ಅಮಿತ್‌ ಶಾ ಭೇಟಿ| ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಶಮನವಾಗುವುದೆ?

                                                                                                                                          ವಿಶೇಷ ವರದಿ: ಸಂಧ್ಯಾ ಸೊರಬ

ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್‌ ಎನ್ಡಿಎ ಒಕ್ಕೂಟ ಎಂದಾಗಿದ್ದರೂ ಸಹ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರು ಸರಿಯಾಗಿಲ್ಲ. ಇದನ್ನು ಸರಿಪಡಿಸುವ ಜವಾಬ್ದಾರಿಯನ್ನು ಬಿ.ಎಸ್.ಯಡಿಯೂರಪ್ಪ ಮತ್ತು ಬಿ,ವೈ.ವಿಜಯೇಂದ್ರ, ಈ ಅಪ್ಪ-ಮಗ ಇಬ್ಬರೂ ಹೆಗಲಿಗೇರಿಸಿಕೊಂಡಿದ್ದರೂ ಒಗ್ಗೂಡುವಿಕೆ ಸಾಧ್ಯವಾಗುತ್ತಿಲ್ಲ.

ಅದರಲ್ಲಿಯೂ ಹಳೆಯ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದು ಕಮಲ ಪಾಳಯಕ್ಕೆ ಪ್ರತಿಷ್ಠೆಯಾಗಿದ್ದು, ಒಂದೆಡೆ ಹಳೆ ಮೈಸೂರು ಭಾಗದಲ್ಲಿ ಕಮಲವನ್ನು ಅರಳಿಸಬೇಕೆನ್ನುವ ಇವರ ಅಜೆಂಡಾ ಅರಳುತ್ತಿಲ್ಲ. ಅದರಲ್ಲಿಯೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ  ಎರಡೂ ಪಕ್ಷದ ಕಾರ್ಯಕರ್ತರು ಮುಖಂಡರಿಂದಾಗಿರುವ ಡ್ಯಾಮೇಜ್‌ ಅನ್ನು ಕಂಟ್ರೋಲ್‌ ಮಾಡಲು ಬಿಜೆಪಿಯ ವರಿಷ್ಠ ಅಮಿತ್‌ ಶಾ ನೇರಾ ಅಖಾಡಕ್ಕೆ ಧುಮುಕುತ್ತಿದ್ದಾರೆ.  ನಾಳೆ ಮಂಗಳವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚನ್ನಪಟ್ಟಣದಿಂದ ಚುನಾವಣಾ ಪ್ರಚಾರಕ್ಕೆ ಮುನ್ನುಡಿ ಬರೆಯಲಿದ್ದಾರೆ. ಆ ಮೂಲಕ ತೆನೆಹೊತ್ತ ಮಹಿಳೆಯನ್ನೂ ಕಮಲವನ್ನೂ ಒಗ್ಗೂಡಿಸುವ ಹರಸಾಹಸಕ್ಕೆ ಶಾಮುಂದಾಗಲಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು ಸರಿಪಡಿಸಿದಷ್ಟೂ ರಂಧ್ರಗಳು ದೊಡ್ಡದಾಗುತ್ತಲೇ ಹೋಗುತ್ತಿವೆ. ಹೀಗಾಗಿ ಅಪ್ಪ-ಮಗನಿಂದಾಗದ ಕಸರತ್ತಿಗೆ ಕೇಂದ್ರದ ಬಿಜೆಪಿ ನಾಯಕರೇ ನೇರ ಅಖಾಡಕ್ಕೆ ಧುಮುಕುವಂತಾಗಿದೆ.   ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಕರ್ನಾಟಕಕ್ಕೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಹಾಗೂ ಬಿಜೆಪಿ-ಜೆಡಿಎಸ್‌ ನಡುವಿನ ಮೈತ್ರಿಯಲ್ಲಾಗಿರುವ ಕಗ್ಗಂಟಿನ ಕುರಿತು ವಿವರ ಪಡೆಯಲು ಕೇಂದ್ರದ ಬಿಜೆಪಿ ವರಿಷ್ಠ ಅಮಿತ್‌ ಶಾ ನಾಳೆ ಮಂಗಳವಾರ ಕರ್ನಾಟಕಕ್ಕೆ ಆಗಮಿಸಲಿದ್ದಾರೆ.ಬೆಂಗಳೂರಿನ ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚನ್ನಪಟ್ಟಣದಿಂದ ಷಾ, ರೋಡ್‌ ಷೋ ಪ್ರಾರಂಭಿಸಿ, ಮೈತ್ರಿ ಕಾರ್ಯಕರ್ತರನ್ನುದ್ದೇಶಿಸಿ ಒಂದಾಗುವಂತೆ ಕರೆ ನೀಡಲಿದ್ದಾರೆ.

ಇದನ್ನೂ ಓದಿ: ಬಿಜೆಪಿಯಿಂದ ಮಹಿಳೆಯರ ಅವಮಾನಗೊಳಿಸುವ ಜಾಹೀರಾತು: ಮಹಿಳಾ ಸಂಘಟನೆಗಳ ಆಕ್ರೋಶ

ಪ್ರಚಾರಕ್ಕೂ ಮುನ್ನ ಶಾ, ಕೋರ್‌ ಕಮಿಟಿ ಸದಸ್ಯರೊಡನೆ ಉಪಹಾರ ಸಭೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ? ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಲಿದ್ದಾರೆ.

ಚುನಾವಣೆ ಮತದಾನಕ್ಕೆ ದಿನಾಂಕ ಘೋಷಣೆಗೂ ಮುನ್ನ ಪ್ರಧಾನಿ ಮೋದಿ ಕಲಬುರುಗಿ ಮತ್ತು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಔಪಚಾರಿಕ ಭೇಟಿ ಇದಾಗಿದ್ದರೂ ಕೂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯ ಲೋಕಸಭಾ ಕ್ಷೇತ್ರ ಕಲಬುರುಗಿ ಮತ್ತು ಬಿ.ಎಸ್.ಯಡಿಯೂರಪ್ಪರ ಲೋಕಸಭಾ ಕ್ಷೇತ್ರ ಶಿವಮೊಗ್ಗ ಎನ್ನುವುದು ಇಲ್ಲಿ ಗಮನಾರ್ಹ. ರಾಷ್ಟ್ರೀಯಮಟ್ಟದಲ್ಲಿ ಖರ್ಗೆ ಕ್ಷೇತ್ರದ ಅವಲೋಕನದ ಜೊತೆಗೆ ಕಳೆದ ಬಾರಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿದ್ದಾಗ  ಬಿ,ಎಸ್.ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಲಿಂಗಾಯತ ಸಮುದಾಯದಿಂದ ಹೊಡೆತ ತಿಂದಿದ್ದನ್ನು ಅರಗಿಸಿಕೊಳ್ಳದ ಎಡವಟ್ಟು ಮತ್ತಾಗದಂತೆ ಎಚ್ಚರಿಕೆ ವಹಿಸಲು ಈ  ಬಾರಿ ಅಳೆದುತೂಗಿದರೂ ಬಿಜೆಪಿ ನಾಯಕರಿಗೆ ಕರ್ನಾಟಕದಲ್ಲಿ ಕಮಲವನ್ನು ಲೋಕಸಭೆಯಲ್ಲಿ ಅರಳಿಸುವುದಕ್ಕೆ ಹರಸಾಹಸ ಪಡುವಂತಾಗಿದೆ. ಬಿಜೆಪಿಗರಿಗೆ ಚುನಾವಣಾ ಬಾಂಡ್‌ ಹಗರಣದಂತಹ ದೊಡ್ಡ ಆರೋಪದ ಪಟ್ಟಿ ತೂಗುಗತ್ತಿಯಾಗಿದೆ. ಅಲ್ಲದೇ ಮೋದಿ ಹೆಸರಿನ ಬ್ರಾಂಡ್‌ ಬಿಟ್ಟರೆ ಕಮಲ ಪಾಳಯಕ್ಕೆ ಜನರ ಮುಂದೆ ಹೋಗಲು ಬೇರಾವ ಅಸ್ತ್ರಗಳಿಲ್ಲ. ಹೀಗಾಗಿಯೇ ಮೋದಿ ಹೆಸರಿನಲ್ಲಾದರೂ ಎಲ್ಲರನ್ನೂ ಒಗ್ಗೂಡಿಸಬೇಕು , ಮತ್ತೊಮ್ಮೆ ಮೋದಿ ಎನ್ನುವಂತಾಗಿದೆ. ಸರಿಯಾದ ಯಾವುದೇ ಲೆಕ್ಕಾಚಾರ ಬಿಜೆಪಿಗೆ ಸಿಗುತ್ತಿಲ್ಲ. ತೆನೆಹೊತ್ತ ಮಹಿಳೆಯ ಸಖ್ಯವನ್ನು ಬೆಳೆಸಿದರೂ ಹಳೆಯ ಮೈಸೂರು ಭಾಗವನ್ನು ತನ್ನ ತೆಕ್ಕೆಗೆ ವಶಪಡಿಸಿಕೊಳ್ಳುವ ಸೂಚನೆಗಿಂತ ಬಿಜೆಪಿಗೆ ಆಗುತ್ತಿರುವ ಡ್ಯಾಮೆಜ್ಗಳೇ ಸಾಲುಸಾಲು ಕಾಣುತ್ತಿವೆ. ಹೀಗಾಗಿ ಕೇಂದ್ರದಿಂದಲೇ ಸಾಲುಸಾಲು ನಾಯಕರು ಕರ್ನಾಟಕಕ್ಕೆ ಬಂದು ಹೋಗುತ್ತಿದ್ದಾರೆ. ಮೋದಿಯ ಭೇಟಿ ಬಳಿಕ ಇದೀಗ ಅಮಿತ್‌ ಶಾ ತಮ್ಮ ವರಸೆ ತೋರಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಷಾ ಭೇಟಿ, ಮಾತುಕತೆ ಎಷ್ಟರ ಮಟ್ಟಿಗೆ ಫಲಪ್ರದಾಯಕವಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಇದನ್ನೂ ನೋಡಿ:ಮೋದಿ ಸಾಹೇಬರೆ… ನಮ್ಮ ಪ್ರಶ್ನೆಗಳಿಗೆ ಜವಾಬು ಹೇಳಿ – ಅಂಬಣ್ಣ ಅರೋಳಿಕರ್ ಹಾಡು Janashakthi Media

Donate Janashakthi Media

Leave a Reply

Your email address will not be published. Required fields are marked *