ಹೊಸಮನೆಯಲ್ಲೊಂದು ಅಂಬೇಡ್ಕರ್ ಗ್ರಂಥಾಲಯ.!

-ಅರುಣ ಜೋಳದಕೂಡ್ಲಿಗಿ‌
ಮೊನ್ನೆ ಭಾನುವಾರ ಚಳ್ಳಕೆರೆಯಲ್ಲಿ ಶಿಕ್ಷಕರಾದ ಶಬ್ರೀನಾ ಮಹಮ್ಮದ್ ಅಲಿ ಮತ್ತು ಮಹಮದ್ ಅಲಿ ಹೊಸ ಮನೆ ಪ್ರವೇಶಕ್ಕೆ ಆಹ್ವಾನಿಸಿದ್ದರು. ಆಹ್ವಾನ ಪತ್ರಿಕೆಯಲ್ಲಿ ‘ಅಂಬೇಡ್ಕರ್ ಗ್ರಂಥಾಲಯ’ ಉದ್ಘಾಟನೆಯೂ ಇತ್ತು. ಈ ಮುಂಚೆ ಶಬ್ರಿನಾ ಅವರು ಯಾವ ಪುಸ್ತಕ ಎಲ್ಲಿ ಸಿಗುತ್ವೆ ಎನ್ನುವ ಕಾರಣಕ್ಕೆ ಮಾಹಿತಿ ಕೇಳಿ ವಿವರ ಪಡೆದಿದ್ದರು. ಈ ಕಾರಣಕ್ಕೆ ಕುಟುಂಬ ಸಮೇತ ಹೋಗಿ ಒಂದಷ್ಟು ಪುಸ್ತಕಗಳ ಕಟ್ಟನ್ನು ಗ್ರಂಥಾಲಯಕ್ಕೆ ನೀಡಿ ಆತಿಥ್ಯ ಸ್ವೀಕರಿಸಿ ಬಂದೆವು. ಮನೆಯ ಎದುರು ಪಾತೀನಾ ಶೇಕ್, ಸಾವಿತ್ರಿಬಾ ಪುಲೆ, ಅಂಬೇಡ್ಕರ್, ಶಿಶುನಾಳ ಶರೀಫ್, ಅಬ್ದುಲ್ ಕಲಾಮ್, ವಿವೇಕಾನಂದ, ಅಕ್ಕಮಹಾದೇವಿ, ಮದರ್ ತೆರೆಸಾ, ವಿಷ್ಣು ಅವರ ಭಿತ್ತಿಚಿತ್ರಗಳನ್ನೊಳಗೊಂಡ ಆಕರ್ಷಕ ಅಲಂಕಾರ ಗಮನ ಸೆಳೆಯುವಂತಿತ್ತು.

ಇದನ್ನೂ ಓದಿ:ಅತ್ಯಾಚಾರಿ ನಮ್ಮ ಮನೆಯಲ್ಲೂ ಇರಬಹುದೇ? ಅಥವಾ ಪ್ರತಿ ಗಂಡಿನೊಳಗೊಬ್ಬ ‘ಅತ್ಯಾಚಾರಿ’ ಅಡಗಿ ಕೂತಿರಬಹುದೇ?

ಶಾಲಾ ಶಿಕ್ಷಕರಾದ ಈ ದಂಪತಿಗಳು ಮನೆಗೆ ‘ಕನ್ನಡ ಕೌಸ್ತುಭ’ ಎಂದು ಹೆಸರಿಟ್ಟಿದ್ದಾರೆ. ‘ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂದು ಮನೆಯ ಮೇಲೆ ಬರೆಸಿದ್ದಾರೆ. ಮನೆ ಪ್ರವೇಶಿಸುತ್ತಿದ್ದಂತೆ ‘ಅಂಬೇಡ್ಕರ್ ಗ್ರಂಥಾಲಯ’ ನಮ್ಮನ್ನು ಸ್ವಾಗತಿಸಿತು. ಈ ಗ್ರಂಥಾಲಯಕ್ಕಾಗಿ ಬಹಳ ಮುಖ್ಯ ಎನ್ನಿಸುವ ಹೊಸ ಕೃತಿಗಳನ್ನು ಕೊಂಡಿದ್ದಾರೆ. ಮನೆ ಕಟ್ಟುವ ಬಜೆಟ್ಟಿನಲ್ಲಿ ಈ ಗ್ರಂಥಾಲಯಕ್ಕಾಗಿ ಒಂದು ಬಜೆಟ್ ತೆಗೆದಿಟ್ಟು ಮುತುವರ್ಜಿಯಿಂದ ಗ್ರಂಥಾಲಯ ರೂಪಿಸಿದ್ದಾರೆ.

