ಅನಾಮಧೇಯ ಕೊಲೆ ಬೆದರಿಕೆ: ರಕ್ಷಣೆ ನೀಡುವಂತೆ ಸಾಹಿತಿ ಕುಂ. ವೀರಭದ್ರಪ್ಪ ಮನವಿ

ಹೊಸಪೇಟೆ: ‘ಜೀವ ಬೆದರಿಕೆ ಪತ್ರ ಬಂದಿರುವುದರಿಂದ ನನ್ನ ಜೀವಕ್ಕೆ ಅಪಾಯವಿದ್ದು, ಪೊಲೀಸ್‌ ಇಲಾಖೆಯು ರಕ್ಷಣೆ ನೀಡಬೇಕು’ ಎಂದು ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಕೀಲ ಪಂಡಿತಾರಾಧ್ಯ ಅವರೊಂದಿಗೆ ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರ ಕಛೇರಿಗೆ ಭೇಟಿ ನೀಡಿದ ಕುಂ. ವೀರಭದ್ರಪ್ಪ ಅವರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಎಸ್‌ಪಿ, ‘ಜೀವ ಬೆದರಿಕೆಯ ಪತ್ರವನ್ನು ಪರಿಶೀಲಿಸಿದ ನಂತರ ಅಗತ್ಯ ಕ್ರಮಕೈಗೊಳ್ಳಲಾಗುವುದು. ಭದ್ರತೆಗೆ ಸಂಬಂಧಿಸಿದಂತೆ ಈಗಾಗಲೇ ಕೊಟ್ಟೂರು ಠಾಣೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ’ ಎಂದರು.

ಇದನ್ನು ಓದಿ: ಸಾಹಿತಿ ಕುಂವೀ, ಮಾಜಿ ಮುಖ್ಯಮಂತ್ರಿಗಳಾದ ಎಚ್‌ಡಿಕೆ, ಸಿದ್ದರಾಮಯ್ಯ ಸೇರಿ 61+ ಜನರಿಗೆ ಕೊಲೆ ಬೆದರಿಕೆ

‘ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನಾನು ಹಿಂದೂ ಅಲ್ಲ, ಲಿಂಗಾಯತ ಭಾರತೀಯ ಎಂದು ಹೇಳಿದ್ದೆ. ವಿಚಾರಗಳನ್ನು ವ್ಯಕ್ತಪಡಿಸುವುದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ, ಕೆಲವರು ನನಗೆ ದೂರವಾಣಿ ಕರೆ ಮಾಡಿ ಬೆದರಿಕೆಯ ರೂಪದಲ್ಲಿ ಕಟುವಾಗಿ ಮಾತನಾಡಿದ್ದರು. ಏಪ್ರಿಲ್ 7ರಂದು ಭದ್ರಾವತಿಯಿಂದ ಜೀವ ಬೆದರಿಕೆಯ ಪತ್ರ ಬಂದಿದೆ. ನಾನು ಸೇರಿದಂತೆ 61 ಜನರನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ. ರಕ್ಷಣೆ ಕೋರಿ ಎಸ್‌ ಪಿಯವರಿಗೆ ಮನವಿ ಪತ್ರ ಸಲ್ಲಿಸಿರುವೆ’ ಎಂದು ಮಾಧ್ಯಮಗಳೊಂದಿಗೆ ಕುಂ. ವೀರಭದ್ರಪ್ಪ ವಿಷಯ ತಿಳಿಸಿದರು.

ಜೆಪಿ ವಿಚಾರ ವೇದಿಕೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನು ಓದಿ: ನಾನೊಬ್ಬ ಲಿಂಗಾಯತ-ಆದರೆ ಹಿಂದೂ ಅಲ್ಲ: ಸಾಹಿತಿ ಕುಂ ವೀರಭದ್ರಪ್ಪ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಸಾಹಿತಿ ಕುಂ. ವೀರಭದ್ರಪ್ಪ ಸೇರಿದಂತೆ 61 ಜನರಿಗೆ ಜೀವ ಬೆದರಿಕೆ ಇರುವ ಅನಾಮಧೇಯ ಪತ್ರವೊಂದು ಕೊಟ್ಟೂರಿನಲ್ಲಿರುವ ಕುಂ. ವೀರಭದ್ರಪ್ಪ ಅವರ ಮನೆಗೆ ಬಂದಿತ್ತು. ಭದ್ರಾವತಿಯಿಂದ ಪತ್ರ ಪೋಸ್ಟ್‌ ಮಾಡಲಾಗಿತ್ತು. ಆದರೆ, ಪತ್ರ ಬರೆದವರ ವಿವರ ಇರಲಿಲ್ಲ. ‘ಸಹಿಷ್ಣು ಹಿಂದೂ’ ಎಂದಷ್ಟೇ ಪತ್ರದೊಳಗೆ ಉಲ್ಲೇಖಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *