ಆಂಧ್ರಪ್ರದೇಶದಲ್ಲಿ ಬಿಜೆಪಿ/ಎನ್‌ಡಿಎಗೆ ಹೆಚ್ಚಿನ ಮುನ್ನಡೆ ಅಸಂಭವ

–      ಸಿ.ಸಿದ್ದಯ್ಯ, ವಸಂತರಾಜ ಎನ್.ಕೆ

ರಾಜ್ಯದಲ್ಲಿ ಎನ್.ಡಿ.ಎ (ತೆಲುಗು ದೇಶಂ + ಬಿಜೆಪಿ + ಜನಸೇನಾ) ಕೂಟ ಮತ್ತು ಇಂಡಿಯಾ ಕೂಟ (ಕಾಂಗ್ರೆಸ್ + ಸಿಪಿಐಎಂ+ಸಿಪಿಐ),  ವೈಎಸ್‌ಆರ್‌ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸುತ್ತಿದ್ದು, ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ಎನ್.ಡಿ.ಎ  ಕೂಟವು ಕೇಂದ್ರ ಸರಕಾರದ ಮತ್ತು ವೈಎಸ್‌ಆರ್‌ ಕಾಂಗ್ರೆಸ್ ರಾಜ್ಯ ಸರಕಾರದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದು, ಇಂಡಿಯಾ ಕೂಟಕ್ಕೆ ಇದರ ಲಾಭ ಆಗುವ ಸಾಧ್ಯತೆಯಿದೆ.  ಆಡಳಿತ ವಿರೋಧಿ ಅಲೆ ಎಷ್ಟು ತೀವ್ರವಾಗಿದೆ ಎನ್ನುವುದರ ಮೇಲೆ ಇಂಡಿಯಾ ಕೂಟದ ಸಂಖ್ಯೆ ಅವಲಂಬಿಸಿರುತ್ತದೆ.  ಯಾವುದೇ ತ್ರಿಕೋಣ ಸ್ಪರ್ಧೇಯಲ್ಲಿ ಸಾಮಾನ್ಯವಾಗಿ ಅತಿ ದೊಡ್ಡ ಪಕ್ಷ ಕೂಟಕ್ಕೆ ಲಾಭವಾಗುತ್ತದೆ. ಆದರೆ ಬಿಜೆಪಿ ಗೆ ಅಥವಾ ಎನ್.ಡಿ.ಎ ಗೆ ಈ ಲಾಭ ದಕ್ಕುವ ಸಾಧ್ಯತೆ ಬಹಳ ಕಡಿಮೆ. ಹಾಗಾಗಿ ಬಿಜೆಪಿ ಗೆ ಅಥವಾ ಎನ್.ಡಿ.ಎ ಗೆ ಈ ರಾಜ್ಯದಲ್ಲಿ ಹೆಚ್ಚಿನ ಮುನ್ನಡೆ ಅಸಂಭವವೆಂದು ಹೇಳಬಹುದು. ಆಂಧ್ರಪ್ರದೇಶ

ಲೋಕಸಭೆ ಮತ್ತು ಆಂಧ್ರಪ್ರದೇಶ ವಿಧಾನಸಭೆಗೆ ಮೇ 13 ರಂದು ನಾಲ್ಕನೇ ಹಂತದಲ್ಲಿ ಚುನಾವಣೆಗಳು ನಡೆದಿವೆ. ಶೇ. 81.86 ರಷ್ಟು ದಾಖಲೆಯ ಮತದಾನ ನಡೆದಿದ್ದು, ಕೆಲವು ಸ್ಥಳಗಳಲ್ಲಿ ಮೇ 14 ರಂದು ಬೆಳಗಿನ ಜಾವ 2 ಗಂಟೆಯವರೆಗೆ ಮತದಾನ ಮುಂದುವರಿದಿತ್ತು. 2019 ರಲ್ಲಿ ನಡೆದ ಚುನಾವಣೆಯಲ್ಲಿ ಶೇ. 79.84 ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ರಾಜ್ಯದಲ್ಲಿ ಚಲಾವಣೆಯಾದ ಗರಿಷ್ಠ ಶೇಕಡಾವಾರು ಮತ ಇದಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಎನ್‌ಡಿಎ ಮತ್ತು ವೈಎಸ್‌ಆರ್‌ ಕಾಂಗ್ರಸ್ ಎರಡೂ ಹೆಚ್ಚಿನ ಮತದಾನವು ತಮ್ಮ ಪರವಾಗಿದೆ ಎಂದು ನಂಬಿಕೊಂಡಿವೆ. ಈ ಬಾರಿ ಈ ರಾಜ್ಯದಲ್ಲಿ ಎನ್.ಡಿ.ಎ (ತೆಲುಗು ದೇಶಂ + ಬಿಜೆಪಿ + ಜನಸೇನಾ) ಕೂಟ ಮತ್ತು ಇಂಡಿಯಾ ಕೂಟ (ಕಾಂಗ್ರೆಸ್ + ಸಿಪಿಐ-ಎಂ+ಸಿಪಿಐ),  ವೈಎಸ್‌ಆರ್‌ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸುತ್ತಿದ್ದು, ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.

ಸಾಮಾನ್ಯವಾಗಿ, ಪ್ರಾದೇಶಿಕ ಪಕ್ಷಗಳು ಆಯಾ ಪ್ರದೇಶದ ಜನರ ಆಕಾಂಕ್ಷೆಗಳಿಂದ ಹೊರಹೊಮ್ಮುತ್ತವೆ ಮತ್ತು ತಮ್ಮ ರಾಜ್ಯದ ಹಿತಾಸಕ್ತಿಗಳನ್ನು ಸಾಧಿಸಲು ಸ್ಪರ್ಧಿಸುತ್ತವೆ. 1982 ರಲ್ಲಿ ‘ಆಂಧ್ರ ಆತ್ಮ ಗೌರವಂ’ ಘೋಷಣೆಯೊಂದಿಗೆ ತೆಲುಗು ದೇಶಂ ಪಕ್ಷವನ್ನು ಸ್ಥಾಪಿಸಲಾಯಿತು. 1980ರ ದಶಕದಲ್ಲಿ ಎನ್.ಟಿ.ರಾಮರಾವ್, ಜ್ಯೋತಿಬಸು, ರಾಮಕೃಷ್ಣ ಹೆಗಡೆ, ಫಾರೂಕ್ ಅಬ್ದುಲ್ಲಾ ಮುಂತಾದ ನಾಯಕರು ಶ್ರೀಮತಿ ಇಂದಿರಾಗಾಂಧಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಕಠೋರ ಕೇಂದ್ರೀಕರಣದ ಧೋರಣೆಗಳ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ, ಕೇಂದ್ರದ ಮೇಲೆ ಒತ್ತಡ ತಂದು, ಕೇಂದ್ರ-ರಾಜ್ಯ ಸಂಬಂಧಗಳಲ್ಲಿ ಬದಲಾವಣೆ, ಮತ್ತು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡಲು ಸರ್ಕಾರಿಯಾ ಆಯೋಗ ನೇಮಕ ಹೀಗೆ ಹಲವು ಬದಲಾವಣೆಗಳನ್ನು ತಂದದ್ದು ಗೊತ್ತೇ ಇದೆ. 1985ರಿಂದ ಒಮ್ಮೆ ತೆಲುಗು ದೇಶಂ ಮತ್ತು ಒಮ್ಮೆ ಕಾಂಗ್ರೆಸ್ ಅಥವಾ ಅದರ ನಾಯಕತ್ವದ ಕೂಟಗಳು ಚುನಾವಣೆ ಗೆಲ್ಲುತ್ತಾ ಬಂದಿವೆ. 1994ರ ನಂತರ ತೆಲುಗುದೇಶಂ ಬಿಜೆಪಿಯ ಎನ್,ಡಿ.ಎ ಕೂಟದೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿದೆ. ತೆಲುಗು ದೇಶಂ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾಗಿ ಯಶಸ್ಸು ಕಂಡದ್ದು ಮುಂದೆ ಹಲವು ಪ್ರಾದೇಶಿಕ ಪಕ್ಷಗಳು ಮೂಡಿಬರಲು ಕಾರಣವಾಯಿತು. 2009ರಲ್ಲಿ ತೆಲುಗು ಚಿತ್ರದ ಪ್ರಸಿದ್ಧ ಸೂಪರ್ ಸ್ಟಾರ್ ಚಿರಂಜೀವಿ ಅವರ ಪ್ರಜಾ ರಾಜ್ಯಂ ಪಕ್ಷದ ಪ್ರಯೋಗ ಯಶಸ್ವಿಯಾಗಲಿಲ್ಲ. ಅದು ಎಲ್ಲ ಸೀಟುಗಳನ್ನು ಸ್ಪರ್ಧಿಸಿ 18 ಸ್ತಾನಗಳನ್ನು ಗೆದ್ದಿತು. 2011ರಲ್ಲಿ ಕಾಂಗ್ರೆಸ್ ಜತೆ ವಿಲೀನವಾಯಿತು. ಆಂಧ್ರಪ್ರದೇಶ

ಅವಿಭಜಿತ ಆಂಧ್ರಪ್ರದೇಶದ ಒಳಗೆ ಅಭಿವೃದ್ಧಿಯಲ್ಲಿ ತೀವ್ರ ಪ್ರಾದೇಶಿಕ ಅಸಮಾನತೆ, ಕೆಲವು ರಾಜಕಾರಣಿಗಳ ಆಕಾಂಕ್ಷೆ ಮತ್ತು ಚಾರಿತ್ರಿಕ ಕಾರಣಗಳಿಂದ ಹಲವು ದಶಕಗಳಿಂದ ನಡೆಯುತ್ತಿದ್ದ ಪ್ರತ್ಯೇಕ ತೆಲಂಗಾಣ ರಾಜ್ಯ ಚಳುವಳಿ ಕಳೆದ ದಶಕದಲ್ಲಿ ತೀವ್ರಗೊಂಡಿತ್ತು. ಕೊನೆಗೂ 2013ರಲ್ಲಿ ಎರಡು ಪ್ರತ್ಯೇಕ ರಾಜ್ಯಗಳಾದವು. ಇದರ ಜತೆಗೆ ಪ್ರತ್ಯೇಕ ತೆಲಂಗಾಣ ರಾಜ್ಯ ಚಳುವಳಿಯ ಮುಂಚೂಣಿಯಲ್ಲಿದ್ದ ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ವೈ.ಎಸ್.ರಾಜಶೇಖರ ರೆಡ್ಡಿ ನಿಧನದ ನಂತರ ಕಾಂಗ್ರೆಸ್ ಪಕ್ಷ ಒಡೆದು ರೂಪಿತವಾದ ವೈ.ಎಸ್.ಆರ್ ಕಾಂಗ್ರೆಸ್ ಪ್ರಬಲ ಹೊಸ ಪ್ರಾದೇಶಿಕ ಪಕ್ಷಗಳಾಗಿ ಪ್ರಬಲವಾಗಿ ಮೂಡಿ ಬಂದು ಮುಂದೆ ಅಧಿಕಾರ ವಹಿಸಿಕೊಂಡವು. ಅಷ್ಟರವರೆಗೆ ಪ್ರಬಲವಾಗಿದ್ದ ಮತ್ತು ರಾಜ್ಯ ವಿಭಜನೆ ವಿರೋಧಿಸಿದ್ದ ಕಾಂಗ್ರೆಸ್ ಮತ್ತು ತೆಲುಗು ದೇಶಂ  ಮುಂದೆ ದುರ್ಬಲವಾದವು. ಮೊದಲಿಂದಲೂ ಎರಡೂ ರಾಜ್ಯಗಳಲ್ಲಿ ದುರ್ಬಲವಾಗಿದ್ದ ಬಿಜೆಪಿ ತನ್ನನ್ನು ಸ್ಥಾಪಿಸಿಕೊಳ್ಲಲು ಪ್ರಯತ್ನಿಸುತ್ತಿದೆ. ವಿಭಜಿತ ಆಂಧ್ರಪ್ರದೇಶದಲ್ಲಿ 2019ರಲ್ಲಿ ವೈ.ಎಸ್.ಆರ್ ಕಾಂಗ್ರೆಸ್ (ವೈ.ಎಸ್.ಆರ್.ಸಿ) ಅಧಿಕಾರ ಪಡೆದಿತ್ತು. 2014 ಮತ್ತು 2019ರಲ್ಲಿ ಸತತವಾಗಿ ತೆಲಂಗಾಣ ಗೆದ್ದು ಕೊಂಡ ಟಿ.ಆರ್.ಎಸ್ (ಈಗ ಬಿ.ಆರ್.ಎಸ್) ಇತ್ತೀಚಿನ ಚುನಾವಣೆಯಲ್ಲಿ ಸೋತು ಕಾಂಗ್ರೆ್ಸ್ ಮತ್ತೆ ಅಧಿಕಾರಕ್ಕೆ ಬಂದಿದೆ. ಅದೇ ಆಂಧ್ರ ಪ್ರದೇಶದಲ್ಲಿ ಆಗುವುದೇ ಎಂಬುದು ಈ ಚುನಾವಣೆಯಲ್ಲಿನ ಮುಖ್ಯ ಪ್ರಶ್ನೆ.

ವಿಭಜಿತ ಆಂಧ್ರಪ್ರದೇಶದಲ್ಲಿ 2019ರ ಚುನಾವಣೆಯಲ್ಲಿ ತೆಲುಗು ದೇಶಂ, ಕಾಂಗ್ರೆಸ್, ವೈ.ಎಸ್.ಆರ್.ಕಾಂಗ್ರೆಸ್, ಬಿಜೆಪಿ ಎಲ್ಲವೂ ಸ್ವತಂತ್ರವಾಗಿ ಸ್ಪರ್ಧಿಸಿದರೆ, ಹೊಸದಾಗಿ ಹುಟ್ಟಿದ ಚಿತ್ರನಟ ಪವನ್ ಕುಮಾರ್ ನೇತೃತ್ವದ ಜನಸೇನಾ ಪಕ್ಷ, ಸಿಪಿಐ, ಸಿಪಿಐ(ಎಂ), ಬಿ.ಎಸ್.ಪಿ ಒಂದು ಕೂಟವಾಗಿ ಸ್ಪರ್ಧಿಸಿದವು. ವಿಧಾನಸಭೆಯಲ್ಲಿ ವೈ.ಎಸ್.ಆರ್.ಕಾಂಗ್ರೆಸ್ 175ರಲ್ಲಿ 151 ಸೀಟು ಗಳಿಸಿ ಪ್ರಚಂಡ ಬಹುಮತ ಪಡೆಯಿತು. ತೆಲುಗು ದೇಶಂ 23, ಜನಸೇನಾ 1 ಸೀಟು ಗಳಿಸಿದರೆ, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಉಳಿದೆಲ್ಲ ಪಕ್ಷಗಳು ಯಾವುದೇ ಸೀಟು ಗಳಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲೂ25ರಲ್ಲಿ  ವೈ.ಎಸ್.ಆರ್.ಕಾಂಗ್ರೆಸ್ 22 ಮತ್ತು ತೆಲುಗು ದೇಶಂ 3 ಸೀಟು ಗಳಿಸಿದವು.

ಕೋಷ್ಟಕ 1 ರಲ್ಲಿ 2009ರಿಂದ 2019ರ ವರೆಗಿನ ರಾಜ್ಯದ ಚುನಾವಣೆಗಳಲ್ಲಿ ಸೀಟು ಮತ್ತು ಮತಪ್ರಮಾಣ ದ ಅಂಕಿಅಂಶಗಳನ್ನು ಕೊಡಲಾಗಿದೆ.  ಇದರಿಂದ ರಾಜ್ಯದ ಮೇಲಿನ ಸ್ಥೂಲ ಚುನಾವಣಾ ಚರಿತ್ರೆ ಸ್ಪಷ್ಟವಾಗುತ್ತದೆ.

ಕೋಷ್ಟಕ-1 ಆಂಧ್ರಪ್ರದೇಶದ ಚುನಾವಣೆಗಳಲ್ಲಿ ಸೀಟು, ಮತಪ್ರಮಾಣ

* 2009ರಲ್ಲಿ ಅವಿಭಜಿತ  ಆಂದ್ರಪ್ರದೇಶದ ಅಂಕಿಅಂಶಗಳು
ಇತರರು

2009 ವಿಧಾನಸಭಾ ದಲ್ಲಿ ಟಿ.ಆರ್.ಎಸ್ : 10/45 – 3.99%, ಎ.ಐ.ಎಂ.ಐ.ಎಂ – 7/8 -0.83%, ಎಡಪಕ್ಷಗಳು – 5/33 – 2.7%

2009 ಲೋಕಸಭಾ ದಲ್ಲಿ ಟಿ.ಆರ್.ಎಸ್  : 2 – 6.1%, ಪ್ರಜಾರಾಜ್ಯಂ :  0 – 6.1%
2019 ವಿಧಾನಸಭಾ ದಲ್ಲಿ ಜನಸೇನಾ : 1/137- 5.5%, ಬಿ.ಎಸ್.ಪಿ – 0/21-0.28%, ಎಡಪಕ್ಷಗಳು – 0/14 – 0.4%

2019 ಲೋಕಸಭಾ ದಲ್ಲಿ ಜನಸೇನಾ – 0/18-5.87%, ಬಿ.ಎಸ್.ಪಿ – 0/3-0.27%, ಎಡಪಕ್ಷಗಳು – 0/4 – 0.21%

ಇಂಡಿಯಾ ಕೂಟ  ಮತ್ತು ತ್ರಿಕೋನ ಸ್ಪರ್ಧೆ

18ನೇ ಲೋಕಸಭೆ ಚುನಾವಣೆಗೆ ಹಾಗೂ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಗೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ, ತೆಲುಗು ದೇಶಂ ಮತ್ತು ಜನಸೇನಾ ಪಕ್ಷಗಳು ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಗಳನ್ನು ನೋಡಿದರೆ, ಮೂರು ಪ್ರಾದೇಶಿಕ ಪಕ್ಷಗಳು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ನಿರ್ಲಕ್ಷಿಸಿವೆ. ಕಳೆದ ಹತ್ತು ವರ್ಷಗಳಿಂದ ವಿಶೇಷ ಸ್ಥಾನಮಾನ, ವಿಭಜನಾ ಕಾಯ್ದೆಯ ಖಾತ್ರಿ ಅನುಷ್ಠಾನ, ವಿಶಾಖಪಟ್ಟಣ ಉಕ್ಕು ಸ್ಥಾವರ ಖಾಸಗೀಕರಣ, ಪೋಲಾವರಂ ನಿರ್ಮಾಣ ಇತ್ಯಾದಿ ವಿಷಯಗಳಲ್ಲಿ ಹೋರಾಟ ಮಾಡಿ ಹಕ್ಕುಗಳನ್ನು ಸಾಧಿಸುವ ಕುರಿತ ಅಂಶಗಳು ಈ ಮೂರು ಪ್ರಾದೇಶಿಕ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಕಾಣಿಸಿಕೊಂಡಿಲ್ಲ.

ರಾಜ್ಯಕ್ಕೆ ಬಿಜೆಪಿ ಮಾಡಿದ ಎಲ್ಲಾ ದ್ರೋಹಗಳ ಹೊರತಾಗಿಯೂ, ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಜನಸೇನಾ ಪಕ್ಷ (ಜೆ.ಎಸ್.ಪಿ) ಅದರೊಂದಿಗೆ ಮೈತ್ರಿ ಮಾಡಿಕೊಂಡು ಎನ್.ಡಿ.ಎ. ಯಲ್ಲಿ ಪಾಲುದಾರರಾದರು. ಕಳೆದ ದಶಕದಲ್ಲಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರ ಆಡಳಿತಾರೂಢ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಬಿಜೆಪಿಗೆ ಅಧೀನವಾಗಿ ನಡೆದುಕೊಂಡಿದೆ. ಈ ಪಕ್ಷಗಳು ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದವು ಮತ್ತು ಸಿಎಎ ಸೇರಿದಂತೆ ಬಹುತೇಕ ಎಲ್ಲಾ ಮಸೂದೆಗಳನ್ನು ಅನುಮೋದಿಸಿದವು. ಮೂರು ಪ್ರಾದೇಶಿಕ ಪಕ್ಷಗಳು ಕೇಸರಿ ಪಕ್ಷದ ಜೊತೆ ಕೈಜೋಡಿಸಿವೆ. ಈ ಚುನಾವಣೆಗಳಲ್ಲಿ ಒಂದೆಡೆ ಎನ್.ಡಿ.ಎ. ಕೂಟ ಮತ್ತೊಂದೆಡೆ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಮುಖಾಮುಖಿಯಾಗಿವೆ.

ಈ ಎರಡೂ ಪಾಳಯಗಳನ್ನು ವಿರೋಧಿಸಲು  ಹಾಗೂ. ಪರಸ್ಪರ ಸ್ಪರ್ಧೆಗಳನ್ನು ತಪ್ಪಿಸಿ ಒಗ್ಗಟ್ಟಿನಿಂದ ಸ್ಪರ್ಧಿಸಲು ಕಾಂಗ್ರೆಸ್,   ಸಿಪಿಐ(ಎಂ) ಮತ್ತು ಸಿಪಿಐ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡವು. ಎರಡೂ ಕಮ್ಯುನಿಸ್ಟ್ ಪಕ್ಷಗಳು ತಲಾ ಒಂದು ಸಂಸದೀಯ ಮತ್ತು ಎಂಟು ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಉಳಿದ 159 ವಿಧಾನಸಭಾ ಸ್ಥಾನಗಳಲ್ಲಿ ಮತ್ತು 23 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಒಪ್ಪಂದಕ್ಕೆ ಬರಲಾಯಿತು. ಈ ಒಪ್ಪಂದದ ಭಾಗವಾಗಿ, ಸಿಪಿಐ(ಎಂ) ಅರಕು (ಎಸ್ಟಿ) ಸಂಸದೀಯ ಸ್ಥಾನ ಮತ್ತು ಕುರುಪಾಂ (ಎಸ್ಟಿ), ಗಜುವಾಕ, ರಂಪಚೋಡವರಂ (ಎಸ್ಟಿ), ಗನ್ನವರಂ, ವಿಜಯವಾಡ ಸೆಂಟ್ರಲ್, ಮಂಗಳಗಿರಿ, ನೆಲ್ಲೂರು ನಗರ ಮತ್ತು ಪಾಣ್ಯಂ ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಿದೆ. ಬಿಜೆಪಿ, ಅದರ ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜನಸೇನೆ ಹಾಗೂ ನಿರಂಕುಶ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಂತೆ ಎರಡೂ ಕಮ್ಯುನಿಸ್ಟ್ ಪಕ್ಷಗಳು ಜನರಿಗೆ ಕರೆ ನೀಡಿದವು. ಇದರ ಪರಿಣಾಮವಾಗಿ, ಆಂಧ್ರಪ್ರದೇಶದಲ್ಲಿ, ಎನ್.ಡಿ.ಎ. ಕೂಟ, ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಕೂಟ ಇವುಗಳ ನಡುವಿನ ತ್ರಿಕೋಣ ಸ್ಪರ್ಧೆಯಾಗಿದೆ.

ಎನ್.ಡಿ.ಎ. ಕೂಟದ ಭಾಗವಾಗಿ ವಿಧಾನಸಭೆಯಲ್ಲಿ ತೆಲುಗು ದೇಶಂ 144, ಜನಸೇನಾ 21 ಮತ್ತು ಬಿಜೆಪಿ 10 ಸೀಟುಗಳಲ್ಲಿ ಸ್ಪರ್ಧಿಸುತ್ತಿವೆ,  ಲೋಕಸಭೆಯಲ್ಲಿ ತೆಲುಗು ದೇಶಂ 17, ಜನಸೇನಾ 2 ಮತ್ತು ಬಿಜೆಪಿ 6 ಸೀಟುಗಳಲ್ಲಿ ಸ್ಪರ್ಧಿಸುತ್ತಿವೆ.  ವೈಎಸ್ಆರ್ ಕಾಂಗ್ರೆಸ್ ಎಲ್ಲಾ 25 ಲೋಕಸಭೆ ಮತ್ತು 175 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.

ಸಂಯೋಜಿತ ರಾಜ್ಯ ಇಬ್ಭಾಗವಾದ ನಂತರ ಕಳೆದ ಒಂದು ದಶಕದಿಂದ ಬಿಜೆಪಿ ಆಂಧ್ರಪ್ರದೇಶದ ಜನತೆಗೆ ದ್ರೋಹ ಬಗೆಯುತ್ತಿದೆ. 2014ರ ಚುನಾವಣೆಯಲ್ಲಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಅದನ್ನು ಈಡೇರಿಸುವಲ್ಲಿ ವಿಫಲವಾಗಿದೆ. ರಾಜ್ಯ ಪುನರ್‌ ವಿಂಗಡಣೆ ವಿಧೇಯಕ ಅಂಗೀಕಾರದ ವೇಳೆ ಸಂಸತ್ತಿನಲ್ಲಿ ನೀಡಿದ್ದ ಭರವಸೆಗಳನ್ನು ಇದುವರೆಗೂ ಈಡೇರಿಸಿಲ್ಲ. ಮರುಸಂಘಟನೆ ಕಾಯಿದೆಯಲ್ಲಿ ಭರವಸೆ ನೀಡಲಾದ ಕೇಂದ್ರೀಯ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗಳು ಅಪೂರ್ಣವಾಗಿ ಉಳಿದಿವೆ, ಹಲವು ಸಂಸ್ಥೆಗಳಿಗೆ ಕಟ್ಟಡಗಳ ಕೊರತೆಯಿದೆ.

ಇದನ್ನು ಓದಿ : ನಾಳೆ‌ ಐದನೇ ಹಂತದ ಮತದಾನ:ಪ್ರಮುಖರ ಸ್ಪರ್ಧೆ

ಪೊಲಾವರಂ ನೀರಾವರಿ ಯೋಜನೆ

ವಿಭಜಿತ ಆಂಧ್ರಪ್ರದೇಶದ ಜೀವನಾಡಿ ಎಂದು ಬಣ್ಣಿಸಲಾಗುತ್ತಿರುವ ಪೊಲಾವರಂ ನೀರಾವರಿ ಯೋಜನೆಗಾಗಿ ತಮ್ಮ ಜಮೀನು, ಮನೆ, ಜೀವ ತ್ಯಾಗ ಮಾಡಿದ ಲಕ್ಷಾಂತರ ಆದಿವಾಸಿಗಳು ಮತ್ತು ಇತರ ನಿರಾಶ್ರಿತ ಜನರನ್ನು ಕೇಂದ್ರ ಸರ್ಕಾರವೂ ನಿರ್ಲಕ್ಷಿಸಿದೆ. ಪ್ರತಿ ಬಾರಿ ಚುನಾವಣೆ ಬಂದಾಗ ಬಿಜೆಪಿ, ಟಿಡಿಪಿ, ಜನಸೇನೆ ಮತ್ತು ವೈ.ಎಸ್.ಆರ್.ಸಿ. ಪೊಲವರಂ ಭರವಸೆಯ ಮೇಲೆ ಪ್ರಚಾರ ಮಾಡುವುದು ವಾಡಿಕೆಯಾಗಿದೆ. ರಾಜ್ಯ ವಿಭಜನೆಯ ನಂತರ ಮೂರನೇ ಬಾರಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ನಾಲ್ಕೂ ಪಕ್ಷಗಳು ಪೊಲಾವರಂ ಅನ್ನು ಆಯಕಟ್ಟಿನ ಚರ್ಚೆಯ ವಿಷಯವನ್ನಾಗಿ ಮಾಡಿಕೊಂಡಿವೆ. ಇದರಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ಮುಂಚೂಣಿಯಲ್ಲಿದ್ದಾರೆ. 2014ರಲ್ಲಿ ಟಿಡಿಪಿ ಮತ್ತು ಜನಸೇನೆ ಜತೆ ಮೈತ್ರಿ ಮಾಡಿಕೊಂಡಿದ್ದ ಮೋದಿ, ಪೊಲಾವರಂ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.

ಹಿಂದಿನ ಟಿಡಿಪಿ ಮತ್ತು ಪ್ರಸ್ತುತ ವೈ.ಎಸ್.ಆರ್.ಸಿ ಸರ್ಕಾರಗಳು ಪೊಲಾವರಂ ಅನ್ನು ತಮ್ಮ ಅವಕಾಶವಾದಿ, ರಾಜಕೀಯ ಮತ್ತು ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಂಡ ಹಲವು ಉದಾಹರಣೆಗಳಿವೆ. ಕೇಂದ್ರದಿಂದ ಆಗಬೇಕಿದ್ದ ಪೊಲಾವರಂ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಟಿಡಿಪಿ ಸರಕಾರ ವಿಶೇಷ ಸ್ಥಾನಮಾನವನ್ನು ಕೈಬಿಟ್ಟಿರುವುದು ಅಂದಿನ ಬೆಳವಣಿಗೆಗಳಿಂದ ಅರ್ಥವಾಗುತ್ತದೆ. ಸ್ಥಾನಮಾನಕ್ಕೆ ಸಮಾನವಾದ ವಿಶೇಷ ಪ್ಯಾಕೇಜ್ ಎಂದು ಬಿಜೆಪಿ ಹೇಳಿದ್ದರೂ ಪ್ರಾಯೋಗಿಕವಾಗಿ ಏನನ್ನೂ ನೀಡದಿದ್ದರೂ ಟಿಡಿಪಿ ನಾಲ್ಕು ವರ್ಷಗಳ ಕಾಲ ಎನ್‌ಡಿಎ ಮತ್ತು ಕೇಂದ್ರ ಸರ್ಕಾರದಲ್ಲಿ ಮುಂದುವರೆಯಿತು. ಕಳೆದ ವರ್ಷ ಕೇಂದ್ರ ಮೋಸ ಮಾಡಿರುವುದು ಹೊರಬಿದ್ದಿದೆ. ಬೀದಿಗಿಳಿದು ಪ್ರತಿಭಟನೆಯನ್ನೂ ನಡೆಸಲಾಯಿತು. ಈಗ ಮತ್ತೆ ಅದೇ ಬಿಜೆಪಿ ಮೈತ್ರಿಕೂಟ ಸೇರಿದ್ದಾರೆ.

ಬಿಜೆಪಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಜನಸೇನಾ ಹೇಳುತ್ತಿದೆ. ಐದು ವರ್ಷಗಳಲ್ಲಿ ವೈಎಸ್.ಆರ್.ಸಿ ಸರ್ಕಾರವು ಪೋಲವರಂ ಸುತ್ತ ರಿವರ್ಸ್ ಟೆಂಡರ್ ಮತ್ತು ಡಯಾಫ್ರಾಮ್ ವಾಲ್  ಅನ್ನು ಕರೆದಿದೆ. ಕೇಂದ್ರದಿಂದ ಹಣ ಬಂದಿಲ್ಲ. ಮೋದಿ ಕೊಟ್ಟಿದ್ದಾರೆ ಎನ್ನಲಾದ ಹಣವೆಲ್ಲ ಗುತ್ತಿಗೆದಾರರ ಜೇಬು ಸೇರಿದೆ. ಜನರ ಮೇಲೆ ಸೆಸ್ ವಿಧಿಸುತ್ತೇವೆ ಮತ್ತು ನಿರಾಶ್ರಿತರಿಗೆ 33 ಸಾವಿರ ಕೋಟಿ ರೂ.ಗಳ ಪರಿಹಾರಕ್ಕಾಗಿ ಹಣ ಸಂಗ್ರಹಿಸುತ್ತೇವೆ ಎಂದು ಪವನ್ ಕಲ್ಯಾಣ್ ಹೇಳುತ್ತಾರೆ. ಕಳೆದ ಚುನಾವಣೆ ವೇಳೆ ತೆಲುಗುದೇಶಂ ಸರ್ಕಾರ ಪೊಲಾವರಂ ಅನ್ನು ಎಟಿಎಂ ಆಗಿ ಬಳಸಿಕೊಂಡಿದೆ ಎಂದು ಆರೋಪಿಸಿದ ಮೋದಿ, ಈಗ ವೈ.ಎಸ್.ಆರ್.ಸಿ ಸರ್ಕಾರಕ್ಕೆ ಈ ಯೋಜನೆ ಬಗ್ಗೆ ಪ್ರಾಮಾಣಿಕತೆ ಇಲ್ಲ, ಭ್ರಷ್ಟಾಚಾರ ನಡೆದಿದೆ ಎಂದು ಹೇಳುತ್ತಿದ್ದಾರೆ. ಮೇಲಿಂದ ಮೇಲೆ ಬಿಜೆಪಿ ಸರ್ಕಾರ ಹೇಳುವುದರಿಂದ ಟಿಡಿಪಿ ಮತ್ತು ವೈ.ಎಸ್.ಆರ್.ಸಿ ಭ್ರಷ್ಟಾಚಾರ ಅವ್ಯಾಹತವಾಗಿ ಸಾಗಿದೆ ಎಂದು ಜನ ಭಾವಿಸಿದ್ದಾರೆ. ಇದರಿಂದ ಪೊಲಾವರಂ ವಿಚಾರದಲ್ಲಿ ಬಿಜೆಪಿಯ ಮೋಸ ಸ್ಪಷ್ಟವಾಗಿದೆ.

ವಿಶಾಖಾ ಸ್ಟೀಲ್ – ಖಾಸಗೀಕರಣ

ಮಾತ್ರವಲ್ಲದೆ, ಮೋದಿ ಸರ್ಕಾರವು ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಅನ್ನು ಖಾಸಗೀಕರಣಗೊಳಿಸಲು ನಿರ್ಧರಿಸಿದೆ. “ವಿಶಾಖ ಉಕ್ಕು-ಆಂಧ್ರರ ಹಕ್ಕು” ಎಂಬ ಘೋಷಣೆಯೊಂದಿಗೆ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ಅನ್ನು ಅನೇಕ ತ್ಯಾಗಗಳ ಮೂಲಕ ಸಾಧಿಸಲಾಯಿತು. ಆ ಆಂದೋಲನದಲ್ಲಿ 32 ಜನರು ಸತ್ತರು ಮತ್ತು ಪ್ರಾಣ ತ್ಯಾಗ ಮಾಡಿದರು. 64 ಹಳ್ಳಿಗಳ ರೈತರು ಸ್ಟೀಲ್ ಪ್ಲಾಂಟ್ ಗಾಗಿ 26 ಸಾವಿರ ಎಕರೆ ಭೂಮಿ ತ್ಯಾಗ ಮಾಡಿ ನಿರಾಶ್ರಿತರಾದರು. ಈಗ ಉಕ್ಕು ಕಾರ್ಖಾನೆಯ ಆಸ್ತಿ ಎರಡು ಲಕ್ಷ ಕೋಟಿಗೂ ಹೆಚ್ಚು. ಉಕ್ಕು ಉದ್ಯಮದಿಂದಾಗಿ ವಿಶಾಖಪಟ್ಟಣ ಮತ್ತು ಗಜುವಾಕ ಸಾಕಷ್ಟು ಅಭಿವೃದ್ಧಿ ಕಂಡಿವೆ. ಉಕ್ಕಿನ ಕಾರ್ಖಾನೆಗೆ ತನ್ನದೇ ಆದ ಗಣಿಗಳನ್ನು ನೀಡದೆ ತಾರತಮ್ಯ ಮಾಡಿದ್ದರಿಂದ ಉಕ್ಕಿನ ಕಾರ್ಖಾನೆ ಸ್ವಲ್ಪ ಮಟ್ಟಿಗೆ ನಷ್ಟ ಅನುಭವಿಸಿತು.

ಇದೀಗ ಮೋದಿ ಸರಕಾರ ಉಕ್ಕಿನ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ ಜಿಂದಾಲ್-ಅದಾನಿಗಳಂತಹ ಕ್ರೋನಿ ಬಂಡವಳಿಗರಿಗೆ ಮಾರಾಟ ಮಾಡುವುದಾಗಿ ಘೋಷಿಸಿದೆ. ಸಾವಿರಕ್ಕೂ ಹೆಚ್ಚು ದಿನಗಳಿಂದ ಖಾಸಗೀಕರಣದ ವಿರುದ್ಧ ದೊಡ್ಡ ಚಳವಳಿ ನಡೆಯುತ್ತಿದೆ. ಎಡಪಕ್ಷಗಳು ಪ್ರಮುಖ ಪಾತ್ರ ವಹಿಸಿವೆ. ಕೆಲವು ಸಂದರ್ಭಗಳಲ್ಲಿ “ಸನ್ನಾಯಿ ನಪ್ಪುಲು” ಹೊರತುಪಡಿಸಿದರೆ ಮೂರು ಪ್ರಾದೇಶಿಕ ಪಕ್ಷಗಳು ಖಾಸಗೀಕರಣ ವಿರೋಧಿ ಚಳವಳಿಯಲ್ಲಿ ನಿರ್ದಿಷ್ಟವಾಗಿ ತೊಡಗಿಸಿಕೊಂಡಿಲ್ಲ. ಉಕ್ಕು ಕಾರ್ಖಾನೆಯ ಕಾರ್ಮಿಕರು ಮತ್ತು ಆಂಧ್ರಪ್ರದೇಶದ ಜನರು ಅದರ ಖಾಸಗೀಕರಣದ ವಿರುದ್ಧ ಹೋರಾಡುತ್ತಿರುವುದರಿಂದಾಗಿ ಸರ್ಕಾರವು ಖಾಸಗೀಕರಣಗೊಳಿಸುವ ತನ್ನ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಧೈರ್ಯ ಮಾಡಿಲ್ಲ.

ಇವಲ್ಲದೆ ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಆರ್ಥಿಕ ನಿರ್ವಹಣೆಯಲ್ಲಿ ವೈಫಲ್ಯಗಳಿಂದ ಬಿಜೆಪಿ ಕೇಂದ್ರ ಸರಕಾರದ ವಿರುದ್ಧ ತೀವ್ರ ಅತೃಪ್ತಿ, ಆಕ್ರೋಶ ಹರಡಿದೆ

ಬಿಜೆಪಿ, ವೈ.ಎಸ್.ಆರ್.ಸಿ  ಆಡಳಿತ-ವಿರೋಧಿ ಭಾವನೆ

ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವು ಕೇಂದ್ರದಲ್ಲಿ ಬಿಜೆಪಿಗೆ ಅಧೀನವಾಗಿದೆ, ವಿಶೇಷವಾಗಿ ವಿದ್ಯುತ್, ಶಿಕ್ಷಣ ಮತ್ತು ನಗರ ಸುಧಾರಣೆಗಳನ್ನು ಅನುಷ್ಠಾನಗೊಳಿಸುವಲ್ಲಿ, ಹೆಚ್ಚಿದ ಆಸ್ತಿ ತೆರಿಗೆ, ಕಸದ ಶುಲ್ಕಗಳು ಮತ್ತು ವಿದ್ಯುತ್ ದರಗಳಿಂದ ಜನರಿಗೆ ಹೊರೆಯಾಗಿದೆ ಎಂಬುದನ್ನು ಪ್ರಚಾರ ಕಾರ್ಯಕ್ರಮಗಳಲ್ಲಿ ಎತ್ತಿ ತೋರಿಸಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಸಹ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಟಿಡಿಪಿ ಮತ್ತು ಜನಸೇನೆಯ ಪಾತ್ರವನ್ನು ಬಯಲು ಮಾಡುವುದು ಸಹ ಪ್ರಚಾರದ ಮುಖ್ಯ ಅಂಶವಾಗಿದೆ.

ವೈಎಸ್‌ಆರ್‌ ಕಾಂಗ್ರೆಸ್ ಸರಕಾರದ ಹಲವು ಕಲ್ಯಾಣ ಯೋಜನೆಯಿದ್ದಾಗ್ಯೂ ತೀವ್ರ ಆಡಳಿತ-ವಿರೋಧಿ ಅಲೆ ಎದುರಿಸುತ್ತಿದೆ. ಬಿಜೆಪಿಯ ಕೇಂದ್ರ ಸರಕಾರದ ಮೋಸದಾಟಗಳ ವಿರುದ್ಧ ಹೋರಾಟ ಮಾಡಿ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಸೋತಿದೆ.  ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಗಂಭೀರ ಆಪಾದನೆಗಳು ಕೇಳಿ ಬಂದಿವೆ. ತೆಲುಗು ದೇಶಂ ಹಿಂದಿನ ಅವಧಿಯಲ್ಲಿ ಅಮರಾವತಿ ರಾಜಧಾನಿ ಕಟ್ಟುವುದರಲ್ಲಿ ತೀವ್ರ ವಿಳಂಬ ಮತ್ತು ಭ್ರಷ್ಟಾಚಾರದ ಆಪಾದನೆಗೆ ಗುರಿಯಾಗಿದೆ. ಅಮರಾವತಿ ರಾಜಧಾನಿ ಯೋಜನೆ ರದ್ದತಿ, ರಾಜ್ಯಕ್ಕೆ ಮೂರು ರಾಜಧಾನಿಗಳ ವಿಚಿತ್ರ ಯೋಜನೆ ಮತ್ತು ಅದರ ಜಾರಿಯಲ್ಲಿ ವಿಳಂಬ ಮತ್ತು ಭ್ರಷ್ಟಾಚಾರದ ಆಪಾದನೆಯನ್ನು ವೈಎಸ್‌ಆರ್‌ ಕಾಂಗ್ರೆಸ್ ಸಹ ಎದುರಿಸುತ್ತಿದೆ. ಅಲ್ಲದೆ ಕಾಂಗ್ರೆಸ್ ವಿಭಜಿಸಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ ಕಟ್ಟುವುದನ್ನು ವಿರೋಧಿಸಿದ ವೈ.ಎಸ್ ರಾಜಶೇಖರ್ ರೆಡ್ಡಿ ಸೋದರ ವೈ.ಎಸ್ ವಿವೇಕಾನಂದ ರೆಡ್ಡಿ 2019 ಚುನಾವಣೆಯ ಸ್ವಲ್ಪ ಮೊದಲು ಕೊಲೆಯ ಆರೋಪ ಸಹ ಸೇರಿಕೊಂಡಿದೆ. ವೈಎಸ್‌ಆರ್‌ ಕಾಂಗ್ರೆಸ್ ನಾಯಕ ಮತ್ತು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೋದರಿ ವೈಎಸ್‌ ಶರ್ಮಿಲಾ ಈಗ ಕಾಂಗ್ರೆಸ್ ನಾಯಕಿಯಾಗಿದ್ದು ವೈಎಸ್‌ಆರ್‌ ಜನಪ್ರಿಯತೆಯೇ ಆಧಾರವಾಗಿರುವ  ವೈಎಸ್‌ಆರ್‌ ಕಾಂಗ್ರೆಸ್ ಮತಗಳ ವಿಭಜನೆಯಾಗುವುದೆಂದು ನಿರೀಕ್ಷಿಸಲಾಗಿದೆ.

ಬಿಜೆಪಿ ಮತ್ತು ಪ್ರಧಾನಿ ಮೋದಿಯ ಕೋಮುವಾದಿ ಪ್ರಚಾರ ಸಹ ಒಂದು ಪ್ರತಿಕೂಲ ಅಂಶವಾಗಬಹುದು. ಪ್ರಧಾನಿ ಮುಸ್ಲಿಂ ಮೀಸಲಾತಿಯನ್ನು ತೀವ್ರವಾಗಿ ವಿರೋಧಿಸಿದ್ದು ಅದೀಕಾರಕ್ಕೆ ಬಂದರೆ ಅದನ್ನು ರದ್ದು ಮಾಡುವುದಾಗಿ ಘೋಷಿಸಿದ್ದರೆ, ತೆಲುಗು ದೇಶಂ ನಾಯಕ ಚಂದ್ರಬಾಬು ನಾಯ್ಡು  ಯಾವುದೇ ಬದಲಾವಣೇಯಿರುವುದಿಲ್ಲ ಎಂದಿದ್ದಾರೆ. ಇದು ಧಾರ್ಮಿಕ ಆಧಾರಿತ ಮೀಸಲಾತಿಯಲ್ಲ, ಸಾಮಾಜಿಕ-ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರಿಸಿದ್ದು ಎಂದು ಸ್ಪಷ್ಟ ಪಡಿಸಿದ್ದಾರೆ. ಆಂಧ್ರಪ್ರದೇಶ

ಇಂಡಿಯಾ ಕೂಟದ ಪ್ರಚಾರ

ಬಿಜೆಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್ ವಿರೋಧಿ ಜಾಗವನ್ನು ಇಂಡಿಯಾ ಕೂಟ ತುಂಬಲು ಪ್ರಯತ್ನಿಸುತ್ತಿದೆ.  ಇಂಡಿಯಾ ಕೂಟದ ನಾಯಕರು ರಾಜ್ಯದ ತುಂಬಾ ವ್ಯಾಪಕ ಪ್ರವಾಸ ಮಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜನರಿಗೆ ವಿವರಿಸಿದರು. ಆಂಧ್ರಪ್ರದೇಶ

