ಅಂಗನವಾಡಿ ಮೇಲ್ಛಾವಣಿ ಕುಸಿತ; 4 ಮಕ್ಕಳಿಗೆ ಗಾಯ

ಕೊಪ್ಪಳ: ಗಂಗಾವತಿಯ ಮೆಹಬೂಬ್ ನಗರದಲ್ಲಿ ಅಂಗನವಾಡಿ ಮೇಲ್ಚಾವಣಿ ಕಾಂಕ್ರಿಟ್ ಬಿದ್ದು 4 ಮಕ್ಕಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಗಾಯಾಳು ಮಕ್ಕಳಿಗೆ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಅಂಗನವಾಡಿಯಲ್ಲಿ ಸುಮಾರು 20ಕ್ಕೂ ಅಧಿಕ ಮಕ್ಕಳು ಇದ್ದ ಸಂದರ್ಭದಲ್ಲಿ ಏಕಾಏಕಿ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಮಕ್ಕಳ ತಲೆ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಅಮನ್, ಮನ್ವಿತ್, ಮರ್ದನ್, ‌ಸುರಕ್ಷಾ ಗಾಯಗೊಂಡ ಮಕ್ಕಳು ಎನ್ನಲಾಗಿದೆ. ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ರಾಮದುರ್ಗ | ದಲಿತ ಯುವಕನಿಗೆ ಹಲ್ಲೆ – ಸಿಪಿಐ(ಎಂ) ನಿಂದ ಪ್ರತಿಭಟನೆ

ಕಳಪೆ ಕಾಮಗಾರಿಯೇ ಘಟನೆಗೆ ಕಾರಣ

ಇನ್ನು ಮೆಹಬೂಬ್ ನಗರದಲ್ಲಿ ನಿರ್ಮಾಣವಾಗಿರೋ ಅಂಗನವಾಡಿ ಕಟ್ಟಡ ತೀರಾ ಹಳೆಯ ಕಟ್ಟಡವೇನಲ್ಲಾ. ಈ ಅಂಗನವಾಡಿ ಕಟ್ಟಡವನ್ನು ನಿರ್ಮಿಸಿ ಕೇವಲ ಏಳು ವರ್ಷವಾಗಿದೆ. ಏಳೇ ವರ್ಷಕ್ಕೆ ಕಟ್ಟಡದ ಕಾಮಗಾರಿ ಅಸಲಿಯತ್ತು ಬಯಲಾಗಿದೆ. ಹೌದು ಕಳಪೆ ಕಾಮಗಾರಿಯಿಂದಲೇ ಈ ಘಟನೆ ನಡೆದಿದ್ದು ಇದಕ್ಕೆ ಕಾರಣವಾಗಿರೋ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಪಾಲಕರು ಆಗ್ರಹಿಸಿದ್ದಾರೆ.

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದಿಂದ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿಲ್ಲ. ಜೊತೆ 3-4 ತಿಂಗಳಿಂದ ಕಾರ್ಯಕರ್ತೆಯರಿಗೆ ಸಂಬಳ ಬಂದಿಲ್ಲ. ಮೊಟ್ಟೆ ಖರೀದಿಸಿರುವ ಹಣ ಕೂಡ ಪೆಂಡಿಂಗ್ ಇದೆ. ಇದರ ಜೊತೆಗೆ ಈಗ ತರಕಾರಿಗೂ ತಮ್ಮದೇ ಸ್ವಂತ ಹಣ ಹಾಕಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಸ್ಥಿತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಂದಿದೆ. ಇಂತಹ ಸಮಸ್ಯೆಗಳ ನಡುವೆ ಇದೀಗ ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಕೂಡ ಸರಿ ಇಲ್ಲ. ಈ ರೀತಿಯ ಅವ್ಯವಸ್ಥೆ ಇದ್ದರೆ ಯಾವ ಪೋಷಕರು ಕೂಡ ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳಿಸಲು ಇಷ್ಟ ಪಡುವುದಿಲ್ಲ.

Donate Janashakthi Media

Leave a Reply

Your email address will not be published. Required fields are marked *