ಅಂಧ ಭಕ್ತರು ಹಾಗು ಪುಕ್ಸಟ್ಟೆಗಳು

ಎಸ್ ಎಸ್ ಹದ್ಲಿ

ಶಾಸಕರಿಗೆ, ಸಂಸದರಿಗೆ ನೀಡುವ ಪಿಂಚಣಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ 5-6 ವರ್ಷಗಳಿಂದ ʻಕುಂತು ತುಪ್ಪ ತಿನ್ನುವ ಜಾಲತಾಣಗಳ ವೀರರುʼ ಒಂದು ಚಳುವಳಿಯನ್ನೇ ನಡೆಸಿದ್ದಾರೆ. ಇದಕ್ಕೆ ರಾಜಕೀಯದವರ ಮೇಲಿರುವ ಸಿಟ್ಟು ಹಾಗು ಸಾರ್ವಜನಿಕರಿಗೆ ಪುಕ್ಸಟ್ಟೆ ನೀಡುವ ಉಡುಗೊರೆಗಳನ್ನು ಬಳಸಿಕೊಂಡು ಇವೆಲ್ಲವೂ ನಮ್ಮ ತೆರಿಗೆ ಹಣದಿಂದ ನಡೆಯುತ್ತಿದೆ ಎಂಬ ಭಾವನೆ ನೀಡಲಾಗುತ್ತಿದೆ. ಒಂದು ಕಡೆಗೆ ಇದೆಲ್ಲದಕ್ಕೂ ನಮ್ಮಲ್ಲಿ ಹಣ ಇಲ್ಲವೆಂದು ಸರ್ಕಾರ ಹೇಳುತ್ತಿದೆ. ಇನ್ನೊಂದು ಕಡೆಗೆ, ತೆರಿಗೆ ನೀಡುವವರ ಸಂಘ ಒಂದನ್ನು ರಚಿಸಿ, ಪುಕ್ಸಟ್ಟೆ Vs ನಮ್ಮ ತೆರಿಗೆ ಹಣ ಹಾಗು ಅಭಿವೃದ್ಧಿ ಎಂಬ ಅಭಿಯಾನ ನಡೆದಿದೆ.

ಪುಕ್ಸಟ್ಟೆಗಳನ್ನು ಎಲ್ಲ ರಾಜಕೀಯ ಪಕ್ಷಗಳು ನೀಡುತ್ತವೆ. ಕೆಲವು ಪುಕ್ಸಟ್ಟೆಗಳನ್ನು ಸಾಮಾಜಿಕ ಜವಾಬ್ದಾರಿ ಹಾಗು ಜನ ಕಲ್ಯಾಣದ ಅಗತ್ಯತೆ ಎಂದು ಪರಿಗಣಿಸಲಾಗುತ್ತದೆ. ಕೆಲವು ಪುಕ್ಸಟ್ಟೆಗಳು ಓಟ್‌ ಬ್ಯಾಂಕಿನ ರಾಜಕೀಯಕ್ಕೆ ಬಳಸಿಕೊಳ್ಳಲೂ ಸಾಧ್ಯ. ಇಂದು ಪುಕ್ಸಟ್ಟೆಗಳನ್ನು ವಿರೋಧಿಸುವ ಬಿಜೆಪಿ-ಆರ್‌ಎಸ್‌ಎಸ್‌ ತಾವು ಚುನಾವಣೆ ಎದುರಿಸುವ ರಾಜ್ಯಗಳಲ್ಲಿ ಪುಕ್ಸಟ್ಟೆಗಳ ಸುರಿಮಳೆ ಮಾಡುತ್ತಾರೆ. ಈಗ ಕರ್ನಾಟಕದಲ್ಲಿ ಪುಕ್ಸಟ್ಟೆಗಳ ಸುರಿಮಳೆ ಪ್ರಾರಂಭವಾಗಿದೆ. ಇವರಿಗೆ ಈಗ ಪುಕ್ಸಟ್ಟೆಗಳನ್ನು ಹಂಚಲು ನಾಚಿಕೆ ಬರುವುದಿಲ್ಲ.  ಇನ್ನೊಂದು ಕಡೆ ಪ್ರಧಾನಿಯಿಂದ ಹಿಡಿದು, ಕುಂತು ತುಪ್ಪ ತಿನ್ನುವ ಅಂಧ ಭಕ್ತರವರೆಗೆ ಎಲ್ಲರೂ ಪುಕ್ಸಟ್ಟೆಗಳನ್ನು ದೇಶದ ಅಭಿವೃದ್ಧಿಗೆ ಮಾರಕ ಎಂಬ ವ್ಯಾಖ್ಯಾನ ನೀಡಿ, ವಿರೋಧ ಪಕ್ಷಗಳನ್ನು ಗೇಲಿ ಮಾಡುವ, ದ್ವಿಮುಖ ನೀತಿಯ ಸಂದರ್ಭವಾದಿಗಳಾಗಿದ್ದಾರೆ ಎಂಬುದನ್ನು ಅಂದ ಭಕ್ತರು ತಿಳಿಯಬೇಕಾಗಿದೆ. ಜನರ ಅಭಿಪ್ರಾಯ ರೂಪಿಸುವ ಭಕ್ತರ ಐಟಿ ಸೆಲ್ಲ , ಈಗ ಪಿಂಚಣಿಗಳನ್ನೂ ಪುಕ್ಸಟ್ಟೆಗಳಲ್ಲಿ ಸೇರಿಸಿ ಪ್ರಚಾರ ಮಾಡುತ್ತಿದ್ದಾರೆ.

ಪ್ರಸ್ತುತ ಪುಕ್ಸಟ್ಟೆಗಳಿಗೆ ಸಂಬಂಧಿಸಿದಂತೆ ಇಂದು ವಿವಿಧ ಪಿಂಚಣಿಗಳನ್ನು ಪುಕ್ಸಟ್ಟೆಗಳೆಂದು ವ್ಯಾಖ್ಯಾನಿಸಲಾಗುತ್ತಿದೆ. ಇಂತಹ  ಸುದ್ದಿಗಳನ್ನು ಹರಡುವವರು ತಾವುಗಳು ಪಡೆಯುತ್ತಿರುವ ಪಿಂಚಣಿ ವಿರೋಧಿ ಅಭಿಯಾನ ಇದಾಗಿದೆಂದು ಇವರಿಗೆ ತಿಳಿದಿಲ್ಲ. ಈಗಾಗಲೇ ಎನ್‌ಪಿಎಸ್‌ ಮುಖಾಂತರ ಖಾಯಂ ನೌಕರರ ನಿಶ್ಚಿತ ಪಿಂಚಣಿ ಕಸಿದುಕೊಳ್ಳಲಾಗಿದೆ. ದೇಶ ರಕ್ಷಣೆಗೆ ಗಡಿಯಲ್ಲಿ ನಿಂತಿರುವ ಸೈನಿಕರ ಪಿಂಚಣಿಗೆ ಕತ್ತರಿ ಹಾಕಲು ಆಗ್ನಿಪಥ / ಅಗ್ನಿ ವೀರ ಯೋಜನೆಗೊಳಿಸಲಾಗಿದೆ. ಈಗ “ಪುಕ್ಸಟ್ಟೆ” ಎಂಬುದು ಪ್ರಧಾನಿಗಳ ಭಾಷೆಯಲ್ಲಿ “ರೇವ್ಡಿ”ಯಾಗಿದೆ. ಇದರ ಮೂಲಕ ಹಿರಿಯರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಹೀಗೆ ಅನೇಕ ರೀತಿಯ ಪಿಂಚಣಿ, ಸಾರ್ವಜನಿಕ ಶಿಕ್ಷಣ, ಆರೋಗ್ಯ, ಪಡಿತರ ಮುಂತಾದ ಜನ ಕಲ್ಯಾಣ ಸವಲತ್ತುಗಳಿಗೆ ಸರ್ಕಾರ ನೀಡುವ ಸಹಾಯ ಧನಗಳಿಗೆಲ್ಲ ಪುಕ್ಸಟ್ಟೆ ಎಂಬ ನಾಮಕರಣ ಮಾಡಲಾಗುತ್ತಿದೆ.

