ಬೆಂಗಳೂರು : ಶಿಕ್ಷಕಿಯರ ಸ್ಥಾನಮಾನಕ್ಕೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಹೋರಾಟ 3ನೇ ದಿನಕ್ಕೆ ಕಾಲಿಟ್ಟಿದೆ. ಸಿಐಟಿಯುನ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆಯಲ್ಲಿ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದಾರೆ.
ರಸ್ತೆಯಲ್ಲೇ ನಿದ್ದೆ ರಸ್ತೆಯಲ್ಲೇ ಊಟ ಮಾಡುತ್ತಾ ಅಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಎಷ್ಟೇ ಚಳಿ ಇರಲಿ ಅಥವಾ ಬಿಸಿಲು ಬರಲಿ ನಾವು ಮಾತ್ರ ಇಲ್ಲಿಂದ ಹೋಗೋದಿಲ್ಲ. ನಮ್ಮ ಬೇಡಿಕೆಗಳು ಈಡೇರಿದರೆ ಮಾತ್ರ ನಾವು ಇಲ್ಲಿಂದ ಜಾಗ ಖಾಲಿ ಮಾಡುತ್ತೇವೆ ಎಂದು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಸರ್ಕಾರ ಯಾವ ಬೇಡಿಕೆಗಳಿಗೂ ಸೊಪ್ಪು ಹಾಕದೆ ಈ ವಿಷಯದಲ್ಲಿ ತಟಸ್ಥವಾಗಿದೆ. ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೂ ಸಹ ಯಾರೂ ಬರುತ್ತಿಲ್ಲ. ಯಾವ ಅಧಿಕಾರಿಗಳೂ ಸಹ ಬೇಡಿಕೆಗಳೇನು ಎಂಬುದರ ಕುರಿತು ಮಾಹಿತಿ ಪಡೆಯುತ್ತಿಲ್ಲ ಎಂದು ದೂರಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಗಣರಾಜ್ಯೋತ್ಸವವನ್ನು ಇಲ್ಲಿಯೇ ಆಚರಿಸುತ್ತೇವೆ ಎಂದು ಸಂಘಟನೆಯ ನಾಯಕರು ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಹಾಗೂ ರುದ್ರಪ್ಪ ಹನಗವಾಡಿ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಗೋಪಾಲಗೌಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ಸರಕಾರ ಕೂಡಲೇ ಇವರ ಬೇಡಿಕೆ ಈಡೇರಿಸಬೇಕು ಎಂದರು. ಈ ವೇಳೆ ಸಂಘಟನೆಯ ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮೀ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ಎಸ್ ಸುನಂದಾ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಲಾ, ಅಂಗನವಾಡಿ ಮುಖಂಡರಾದ ಯಮುನಾ ಗಾಂವ್ಕರ್, ಶಾಂತಾ ಗಂಟೆ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು.