ಆಂಧ್ರ ಪ್ರದೇಶ | ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ; ಹೋರಾಟ ಹತ್ತಿಕ್ಕಿದ ಪೊಲೀಸರು

ವಿಜಯವಾಡ: ವೇತನ ಹೆಚ್ಚಳ ಮತ್ತು ಇತರ ಸೌಲಭ್ಯಗಳಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸುವ ಸಲುವಾಗಿ ‘ಚಲೋ ವಿಜಯವಾಡ’ಕ್ಕೆ ಕರೆ ನೀಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ತಮ್ಮ ಬೇಡಿಕೆ ಈಡೇಡಿಸುವಂತೆ ಕಳೆದ 43 ದಿನಗಳಿಂದ  ಅಂಗನವಾಡಿ ಕಾರ್ಯಕರ್ತೆಯರು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದಾರೆ.

ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಸಲ್ಲಿಸಲು ಬಯಸಿದ ಹಲವಾರು ಅಂಗನವಾಡಿ ಕಾರ್ಯಕರ್ತೆಯರನ್ನು ಸೋಮವಾರ ಮುಂಜಾನೆಯಿಂದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಪ್ರತಿಭಟನಾಕಾರರು ಜಗನ್ ವಿರುದ್ಧ ಸಿಎಂ ಡೌನ್ ಡೌನ್ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಡೆದ ಮಹತ್ವದ ಹೋರಾಟಗಳಲ್ಲಿ ಇದೂ ಒಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಬಳ್ಳಾರಿ | ದಲಿತ ಎಂಬ ಕಾರಣಕ್ಕೆ ಹೋಟೆಲ್‌ನಲ್ಲಿ ಊಟ ನಿರಾಕರಣೆ

ಕಾರ್ಯಕರ್ತರು ಹೋರಾಟ ನಡೆಸುತ್ತಿರುವುದರಿಂದ ರಾಜ್ಯಾದ್ಯಂತ 55,600 ಅಂಗನವಾಡಿ ಕೇಂದ್ರಗಳು ಈಗ ಮುಚ್ಚಲ್ಪಟ್ಟಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಸಹಾಯಕರು ಕೆಲಸದಿಂದ ದೂರ ನಿಂತಿದ್ದಾರೆ. ಈ ನಡುವೆ ಆಂಧ್ರಪ್ರದೇಶದ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ-1971 ರ ಕಾಯ್ದೆ(ಎಸ್ಮಾ)ಯನ್ನು ಜಾರಿ ಮಾಡಿದ್ದರೂ ಕಾರ್ಯಕರ್ತೆಯರು ಅದಕ್ಕೆ ಜಗ್ಗದೆ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

ತಮ್ಮ ಸಹವರ್ತಿಗಳನ್ನು ಬಂಧಿಸುವುದನ್ನು ವಿರೋಧಿಸಿ ಜನವರಿ 22 ರಂದು ಹಲವಾರು ಕಾರ್ಯಕರ್ತೆಯರು ವಿಜಯವಾಡದ ಮೈಲವರಂ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದ್ದಾರೆ. ಗುಂಟೂರು ಮತ್ತಿತರ ಕಡೆಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಅವರ ಊರುಗಳಿಗೆ ಕಳುಹಿಸುತ್ತಿರುವುದು ಕಂಡು ಬಂದಿದೆ. ‘ಚಲೋ ವಿಜಯವಾಡ’ ಪ್ರತಿಭಟನೆಗೆ ಕರೆ ನೀಡಿದ ನಂತರ ವಿಜಯವಾಡ ಪೊಲೀಸರು ಪ್ರತಿಭಟನೆಗೆ ತಮ್ಮ ಅನುಮತಿ ಇಲ್ಲ ಎಂದು ಹೇಳಿದ್ದರು. ಜೊತೆಗೆ  ಪ್ರತಿಭಟನಾ ದಿನದಂದು ಸಿಆರ್‌ಪಿಸಿ (ಅಪರಾಧ ಪ್ರಕ್ರಿಯಾ ಸಂಹಿತೆ) ಯ ಸೆಕ್ಷನ್ 144 ರ ಅಡಿಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಘೋಷಿಸಿದ್ದರು.

“ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಕೆಲವು ‘ಸಮಾಜ ವಿರೋಧಿ ಶಕ್ತಿಗಳು’ ಯೋಜಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಹೀಗಾಗಿ ಜನವರಿ 22 ರಂದು ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್‌ಗಳ ಜೊತೆಗೆ ಕಣ್ಗಾವಲು ಹೆಚ್ಚಿಸಲು 1500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ನಿಷೇಧಾಜ್ಞೆಗಳನ್ನು ಉಲ್ಲಂಘಿಸುವವರು ಮತ್ತು ಕಾನೂನುಬಾಹಿರ ಸಭೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎನ್‌ಟಿಆರ್ ಜಿಲ್ಲಾ ಪೊಲೀಸ್ ಕಮಿಷನರೇಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಸಾಂವಿಧಾನಿಕ ಜವಾಬ್ದಾರಿಯನ್ನು ಎತ್ತಿಹಿಡಿಯಲು ಆಹ್ವಾನ ನಿರಾಕರಣೆ – ಸಿಎಂ ಪಿಣರಾಯಿ ವಿಜಯನ್ ಪುನರುಚ್ಛಾರ

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಸ್ತುತ ಮಾಸಿಕ 11,500 ರೂ. ಮತ್ತು ಸಹಾಯಕಿಯರಿಗೆ 7,000 ರೂ.ಗಳನ್ನು ಆಂಧ್ರಪ್ರದೇಶ ಸರ್ಕಾರ ನೀಡುತ್ತಿದೆ. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳಲ್ಲಿ ಮಾಸಿಕ ವೇತನವನ್ನು 26,000 ರೂ.ಗೆ ಹೆಚ್ಚಿಸುವುದು, ಸರ್ಕಾರಿ ನೌಕರರಿಗೆ ಲಭ್ಯವಿರುವ ಗ್ರಾಚ್ಯುಟಿ ಮತ್ತು ವಿಮೆಯಂತಹ ಪ್ರಯೋಜನಗಳನ್ನು ತಮಗೂ ನೀಡುವಂತೆ ಹಾಗೂ ತಮ್ಮ ಉದ್ಯೋಗಗಳನ್ನು ಕಾಯಂಗೊಳಿಸುವಂತೆ ಒತ್ತಾಯಿಸಿದ್ದಾರೆ.

ಪ್ರತಿಭಟನಾಕಾರರ ಮೇಲಿನ ಪೊಲೀಸರ ಕ್ರಮವನ್ನು ಟಿಡಿಪಿ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಖಂಡಿಸಿದ್ದು, “ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಪ್ರತೀಕಾರದ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಖಂಡನೀಯ. ಅನೈತಿಕ ರೀತಿಯಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ಮುಷ್ಕರವನ್ನು ಮುರಿಯುವ ಬದಲು ಸಮಸ್ಯೆ ಪರಿಹಾರಕ್ಕೆ ಸಮಯ ವ್ಯಯಿಸಿದ್ದರೆ ಉತ್ತಮ. ಮುಖ್ಯಮಂತ್ರಿ ತಮ್ಮ ಅಹಂಕಾರವನ್ನು ಬದಿಗೊತ್ತಿ ಅವರ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು” ಎಂದು ಆಗ್ರಹಿಸಿದ್ದಾರೆ.

ಜನವರಿ 21 ರಂದು ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಪ್ರತಿಭಟನಾ ನಿರತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಬೆಂಬಲ ನೀಡಿದ್ದರು. ‘‘ಬರಲಿರುವ ಟಿಡಿಪಿ-ಜನಸೇನಾ ಸರಕಾರ ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ನ್ಯಾಯ ಒದಗಿಸಲಾಗುವುದು’’ ಎಂದು ಧರಣಿ ನಿರತ ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ವಿಡಿಯೊ ನೋಡಿಅಂಗನವಾಡಿ ನೌಕರರ ಹೋರಾಟ : ವೇತನ ಹೆಚ್ಚಿಸಿ ಎಂದಿದ್ದಕ್ಕೆ ಲಾಠಿ ಬೀಸಿದ ಆಂದ್ರ ಸರ್ಕಾರ

 

Donate Janashakthi Media

Leave a Reply

Your email address will not be published. Required fields are marked *