ಹೈದರಾಬಾದ್: ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಭಾನುವಾರ ಫಲಿತಾಂಶ ಪ್ರಕಟವಾಗಿದೆ. ಕೊನೆಯ ವರದಿಗಳು ಬಂದಂತೆ, ವೈಎಸ್‌ಆರ್ ಸುಮಾರು ಶೇ.90 ಪ್ರತಿಶತದಷ್ಟು ಮಂಡಲ ಪರಿಷತ್ ಪ್ರಾದೇಶಿಕ ಕ್ಷೇತ್ರಗಳನ್ನು (MPTC) ಮತ್ತು ಶೇ.99 ಪ್ರತಿಶತದಷ್ಟು ಜಿಲ್ಲಾ ಪರಿಷತ್ ಪ್ರಾದೇಶಿಕ ಕ್ಷೇತ್ರಗಳಲ್ಲಿ (ZPTC) ಗೆಲುವು ಸಾಧಿಸಿದೆ ಎಂದು ವರದಿಯಾಗಿದೆ.
ಭಾನುವಾರ ಸಂಜೆ 7.30ಕ್ಕೆ ಬಂದ ಅಂತಿಮ ಫಲಿತಾಂಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ 553 ರಲ್ಲಿ 547 ZPTC ಕ್ಷೇತ್ರಗಳಲ್ಲಿ ಗೆಲುವು ಪಡೆದುಕೊಂಡಿದೆ. MPTC 8,083 ಕ್ಷೇತ್ರಗಳ ಪೈಕಿ 7,284 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಏಪ್ರಿಲ್ 8ರಂದು 553 ಜಿಲ್ಲಾ ಪರಿಷತ್, 7284 ಮಂಡಲ ಪರಿಷತ್ ಚುನಾವಣೆ ನಡೆದಿತ್ತು. ನಿಗದಿತ ವೇಳಾಪಟ್ಟಿಯಂತೆ ಏಪ್ರಿಲ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ ಟಿಡಿಪಿ, ಬಿಜೆಪಿ ಮತ್ತು ಇತರ ಪಕ್ಷಗಳು “ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ದಿನಾಂಕದಿಂದ ಕಡ್ಡಾಯವಾಗಿ ಮಾದರಿ ನೀತಿ ಸಂಹಿತೆ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ” ಎಂದು ಆರೋಪಿಸಿದ್ದವು. ಇದೇ ಕಾರಣಕ್ಕೆ ಮತ ಏಣಿಕೆಗೆ ಕೋರ್ಟ್ ಅನುಮತಿ ನೀಡಿರಲಿಲ್ಲ. ಕಳೆದ ಗುರುವಾರ ಚುನಾವಣೆ ಮತ ಎಣಿಕೆ ಮಾಡಬಹುದು ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶ ನೀಡಿತ್ತು.
ಒಂದು ದಶಕದ ಹಿಂದೆ ಸ್ಥಾಪನೆಯಾದ ವೈಎಸ್‌ಆರ್ ಕಾಂಗ್ರೆಸ್, ರಾಜ್ಯದ 75 ಪುರಸಭೆಗಳು ಮತ್ತು 74 ನಗರ ಪಂಚಾಯತ್‌ಗಳಲ್ಲಿ ಗೆಲುವು ಸಾಧಿಸಿದೆ. ಅಲ್ಲದೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಲ್ಲಾ 12 ಮುನ್ಸಿಪಲ್ ಕಾರ್ಪೊರೇಶನ್‌ಗಳನ್ನೂ ಗೆಲುವು ಸಾಧಿಸಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ 175 ಬಲದ ವಿಧಾನಸಭೆಯಲ್ಲಿ 151 ಸ್ಥಾನಗಳಲ್ಲಿ ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 22ರಲ್ಲಿ ಗೆಲುವು ಸಾಧಿಸಿತ್ತು.
ಚುನಾವಣೆಯಲ್ಲಿನ ಗೆಲುವಿಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಜನಪರ ಕಾರ್ಯಗಳೇ ಕಾರಣ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಹೇಳಿದೆ. ಮಹಿಳೆಯರು, ಹಿಂದುಳಿದ ವರ್ಗದವರು, ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ ಎಂದು ಪಕ್ಷ ತಿಳಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ (ಟಿಡಿಪಿ) ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಸ್ವಯಂ ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಕುಪ್ಪಂ ಕ್ಷೇತ್ರದಲ್ಲಿಯೇ ಟಿಡಿಪಿ ಗೆಲುವು ಸಾಧಿಸಿಲ್ಲ. ಚುನಾವಣೆಗೆ ಕೆಲವೇ ದಿನಗಳು ಇರುವಾಗ ಚಂದ್ರಬಾಬು ನಾಯ್ಡು ಚುನಾವಣೆಯಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದರು. ಆದರೆ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು.