ಅಂಗಡಿ ಮಾಲೀಕ ಜಲೀಲ್‌ ಕೊಲೆ ಕುರಿತ ಊಹಾಪೋಹಗಳಿಗೆ ಕಿವಿಗೊಡದಿರಿ; ಮುನೀರ್‌ ಕಾಟಿಪಳ್ಳ

ಮಂಗಳೂರು: ಕಾಟಿಪಳ್ಳ 4ನೇ ಬ್ಲಾಕ್ ನಲ್ಲಿ ಫ್ಯಾನ್ಸಿ ಅಂಗಡಿಗೆ ನುಗ್ಗಿ ಮಾಲೀಕ ಜಲೀಲ್ ನನ್ನು ಇಬ್ಬರು ಹಂತಕರ ತಂಡ ಇರಿದು ಕೊಲೆಗೈದಿದೆ. ಸಹಜವಾಗಿಯೇ ಜನತೆ ಆತಂಕಿತರಾಗಿದ್ದಾರೆ. ಇದು ಖಂಡನೀಯ. ಕ್ರಿಮಿನಲ್ ಗಳಿಗೆ ಕಾನೂನಿನ ಭಯ ಇಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಮುನೀರ್‌ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲೀಲ್ ಕೊಲೆಗೆ ಸಂಬಂಧಿಸಿ ಊಹಾಪೋಹಗಳು ಹಬ್ಬುತ್ತಿದೆ. ಒಂದಿಷ್ಟು ತಿಂಗಳು ಮೇಲ್ನೋಟಕ್ಕೆ ಸಹಜವಾಗಿದ್ದ ವಾತಾವರಣ ಹದಗೆಡದಿರಲಿ. ಪೊಲೀಸರು ನ್ಯಾಯಸಮ್ಮತ ತನಿಖೆ ನಡೆಸಿ ಕೊಲೆಯ ಹಿಂದೆ, ಮುಂದೆ ಇರುವ ಎಲ್ಲರನ್ನೂ ಬಂಧಿಸಬೇಕು. ಜನತೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ತಿಳಿಸಿದ್ದಾರೆ.

ಇದನ್ನು ಓದಿ: ಪ್ರವೀಣ್‌ ನೆಟ್ಟಾರ್‌ ಕೊಲೆ ಹಿಂದಿನ ರಹಸ್ಯ ಬಹಿರಂಗವಾಗಲಿ: ಮುನೀರ್‌ ಕಾಟಿಪಳ್ಳ

ನೆನಪಿರಲಿ, ಚುನಾವಣೆ ಹತ್ತಿರದಲ್ಲೇ ಇಂತಹವುಗಳು ಜರುಗುತ್ತಿರುವುದು ಆತಂಕದ ವಿಚಾರ. ಜನರು ಸಂಯಮವನ್ನು ಕಳೆದುಕೊಳ್ಳಬೇಡಿ. ಈ ಕೊಲೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಜನತೆ ನೋಡಿಕೊಳ್ಳಬೇಕು. ಕೊಲೆಯ ಹಿನ್ನಲೆಯಲ್ಲಿ ಧರ್ಮದ ಆಧಾರದಲ್ಲಿ ವಿಭಜನೆಗೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದರಿಂದ ಜನಸಾಮಾನ್ಯರಿಗೇ ನಷ್ಟ. ಕೊಲೆಗೀಡಾದವನು ಮಧ್ಯ ವಯಸ್ಸಿನ ಗೃಹಸ್ಥ. ಧರ್ಮ ಯಾವುದೇ ಇದ್ದರೂ ಆತನಿಗೂ ಒಂದು ಕುಟುಂಬ ಇದೆ. ಎಲ್ಲರೂ ಒಂದಾಗಿ ಐಕ್ಯತೆಯಿಂದ ನ್ಯಾಯಕ್ಕಾಗಿ ಒತ್ತಾಯಿಸಬೇಕಿದೆ. ಕೊಲೆಗೀಡಾದವನ ಕುಟುಂಬದ ಜೊತೆ ನಿಲ್ಲುವುದು ನಿಜವಾದ ಧರ್ಮ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ

ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಜಲೀಲ್‌(40) ಅವರ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಶನಿವಾರ ಸಂಜೆ ಜಲೀಲ್ ಅಂಗಡಿಯಲ್ಲಿ ಕುಳಿತಿದ್ದಾಗ‌ ಈ ಘಟನೆ ನಡೆದಿದೆ. ಅಂಗಡಿಯ ಪಕ್ಕದ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಜಲೀಲ್‌ ಮೇಲೆ ಏಕಾಏಕಿ ಚೂರಿ ಇರಿದು ಪರಾರಿಯಾಗಿದ್ದರು.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್‌ ಅವರ ಎದೆಯ ಭಾಗ ಮತ್ತು ಬೆನ್ನಿಗೆ ಹರಿತವಾದ ಚೂರಿಯಿಂದ ಇರಿದಿದ್ದು, ಅವರ ಬೆನ್ನಿನಲ್ಲಿದ್ದ ಚೂರಿಯನ್ನು ತೆಗೆದ ಫಾರೂಕ್ ಎಂಬವರು ತಕ್ಷಣ ಕಾರಿನಲ್ಲಿ ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಲೀಲ್ ಮೃತಪಟ್ಟಿದ್ದಾರೆ.

ಜಲೀಲ್‌ ಯಾವುದೇ ಸಂಘಟನೆ, ರಾಜಕೀಯದಲ್ಲಿ ಇರಲಿಲ್ಲ. ಸುಮಾರು 10-15 ವರ್ಷದಿಂದ ಅಂಗಡಿ ನಡೆಸ್ತಾ ಇದ್ದ ಎಂದು ಮಾಹಿತಿ ಇದೆ. ಆದರೂ ಅಮಾಯಕ ಜಲೀಲ್‌ ಕೊಲೆ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *