ನವದೆಹಲಿ: ದೇಶದ ರಾಜಧಾನಿಯಲ್ಲಿ ಸಂಸತ್ತಿನಿಂದ ಸ್ವಲ್ಪವೇ ದೂರದಲ್ಲಿ ಇರುವ ಜಂತರ್ ಮಂತರ್ ನಲ್ಲಿ ಜೂನ್ 26ರಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ದೀರ್ಘ ಕಾಲದಿಂದ ಈಡೇರಿಸದಿರುವ ಆಗ್ರಹಗಳ ಮೇಲೆ ನಾಲ್ಕು ದಿನಗಳ “ಅಂಗನವಾಡಿ ಅಧಿಕಾರ್ ಮಹಾಪಡಾವ್” ಆರಂಭಿಸಿದ್ದಾರೆ. ಜುಲೈ 29ರ ವರೆಗೆ ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟ(ಎಐಎಫ್‍ಎಡಬ್ಲ್ಯುಹೆಚ್)ದ ನೇತೃತ್ವದಲ್ಲಿ ನಡೆಯುವ ಈ ಮಹಾಪಡಾವ್ ನಲ್ಲಿ ದೇಶದ 18 ರಾಜ್ಯಗಳಿಂದ ಸಾವಿರಾರು ಅಂಗನವಾಡಿ ನೌಕರರು ‘ನಮ್ಮ ಹಕ್ಕನ್ನು ಪಡೆದೇ ಏಳುತ್ತೇವೆ” ಎಂಬ ಘೋಷಣೆಯೊಂದಿಗೆ ಕುಳಿತುಕೊಂಡಿದ್ದಾರೆ.
ದೇಶದ ಅತ್ಯುಚ್ಚ ತ್ರಿಪಕ್ಷೀಯ ಕಾರ್ಮಿಕ ಸಂಸ್ಥೆ ಐಎಲ್‍ಸಿಯ 45ನೇ ಮತ್ತು 46ನೇ ಅಧಿವೇಶನಗಳು ಶಿಫಾರಸು ಮಾಡಿರುವಂತೆ ಮತ್ತು ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಅಂಗನವಾಡಿ ನೌಕರರಿಗೆ ಕನಿಷ್ಟ ಕೂಲಿ, ಪೆನ್ಶನ್ ಮತ್ತು ಗ್ರಾಚ್ಯುಟಿಯನ್ನು ಜಾರಿಗೆ ತರಬೇಕೆಂಬುದು ಈ ಮಹಾಪಡಾವ್‍ನ ಮುಖ್ಯ ಬೇಡಿಕೆ. ಹರ್ಯಾಣ ಮತ್ತು ದಿಲ್ಲಿಯಲ್ಲಿ ಕೆಲಸದಿಂದ ತೆಗೆದು ಹಾಕಿರುವ ಸುಮಾರು 2000 ನೌಕರರನ್ನು ತಕ್ಷಣವೇ ವಾಪಾಸು ಸೇರಿಸಿಕೊಳ್ಳಬೇಕು , ನೌಕರರಿಗೆ ಕಿರುಕುಳ ನಿಲ್ಲಬೇಕು, ಮತ್ತು ಪೋಷಣ್ ಟ್ರಾಕರ್ ಆಪ್‍ನ ಹೆಸರಲ್ಲಿ ಫಲಾನುಭವಿಗಳ ಆಧಾರ್ ಜೋಡಣೆ ಕಡ್ಡಾಯವಾಗಿ ಆಗಬೇಕು ಎಂಬ ಆದೇಶ ಬೇಡ, ದೇಶಾದ್ಯಂತ ಒಂದೇ ರೀತಿಯ ಕೆಲಸದ ಷರತ್ತುಗಳಿರಬೇಕು ಹಾಗೂ ಅಂಗನವಾಡಿ ಕೇಂದ್ರಗಳ ‘ದತ್ತಿ’ನ ಹೆಸರಲ್ಲಿ ಅವುಗಳ ಖಾಸಗೀಕರಣ ಅಥವ ಎನ್‍ಜಿಒಕರಣ ಮಾಡಬಾರದು ಎಂಬುದು ಈ ಮಹಾಪಡಾವ್ ನ ಇತರ ಬೇಡಿಕೆಗಳು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಮಹಾಪಡಾವನ್ನು ಉದ್ಘಾಟಿಸಿದರು ಮತ್ತು ಸಿಐಟಿಯು ಅಧ್ಯಕ್ಷೆ ಹೇಮಲತಾ ರ್ಯಾಲಿಯನ್ನು ಉದ್ದೇಶಿಸಿ ಮಾತಾಡಿದರು. ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಈ ಮಹಾಪಡಾವನ್ನು ಸಂಘಟಿಸಿದ್ದು ಯಾವ-ಯಾವ ರಾಜ್ಯಗಳ ಎಷ್ಟೆಷ್ಟು ಸಂಸದರು ಸಂಸತ್ತಿನಲ್ಲಿ ಇವರ ಹಕ್ಕುಗಳನ್ನು ಎತ್ತುತ್ತಾರೆ ಎಂದು ಈ ನೌಕರರು ಕಾದು ನೋಡುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಬೆಂಬಲಿಸುವಂತೆ ರಾಜ್ಯಗಳ ಅಂಗನವಾಡಿ ನೌಕರರ ಸಂಘಗಳು ತಂತಮ್ಮ ರಾಜ್ಯಗಳ ಸಂಸದರನ್ನು ಆಗ್ರಹಿಸಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿ ಸ್ಮೃತಿ ಇರಾನಿಯವರನ್ನು ಭೇಟಿಯಾಗಲು ಸಂಘಟನೆಯ ಮುಖಂಡರು ಅವಕಾಶ ಕೇಳಿದ್ದಾರೆ. ಇದುವರೆಗೂ ಸಚಿವಾಲಯದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಲಾಗಿದೆ.
ಈ ಎಪ್ರಿಲಿನಲ್ಲಿ ನೀಡಿದ 72 ಪುಟಗಳ ತೀರ್ಪಿನಲ್ಲಿ ಸುಪ್ರಿಂ ಕೋರ್ಟ್ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಚ್ಯುಟಿ ಪಾವತಿ ಕಾಯ್ದೆ, 1972ರ ಅಡಿಯಲ್ಲಿ ಗ್ರಾಚ್ಯುಟಿಗೆ ಅರ್ಹರಾಗಿದ್ದಾರೆ ಎಂದು ಹೇಳಿತ್ತು. ಅಲ್ಲದೆ, ಇವರು ಬುಡಮಟ್ಟದಲ್ಲಿ ಹಲವಾರು ಮಹತ್ವದ ಸೇವೆಗಳನ್ನು ಒದಗಿಸುತ್ತಿದ್ದರೂ ಅತ್ಯಲ್ಪ ಪ್ರತಿಫಲ ಪಡೆಯುತ್ತಿದ್ದಾರೆ, ಎಲ್ಲರೂ ಮಹಿಳೆಯರೇ ಆಗಿರುವ ಈ ವಿಭಾಗದ ಶೋಚನೀಯ ಸ್ಥಿತಿಯನ್ನು ಗಂಭಿರವಾಗಿ ಗಮನಕ್ಕೆ ತಗೊಳ್ಳಬೇಕು ಎಂದೂ ಆ ತೀರ್ಪಿನಲ್ಲಿ ಹೇಳಲಾಗಿದೆ.
ರೈತ ಮುಖಂಡರು ಮತ್ತು ಕಾರ್ಮಿಕ ಮುಖಂಡರು ಮಹಾಪಡಾವ್ ನ ಸ್ಥಳಕ್ಕೆ ಬಂದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. “ಅಂಗನವಾಢಿ ಕೇಂದ್ರಗಳು ಎಂದರೆ ಕಾರ್ಮಿಕರು ಮತ್ತು ರೈತರ ಮಕ್ಕಳು ಸರಿಯಾದ ಪೋಷಣೆ ಮತ್ತು ಆರಂಭಿಕ ಬಾಲ್ಯದ ಆರೈಕೆಯನ್ನು ಪಡೆಯುವ ಜಾಗ. ಇದನ್ನು ಒದಗಿಸುವ ಐಸಿಡಿಎಸ್ ಯೋಜನೆಯನ್ನು ಮೋದಿ ಸರಕಾರ ತನ್ನ ಜನ-ವಿರೋಧಿ ಧೋರಣೆಗಳ ಭಾಗವಾಗಿ ದುರ್ಬಲಗೊಳಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ” ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಹೇಳಿದ್ದಾರೆ.