ಹೊಸ ಶಿಕ್ಷಣ ನೀತಿಯ ಅವೈಜ್ಞಾನಿಕ ಮಾನದಂಡದಿಂದ ಅಂಗನವಾಡಿಗಳ ಉಳಿವಿಗೆ ಕುತ್ತು: ಮುಂದುವರೆದ ಅಂಗನವಾಡಿ ನೌಕರರ ಹೋರಾಟ

ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಆದೇಶವನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಎರಡನೇ ದಿನಕ್ಕೆ ತಲುಪಿದೆ.

ಬಡಜನ, ಸಾಮಾನ್ಯರ ಮಕ್ಕಳು ಮತ್ತು ತಾಯಂದಿರಿಗಾಗಿ ಅಂಗನವಾಡಿ ಕೇಂದ್ರಗಳು ಉಳಿಯಬೇಕು, 4-6 ವರ್ಷದ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿಯೇ ಶಿಕ್ಷಣ ಮುಗಿಸಬೇಕು ಎಂದು ಹಠ ಬಿಡದ ಅಂಗನವಾಡಿ ನೌಕರರು ಸಿಐಟಿಯು ನೇತೃತ್ವದಲ್ಲಿ ಅಹೋರಾರಾತ್ರಿ ಹೋರಾಟ ನಡೆಸುತ್ತಿದ್ದಾರೆ.

ಈ ಹಿಂದಿನಂತೆ ಶಾಲಾಪೂರ್ವ ಶಿಕ್ಷಣ ಅಂಗನವಾಡಿಗಳಲ್ಲೇ ಉಳಿಸಬೇಕು, ಇದನ್ನು ಕಸಿದು ಪ್ರಾಥಮಿಕ ಶಾಲೆಗಳಿಗೆ ವಹಿಸಬಾರದು, ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿ ಮಾಡಬಾರದು, ಎನ್.ಇ.ಪಿ ಭಾಗವಾಗಿ ವ್ಯತಿರಿಕ್ತವಾಗಿ ಜಾರಿಯಾಗುತ್ತಿರುವ 4ರಿಂದ 6 ವಯೋಮಿತಿಯ ಮಕ್ಕಳು ಅಂಗನವಾಡಿಗೇ ಉಳಿಯಬೇಕು, ಒಂದು ಇಲಾಖೆಯ ಸಬಲಿಕರಣಕ್ಕೆ ಇನ್ನೊಂದು ಇಲಾಖೆಯನ್ನು ಅದರ ಅಡಿಯಲ್ಲಿ ಇರುವ ಯೋಜನೆಯನ್ನು ದುರ್ಬಲಗೊಳಿಸುವಿಕೆ ನಿಲ್ಲಲಿ, ಗ್ರಾಚ್ಯುಟಿ ಆದೇಶ ಕೂಡಲೇ ಜಾರಿ ಮಾಡಿ, ನಿವೃತ್ತಿ ಸೌಲಭ್ಯನೀಡಿ, ರೆಡಿಮೇಡ್ ಪೌಷ್ಟಿಕ ಆಹಾರ ಬದಲಿಸಿ, ಕೂಸಿನ ಮನೆ ಮತ್ತಿತರ ನಕಲು ಯೋಜನೆ ಕೈಬಿಡಿ, ಚುನಾವಣೆ ಆಶ್ವಾಸನೆಯಂತೆ ಗೌರವಧನ ಹೆಚ್ಚಿಸಿಬೇಕು ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ಆಗ್ರಹಿಸಿದ್ದಾರೆ.

ಜೂನ್ 3 ರಂದು ಹತ್ತು ಸಾವಿರ ಜನ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮಂಡಳಿ ಕೆಕೆ ಆರ್ ಡಿಬಿ ಗುಲ್ಬರ್ಗ ಎದುರು ಹೋರಾಟ ಆರಂಭವಾಯಿತು. ಈವರೆಗೆ ರಾಜ್ಯದಾದ್ಯಂತ ವಿವಿಧ ಹಂತದಲ್ಲಿ ಹೋರಾಟ ನಡೆದರೂ ಸರ್ಕಾರ ಸಕಾರಾತ್ಮಕ ಸ್ಪಂದನೆ ಇಲ್ಲದ್ದರಿಂದ ಇಂದು ಜೂನ್ 19 ರಿಂದ ಅನಿರ್ದಿಷ್ಟ ಅವಧಿಯ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ಅಂಗನವಾಡಿ ನೌಕರರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆಯು ಎಲ್ ಕೆಜಿ, ಯುಕೆಜಿ
ಕಲಿಸುವ ನೆಪದಲ್ಲಿ 4-6 ವರ್ಷದ ಮಕ್ಕಳನ್ನು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸೇರಿಸಿಕೊಳ್ಳಲು ಆದೇಶಿಸಿದ್ದರಿಂದ ಅಂಗನವಾಡಿಗಳಿಗೆ ಹಾಜರಾತಿ ಕೊರತೆ ಆಗುತ್ತಿದೆ. ಸರ್ಕಾರ ತನ್ನ ಅವೈಜ್ಞಾನಿಕ ಮಾನದಂಡ ಅನುಸರಿಸಿದ್ದರಿಂದ ತಾಯಂದಿರ ಮತ್ತು ಮಕ್ಕಳ ಹಕ್ಕುಗಳಿಗೆ ಚ್ಯುತಿ ಆಗಿದೆ. ಬಡ ಜನ ಸಾಮಾನ್ಯರ ಮಕ್ಕಳು ಮತ್ತು ತಾಯಂದಿರಿಗಾಗಿ ಅಂಗನವಾಡಿ ಗಳಲ್ಲೇ ಇಸಿಸಿಇ ಉಳಿಯಬೇಕು. ಎಷ್ಟೇ ಕಷ್ಟವಾದರೂ ಬೇಡಿಕೆ ಈಡೇರುವ ತನಕ ಕದಲುವ ಪ್ರಶ್ನೆಯೇ ಇಲ್ಲವೆಂದು ಪ್ರತಿಭಟನೆಕಾರರು ಎಚ್ಚರಿಸಿದ್ದಾರೆ.

‘ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ’

‘ಅಂಗನವಾಡಿ ಕೇಂದ್ರಗಳಲ್ಲೆ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣ ಜಾರಿಗೊಳಿಸುವ ಕುರಿತು ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಇನ್ನೆರಡು ದಿನಗಳಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರ ಮನವಿ ಸ್ವೀಕರಿಸಿ ‘ಅಂಗನವಾಡಿ ನೌಕರರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು’ ಎಂಬ ಭರವಸೆ ನೀಡಿದರು.

ಹೋರಾಟದ ನೇತೃತ್ವವನ್ನು ಸಂಘಟೆಯ ನಾಯಕರಾದ ಜಿ ಕಮಲಾ, ಯಮುನಾ ಗಾಂವ್ಕರ್, ಗುಲ್ಜಾರ್, ಲಕ್ಷ್ಮಿದೇವಮ್ಮ, ದೊಡ್ಡವ್ವ ಪೂಜಾರಿ, ಸುಶೀಲಾ ನಾಡಾ, ಪುಷ್ಪಾ ಎಂಬಿ, ನಳಿನಾಕ್ಷಿ, ಲೀಲಾವತಿ ಟಿ, ರಾಜೇಶ್ವರಿ, ಕಮಲಾಕ್ಷಿ, ತನುಜಾ, ನೀಲಮ್ಮ, ಹನುಮಕ್ಕ ದಾಸರ್, ಸುಶೀಲಾ ಪಾವಗಡ, ಅನುಸೂಯಾ, ಭಾರತಿ ಉಡುಪಿ ವಹಿಸಿದ್ದರು. ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಂಗನವಾಡಿ ನೌಕರರು ಭಾಗವಹಿಸಿದ್ದರು.

 

Donate Janashakthi Media

Leave a Reply

Your email address will not be published. Required fields are marked *