ಬೆಂಗಳೂರು: ಕರ್ನಾಟಕದಲ್ಲಿ ಅಮೂಲ್ ಹಾಲು-ಮೊಸರು ಮಾರಾಟ ಹಾಗು ನಂದಿನಿಯನ್ನು ಅಮೂಲ್ ಜೊತೆಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಹಾಲು, ಮೊಸರು, ತುಪ್ಪ, ಬೆಣ್ಣೆ, ಚೀಜ್ ಇತ್ಯಾದಿ ಅಮೂಲ್ ಉತ್ಪನ್ನಗಳಾದ ಬೀದಿಗೆಸೆದು ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಅಮೂಲ್ ಹಾಲು-ಮೊಸರು ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಇಂದು ಬೆಳಿಗ್ಗೆ ಮೈಸೂರು ಬ್ಯಾಂಕ್ ವೃತ್ತದ ಬಳಿ ನೆರೆದು ಅಮೂಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜನಪ್ಪ ಅಮೂಲ್ ಸಂಸ್ಥೆ ಕನ್ನಡಿಗರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಕನ್ನಡಿಗರು ಕಟ್ಟಿದ ಹೆಮ್ಮೆಯ ಸಂಸ್ಥೆ ಕೆಎಂಎಫ್ (ನಂದಿನಿ). ಅದನ್ನು ನಾಶಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರ ನಂದಿನಿಯನ್ನು ಅಮೂಲ್ ನೊಂದಿಗೆ ವಿಲೀನಗೊಳಿಸಲು ಯತ್ನಿಸುತ್ತಿದೆ. ಇಂಥದ್ದೇನಾದರೂ ನಡೆದರೆ ಕರ್ನಾಟಕದ ಜನತೆ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಯುವಘಟಕದ ರಾಜ್ಯಾಧ್ಯಕ್ಷ ಟಿ.ಎ.ಧರ್ಮರಾಜ್ ಗೌಡ ಮಾತನಾಡಿ, ಅಮೂಲ್ ಹಠಮಾರಿತನ ಮುಂದುವರೆಸಿ ಹಾಲು-ಮೊಸರು ವ್ಯಾಪಾರ ಮುಂದುವರೆಸಿದರೆ ಕರ್ನಾಟಕದಲ್ಲಿ ಅಮೂಲ್ ನ ಎಲ್ಲ ಉತ್ಪನ್ನಗಳಿಗೂ ಬಹಿಷ್ಕಾರ ಹಾಕಬೇಕಾಗುತ್ತದೆ. ಅಮೂಲ್ ಐಸ್ ಕ್ರೀಂ ನಿಂದ ಹಿಡಿದು ಬಿಸ್ಕೆಟ್ ವರೆಗೆ ಯಾವ ಉತ್ಪನ್ನವನ್ನೂ ಮಾರಾಟ ಮಾಡಲು ಬಿಡುವುದಿಲ್ಲ. ಹೀಗಾಗಿ ಅಮೂಲ್ ಕೂಡಲೇ ಹಾಲು, ಮೊಸರು ವ್ಯಾಪಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೆಂಗಳೂರು ಮಾರುಕಟ್ಟೆಯಲ್ಲಿ ಅಮುಲ್ ವಿರುದ್ದ ನಂದಿನಿ ಉಳಿಸಲು #SaveNandini ಅಭಿಯಾನ
ಪ್ರತಿಭಟನೆ ಸಂದರ್ಭದಲ್ಲಿ ಅಮೂಲ್ ಭೂತದಹನ ಮಾಡಲು ಕಾರ್ಯಕರ್ತರು ಮುಂದಾದಾಗ ಪೊಲೀಸರು ಅಡ್ಡಿಪಡಿಸಿದರು. ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರ ವಿರೋಧದ ನಡುವೆಯೂ ಭೂತದಹನಕ್ಕೆ ಮುಂದಾದ ಕರವೇ ಕಾರ್ಯಕರ್ತರನ್ನು ಬಂಧಿಸಲಾಯಿತು.
ಪೊಲೀಸರ ದೌರ್ಜನ್ಯದ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ನೂರಾರು ಕರವೇ ಕಾರ್ಯಕರ್ತರನ್ನು ಹೇಡಿ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ಬಂಧಿಸಿದೆ. ನಿಮ್ಮ ದೌರ್ಜನ್ಯವನ್ನು ಸವಾಲಾಗಿ ಸ್ವೀಕರಿಸಲಿದ್ದೇವೆ. ರಾಜ್ಯದ ಮೂಲೆಮೂಲೆಗಳಲ್ಲೂ ಹೋರಾಡ ಮೊಳಗಲಿದೆ. ಅದೆಷ್ಟು ಪೊಲೀಸರನ್ನು ಕಳಿಸುತ್ತೀರೋ ಕಳಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಶ್ವೇತಾ ಮೋಹನ್, ಗೋಮೂರ್ತಿ ಯಾದವ್, ವೀರಭದ್ರ, ಕುಮಾರ್ (ಆಟೋ ಘಟಕ), ಕೆ.ಪಿ.ನರಸಿಂಹ, ಕಾರ್ತಿಕ್, ಲಕ್ಷ್ಮಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.