ಎಸ್ ಎಸ್ ಹದ್ಲಿ
ದೇಶವನ್ನೇ ಮಾರಲು ಹೊರಟವರು, ಪರದೇಶಿ ಬಂಡವಾಳಗಾರರಿಗೆ ಕೈ ಮಾಡಿ ಕರೆದು, “ಮೇಡ್ ಇನ್ ಇಂಡಿಯಾʼʼ ಕೈಬಿಟ್ಟು, “ಮೇಕ್ ಇನ್ ಇಂಡಿಯಾʼʼಗೆ ಕರೆಕೊಟ್ಟವರು ಹಿಂದಿನ ಸರ್ಕಾರ 2014ಕ್ಕೆ ಮುಂಚಿತವಾಗಿ ಸ್ವದೇಶಿ ತಯಾರಾಗಿದ್ದ “ವಿಕ್ರಾಂತ” ಯುದ್ಧನೌಕೆಯನ್ನು, ಲೋಕರ್ಪಣೆ ಮಾಡುವ ಸಂದರ್ಭದಲ್ಲಿ ನಾವು ಮಾಡಿದ್ದು ಎಂದು ದೇಶದ ಜನತೆಗೆ ಅಂಧ ಭಕ್ತರು ಸುಳ್ಳು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ.
ನಾವಿಕ, ಸೇಂಟ್ ಜಾನ್ ಕ್ರಾಸ್ ಚಿನ್ನೆ ಬದಲಾಯಿಸಿದ್ದನ್ನೇ ಹೆಮ್ಮೆಯಿಂದ ಹೇಳುತ್ತಿರುವ ಭಕ್ತರು, 2014ರ ಮುಂಚೆ ತಯಾರಾದ ವಿಕ್ರಾಂತ್ ನೌಕೆ, ನಾವು ಮಾಡಿದ್ದು ಎಂಬ ಹಸಿ ಸುಳ್ಳನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಎಲ್ಲವನ್ನೂ ವಿದೇಶಿ ಕಾರ್ಪೋರೇಟ್ ಗಳಿಗೆ ಮಾರುವ ಇವರು, ವೇಷಗಳನ್ನು, ಹೆಸರುಗಳನ್ನು, ಚಿತ್ರಗಳನ್ನು, ಸುದ್ಧಿಗಳನ್ನು, ವಿಡಿಯೋಗಳನ್ನು ಹಾಗು ಚಿನ್ನೆಗಳನ್ನು ಮಾತ್ರ ಬದಲಾಯಿಸಲು ಸಾಧ್ಯ.
ಇದೀಗ, ದೆಹಲಿಯಲ್ಲಿನ ʻʻರಾಜಪಥʼʼದ ಹೆಸರನ್ನು ʻʻಕರ್ತವ್ಯಪಥʼʼ ಎಂದು ಬದಲಾಯಿಸಲಾಗಿದೆ. ಹೆಸರು ಬದಲಾಯಿಸುವ ಮೂಲಕ ಗುಲಾಮಿಯ ಕೊನೆ ಗುರುತು ಕಿತ್ತು ಹಾಕಿದ್ದೇವೆ ಎಂದು ಹೇಳಲಾಗುತ್ತದೆ. ಇದು ಬ್ರೀಟಿಷರು ಇಟ್ಟಿರುವ ಹೆಸರಲ್ಲ. ರಾಜಪಥ ಹೆಸರನ್ನು ಸ್ವಾತಂತ್ರ್ಯ ಬಂದ ನಂತರ ಇಡಲಾದ ಹೆಸರು. ʻರಾಜಪಥʼ ಎಂದರೆ ರಾಜ್ಯವನ್ನು ನಡೆಸುವ ಅಥವಾ ಆಡಳಿತ ಸ್ಥಳಕ್ಕೆ ಹೋಗುವ ದಾರಿ ಎಂಬ ಅರ್ಥ ಹೊಂದಿದೆ. ಇದರಲ್ಲಿ ಏನು ಗುಲಾಮಿ ಕಂಡಿದ್ದಾರೋ ಎಂಬುದು ತಿಳಿದಿಲ್ಲ. ಆದಾಗ್ಯೂ, ಮಾರ್ಗದ ಹೆಸರು ಬದಲಾಯಿಸಿ ನಾವೆನೋ ಭಾರಿ ಸಾಧನೆ ಮಾಡಿದ್ದೇವೆ ಎಂಬ ಮದದಲ್ಲಿ ಜನರಿಗೆ ಹೇಳಿ ಬೀಗುತ್ತಿರುವುದು ವಿಷಾಧನಿಯ.
ಆಡಳಿತದಲ್ಲಿನ ಭಕ್ತರು ಜನರಿಗೆ ನೀಡಿದ ಭರವಸೆಗಳನ್ನಾದರೂ ಈಡೇರಿಸುವ ಕರ್ತವ್ಯಪಥ ಇದಾಗಲಿ ಎಂದು ಹಾರೈಸೋಣ. ಜನರು ಬರಿ ಕರ್ತವ್ಯ ಮಾತ್ರ ಮಾಡುವುದಾದರೆ, ಅವರು ಅಧಿಕಾರ ಹಾಗು ಹಕ್ಕುಗಳನ್ನು ಕೇಳುವಂತಿಲ್ಲ ಎನ್ನುವುದಾದರೆ ಕರ್ತವ್ಯಪಥ ನಿಜವಾಗಲೂ ರಾಜನ ಗುಲಾಮಿಯ ಸಂಖೇತವಾಗುವುದರಲ್ಲಿ ಸಂದೇಹವಿಲ್ಲ. ಭಾರತ ಮಾತೆಯ ದುಡಿಯುವ ಜನರ ಬದುಕಿನ ಮೂಲಭೂತ ಸಂವಿಧಾನಿಕ ಹಕ್ಕುಗಳಾದ ಆಹಾರದ ಭದ್ರತೆ, ಉದ್ಯೋಗ ಭದ್ರತೆ, ಗೌರವಯುತ ಜೀವನಕ್ಕೆ ಕನಿಷ್ಟ ವೇತನ, ಆರೋಗ್ಯ, ಶಿಕ್ಷಣ ಮುಂತಾದ ಹಕ್ಕುಗಳನ್ನು ಕಸಿಯುತ್ತಿರುವ ಸರ್ಕಾರಗಳನ್ನು ಕೆಳಗಿಳಿಸಿ, ಅಧಿಕಾರ ಸ್ಥಾಪಿಸಲು “ಅಧಿಕಾರಪಥ” ಹಾಗು ಹಕ್ಕುಗಳನ್ನು ಮಂಡಿಸಲು “ಹಕ್ಕುಪಥ” ವನ್ನು ರಚಿಸುವುದು ಇಂದು ಅನಿವಾರ್ಯವಾಗುತ್ತಿದೆ.
ಆಡಳಿತ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುವುದಕ್ಕೆ, ಜನರ ಭವಣೆಗಳನ್ನು ನೀಗಿಸುವುದಕ್ಕೆ ಬದುಕಿನ ಮೂಲಭೂತ ಹಕ್ಕುಗಳ ಮಂಡನೆಗಾಗಿ, ಅಧಿಕಾರಕ್ಕಾಗಿ ಈ ಹಕ್ಕುಪಥದಲ್ಲಿ ಮುನ್ನಡೆಯಲು ಹೋರಾಟದ ಹಾದಿ ಹಿಡಿಯುವ ದುಡಿಯುವ ಜನರು ಹಕ್ಕುಪಥ ಸ್ಥಾಪನೆಗೆ ಹಿಂದೆ ಬೀಳುವುದಿಲ್ಲ. ಇದು ಭಾರತಮಾತೆಯ ಮಕ್ಕಳ ಹಾಗು ಅವರ ಬದುಕಿನ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಯ “ಹಕ್ಕುಫಥ” ವಾಗುವುದನ್ನು ಕುಂತು ತುಪ್ಪ ತಿನ್ನುವ, ಹಿಂದುತ್ವದ ಕಾರ್ಪೋರೇಟ್ ಫಾಸೀವಾದಿಗಳು ತಡೆಯಲು ಸಾಧ್ಯವಿಲ್ಲ.
ಈ ಕರ್ತವ್ಯಪಥದಲ್ಲಿ ಬಹಳ ದಿನಗಳಿಂದ ನಿಂತಿದ್ದ ಛತ್ರಿ ಆಕಾರದ ಕಟ್ಟಡದಲ್ಲಿ ಸುಭಾಷ್ ಚಂದ್ರ ಭೋಸರ ಮೂರ್ತಿಯನ್ನು ಅದೇ ದಿನವೇ ಅನಾವರಣ ಮಾಡಲಾಗಿದೆ. ಭೋಸ್ ರವರನ್ನು ಕಾಂಗ್ರೆಸ್ ಮರೆತು ಕಡೆಗಣಿಸಿದೆ ಎಂದೂ ತಾವು ಅವರ ಮೂರ್ತಿ ಸ್ಥಾಪಿಸಿ ಅವರಿಗೆ ಮನ್ನಣೆ ನೀಡಿ ಸ್ಥಾನ ಕಲ್ಪಿಸಿದ್ದೇವೆ ಎಂಬುದನ್ನು ಹೇಳಿಕೊಳ್ಳಲಾಗುತ್ತಿದೆ.
ಸುಭಾಷರು ಮೊದಲು ಕಾಂಗ್ರೆಸ್ ಪಕ್ಷದ ನೇತಾರರೂ ಹಾಗು ಅಧ್ಯಕ್ಷರೂ ಆಗಿದ್ದರು, ಎಡಪಂಥೀಯರೂ ಆಗಿದ್ದರು. ಸೋವಿಯತ್ ರಷ್ಯದ ಕ್ರಾಂತಿಯಿಂದಲೂ ಪ್ರಭಾವಿತರಾಗಿದ್ದರು. ತೀವ್ರಗಾಮಿ ವಿಚಾರದವರಾಗಿದ್ದರಿಂದ ಅವರು ಪ್ರತ್ಯೇಕ ಸೈನ್ಯವನ್ನು ರಚಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇತರೆ ದೇಶದ ಬೆಂಬಲ ಕೋರಿ ಬ್ರಿಟೀಷ್ ಸಾಮ್ರಾಜ್ಯಶಾಹಿಯನ್ನು ಭಾರತದಿಂದ ಓಡಿಸಲು ಪ್ರಯತ್ನ ಮಾಡಿದ್ದರು. ಇವರನ್ನೂ ಸಂಪರ್ಕಿಸಿದ ವಿ.ಡಿ. ಸಾವರ್ಕರ್ ಇವರೊಂದಿಗೆಯೂ ಬ್ರಿಟೀಷ್ ವಿರೋಧಿ ಹೋರಾಟದಲ್ಲಿ ಭಾಗವಹಿಸಲಿಲ್ಲ. ಅವರ ಜಾಸೂಸಿ ಮಾಡಿರಬಹುದು.
ಸುಭಾಷರು ಎಡಪಂಥೀಯ ಫಾರ್ವಡ್ ಬ್ಲಾಕ್ ಪಕ್ಷವನ್ನು ಕಟ್ಟಿದ್ದರು. ಇಂದಿಗೂ ಎಡಪಂಥೀಯ ಪಕ್ಷಗಳ ಗುಂಪುಗಳಲ್ಲಿ ಫಾರ್ವಡ್ ಬ್ಲಾಕ್ ಪಕ್ಷ ಭಾರತದಲ್ಲಿ ಅಸ್ತಿತ್ವದಲ್ಲಿದೆ. ಆ ಪಕ್ಷದಿಂದ ಅನೇಕ ಜನ ಎಂಪಿಗಳು, ಶಾಸಕರು ಆಗಿ ಹೋಗಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಅವರ ಸೈನ್ಯ ಪಡೆಯಲ್ಲಿದ್ದ ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ 1943ರಲ್ಲಿ ಆಝಾದ್ ಹಿಂದ್ ಪೌಜ್ ಅನ್ನು ಸೇರುತ್ತಾರೆ. ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಲಕ್ಷ್ಮಿ ಸೆಹಗಲ್ ಕಾನ್ಪೂರ್ ನಲ್ಲಿದ್ದವರು. ಅವರು ಸಮಾಜವಾದಿಯಾಗಿದ್ದರು ಮತ್ತು ಸಿಪಿಐ(ಎಂ) ಪಕ್ಷದ ನಾಯಕರಾಗಿದ್ದರು. ಜನವಾದಿ ಮಹಿಳಾ ಸಂಘಟನೆಯ ಸ್ಥಾಪಕರಾಗಿದ್ದರು. 