ಬಿಹಾರ್: ಲಂಚ ಕೊಟ್ಟು ಕೆಲಸ ಪಡೆದಿರೋ ಕೃತ್ಯಗಳು ಆಗಾಗ ಹೊರಬರುತ್ತಲೇ ಇರುತ್ತವೆ. ಯುವಕನೊಬ್ಬ ನಕಲಿ ಪೊಲೀಸ್ ಆಗೋಕೆ ಲಕ್ಷ ಲಕ್ಷ ಎಣಿಸಿರುವ ಘಟನೆ ಬಿಹಾರದ ಜುಮಾಯಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಕೆಲಸ ಸಿಕ್ತು ಅಂತ ಖುಷಿಯಾಗಿ ಖಾಕಿ ಹಾಕಿ ಮೆರೀತಿದ್ದ ಈತನನ್ನು ಒರಿಜಿನಲ್ ಪೊಲೀಸರು ಕಂಡು ಶಾಕ್ ಆಗಿದ್ದಾರೆ. ವಂಚಕ
ದುಡ್ಡು ಕೊಟ್ಟು ಪೊಲೀಸ್ ಆಗಿದ್ದೀನಿ ಸರ್ ಎಂದು ಹೇಳಿದ ಈತನನ್ನು ಪೊಲೀಸ್ ಸ್ಟೇಷನ್ಗೆ ಕರ್ಕೊಂಡು ಬಂದ ಮೇಲೆನೇ ಈತನಿಗೂ ಗೊತ್ತಾಗಿದ್ದು ನಾನೊಬ್ಬ ನಕಲಿ ಪೊಲೀಸ್ ಅಂತ. ಇನ್ನು ಈ ಯುವಕನ ಕಾನ್ಫಿಡೆನ್ಸ್ ನೋಡಿ ಒರಿಜಿನಲ್ ಪೊಲೀಸರಿಗೇ ಶಾಕ್ ಆಗಿದೆ.
ಐಪಿಎಸ್ ಅಧಿಕಾರಿಯ ಯೂನಿಫಾರ್ಮ್ ಹಾಕಿ ಅಲೆಯುತ್ತಿದ್ದ ಯುವಕನ ಹೆಸರು ಮಿಥಿಲೇಶ್ ಮಾಂಜಿ. ಈತನಿಗೆ 18 ವರ್ಷ. ಈತ ಮಾಡಿಕೊಂಡಿರೋ ಎಡವಟ್ಟಿನಿಂದ ಮೇಜರ್ ಆದ ತಕ್ಷಣವೇ ಕಂಬಿ ಎಣಿಸುವಂತಾಗಿದೆ. ಇವನಿಗೆ ಚಿಕ್ಕಂದಿನಿಂದಲೂ ಪೊಲೀಸ್ ಆಗಬೇಕು ಎನ್ನುವ ದೊಡ್ಡ ಕನಸು ಇತ್ತಂತೆ. ಆದರೆ, ಅದಕ್ಕೆ ತಕ್ಕ ಶ್ರಮ ಈತ ಹಾಕಿರಲಿಲ್ಲ. ಬಳಿಕ ದುಡ್ಡು ಕೊಟ್ಟರೆ ಪೊಲೀಸ್ ಉದ್ಯೋಗ ಸಿಗುತ್ತದೆ ಎಂಬ ವದಂತಿ ನಂಬಿದ್ದ ಈತ ವಂಚಕರ ಸುಳಿಗೆ ಸಿಲುಕಿಕೊಂಡಿದ್ದ. ಈತ ನೋಡಲು ಅಮಾಯಕನಂತೆ ಇದ್ದಿದ್ದರಿಂದ ಅದನ್ನೇ ವಂಚಕರು ಬಂಡವಾಳ ಮಾಡಿಕೊಂಡರು ಎನ್ನಲಾಗಿದೆ.
ಇದನ್ನೂ ಓದಿ: ಖಾಸಗಿ ಕಾಲೇಜಿನ ಟಾಯ್ಲೆಟ್ನಲ್ಲಿ ಮೊಬೈಲ್ ಇಟ್ಟು ವಿಡಿಯೋ, ಯುವಕನ ಬಳಿ ಇತ್ತು 8 ಸಾವಿರ ಕ್ಲಿಪ್ಸ್!
ಮಿಥಿಲೇಶ್ಗೆ 2 ಲಕ್ಷ ರೂಪಾಯಿ ಕೊಟ್ಟರೆ ಪೊಲೀಸ್ ಉದ್ಯೋಗ ಕೊಡಿಸುವುದಾಗಿ ವಂಚಕರು ನಂಬಿಸಿದ್ದಾರೆ. ಇನ್ನೇನು ನನ್ನ ಕನಸು ಈಡೇರುತ್ತಲ್ಲಾ? ಎಂದು ಈತ 2 ಲಕ್ಷ ರೂಪಾಯಿ ಎಣಿಸಿದ್ದಾನೆ. ಹಣ ಪಡೆದ ವಂಚಕರು ಈತನಿಗೆ ನಕಲಿ ಪೊಲೀಸ್ ಡ್ರೆಸ್ ಹಾಗೂ ಪಿಸ್ತೂಲ್ ಸಹ ನೀಡಿದ್ದಾರೆ.
ವಂಚಕರು ಹಿರಿಯ ಅಧಿಕಾರಿಗಳಂತೆ ನಂಬಿಸಿ, ನೀನಿನ್ನೂ ಪ್ರೊಬೇಷನರಿ ಅಧಿಕಾರಿ. ಜಿಲ್ಲೆಯಲ್ಲಿ ನಡೆಯೋ ಎಲ್ಲ ಚಟುವಟಿಕೆಗಳ ಬಗ್ಗೆ ನಮಗೆ ಮಾಹಿತಿ ಕೊಡುತ್ತಿರು ಎಂದು ಫೀಲ್ಡಿಗೆ ಇಳಿಸಿದ್ದಾರೆ. ಬಳಿಕ ಕೆಲಸ ಸಿಕ್ಕ ಜೋಶ್ನಲ್ಲಿ ಈತ ಸ್ಟೈಲಾಗಿ ಯೂನಿಫಾರ್ಮ್ ಹಾಕ್ಕೊಂಡು, ತನ್ನ ಬೈಕ್ನಲ್ಲಿ ಸಿಂಗಂ ಪೋಸ್ನಲ್ಲಿ ತನ್ನ ಊರು ಲಖಿಸಾರಿ ಜಿಲ್ಲೆಯ ಗೋವರ್ಧನ್ ಬಿಘಾಕ್ಕೆ ತೆರಳಿದ್ದ. ಬಳಿಕ ತನ್ನ ತಾಯಿಗೆ ಬಳಿ ಹೋಗಿ ನೋಡಮ್ಮ ನಾನು ಐಪಿಎಸ್ ಅಧಿಕಾರಿ ಆಗಿದ್ದೀನಿ ಎಂದು ಬಿಲ್ಡಪ್ ಕೂಡ ಕೊಟ್ಟಿದ್ದ.
ನಾನೀಗ ಪೊಲೀಸ್, ನನ್ನನ್ನು ಯಾರು ತಡೆಯೋದು? ಎನ್ನುತ್ತಾ ಅದೇ ಹುರುಪಿನಲ್ಲಿ ಮಿಥಿಲೇಶ್ ಸಿಕಂದರಾದಲ್ಲಿದ್ದ ಹೋಟೆಲ್ಗೆ ಬಂದು ಟಿಫನ್ ಮಾಡುತ್ತಿದ್ದ. ಈ ವೇಳೆ ಅಲ್ಲಿದ್ದವರು ಅನುಮಾನದ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಒರಿಜಿನಲ್ ಪೊಲೀಸರು ಸೀದಾ ಜೀಪ್ ಹತ್ತಿಸಿಕೊಂಡು ಒರಿಜಿನಲ್ ಪೊಲೀಸ್ ಸ್ಟೇಷನ್ಗೆ ಕರೆತಂದಿದ್ದಾರೆ.
ಐಪಿಎಸ್ ಡ್ರೆಸ್ನಲ್ಲಿ ಬಂದಿದ್ದ ಮಿಥಿಲೇಶ್ನನ್ನು ಕಂಡು ಅಲ್ಲಿದ್ದ ಪೊಲೀಸರು ಮೊದಲಿಗೆ ಯಾರೋ ಯಂಗ್ ಆಫೀಸರ್ ಬಂದ್ರು ಅನ್ಕೊಂಡು ಜೋರಾಗಿ ನಕ್ಕಿದ್ದಾರೆ. ಬಳಿಕ ಆತನ ಬಳಿ ಇದ್ದ ನಕಲಿ ಪಿಸ್ತೂಲ್, ಕನಸಿನ ಪೊಲೀಸ್ ಡ್ರೆಸ್, ಪಲ್ಸರ್ ಬೈಕ್ ವಶಕ್ಕೆ ಪಡೆದಿದ್ದಾರೆ. ಕೊನೆಗೆ ಮಿಥಿಲೇಶ್ ತಾನು ಪೊಲೀಸ್ ಆದ ಕಥೆಯನ್ನು ಒರಿಜಿನಲ್ ಪೊಲೀಸರ ಎದುರು ಹೇಳಿಕೊಂಡ.
ಆಗ ತಾನು ವಂಚನೆಗೆ ಒಳಗಾಗಿರುವುದು ಮಿಥಿಲೇಶ್ಗೆ ಗೊತ್ತಾಗಿದೆ. ಇನ್ನು ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ನೋಡಿ: ಮುನಿರತ್ನ ರಾಜಕಾರಣಿಯೋ? ‘ವೈರ’ಸ್ ಪೀಡಕನೋ!!? Janashakthi Media