ಮಧ್ಯಪ್ರದೇಶ: ರಾಜ್ಯದ ನೀಮಚ್ ಜಿಲ್ಲೆಯ ಅಂಗನವಾಡಿ ಕೇಂದ್ರವೊಂದರಲ್ಲಿ ಮಕ್ಕಳನ್ನು ರಕ್ಷಿಸುವ ಸಲುವಾಗಿ ಪ್ರಾಣತ್ಯಾಗ ಮಾಡಿದ ಅಂಗನವಾಡಿ ಕಾರ್ಯಕರ್ತೆ, ಮಾನವೀಯತೆಯ ಅಪರೂಪದ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ ಎಂದು timesnownews ವರದಿ ಮಾಡಿದೆ. ದಾಳಿ
ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ಜೇನುನೊಣಗಳ ಗುಂಪು ದಾಳಿ ನಡೆಸಿದ ಸಂದರ್ಭದಲ್ಲಿ, ಸುಮಾರು 20 ಮಕ್ಕಳ ಪ್ರಾಣ ಉಳಿಸಲು ಮುಂದಾದ ಅಂಗನವಾಡಿ ಕಾರ್ಯಕರ್ತೆ ಕಾಂಚನ್ ಬಾಯಿ ಮೇಘವಾಲ್ (Kanchan Bai Meghwal) ಜೇನುನೊಣ ಕಚ್ಚಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನದ ಊಟ ತಯಾರಿಸುವ ಸ್ವಯಂ ಸಹಾಯ ಗುಂಪಿನ ನೇತೃತ್ವವನ್ನು ಕಾಂಚನ್ ಬಾಯಿ ವಹಿಸಿಕೊಂಡಿದ್ದರು. ಜೇನುನೊಣಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವುದನ್ನು ಗಮನಿಸಿದ ಕೂಡಲೇ, ಅವರು ಮಕ್ಕಳನ್ನು ತಾರ್ಪಾಲಿನ್ ಮತ್ತು ಚಾಪೆಗಳಿಂದ ಮುಚ್ಚಿ ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದರು. ಬಳಿಕ, ಮಕ್ಕಳನ್ನು ಒಳಗಿರುವ ಕೊಠಡಿಗೆ ಕರೆದೊಯ್ದು, ತಾವು ಹೊರಗೇ ನಿಂತು ಜೇನುನೊಣಗಳನ್ನು ತಮ್ಮ ಕಡೆ ಸೆಳೆಯುವ ಮೂಲಕ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಂಡರು.
ಇದನ್ನೂ ಓದಿ: ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 25 ಐಟಿಎಂಎಸ್ ಕ್ಯಾಮರಾ ಆಳವಡಿಕೆ
ಈ ವೇಳೆ ನೂರಾರು ಬಾರಿ ಜೇನುನೊಣ ಕಚ್ಚಿದ ಪರಿಣಾಮ ಕಾಂಚನ್ ಬಾಯಿ ಕುಸಿದು ಬಿದ್ದಿದ್ದಾರೆ. ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ, ಅವರು ಗಂಭೀರ ಸ್ಥಿತಿಯಲ್ಲಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಫೆಬ್ರವರಿ 3ರಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ.
ಕಾಂಚನ್ ಬಾಯಿ ಕುಟುಂಬದ ಏಕೈಕ ಆದಾಯದ ಮೂಲವಾಗಿದ್ದರು. ಅವರ ಪತಿ ಶಿವಲಾಲ್ ಪಾರಾಲಿಸಿಸ್‌ನಿಂದ ಬಳಲುತ್ತಿದ್ದು, ಮಗ ಮತ್ತು ಇಬ್ಬರು ಪುತ್ರಿಯರ ಪೋಷಣೆಯ ಸಂಪೂರ್ಣ ಜವಾಬ್ದಾರಿಯನ್ನೂ ಕಾಂಚನ್ ಬಾಯಿಯೇ ವಹಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಈ ದುರ್ಘಟನೆಯ ಬಳಿಕ, ಅಂಗನವಾಡಿ ಆವರಣದಲ್ಲಿ ಇರುವ ಮರದಿಂದ ಜೇನುಗೂಡನ್ನು ತಕ್ಷಣ ತೆರವುಗೊಳಿಸಬೇಕು ಹಾಗೂ ಮೃತ ಕಾರ್ಯಕರ್ತೆಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
“20ಕ್ಕೂ ಹೆಚ್ಚು ಮಕ್ಕಳ ಪ್ರಾಣ ಉಳಿಸಿದ ಈ ಧೈರ್ಯಶಾಲಿ ಮಹಿಳೆಯ ಮಾನವೀಯ ಕೃತ್ಯಕ್ಕೆ ಬೆಲೆ ಕಟ್ಟಲಾಗದು. ಆದರೆ, ಸರ್ಕಾರವು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ಫೆ12ರ ಮುಷ್ಕರ | ಕೃಷಿ ರೈತರದ್ದು, ಕಾರ್ಪರೇಟ್ ಕಂಪನಿಗಳದ್ದು ಅಲ್ಲ | ಸಿದ್ಧನಗೌಡ ಪಾಟೀಲ್ | ಗುರುರಾಜ ದೇಸಾಯಿ
