ಪಿಎಸ್‌ಐ ಅಕ್ರಮ; ಅಮೃತ್‌ ಪೌಲ್‌ ಗೆ ರೂ.5 ಕೋಟಿ-ಸಿಐಡಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ

ಬೆಂಗಳೂರು: 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌(ಪಿಎಸ್‌ಐ) ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಸಿಐಡಿ ದಾಖಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಪಿಎಸ್ಐ ಅಕ್ರಮ ಪರೀಕ್ಷಾ ಅಕ್ರಮದಲ್ಲಿ ಭಾರೀ ಮೊತ್ತದ ಹಣದ ವ್ಯವಹಾರ ನಡೆದಿರುವುದು ಉಲ್ಲೇಖಿಸಲಾಗಿದೆ.

ಅಕ್ರಮದಲ್ಲಿ ಭಾಗಿಯಾದ ಎಡಿಜಿಪಿ ಅಮೃತ್ ಪೌಲ್ ನೇಮಕಾತಿ ವಿಭಾಗದ ಸಿಬ್ಬಂದಿಗಳ ಕರ್ತವ್ಯ ಹಂಚಿಕೆ ಮಾಡುವ ಮೂಲಕ ಅಕ್ರಮಕ್ಕೆ ಸಾಥ್‌ ನೀಡಿದ್ದಾರೆ. ಅದರಂತೆ ಡಿವೈಎಸ್​ಪಿ ಶಾಂತಕುಮಾರ್, ಪಿಎ ಡಿ.ಸಿ.ಶೀನಿವಾಸ್, ಎಹೆಎಚ್​ಸಿ ಶ್ರೀಧರ್, ಎಫ್​ಡಿಎ ಹರ್ಷಾಗೆ ಮೌಖಿಕವಾಗಿ ಕರ್ತವ್ಯಗಳನ್ನು ಹಂಚಿಕೆ ಮಾಡಲಾಗಿದೆ. ಆ ಮೂಲಕ ಅಪರಾಧಿಗಳು ಒಳಸಂಚು ರೂಪಿಸಿ ಅನರ್ಹ ಅಭ್ಯರ್ಥಿಗಳನ್ನು ಅರ್ಹರನ್ನಾಗಿಸಿ ನೇಮಿಸಲು ಯತ್ನಿಸಲಾಗಿದೆ. ಹಣದಾಸೆಗೆ ಅಕ್ರಮ ಕೂಟ ರಚಿಸಿಕೊಂಡ ಆರೋಪಿಗಳು, ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ, ಉಳಿದಂತೆ ಉತ್ತರ ಪತ್ರಿಕೆಯಲ್ಲಿ ಖಾಲಿ ಬಿಡುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದಾರೆ.

ಅಭ್ಯರ್ಥಿಗಳಿಂದ ತಲಾ 30 ಲಕ್ಷ ಹಣ ಸಂಗ್ರಹ

ಆರೋಪಿ ಡಿವೈಎಸ್​ಪಿ ಶಾಂತಕುಮಾರ್ ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾದವರಿಂದ ಹಣ ಸಂಗ್ರಹದ ಹೊಣೆಯನ್ನು ಹೊತ್ತಿದ್ದರು. ಇವರು ನೇಮಕಾತಿ ವಿಭಾಗದಲ್ಲಿ 12 ವರ್ಷಗಳ ಕಾಲ ಅನುಭವ ಹೊಂದಿದ್ದಾರೆ. 545 ಪಿಎಸ್​ಐ ನೇಮಕಾತಿ ಅಕ್ರಮದಲ್ಲಿ ಆರೋಪಿ ಎಡಿಜಿಪಿ ಅಮೃತ್ ಪೌಲ್ 5 ಕೋಟಿ ಹಣ ನೀಡಿ ಉಳಿದ ಹಣವನ್ನು ಹಂಚಿಕೊಳ್ಳಲು ಸೂಚಿಸಿದ್ದಾಗಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.  ಅಭ್ಯರ್ಥಿಗಳೊಂದಿಗೆ ವ್ಯವಹಾರ ಕುದುರಿಸಲು ಎಫ್​ಡಿಎ ಹರ್ಷಾ ಮಾಡುತ್ತಿದ್ದರು.

ಅಭ್ಯರ್ಥಿಗಳು ಮತ್ತು ಮಧ್ಯವರ್ತಿಗಳಿಂದ ಸಂಗ್ರಹಿಸಿದ್ದ ಹಣವನ್ನು 2021 ರ ಅಕ್ಟೋಬರ್ 1 ರಂದು ಹರ್ಷ ಅವರಿಂದ ಶಾಂತಕುಮಾರ್​​ಗೆ ವರ್ಗಾವಣೆ ಮಾಡಲಾಗಿದೆ. ಅದೇ ದಿನ ಅಮೃತ್ ಪೌಲ್​ಗೂ ಹಣ ವರ್ಗಾವಣೆಯಾಗಿದ್ದು, ಸಿಐಡಿ ಕಚೇರಿ ಸಮೀಪದ ಕೋಡಿ‌ಮುನೇಶ್ವರ ದೇವಾಲಯ ಬಳಿ ಹಣ ವರ್ಗಾವಣೆ ಮಾಡಲಾಗಿದೆ. ಅಕ್ಟೋಬರ್ 1ರ ಮಧ್ಯಹ್ನ 3.30ಕ್ಕೆ ಕಾರು ನಿಲ್ಲಿಸಿ ಶಾಂತಕುಮಾರ್​ ಅವರಿಂದ ಅಮೃತ್ ಪೌಲ್ ಹಣ ಪಡೆದಿದ್ದಾರೆ.

ಪರೀಕ್ಷೆಗೂ ಮುನ್ನವೇ ಹಣ ಸಂಗ್ರಹ

ಪಿಎಸ್‌ಐ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯರ್ಥಿಗಳಿಗೆ ನೀಡುವ ಮೊದಲೇ ಅಮೃತ್‌ ಪೌಲ್‌, ತುರ್ತಾಗಿ ಮುಂಗಡ ಹಣ ಬೇಕಿದೆ ಎಂದು ಹೇಳಿದ್ದರು. ಅದರಂತೆ ಹರ್ಷ ಅಭ್ಯರ್ಥಿಗಳಿಂದ 1.35 ಕೋಟಿ ರೂ. ಸಂಗ್ರಹಿಸಿ ನೀಡಿದ್ದಾರೆ. ತದನಂತರ ಹಣವಿರುವ ಬ್ಯಾಗ್‌ ಅನ್ನು ಹಡ್ಸನ್‌ ವೃತ್ತದ ಕೃಷಿ ಭವನದ ಬಳಿ ನನ್ನ ಜೀಪಿನಲ್ಲಿಟ್ಟು ಹೋಗಿದ್ದ. ಅದೇ ಹಣವನ್ನು ಅಮೃತ್‌ ಪೌಲ್‌ ಅವರು  ಪಡೆದುಕೊಂಡಿದ್ದರು’ ಎಂದು ಶಾಂತಕುಮಾರ್‌ ಹೇಳಿಕೆ ದಾಖಲಿಸಿದ್ದಾರೆ.

ಸಾಕ್ಷಿ ಸಿಗದಂತೆ ಸಿದ್ದತೆ ಮಾಡಿಕೊಂಡ ಆರೋಪಿಗಳು

ಪಿಎಸ್‌ಐ ಪರೀಕ್ಷಾ ನೇಮಕಾತಿ ಅಕ್ರಮ ಬಯಲಾಗದಂತೆ ಕ್ರಮಕ್ಕೆ ಮುಂದಾದ ಆರೋಪಿಗಳು ಮೊದಲಿ, ಅಭ್ಯರ್ಥಿಗಳು ಪರೀಕ್ಷೆ ವೇಳೆ ಬಳಸಿದ್ದ ಪೆನ್ನು​ಗಳನ್ನೇ ಓಎಂಆರ್ ತಿದ್ದಲು ಪಡೆದುಕೊಂಡಿದ್ದಾರೆ. ಪ್ಯಾಲೇಸ್ ರಸ್ತೆಯ ಕಾರಗಲ್ ಟನ್ ಭವನದ ಸಿಐಡಿ ಕಚೇರಿ ಆವರಣದ ಕೊಠಡಿಯಲ್ಲಿ 2021 ರ ಅಕ್ಟೋಬರ್ 7 ಮತ್ತು 8 ಮತ್ತು 16 ರಂದು ಓಎಂಆರ್​ ಶೀಟ್​ಗಳನ್ನು ಭರ್ತಿ ಮಾಡಲಾಗಿದೆ. ಕಚೇರಿ ಸಿಬ್ದಂದಿ ಬರುವ ಮುನ್ನ ಅಂದರೆ, ಬೆಳಗ್ಗೆ 6:30 ರಿಂದ 9:30 ರ ವೇಳೆಗೆ ಕುಕೃತ್ಯ ನಡೆಸಿದ್ದಾರೆ. ಇದಕ್ಕೂ ಮುಂಚಿತವಾಗಿ ಸಿಸಿ ಕ್ಯಾಮಾರಾಗಳನ್ನು ಕಾರ್ಯನಿರ್ವಹಿಸದಂತೆ ಕಾರ್ಯನಿರ್ವಹಿಸಲಾಗಿದೆ ಎಂದು ಎಎಚ್​ಸಿ ಶ್ರೀಧರ್ ನೀಡಿದ ಹೇಳಿಕೆಯನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಭಾವಿ ರಾಜಕಾರಣಿಗಳು-ಸಿಐಡಿ ಅಧಿಕಾರಿಗಳು ಗೊತ್ತಿದ್ದಾರೆ

ಪಿಎಸ್‌ಐ ಅಕ್ರಮ ಭಾರೀ ಸದ್ದು ಮಾಡುತ್ತಿದ್ದಂತೆಯೇ ಆಗ ಎಡಿಜಿಪಿ ಅಮೃತ್‌ ಪೌಲ್‌ ಹಾಗೂ ಡಿವೈಎಸ್‌ಪಿ ಶಾಂತಕುಮಾರ್‌ ಅವರನ್ನು ಆಂತರಿಕ ಭದ್ರತಾ ದಳಕ್ಕೆ (ಐಎಸ್‌ಡಿ) ಎತ್ತಂಗಡಿ ಮಾಡಲಾಯಿತು. ಈ ಸಂದರ್ಭದಲ್ಲಿ ಅಮೃತ್‌ ಪೌಲ್‌ ‘ಏನೂ ಆಗುವುದಿಲ್ಲ ಹೆದರಬೇಡ. ನನಗೆ ಪ್ರಭಾವಿ ರಾಜಕಾರಣಿಗಳು, ಸಿಐಡಿ ಅಧಿಕಾರಿಗಳೆಲ್ಲರೂ ಗೊತ್ತಿದ್ದಾರೆ’ ಎಂದು ಶಾಂತಕುಮಾರ್‌ಗೆ ಧೈರ್ಯ ತುಂಬಿದ್ದರು.

2022ರ ಮೇ 11 ರಂದು ಸಂಜೆ ಅಮೃತ್‌ ಪೌಲ್‌ ತಮ್ಮ ಮನೆಗೆ ಶಾಂತ ಕುಮಾರ್‌ರನ್ನು ಕರೆಸಿಕೊಂಡಿದ್ದರು. ಪಿಎಸ್‌ಐ ಅಕ್ರಮ ವಿಚಾರದಲ್ಲಿ ‘ವಿಶ್ವಾಸ ಘಾತಕ’ ಕೆಲಸ ಮಾಡಬೇಡ. ಒಂದು ವೇಳೆ ಮಾಡಿದರೆ ನಿನ್ನನ್ನು, ನಿಮ್ಮ ಕುಟುಂಬದವರನ್ನು ಸುಮ್ಮನೆ ಬಿಡುವುದಿಲ್ಲ. ಒಂದು ವೇಳೆ ನೀನು ಬಂಧನಕ್ಕೆ ಒಳಗಾದರೆ, ನಿಜ ಸಂಗತಿಯನ್ನು ಬಾಯಿ ಬಿಡಬಾರದು. ಯಾವುದೇ ಕಾರಣಕ್ಕೂ ಹಣದ ವಹಿವಾಟಿನ ಬಗ್ಗೆ ಬಾಯಿ ತೆಗೆಯಬಾರದು’ ಎಂದು ಬೆದರಿಕೆ ಹಾಕಿದ್ದರು ಎಂದು ಶಾಂತಕುಮಾರ್‌ ತನ್ನ ಹೇಳಿಕೆಯಲ್ಲಿ ದಾಖಲಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *