ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಇಪ್ಪತ್ತೆರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಸುಜಾತ ಭಟ್ ಜುಲೈ 15 ರಂದು ಸಂಜೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾದ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ವಕೀಲರ ಜೊತೆ ಬಂದು ದೂರು ನೀಡಿದ್ದಾರೆ.
ಅನನ್ಯ ಭಟ್ ತಾಯಿ ಸುಜಾತ ಭಟ್ ತಮ್ಮ ವಕೀಲರಾದ ಮಂಜುನಾಥ್.ಎನ್ ಜೊತೆಯಲ್ಲಿ ಜುಲೈ 15 ರಂದು ಬಂದು ಎಸ್ಪಿ ಅವರನ್ನು ಭೇಟಿಯಾಗಿ, ಮಗಳ ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ನೀಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಭೂಮಿ ಗೆದ್ದ ರೈತರು | ಸರ್ಕಾರವನ್ನು ನಡುಗಿಸಿದ ಐತಿಹಾಸಿಕ ಹೋರಾಟ
ಅದರಂತೆ ದೂರು ನೀಡಲು ಧರ್ಮಸ್ಥಳ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಸಮರ್ಥ್.ಆರ್.ಗಾಣಿಗೇರ ಮುಂದೆ ರಾತ್ರಿ 8 ಗಂಟೆಗೆ ಬಂದು ದೂರು ಅರ್ಜಿ ನೀಡಿದ್ದಾರೆ. ಅದರಂತೆ ಪೊಲೀಸರು ದೂರು ಸ್ವೀಕರಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.
ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್(20) ಅವರು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಇಬ್ಬರು ಸ್ನೇಹತರ ಜೊತೆ ಬಂದಿದ್ದು, ನಿಗೂಢವಾಗಿ ನಾಪತ್ತೆಯಾಗಿದ್ದರು.
ಇತ್ತೀಚೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತದೇಹ ಹೂತಿರುವುದಾಗಿ ದೂರು ನೀಡಿದ ವ್ಯಕ್ತಿ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದರು. ಈ ಘಟನೆಯನ್ನು ಯೂಟ್ಯೂಬ್ ನಲ್ಲಿ ನೋಡಿದ ಆಕೆಯ ತಾಯಿ, ವಕೀಲರನ್ನು ಸಂಪರ್ಕಿಸಿ ಎಸ್ಪಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದು “ಮಗಳ ಅಸ್ಥಿಪಂಜರದ ಕಳೇಬರಹ ಹುಡುಕಿಕೊಡಬೇಕು. ಡಿಎನ್‌ಎ ಮಾಡಿ ಕಳೇಬರವನ್ನು ನನಗೆ ನೀಡಬೇಕು ಬಳಿಕ ಹಿಂದೂ ಸಂಪ್ರದಾಯದಂತೆ ಕಾರ್ಯ ಮಾಡಿ ಮುಕ್ತಿ ಸಿಗುಬೇಕು. ಬೇರೆ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಯಾರ ಮೇಲೂ ದೂರು ನೀಡಿಲ್ಲ, ನನಗೆ ಬೇರೆ ಏನೂ ಬೇಡ” ಎಂದು ಮಾಧ್ಯಮಗಳಿಗೆ ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ತಿಳಿಸಿದರು.
ಇದನ್ನೂ ನೋಡಿ: ಸಾರ್ವತ್ರಿಕ ಮುಷ್ಕರ | ಕೇಂದ್ರ – ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಸಿಡಿದೆದ್ದ ರೈತ – ಕಾರ್ಮಿಕರು Janashakthi