ಅದೇ ರೀತಿ ಶಾಸಕರಿಗೆ, ಸಂಸದರಿಗೆ ನೀಡುವ ಪಿಂಚಣಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ 5-6 ವರ್ಷಗಳಿಂದ ʻಕುಂತು ತುಪ್ಪ ತಿನ್ನುವ ಜಾಲತಾಣಗಳ ವೀರರುʼ ಒಂದು ಚಳುವಳಿಯನ್ನೇ ನಡೆಸಿದ್ದಾರೆ. ಇದಕ್ಕೆ ರಾಜಕೀಯದವರ ಮೇಲಿರುವ ಸಿಟ್ಟು ಹಾಗು ಸಾರ್ವಜನಿಕರಿಗೆ ಪುಕ್ಸಟ್ಟೆ ನೀಡುವ ಉಡುಗೊರೆಗಳನ್ನು ಬಳಸಿಕೊಂಡು ಇವೆಲ್ಲವೂ ನಮ್ಮ ತೆರಿಗೆ ಹಣದಿಂದ ನಡೆಯುತ್ತಿದೆ ಎಂಬ ಭಾವನೆ ನೀಡಲಾಗುತ್ತಿದೆ. ಒಂದು ಕಡೆಗೆ ಇದೆಲ್ಲದಕ್ಕೂ ನಮ್ಮಲ್ಲಿ ಹಣ ಇಲ್ಲವೆಂದು ಸರ್ಕಾರ ಹೇಳುತ್ತಿದೆ. ಇನ್ನೊಂದು ಕಡೆಗೆ, ತೆರಿಗೆ ನೀಡುವವರ ಸಂಘ ಒಂದನ್ನು ರಚಿಸಿ, ಪುಕ್ಸಟ್ಟೆ Vs ನಮ್ಮ ತೆರಿಗೆ ಹಣ ಹಾಗು ಅಭಿವೃದ್ಧಿ ಎಂಬ ಅಭಿಯಾನ ನಡೆದಿದೆ.

ಇಂದು ದೇಶದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ಕ್ಷೇತ್ರಗಳಲ್ಲಿರುವ 68 ಲಕ್ಷ ಖಾಲಿಹುದ್ದೆಗಳ ನೇಮಕಾತಿಗಳನ್ನು ನಿಲ್ಲಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 2.80 ಲಕ್ಷ ಹುದ್ದೆಗಳು ಖಾಲಿ ಇವೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಹಾಲಿ ನೌಕರರಿಗಿಂತ ಪಿಂಚಣಿದಾರರ ಸಂಖ್ಯೆ ಹೆಚ್ಚಾಗಿದ್ದು, ನೌಕರರ ಸಂಬಳ ಹಾಗು ಪಿಂಚಣಿ ನೀಡುವುದು, ಸರ್ಕಾರಕ್ಕೆ ಭಾರವಾಗಿದೆ ಎಂಬ ವ್ಯಾಖ್ಯಾನ ನೀಡಲಾಗುತ್ತಿದೆ.

ಇದನ್ನೇ ಪ್ರಧಾನಮಂತ್ರಿಗಳು, “ನಮ್ಮ ಸರ್ಕಾರ, Small Govt – Big governance ನೀಡುತ್ತದೆ” ಎಂಬುದನ್ನು ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ, ಹುದ್ದೆಗಳ ಕಡಿತ, ಸರ್ಕಾರಿ ಸೇವೆಗಳ ಖಾಸಗೀಕರಣಗಳಿಗೆ ಒತ್ತು ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಇದು ಆಡಳಿತ ಸುಧಾರಣೆ ನೆಪದಲ್ಲಿ ಭರದಿಂದ ನಡೆದಿದೆ. ಎಲ್ಲ ಸರ್ಕಾರಿ ಸೇವೆಗಳಲ್ಲಿನ ಪಿಂಚಣಿ, ಹಿರಿಯರಿಗೆ, ಅಂಗವಿಕಲರಿಗೆ ಹಾಗು ಮುಂತಾದವರಿಗೆ ನೀಡುವ ಪಿಂಚಣಿ ಹಾಗು ಪುಕ್ಸಟ್ಟೆಗಳನ್ನು ಕಸಿಯುವ ಹೊಂಚಿನ ಹಿಂದೆ ಈ ತೆರಿಗೆ ಪಾವತಿದಾರರ ಸಂಘ, ಬಿಜೆಪಿ-RSS-ಹಿಂದುತ್ವದ ಐಟಿ ಸೆಲ್ ನ ಅಭಿಯಾನವಾಗಿದೆ.