1998ರಲ್ಲಿ ಅವರಿಗೆ ಪದ್ಮವಿಭೂಷಣ ನೀಡಲಾಗಿತ್ತು. ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ 2002ರಲ್ಲಿ ರಾಷ್ಟ್ರಪತಿ ಚುನಾವಣಾ ಕಣದಲ್ಲಿ ಅಬ್ದುಲ್ ಕಲಾಂ ಅವರ ಪ್ರತಿಸ್ಪರ್ಧಿಯಾಗಿ ಎಡ ಹಾಗು ಜ್ಯಾತ್ಯಾತೀತ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು ತಮ್ಮ 98ನೇಯ ವಯಸ್ಸಿನಲ್ಲಿ ಜುಲೈ 2012ರಲ್ಲಿ ನಿಧನರಾದರು. ಅವರ ಮಗಳಾದ ಸುಭಾಷಿಣಿ ಅಲಿ, ಪ್ರಸಕ್ತ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾಗಿದ್ದು, ಎಂಪಿಯಾಗಿಯೂ ಕಾರ್ಯನಿರ್ವಹಿಸಿರುವ ಅನುಭವವಿದೆ. ಕಾನ್ಪೂರದಲ್ಲಿ ನಾಯಕಿಯಾಗಿದ್ದಾರೆ.
ಬ್ರಿಟೀಷರೊಂದಿಗೆ ಕೈಜೊಡಿಸಿದ ಸಂತತಿಯ ಬಿಜೆಪಿ- ಆರ್‌ಎಸ್‌ಎಸ್ ನಲ್ಲಿ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಹೀರೋಗಳು ಇಲ್ಲದಿರುವುದರಿಂದ, ಸುಭಾಷ ಚಂದ್ರರ ಮೂರ್ತಿ ಸ್ಥಾಪಿಸಿ, ತಮ್ಮವರು ಎನ್ನುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಸುಭಾಷ್ ಚಂದ್ರ ಬೋಸ್ ಅವರ ಎಡಪಂಥೀಯ ಸಮಾಜವಾದಿ ಸಮಾನತೆಯ ವಿಚಾರಧಾರೆ ಮಾತ್ರ ಇವರಿಗೆ ಬೇಡ. ಜಾಗತಿಕ ಬಂಡವಾಳಗಾರರ ಗುಲಾಮಗಿರಿ ಹಾಗು ದಲಾಲಿ ಮಾತ್ರ ಮಾಡುವವರಾಗಿದ್ದಾರೆ. ಹಿಂದೆ ಇದೇ ರೀತಿ, ಸರದಾರ್ ವಲ್ಲಭಭಾಯಿ ಪಟೇಲರ ಮೂರ್ತಿ ಮಾಡಿ ಅವರೂ ತಮ್ಮವರು ಎಂದು ತೋರುವ ಪ್ರಯತ್ನ ಮಾಡಿದರು.
ಆದರೆ, ಪಟೇಲರು ಸಹ ಕಾಂಗ್ರೆಸ್ ಪಕ್ಷದವರಾಗಿದ್ದು, ನೆಹರುರವರು ಪ್ರಧಾನಿಯಾಗಿದ್ದ ಮೊದಲ ಸರ್ಕಾರದಲ್ಲಿ ಗೃಹಮಂತ್ರಿಗಳಾಗಿದ್ದರು. ಆರ್‌ಎಸ್‌ಎಸ್ ನ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನು ಕೊಂದಾಗ, ಗೃಹ ಸಚಿವರಾಗಿದ್ದ ಪಟೇಲರು ಆರ್‌ಎಸ್‌ಎಸ್ ಅನ್ನು ಇಡೀ ದೇಶದಲ್ಲಿ ನಿಷೇಧಿಸಲು ಆದೇಶ ಹೊರಡಿಸಿದ್ದರು.
ಹೀಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ಚಾಕರಿ ಮಾಡಿದವರು ಎಂಬ ಕಳಂಕವನ್ನು ಕಳಚಲು, ಈ ಎಲ್ಲ ಗಿಮಿಕ್ ಗಳನ್ನು ಮಾಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ. ಆದರೆ, ಇತಿಹಾಸ ತಿರುಚಲು ಇವರಿಂದ ಸಾಧ್ಯವಿಲ್ಲ. ಹತಾಷರಾಗಿ ಅವರ ಆರ್‌ಎಸ್‌ಎಸ್ ಮೂಲದ ಫಾಸೀವಾದದ ಎಲ್ಲ ಲಕ್ಷಣಗಳನ್ನು ಈಗ ಅಧಿಕಾರದಲ್ಲಿ ಬಿಚ್ಚುತ್ತಿದ್ದಾರೆ.
ಕಾರ್ಪೋರೇಟ್ ಗಳ ಹಿತಾಸಕ್ತಿಗೆ ಕೆಲಸ ಮಾಡುವವರು ಬೆಲೆ ಏರಿಕೆ, ನಿರುದ್ಯೋಗ, ಜನರ ಬವಣೆಗಳನ್ನು ನೀಗಿಸಲು ಸಾಧ್ಯವಿಲ್ಲ. ದುಡಿಯುವ ಜನರ ಬದುಕಿನ ಪ್ರಜಾಪ್ರಭುತ್ವ ಹಕ್ಕುಗಳನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ. ಕೈ ಕತ್ತರಿಸುತ್ತೇವೆ, ತಲೆ ಕತ್ತರಿಸುತ್ತೇವೆ, ನಾಲಿಗೆ ಕತ್ತರಿಸುತ್ತೇವೆ, ಗುಂಡು ಹೊಡೆಯುತ್ತೇವೆ ಎಂದು ಭಯೋತ್ಪಾದನೆ ಹುಟ್ಟಿಸುವ ಹಿಂದುತ್ವದ ಕೋಮುವಾದಿ ಶಕ್ತಿಗಳನ್ನು ಹಾಗು ಅತ್ಯಾಚಾರಿಗಳನ್ನು ನಿಗ್ರಹಿಸಲು ಸಾಧ್ಯವಿಲ್ಲ. ದ್ವೇಷ ಬಿತ್ತಿ, ಸಮಾಜ ಒಡೆಯುವ ಹೇಯ ರಾಜಕಾರಣ ಇವರು ಬಿಡುವುದಿಲ್ಲ. ದೇಶದ ಸಂವಿಧಾನವನ್ನು ಅದರ ಸಮಾನತೆಯ ಆಶಯಗಳನ್ನೂ ಒಪ್ಪುವವರಲ್ಲ ಇವರು. ಇವುಗಳೊಂದಿಗೆ, ತಾನೊಬ್ಬರೇ ರಾಷ್ಟ್ರವಾದಿ, ತಾನೊಬ್ಬರೇ ರಾಷ್ಟ್ರ ರಕ್ಷಕರೆಂದು ಯುದ್ಧಕೋರತನ ಬಿತ್ತುವುದನ್ನು ನಿಲ್ಲಿಸುವುದಿಲ್ಲ. ಯುದ್ಧಕೋರರ ಬಾಲಂಗೋಚಿಯಾಗುವುದನ್ನು ದೇಶ ಮಾರುವ ದೇಶದ್ರೋಹಿಗಳ ಬೆಂಬಲಿಸುವುದನ್ನೂ ಈ ಅಂಧ ಭಕ್ತರು ಬಿಡುವುದಿಲ್ಲ. ಇವುಗಳ ಹಿಂದೆ ಅಡಗಿರುವ ಕಾರ್ಪೋರೇಟ್ ಹಿಂದುತ್ವದ ಫಾಸೀವಾದಿ ಕ್ರೂರತೆಯ ಸಂಸ್ಕೃತಿಯನ್ನು ಬಿತ್ತುವ ಗುರಿಯನ್ನೂ ಬಿಡುವುದಿಲ್ಲ. ನಡೆಯಲಿ ಸಂಘರ್ಷ, ಭಾರತ ಮಾತೆಯ ಸಂವಿಧಾನ ಹಾಗು ದುಡಿಯುವ ಜನರ ಹಕ್ಕುಗಳ ರಕ್ಷಣೆಗೆ.
ಸತ್ಯ ಮೇವ ಜಯತೆ…..