ಪ್ರವೇಶಕ್ಕೆ ಬಂದ ಕೆಲವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆ ನೀಡಿದರು. ಮನೆಗೆ ಅತಿಥಿಗಳಾಗಿ ಬಂದವರಿಗೂ ಒಂದೊಂದು ‘ಪುಸ್ತಕ’ ನೀಡಿ ಸ್ವಾಗತಿಸಿದರು. ಒಟ್ಟಾರೆ ಕಾರ್ಯಕ್ರಮ ಪುಸ್ತಕಮಯವಾಗಿತ್ತು. ಸಾರ್ವಜನಿಕ ಅಂತಲ್ಲದಿದ್ದರೂ ಅಧ್ಯನಾಕಾಂಕ್ಷಿಗಳು/ಓದಿನ ಹಸಿವು ಇರುವವರೂ ಬಂದು ಗ್ರಂಥಾಲಯವನ್ನು ಓದಿಗೂ, ಅಧ್ಯಯನಕ್ಕೂ ಬಳಸಿಕೊಳ್ಳಬಹುದು. ಇನ್ನು ಬೇರೆ ಬೇರೆ ಕ್ಷೇತ್ರ ಪುಸ್ತಕಗಳನ್ನು ಕೊಳ್ಳಬೇಕಿದೆ ಸರ್ ಎಂದು ಮಹಮದ್ ಅಲಿ ವಿವರಿಸಿದರು. ಮುಂದೆ ಅತ್ಯುತ್ತಮ ಪುಸ್ತಕ ಕುರಿತ ಚಿಂತನಾ ಸಭೆಗಳನ್ನು ಮನೆಯಲ್ಲಿ ಆಯೋಜಿಸುವ ಯೋಜನೆ‌ ಇದೆ. ನೀವು ಬರಬೇಕು ಎಂದು ಆಹ್ವಾನ ನೀಡಿದರು. ಸಾಹಿತ್ಯಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಚಳ್ಳಕೆರೆ ಬರಡು ಪ್ರದೇಶ. ಇಂಥದ್ದರಲ್ಲಿ ಶಬ್ರಿನಾ-ಮಹಮದ್ ಅಲಿ ಅವರ ಕನಸು ಸಿಹಿ ನೀರಿನ ಚಿಲುಮೆಯಂತೆ ಕಾಣುತ್ತಿದೆ.

ನಾವು ಮನೆಗೆ ಹೋಗುವ ಮೊದಲೆ ಚಳ್ಳಕೆರೆ ಭಾಗದ ಹಿರಿಯ ಸಾಹಿತಿಗಳಾದ ತಿಪ್ಪಣ್ಣ ಮರಿಕುಂಟೆ ಅವರು ಗ್ರಂಥಾಲಯವನ್ನು ಉದ್ಘಾಟಿಸಿದ್ದರು. ಕತೆಗಾರ ಮೋದೂರು ತೇಜ, ಕವಿ ಡಾ. ಬಿ. ಎಂ. ಗುರುನಾಥ್, ಮನುಶ್ರೀ ಸಿದ್ಧಾಪುರ, ಕವಿ ನಾಗೇಂದ್ರ್ಪ ಪಡಗಲಬಂಡೆ,ಕಲಾವಿದ ಜಬೀವುಲ್ಲಾ ಎಂ. ಅಸದ್ ಮೊದಲಾದವರು ಬಂದು ಹೋಗಿದ್ದರು.

ಬಹುಪಾಲು ಹೊಸ ಮನೆಗಳ ಅದ್ದೂರಿತನದಲ್ಲಿ ಮನೆಯ ಗ್ರಂಥಾಲಯಕ್ಕಿಂತ ದೇವರ ಕೋಣೆ ಆಧ್ಯತೆ ಪಡೆಯುವಾಗ ಶಬ್ರಿನಾ-ಮಹಮದ್ ಅಲಿ ಅವರ ಮನೆಯ ‘ಅಂಬೇಡ್ಕರ್ ಗ್ರಂಥಾಲಯ’ ನಿಜಕ್ಕೂ ಮಾದರಿಯಾಗಿದೆ. ಸಾಹಿತ್ಯ ಪ್ರೀತಿಯ ದಂಪತಿಗಳಿಗೆ ಅಭಿನಂದನೆಗಳು.ಮನೆಗಳಲ್ಲಿ ‘ಅಂಬೇಡ್ಕರ್ ಗ್ರಂಥಾಲಯ’ ರೂಪಿಸುವುದು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಅತ್ಯುತ್ತಮ ಮಾದರಿಗಳಲ್ಲಿ ಒಂದು.

ವಿಡಿಯೋ ನೋಡಿ:ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ – ವಿಶ್ಲೇಷಣೆ : ಅರುಣ್ ಜೋಳದ ಕೂಡ್ಲಿಗಿ Janashakthi Media

Donate Janashakthi Media

Leave a Reply

Your email address will not be published. Required fields are marked *