ಇಂಡಿಯಾ ಕೂಟದ ಮೂರು ಪಕ್ಷಗಳು ಹಲವು ಸ್ವತಂತ್ರ ಸಭೆಗಳನ್ನು ಹಾಗೂ ದೊಡ್ಡ ಜಂಟಿ ಸಭೆಗಳನ್ನು ನಡೆಸಿತು., ಮೇ 10 ರಂದು ವಿಜಯವಾಡದಲ್ಲಿ ಪ್ರಚಾರದ ಕೊನೆಯ ದಿನದಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಡಿ ರಾಜಾ ಭಾಗವಹಿಸಿ, ಮೋದಿಯವರ ದುರಾಡಳಿತ ಮತ್ತು ಬಿಜೆಪಿ ನೀತಿಗಳ ವಿನಾಶಕಾರಿ ಪರಿಣಾಮವನ್ನು ತೆರೆದಿಟ್ಟರು. ಸಿಪಿಎಂ ರಾಜ್ಯದ ಅಭಿವೃದ್ಧಿಯ ಕುರಿತು ಹಲವಾರು ಕಾರ್ಯಾಗಾರಗಳನ್ನು ನಡೆಸಿತು ಮತ್ತು ‘ರಾಜ್ಯದ ಸಮಗ್ರ ಅಭಿವೃದ್ಧಿ’ ಯೋಜನೆಯನ್ನು ಘೋಷಿಸಿತು. ಸಿಪಿಐ ರಾಜ್ಯದ ಅಭಿವೃದ್ಧಿಗೆ ಸ್ಪಷ್ಟ ನೀತಿಗಳನ್ನು ಪ್ರಕಟಿಸಿತು.

ಈ ಅಭಿಯಾನದಲ್ಲಿ, ಬಿಜೆಪಿಯ ದುರಾಡಳಿತ ಮತ್ತು ಮೋದಿ ಸರ್ಕಾರದಿಂದ ರಾಜ್ಯಕ್ಕೆ ಉಂಟಾದ ಹಾನಿಯ ವಿರುದ್ಧ ಪ್ರಚಾರ ಮಾಡಲು ‘ಸಂವಿಧಾನ ಸಂರಕ್ಷಣಾ ವೇದಿಕೆ’ ಗಣನೀಯ ಕೊಡುಗೆ ನೀಡಿದೆ. ಮಾಜಿ ಸಚಿವ ವಡ್ಡೆ ಶೋಭಾನಾದ್ರೀಶ್ವರ ರಾವ್, ವಿಚಾರವಾದಿ ಕೆ.ವಿಜಯ ರಾವ್, ವಿಶೇಷ ಸ್ಥಾನಮಾನ ಆಂದೋಲನದ ಮುಖಂಡ ಚಲಸಾನಿ ಶ್ರೀನಿವಾಸ್ ಮತ್ತಿತರರು ರಾಜ್ಯ ಪ್ರವಾಸ ಮಾಡಿ, ಸಭಾಂಗಣ ಸಭೆ ಮತ್ತು ರೋಡ್‌ಶೋಗಳನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳತ್ತ ಗಮನ ಹರಿಸಿದ್ದಾರೆ.

ಈ ಪ್ರಯತ್ನಗಳ ಮೂಲಕ ರಾಜ್ಯದಲ್ಲಿ ಬಿಜೆಪಿ-ವಿರೋಧಿ ಪ್ರಚಾರಕ್ಕೆ ಚಾಲನೆ ದೊರೆಯಿತು. ಎನ್‌ಡಿಎ ಮತ್ತು ವೈಎಸ್‌ಆರ್‌ಸಿ ನಡುವಿನ ದ್ವಿಧ್ರುವಿ ಪರಿಸ್ಥಿತಿಯ ಹೊರತಾಗಿಯೂ, ಇಂಡಿಯಾ ಮೈತ್ರಿಕೂಟವು ಪ್ರಭಾವ ಬೀರಲು ಮತ್ತು ಪ್ರಬಲ ಪಕ್ಷಗಳಿಗೆ ಸವಾಲು ಹಾಕುವಲ್ಲಿ ಯಶಸ್ವಿಯಾಯಿತು. ಆಂಧ್ರಪ್ರದೇಶ

ಎನ್.ಡಿ.ಎ ಕೂಟವು ಕೇಂದ್ರ ಸರಕಾರದ ಮತ್ತು ವೈಎಸ್‌ಆರ್‌ ಕಾಂಗ್ರೆಸ್ ರಾಜ್ಯ ಸರಕಾರದ ಆಡಳಿತ-ವಿರೋಧಿ ಅಲೆಯನ್ನು ಎದುರಿಸುತ್ತಿದ್ದು, ಇಂಡಿಯಾ ಕೂಟಕ್ಕೆ ಇದರ ಲಾಭ ಆಗುವ ಸಾಧ್ಯತೆಯಿದೆ.  ಆಡಳಿತ-ವಿರೋಧಿ ಅಲೆ ಎಷ್ಟು ತೀವ್ರವಾಗಿದೆ ಎನ್ನುವುದರ ಮೇಲೆ ಇಂಡಿಯಾ ಕೂಟದ ಸಂಖ್ಯೆ ಅವಲಂಬಿಸಿರುತ್ತದೆ.  ಯಾವುದೇ ತ್ರಿಕೋಣ ಸ್ಪರ್ಧೇಯಲ್ಲಿ ಸಾಮಾನ್ಯವಾಗಿ ಅತಿ ದೊಡ್ಡ ಪಕ್ಷ/ಕೂಟಕ್ಕೆ ಲಾಭವಾಗುತ್ತದೆ. ಆದರೆ ಬಿಜೆಪಿ ಗೆ ಅಥವಾ ಎನ್.ಡಿ.ಎ ಗೆ ಈ ಲಾಭ ದಕ್ಕುವ ಸಾಧ್ಯತೆ ಬಹಳ ಕಡಿಮೆ. ಹಾಗಾಗಿ ಬಿಜೆಪಿ ಗೆ ಅಥವಾ ಎನ್.ಡಿ.ಎ ಗೆ ಈ ರಾಜ್ಯದಲ್ಲಿ ಹೆಚ್ಚಿನ ಮುನ್ನಡೆ ಅಸಂಭವವೆಂದು ಹೇಳಬಹುದು. ಆಂಧ್ರಪ್ರದೇಶ

ಇದನ್ನು ನೋಡಿ : ಮಂಗಳ ಸೂತ್ರ ಮತ್ತು ಮತ ರಾಜಕಾರಣ – ಡಾ. ಮೀನಾಕ್ಷಿ ಬಾಳಿ, ಕೆಎಸ್‌ ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *