ಮಂಗಳೂರು: ನೇತ್ರಾವತಿ ನದಿ ತೀರದ ಅಂಗನವಾಡಿ ಮಕ್ಕಳಿಗಿಲ್ಲ ಕುಡಿಯಲು ನೀರು, ನಡೆಯಲಾಗದ ಕಡಿದಾದ ರಸ್ತೆ, ಕೈಗೆಟಕುವ ವಿದ್ಯುತ್ ತಂತಿ ಅವಘಡ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಲಿ ಎಂದು ಸಂತೋಷ್ ಬಜಾಲ್ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ವಾರ್ಡಿನ ಕಟ್ಟಪುಣಿ ಎಂಬ ನೇತ್ರಾವತಿ ನದಿ ತೀರದ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರದ ಮಕ್ಕಳು ಕುಡಿಯುವ ನೀರಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪಾಲಿಕೆ ಅಳವಡಿಸಿರುವ ನಳ್ಳಿಯಿಂದ ಈ ಭಾಗದ ನಾಲ್ಕೈದು ಮನೆಗಳಿಗೆ ಸಹಿತ ನೀರೇ ಬರುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ವಿಜಯಪುರ| ಮೊದಲು ಜೆಸಿಬಿ ತಂದು ರಸ್ತೆಗುಂಡಿ ಮುಚ್ಚಿಸಿ – ಯತ್ನಾಳ್ ಜೆಸಿಬಿ ಹೇಳಿಕೆಗೆ ಸಾರ್ವಜನಿಕರ ಆಕ್ರೋಶ
ನೇತ್ರಾವತಿ ನದಿಯ ಮಗ್ಗುಲಲ್ಲೇ ಇರುವ ಅಂಗನವಾಡಿ ಕೇಂದ್ರವು ನೀರಿಗಾಗಿ ದೂರದ ಬಾವಿಯನ್ನು ಆಶ್ರಯಿಸುವಂತಾಗಿದೆ. ಬೇಸಿಗೆಯಲ್ಲಿ ಬಾವಿ ನೀರು ಕೂಡ ಬಹಳ ಆಳಕ್ಕೆ ಇಳಿದಿದ್ದು ಅಂಗನವಾಡಿ ಸಹಾಯಕಿ ಒಂದು ಕೊಡ ನೀರು ಸಂಗ್ರಹಿಸಲು ಬಹಳಷ್ಟು ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ.
ಮತ್ತು ಅಂಗನವಾಡಿ ಕೇಂದ್ರವು ಎತ್ತರದ ಗುಡ್ಡ ಪ್ರದೇಶದಲ್ಲಿ ಇರೋದರಿಂದ ಕೇಂದ್ರಕ್ಕೆ ಸಾಗುವ ಕಾಲು ದಾರಿ ಸಂಪೂರ್ಣ ಹದಗೆಟ್ಟಿದ್ದು ಸರಿಯಾಗಿ ನಡೆದಾಡಲೂ ಆಗದಷ್ಟು ಕಡಿದಾದ ದುರ್ಗಮ ರಸ್ತೆಯಂತಿದೆ. ಸಣ್ಣ ಮಕ್ಕಳು ಈ ರಸ್ತೆಯಲ್ಲಿ ಸಾಗಲು ಅಸಾಧ್ಯವೇ ಅನ್ನುವಷ್ಟು ಕೆಟ್ಟದಾಗಿದೆ.
ಅಲ್ಲದೆ ಈ ಕೇಂದ್ರದ ಹಿಂಭಾಗ ಹಾದು ಹೋಗುವ ರಸ್ತೆಯ ಸಮೀಪದಲ್ಲೇ ಕೈಗೆಟುವ ರೀತಿಯಲ್ಲಿ ವಿದ್ಯುತ್ ಸಂಪರ್ಕ ತಂತಿ ಹಾದು ಹೋಗಿರೋದರಿಂದ ಇದು ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿದೆ. ಒಂದು ವೇಳೆ ಅವಘಡ ಸಂಭವಿಸಿದಲ್ಲಿ ಮಕ್ಕಳು ಸಹಿತ ಜನಸಾಮಾನ್ಯರ ಜೀವಕ್ಕೆ ಹಾನಿಯಾಗುವ ಮುನ್ಸೂಚನೆ ಇದ್ದು ಈ ಕೂಡಲೇ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
ಇದನ್ನೂ ನೋಡಿ: ದುಡಿಯುವ ಜನರಿಗೆ ದುಡ್ಡಿಲ್ಲ! ಆದರೆ ಶಾಸಕರ ವೇತನ ದುಪ್ಪಟ್ಟಾಯ್ತು!! ಅಂಥಾ ಕಷ್ಟ ಅವರಿಗೇನಿತ್ತು? Janashakthi Media