ಆದ್ದರಿಂದ ಅಂಧ ಭಕ್ತರು, ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಮುಂದೆ ಇದು ತಮ್ಮ ಪಿಂಚಣಿಯನ್ನೂ ಕಸಿಯುವ ಹುನ್ನಾರವಾಗಿದೆ ಎಂಬುದು ಇವರುಗಳಿಗೆ ಅರ್ಥವಾಗುತ್ತಿಲ್ಲ.

ಖಾಸಗೀ ಹಣಕಾಸು ಬಂಡವಾಳ ಎಂಬುದು, ಎಲ್ಲಿ ಆಡಳಿತದ ಉಸಿರಾಗುತ್ತದೆಯೋ ಅಲ್ಲಿ ಅದು, ಜನಸಾಮಾನ್ಯರ ಜೀವನದ ಉಳಿತಾಯ ಹಾಗು ಗಳಿಕೆ ಮೇಲೆ ತನ್ನ ಆಕ್ರಮಣ ನಡೆಸುತ್ತದೆ. ಇಡೀ ಯುರೋಪ್‌ ನಲ್ಲಿ ನಡೆದದ್ದು ಇದೇ ಪ್ರಕ್ರಿಯೆ. 2008ರ ಜಾಗತಿಕ ಆರ್ಥಿಕ ಕುಸಿತದಲ್ಲಿ  ಜಗತ್ತಿನ ಬಹುತೇಕ ಕಡೆಗೆ ಅಲ್ಲಿನ ಜನ ಸಾಮಾನ್ಯರು ತಮ್ಮ ಉಳಿತಾಯ, ವಿಮೆ ಹಾಗು ಪಿಂಚಣಿ ಕಳೆದುಕೊಂಡು ಬೀದಿಗೆ ಬಂದಿದ್ದರು. ಇಂತಹ ಸ್ಥಿತಿ ಭಾರತದ ಜನಜೀವನದಲ್ಲಿ ಸಂಭವಿಸಿದ್ದೇ ಆದರೆ, ಜನ ಸಾಮಾನ್ಯರು ಬದುಕು ದುಸ್ತರವಾಗುವುದು ಖಂಡಿತ.

ಕೊರೊನಾ ನೆಪದಲ್ಲಿ, ಸರ್ಕಾರಿ ನೌಕರರ ಹಾಗು ಪಿಂಚಣಿದಾರರ 18 ತಿಂಗಳ ಡಿಎ ಹಿಡಿದಿಟ್ಟುಕೊಂಡು ಅದರಿಂದ ಬಂದ ಲಕ್ಷಾಂತರ ಕೋಟಿಯನ್ನು ದೇಶ ನಡೆಸಲು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಹಾಗೇ ಇದು ಸರ್ಕಾರಕ್ಕೆ ಬಂದಿರುವ ರೇವ್ಡಿ ಎಂದೆನಿಸಲಿಲ್ಲ. ಈಗಾಗಲೇ, ದೇಶದ ಬಂಡವಾಳಗಾರರ, ವಸೂಲಾಗದ ಬ್ಯಾಂಕ್‌ ಸಾಲಗಳ ಮೊತ್ತ ರೂ. 11 ಲಕ್ಷ ಕೋಟಿಯನ್ನು ಮನ್ನಾ ಮಾಡಲಾಗಿದೆ. ಇನ್ನೂ 5 ಲಕ್ಷ ಕೋಟಿಯಷ್ಟು ಮನ್ನಾ ಮಾಡಲು ಪುಸ್ತಕಕ್ಕೆ ಸೇರಿಸಲಾಗಿದೆಂದು ಅಂದಾಜಿಸಲಾಗಿದೆ. ಜಾಗತಿಕ ಬಂಡವಾಳಗಾರರಿಗೆ ಸುಮಾರು 6 ಲಕ್ಷ ಕೋಟಿಯಷ್ಟು ತೆರಿಗೆ ರಿಯಾಯ್ತಿ ನೀಡಲಾಗಿದೆ.

ಇದು ಇವರಿಗೆ ನೀಡಿದ ಪುಕ್ಸಟ್ಟೆ/ ಉಡುಗೊರೆ/ ರೇವ್ಡಿಗಳಾಗಿ ಕಾಣುತ್ತಿಲ್ಲ. ಬಂಡವಾಳಗಾರರಿಗೆ ನೀಡಿದ ಪುಕ್ಸಟ್ಟೆಗಳನ್ನು ತುಂಬಿಕೊಳ್ಳಲು ಜನರ ಮೇಲೆ ತೆರಿಗೆಗಳನ್ನು ಹೆಚ್ಚಿಸಿ ಲಕ್ಷಾಂತರ ಕೋಟಿ ಖಜಾನೆಗೆ ಹೋಗಿದೆ. ಆರ್‌ಬಿಐನಲ್ಲಿ ಜನರ ಠೇವಣಿಯ ಭದ್ರತೆಗಾಗಿ ಇಡಲಾಗಿದ್ದ ಮೀಸಲು ನಿಧಿಯಿಂದ ಅಂದಾಜು 2 ಲಕ್ಷ ಕೋಟಿಗೂ ಅಧಿಕ ಹಣವನ್ನು ಸರ್ಕಾರ ನಡೆಸಲು ಪಡೆಯಲಾಗಿದೆ. ಕಳೆದ 8 ವರ್ಷಗಳಲ್ಲಿ 107 ಲಕ್ಷ ಕೋಟಿ ಹಣವನ್ನು, ದೇಶ ನಡೆಸಲು ವಿವಿಧ ಬ್ಯಾಂಕುಗಳಿಂದ ಸಾಲ ಮಾಡಲಾಗಿದೆ.

ಇದಲ್ಲದೆ, ದೇಶದ ಎಲ್ಲ ಸಾರ್ವಜನಿಕ ಸಂಪತ್ತನ್ನು ಮಾರಿ, ದೇಶವನ್ನು ದಿವಾಳಿ ಕಡೆಗೆ ನೂಕಿ ಜನರನ್ನು ಗುಲಾಮಗಿರಿಗೆ ತಳ್ಳಿ, ಆರ್‌ಎಸ್‌ಎಸ್‌ ಅಜೆಂಡಾ ಪೂರೈಸುವ ದಿಕ್ಕಿನಲ್ಲಿ ದೇಶದ ಆರ್ಥಿಕತೆ ಯನ್ನು ಅಧೋಗತಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಜಾಗತಿಕ ಬಂಡವಾಳಗಾರರಿಗೆ ಹಾಗು ಕಾರ್ಪೋರೇಟ್‌ಗಳ ಸೇವೆಗೆ ದೇಶದ ಆಡಳಿತವಹಿಸಿ ಕೊಡುವ ಹುನ್ನಾರದಲ್ಲಿ, ಹಿಂದುತ್ವದ ಅಂಧ ಭಕ್ತರು ಭಾಗವಹಿಸುತ್ತಿರುವುದು ದೇಶದ  ದೌರ್ಭಾಗ್ಯ.

ಜನರ ಬದುಕನ್ನು ಕಸಿದುಕೊಳ್ಳುವ ಸರ್ಕಾರದ ಇಂತಹ ನೀತಿಗಳ ವಿರುದ್ಧ ಜನತೆ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.

Donate Janashakthi Media

Leave a Reply

Your email address will not be published. Required fields are marked *