ಚೆನ್ನೈ ಜ 23 : ತಮಿಳುನಾಡಿನ ಮುದುಮಲೈ ಹುಲಿ ಅಭಯಾರಣ್ಯ (ಎಂಟಿಆರ್) ಪ್ರದೇಶದ ಮಾಸಿನಗುಡಿಯಲ್ಲಿ ಆನೆಗೆ ಬೆಂಕಿ ಹಚ್ಚಿದ ದಾರುಣ ಘಟನೆ ನಡೆದಿದೆ. ನೋವು ತಾಳಲಾರದೆ ಆನೆ ಕೊನೆಗೆ ಪ್ರಾಣಬಿಟ್ಟಿದೆ
ಮಾಸಿನಗುಡಿ ಪ್ರದೇಶದಲ್ಲಿಆನೆಯನ್ನು ಓಡಿಸುವ ರಾದ್ಧಾಂತದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಬಟ್ಟೆಗಳನ್ನು ಎಸೆದಿದ್ದಾರೆ. ಹೊತ್ತಿ ಉರಿಯುತ್ತಿರುವ ಬಟ್ಟೆಯು ಆನೆಯ ಕಿವಿಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಸುಟ್ಟ ಗಾಯಗಳಾಗಿದ್ದು, ಕೊನೆಗೆ ನೋವು ತಾಳಲಾರದೆ ಮೂರು ದಿನಗಳ ಬಳಿಕ ಪ್ರಾಣ ಬಿಟ್ಟಿದೆ.
ಈ ಹಿಂದೆ ಕೇರಳದಲ್ಲೂ ಇಂತಹದ್ದೆ ಅಮಾನವೀಯ ಘಟನೆ ನಡೆದಿತ್ತು, ಮನುಷ್ಯನ ಕ್ರೂರಿ ಬುದ್ಧಿಗೆ ಕೊನೆಯಿಲ್ಲ ಎನ್ನುವಂತಾಗಿದೆ.ಆನೆಗಳನ್ನು ಹಿಂಸಿಸಿ ಕೊಲ್ಲುತ್ತರಿವುದುಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಊಟಿಯ ಮಸಿನಗುಡಿ ಕಾಡು ಪ್ರದೇಶದಲ್ಲಿ 40 ವರ್ಷದ ಆನೆಯೊಂದು ಜನವರಿ 19ರಂದು ಎಸ್ಟೇಟ್ ಒಂದರ ಒಳಗೆ ಬರಲು ಪ್ರಯತ್ನಿಸಿದೆ. ಈ ಸಮಯದಲ್ಲಿ ಎಸ್ಟೇಟ್ ಕಾವಲು ಕಾಯುತ್ತಿದ್ದ ರೈಮಾನ್ ಮತ್ತು ಪ್ರಶಾಂತ್ ಒಂದು ಟೈಯರ್ಗೆ ಬೆಂಕಿ ಹಚ್ಚಿ ಅದನ್ನು ಆನೆಯ ಮೇಲೆ ಎಸೆದಿದ್ದಾರೆ. ಬೆಂಕಿ ಹೊತ್ತಿ ಉರಿಯುತ್ತಿದ್ದ ಟೈಯರ್ನ್ನು ಹೊತ್ತ ಆನೆ ನೋವಿನಿಂದ ಕೂಗಿಕೊಳ್ಳುತ್ತ ಸ್ವಲ್ಪ ದೂರ ಹೋಗಿದೆ. ಆನೆಯ ಕಿವಿ ಮತ್ತು ಹಿಂಭಾಗದಲ್ಲಿ ಸುಟ್ಟ ಗಾಯಗಳಾಗಿವೆ.
ಅಸ್ವಸ್ಥವಾಗಿದ್ದ ಆನೆಯನ್ನು ಅರಣ್ಯ ಸಿಬ್ಬಂದಿ ಕಂಡಿದ್ದು, ವೈದ್ಯಕೀಯ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ. ಆದರೆ ಅದಾಗಲೇ ಸುಟ್ಟ ಗಾಯದಿಂದ ಸಾಕಷ್ಟು ನೋವುಂಡಿದ್ದ ಆನೆ ಕೊನೆಯುಸಿರೆಳೆದಿದೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಶಾಂತ್ ಮತ್ತು ರೈಮಾನ್ನನ್ನು ಬಂಧಿಸಲಾಗಿದೆ.