದೆ.
ಮೂಲ ದಾಖಲೆಗಳನ್ನು ಸಂದಾಯ ಮಾಡದಿದ್ದಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ತೆಗೆದುಕೊಳ್ಳುತ್ತಿಲ್ಲ ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲಾಗದೇ ಆತಂಕಕ್ಕೊಳಗಾಗಿದ್ದಾರೆ. ರಾಜ್ಯದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಮತ್ತು ಇನ್ನಿತರ ವಿಶ್ವವಿದ್ಯಾಲಯಗಳು ಫಲಿತಾಂಶ ಜೊತೆಗೆ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಮುದ್ರಣ ಮಾಡಿ ಕಳಿಸಿರುತ್ತಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅದೇ ಮಾದರಿಯಲ್ಲಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯವು ಅನುಸರಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ರಾಜ್ಯ ಸಮಿತಿ ಕುಲಪತಿಗಳಿಗೆ ಮನವಿ ಮಾಡಿದೆ.
ಈಗಾಗಲೇ ಮಾರ್ಚ್ 28ರಂದು ಸಲ್ಲಿಸಲಾದ ಮನವಿಯಲ್ಲಿ ಬಿ.ಇಡಿ 4 ನೇ ಸೆಮಿಸ್ಟರ್ ಫಲಿತಾಂಶ ಬಿಡುಗಡೆ ಮಾಡಿ ಜೊತೆಯಲ್ಲಿ ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣ ಪತ್ರಗಳನ್ನು ವಿತರಿಸಬೇಕೆಂದು ತಿಳಿಸಲಾಗಿತ್ತು.
ಈ ವಿಷಯವು ತುಂಬಾ ಗಂಭೀರವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರ ಹುದ್ದೆಗೆ ಅರ್ಜಿ ಹಾಕಲು ಅರ್ಹತೆ ಇದ್ದರೂ ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣ ಪತ್ರ ಇಲ್ಲದ ಪರಿತಪಿಸುವಂತಾಗಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಶೀಘ್ರವಾಗಿ ಮೂಲ ಅಂಕಪಟ್ಟಿ ಮತ್ತು ಉತ್ತೀರ್ಣ ಪ್ರಮಾಣ ಪತ್ರಗಳನ್ನು ಮುದ್ರಣ ಮಾಡಿ ಕಾಲೇಜುಗಳಿಗೆ ಕಳಿಸಿಕೊಡಬೇಕೆಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ರಮೇಶ ಓಲೇಕರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಬಿ.ಇಡಿ ವಿದ್ಯಾರ್ಥಿಗಳಾದ ಶಿವಕುಮಾರ, ಮಂಜುನಾಥ್, ರಸೂಲ್ ,ಮೇಘನಾ, ರಾಜೇಶ್ವರಿ, ಪುಷ್ಪ, ಕವಿತಾ, ಹರ್ಷಾಬಾನು ಸಂತೋಷ ಇತರರು ಇದ್ದರು.