ಅಂಗನವಾಡಿ ನೌಕರರ ಬೇಡಿಕೆಗಳು ಪರಿಹರಿಸಬೇಕೆಂದು ಹೋರಾಟ: ಎಸ್‌.ವರಲಕ್ಷ್ಮಿ

ಕಲಬುರಗಿ: ‘ಅಂಗನವಾಡಿ ಮಕ್ಕಳಿಗೆ ನೀಡಲಾಗುವು ಕೋಳಿಮೊಟ್ಟೆ ಟೆಂಡರ್‌ ವಿಚಾರವಾಗಿ ಸ್ವತಃ ಸಚಿವರೇ ಭ್ರಷ್ಟಾಚಾರ ಮಾಡಿರುವ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಬೇಕು. ಮಕ್ಕಳಿಗೆ ನೀಡುವ ಆಹಾರ ಪದಾರ್ಥಗಳ ಜತೆಗೇ ಮೊಟ್ಟೆಯನ್ನೂ ನೀಡಬೇಕು. ಪಾಲಕರಿಗೆ ಹಣ ನೀಡಿದರೆ ಅದು ಪೌಷ್ಟಿಕಾಂಶ ಕೊಂಡುಕೊಳ್ಳಲು ಬಳಕೆಯಾಗುವುದಿಲ್ಲ’ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಆರೋಪಿಸಿದರು.

ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ವರಲಕ್ಷ್ಮಿ ಅಂಗನವಾಡಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಸ್ತಾವ ಸಲ್ಲಿಸಿದ ₹ 339.48 ಕೋಟಿ ಅನುದಾನ ಕೂಡಲೇ ಬಿಡುಗಡೆ ಮಾಡಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಘಟನೆಯು ಪ್ರತಿಭಟನೆಗೆ ಕರೆ ನೀಡಿದೆ ಎಂದು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಇದನ್ನು ಓದಿ: ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಲು-ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಧರಣಿ

‘ಸೇವಾ ಬಡ್ತಿ ವೇತನಕ್ಕೆ ₹ 153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ನೌಕರರ ವೇತನಕ್ಕೆ ₹ 6.99 ಕೋಟಿ, ಸಹಾಯಕಿಯರಿಗೆ ಉಂಟಾಗುತ್ತಿರುವ ಸಂಬಳದ ವ್ಯತ್ಯಾಸ ಸರಿಪಡಿಸಲು ₹ 131.42 ಕೋಟಿ, ನಿವೃತ್ತಿ ಸೌಲಭ್ಯಗಳಿಗೆ ₹ 47.82 ಕೋಟಿ ಅನುದಾನ ಬೇಕು ಎಂದು ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ. ಸುಮಾರು 1.30 ಲಕ್ಷ ಅಂಗನವಾಡಿ ನೌಕರರಿಗೆ ಸಹಾಯವಾಗಲಿದೆ. ಆದರೂ ರಾಜ್ಯ ಸರ್ಕಾರ ಮನಸ್ಸು ಮಾಡಿಲ್ಲ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣದ ಕೆಲಸಗಳಲ್ಲಿನ ಒತ್ತಡದಿಂದಾಗಿ 35 ಸಿಬ್ಬಂದಿ ಸಾವನ್ನಪ್ಪಿದ್ದು, ತಲಾ ₹ 1 ಲಕ್ಷ ಪರಿಹಾರ ನೀಡಬೇಕು. ಕೊರೊನಾ ದೃಢಗೊಂಡ ರೋಗದಿಂದಾಗಿ 29 ನೌಕರರು ಮರಣ ಹೊಂದಿದ್ದಾರೆ. ಇದರಲ್ಲಿ ಹಲವರಿಗೆ ಇನ್ನೂ ವಿಮೆ ಹಣ ಬಂದಿಲ್ಲ. ಸರ್ಕಾರ ಕೂಡಲೇ ವಿಮೆ ಮಂಜೂರು ಮಾಡಬೇಕು. ಅನುಕಂಪದ ಆಧಾರದಲ್ಲಿ ಕೆಲಸ ಕೊಡಲು ‘ಮಗಳು’ ಎಂದು ಪರಿಗಣಿಸದೇ ಕುಟುಂಬದಲ್ಲಿ ಒಬ್ಬರು ಎಂದು ಪರಿಗಣಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು. ಐಸಿಡಿಎಸ್‌ ಕೆಲಸ ಹೊರತುಪಡಿಸಿ ಉಳಿದ ಕೆಲಸಗಳನ್ನು ನಿರ್ಬಂಧಿಸಿ, ಒತ್ತಡ ಕಡಿಮೆ ಮಾಡಬೇಕು’ ಎಂದೂ ಆಗ್ರಹಿಸಿದರು.

‘2016 ರಿಂದ ಬಾಕಿ ಇರುವ ಇಡುಗಂಟು ನೀಡಬೇಕು. ಕಾರ್ಯಕರ್ತೆಯರಿಗೆ ₹ 30 ಸಾವಿರ, ಸಹಾಯಕಿಯರಿಗೆ ₹ 21 ಸಾವಿರ ಸಂಬಳ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೂ ಸಹಾಯಕಿಯರನ್ನು ನೇಮಿಸಬೇಕೆಂದು, ಸದ್ಯ ಇರುವ ಸಂಬಳವನ್ನಾದರೂ ಪ್ರತಿ ತಿಂಗಳು ಕೊಡಬೇಕು’ ಎಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಮುಖಂಡರಾದ ಎಚ್‌.ಎಸ್‌. ಸುನಂದಾ, ಶಾಂತಾ ಗಂಟೆ, ಗೌರಮ್ಮ ಪಾಟೀಲ ಇದ್ದರು.

‘ಬಿಸಿಯೂಟ ನೌಕರರಿಗೆ ಸಂಬಳ ನೀಡಿ’

‘ಶಾಲೆ ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ ಆರು ತಿಂಗಳಿಂದ ಸಂಬಳವಿಲ್ಲದೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಅವರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದನ್ನೂ ಖಂಡಿಸಿ ಆಗಸ್ಟ್‌ 16ರಂದು ಪ್ರತಿಭಟನೆ ನಡೆಸಲಾಗುತ್ತಿದೆ’ ಎಂದು ಎಸ್.ವರಲಕ್ಷ್ಮಿ ತಿಳಿಸಿದರು.

ಇದನ್ನು ಓದಿ: ಅಂಗನವಾಡಿ ಮಕ್ಕಳ ಮೊಟ್ಟೆಗೆ ಕನ್ನ ಹಾಕಿದ ಸಚಿವೆ, ಸಚಿವೆಗೆ ಸಾಥ್‌ ನೀಡಿದ ಶಾಸಕ ಪರಣ್ಣ

‘ಕೊರೊನಾದಿಂದ ಮೃತಪಟ್ಟ ಬಿಸಿಯೂಟ ನೌಕರರ ಕುಟುಂಬದವರಿಗೆ ಕೆಲಸ ಮತ್ತು ಪರಿಹಾರ ಎರಡನ್ನೂ ಒದಗಿಸಬೇಕು. ಎಲ್‍ಐಸಿ ಆಧಾರಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಯಾವುದೇ ನೌಕರರನ್ನು ಕೆಲಸದಿಂದ ತೆಗೆದು ಹಾಕಬಾರದು. ಬಿಸಿಯೂಟ ಯೋಜನೆ ಬಲಪಡಿಸಬೇಕು ಮತ್ತು ಕಳೆದ ವರ್ಷ ಬಜೆಟ್‍ನಲ್ಲಿ ಕಡಿತಗೊಂಡಿರುವ ಮೊತ್ತ ಮರಳಿ ನೀಡಬೇಕು. ಬಿಸಿಯೂಟ ಜತೆಗೆ ಶಾಲಾ ಆವರಣದಲ್ಲಿ ಕೈತೋಟ ಮಾಡಲು ನರೇಗಾ ಅಡಿಯಲ್ಲಿ ಕೆಲಸ ನೀಡಬೇಕು’ ಎಂದೂ ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *