ಭಯಭೀತಿಯಲ್ಲಿ ಅಮೆರಿಕದ ಕಾಲೇಜು ರಂಗ

ಕ್ಯಾಂಪಸ್ ಪ್ರತಿಭಟನೆಗಳ ಬಗ್ಗೆ ಇಂದು ಟ್ರಂಪ್ ಆಡಳಿತದ ನೇರ ದಾಳಿ ಬಂಡವಾಳಶಾಹಿ ವ್ಯವಸ್ಥೆಯು ಎದುರಿಸುತ್ತಿರುವ ಬಿಕ್ಕಟ್ಟಿನ ಕಾರಣದಿಂದ ಉದ್ಭವಿಸಿದೆ. ಕ್ಯಾಂಪಸ್‌ಗಳಿಂದ ಬರುವ ಎಲ್ಲಾ ವಿರೋಧವನ್ನು, ವಿಶೇಷವಾಗಿ ಬೌದ್ಧಿಕ ವಿರೋಧವನ್ನು ತೊಡೆದುಹಾಕುವ ಹತಾಶ ಬಯಕೆಯು ಈ ಬಿಕ್ಕಟ್ಟಿನ ಒಂದು ಲಕ್ಷಣವೂ ಹೌದು. ಆದರೆ ಈ ಬಿಕ್ಕಟ್ಟಿನ ವಿಶಿಷ್ಟ ಲಕ್ಷಣವೆಂದರೆ, ಅದನ್ನು ಪರಿಹರಿಸಲು ವ್ಯವಸ್ಥೆಯೊಳಗೇ ಮಾಡುವ ಎಲ್ಲಾ ಪ್ರಯತ್ನಗಳೂ ಅದನ್ನು ಉಲ್ಬಣಗೊಳಿಸುವಲ್ಲಿ ಮಾತ್ರ ಯಶಸ್ವಿಯಾಗುತ್ತವೆ ಎಂಬುದು. ಅದೇ ರೀತಿಯಲ್ಲಿ ಟ್ರಂಪ್ ಆಡಳಿತವು ಅನುಮತಿಸುವುದನ್ನು ಮಾತ್ರ ಕಲಿಸುವ ತರಗತಿಗಳಿಗೆ ಬಾಯಿ ಮುಚ್ಚಿಕೊಂಡು ಹಾಜರಾಗುವಂತೆ ಒತ್ತಾಯಿಸುವ ಪ್ರಯತ್ನ ಮತ್ತು ಮಾನವಕೋಟಿಯು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವುದೇ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸುವುದನ್ನು ತಪ್ಪಿಸಲು ಮಾಡುತ್ತಿರುವ ಪ್ರಯತ್ನವು ಅಮೆರಿಕದ ಶೈಕ್ಷಣಿಕ ವ್ಯವಸ್ಥೆಗೇ ಒಂದು ತಿರುಗುಬಾಣವಾಗಿ ಪರಿಣಮಿಸುತ್ತದೆ. ಇದು ಕೂಡ ನಮ್ಮಂತಹ ದೇಶಗಳಿಗೆ ಈ ಬಿಕ್ಕಟ್ಟು ಒದಗಿಸುವ ಅವಕಾಶಗಳಲ್ಲಿ ಒಂದು ಎಂಬ ಅರಿವನ್ನು ನರೇಂದ್ರ ಮೋದಿ ಸರಕಾರವಂತೂ ತೋರಲಿಕ್ಕಿಲ್ಲ, ಆದರೆ ದೇಶದ ಪ್ರಜಾಪ್ರಭುತ್ವ ಶಕ್ತಿಗಳಾದರೂ ತೋರಬೇಕು. ಭಯ

-ಪ್ರೊ.ಪ್ರಭಾತ್ ಪಟ್ನಾಯಕ್

-ಅನು:ಕೆ.ಎಂ.ನಾಗರಾಜ್

ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ದೇಶಗಳ ವಿದ್ಯಾರ್ಥಿಗಳು ಈಗ ಭಯಭೀತರಾಗಿದ್ದಾರೆ: ಅವರನ್ನು ಅಪಹರಿಸಬಹುದು; ಅವರು ವಾಸಿಸುವ ಸ್ಥಳದಿಂದ ನೂರಾರು ಮೈಲಿ ದೂರದಲ್ಲಿರುವ ಯಾವುದಾದರೂ ಒಂದು ದಸ್ತಗಿರಿ ಕೇಂದ್ರಕ್ಕೆ ಅವರನ್ನು ಸಾಗಿಸಬಹುದು; ಎಷ್ಟು ಸಮಯದವರೆಗೆ ಬೇಕಾದರೂ ಅವರನ್ನು ಅಲ್ಲಿ ಇರಿಸಬಹುದು ಮತ್ತು ಆನಂತರ ಅವರನ್ನು ಗಡೀಪಾರು ಮಾಡಬಹುದು. ಈ ಎಲ್ಲ ಶಿಕ್ಷೆಗಳೂ ಜಾರಿಯಲ್ಲಿರುವ ಯಾವುದೇ ಕಾನೂನಿನ ಉಲ್ಲಂಘನೆಗಾಗಿ ಅಲ್ಲ, ಬದಲಾಗಿ, ಸಂಪೂರ್ಣವಾಗಿ ಆಡಳಿತದ ಮರ್ಜಿಯ ಮೇರೆಗೆ. ಈ ಬಗ್ಗೆ ನಿಖರ ಅಂದಾಜುಗಳು ಸಿಗುವುದು ಕಷ್ಟ, ಆದರೆ, ಸುಮಾರು 1500 ವಿದ್ಯಾರ್ಥಿಗಳ ವಿದ್ಯಾರ್ಥಿ-ವೀಸಾಗಳನ್ನು ರದ್ದುಗೊಳಿಸಲಾಗಿದೆ ಮತ್ತು ಅವರು ಗಡೀಪಾರಿಗೆ ಒಳಗಾಗಲಿದ್ದಾರೆ ಎಂಬ ವರದಿಗಳಿವೆ.

ಅನೇಕ ಸಂದರ್ಭಗಳಲ್ಲಿ ಇದಕ್ಕೆ ಗುರಿಯಾದ ಈ ವಿದ್ಯಾರ್ಥಿಗಳು “ಯೆಹೂದ್ಯ-ವಿರೋಧಿ” ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಆಡಳಿತವು ಹೇಳಿಕೊಂಡಿದೆ. ಆದರೆ, ಯಾವ ಕೃತ್ಯಗಳು ಯೆಹೂದ್ಯ-ವಿರೋಧಿ ಆಗುತ್ತವೆ ಎಂಬುದು ಮತ್ತು ಯಾವ ಕೃತ್ಯವು ಯಾವ ನಿಯಮದ ಅಡಿಯಲ್ಲಿ ಬರುತ್ತವೆ ಎಂಬುದರ ಬಗ್ಗೆ ಆಡಳಿತದ ಬಳಿ ಯಾವ ಸ್ಪಷ್ಟತೆಯೂ ಇಲ್ಲ. ಹಾಗಾಗಿ, ಯಾವುದು ಯೆಹೂದ್ಯ-ವಿರೋಧಿ ಚಟುವಟಿಕೆಯಾಗುತ್ತದೆ ಎಂಬುದು ಆಡಳಿತದ ತಿಕ್ಕಲುತನವನ್ನು ಅವಲಂಬಿಸಿದೆ ಎಂದು ಮಾತ್ರವೇ ಹೇಳಬಹುದು. ಭಯ

ಒಂದು ವಾಸ್ತವಾಂಶವನ್ನು ಹೇಳುವುದಾದರೆ, ಟಫ್ಟ್ಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬನನ್ನು ಆತ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪತ್ರಿಕೆ ‘ಟಫ್ಟ್ಸ್ಡೈಲಿ’ಯಲ್ಲಿ ವಿಶ್ವವಿದ್ಯಾನಿಲಯದಿಂದ ಇಸ್ರೇಲ್‌ನಿಂದ ತನ್ನ ಹೂಡಿಕೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ ಒಂದು ಲೇಖನವನ್ನು ಬರೆದಿದ್ದಕ್ಕಾಗಿ ಗುರಿಯಾಗಿಸಲಾಯಿತು; ಇನ್ನೊಬ್ಬ ವಿದ್ಯಾರ್ಥಿಯನ್ನು ಹಮಾಸ್‌ನ ಒಬ್ಬ ಸಲಹೆಗಾರನ ಸಂಬಂಧಿ ಎನ್ನುವ ಒಂದೇ ಒಂದು ಕಾರಣದ ಮೇಲೆ ಗುರಿಯಾಗಿಸಲಾಯಿತು. ಭಯ

ಇದನ್ನೂ ಓದಿ: ಹೆಡ್ ಕಾನ್ಸ್ ಟೇಬಲ್ ಕಿರುಕುಳಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಆ ಸಲಹೆಗಾರ ಆ ಹುದ್ದೆಯನ್ನು ಒಂದು ದಶಕದ ಹಿಂದೆಯೇ ತೊರೆದಿದ್ದ ಮತ್ತು 2023ರ ಅಕ್ಟೋಬರ್‌ನಲ್ಲಿ ಹಮಾಸ್ ಕಾರ್ಯಾಚರಣೆಯನ್ನು ಟೀಕಿಸಿದ್ದ ಕೂಡ. ವಿದ್ಯಾರ್ಥಿಯೊಬ್ಬನು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಒಂದು ಪೋಸ್ಟಿಂಗ್ ಸಹ ಆತನನ್ನು ತೊಂದರೆಗೆ ಸಿಲುಕಿಸಬಹುದು. ಯಾರ್ಯಾರನ್ನು ಅಪಹರಿಸಿ ಗಡೀಪಾರು ಮಾಡಬೇಕು ಎಂಬುದನ್ನು ನಿರ್ಧರಿಸಲು, ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಮಾಡಿರುವ ಪೋಸ್ಟಿಂಗ್‌ಗಳನ್ನು ಶೋಧಿಸುವಲ್ಲಿ ಆಡಳಿತದ ಅಧಿಕಾರಿಗಳು ಪ್ರಸ್ತುತ ಕಾರ್ಯನಿರತರಾಗಿದ್ದಾರೆ ಮತ್ತು ತಾವೆಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತೇವೆಯೋ ಎನ್ನುವ ಭಯದಲ್ಲಿ ತಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್ ಗಳನ್ನು ಅಳಿಸುವಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದಾರೆ. ಭಯ

ಹಾಗೆ ನೋಡಿದರೆ “ಯೆಹೂದ್ಯ-ವಿರೋಧ” ಒಂದು ಶಿಕ್ಷಾರ್ಹ ಅಪರಾಧವೆಂದು ಎಲ್ಲಿಯೂ ನಿರ್ದಿಷ್ಟಪಡಿಸಿಲ್ಲ. “ಯೆಹೂದ್ಯ-ವಿರೋಧ”ಕ್ಕಾಗಿ ವಿದ್ಯಾರ್ಥಿಗಳನ್ನು ಶಿಕ್ಷಿಸಲು ಮಂಡಿಸಲಾದ ವಾದವೆಂದರೆ, ಈ ಆಪಾದನೆಗೆ ಗುರಿಯಾದ ವಿದ್ಯಾರ್ಥಿಗಳು ಅಮೆರಿಕದ ವಿದೇಶಾಂಗ ನೀತಿಯ ವಿರುದ್ಧ ವರ್ತಿಸಿದ್ದಾರೆ ಎಂಬುದು. ಯೆಹೂದ್ಯ-ವಿರೋಧಿಗಳ ವಿರುದ್ಧದ ಹೋರಾಟವು ಅಮೆರಿಕದ ವಿದೇಶಾಂಗ ನೀತಿಯ ಜಾಗತಿಕ ಉದ್ದೇಶಗಳಲ್ಲಿ ಒಂದು. ಹಾಗಾಗಿ, ಅಮೆರಿಕದ ವಿದೇಶಾಂಗ ನೀತಿಯನ್ನು ಟೀಕಿಸುವ ಯಾವುದೇ ಹೇಳಿಕೆಗಾಗಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ಗಾಗಿ ಯಾವುದೇ ವಿದೇಶಿ ವಿದ್ಯಾರ್ಥಿಯನ್ನು ಗಡೀಪಾರು ಮಾಡಬಹುದು. ಭಯ

ಇಸ್ರೇಲಿನ ಅಸ್ತಿತ್ವವೇ ಲಕ್ಷಾಂತರ ಪ್ಯಾಲೆಸ್ಟೀನಿಯನ್ನರನ್ನು ಹೊರದಬ್ಬಿ ಅವರ ಭೂಮಿಯನ್ನು ವಶಪಡಿಸಿಕೊಂಡ ಕ್ರೂರ ವಲಸಿಗ ವಸಾಹತುಶಾಹಿಯ ಒಂದು ಉದಾಹರಣೆ ಎಂಬ ಅಂಶವನ್ನು ನಾವು ಒಂದು ಕ್ಷಣ ಮರೆತುಬಿಡೋಣ. ಗಾಜಾದಲ್ಲಿ ಕೊಂಚವೂ ನಾಚಿಕೆಯಿಲ್ಲದ ಮತ್ತು ಮನುಕುಲದ ಆತ್ಮಸಾಕ್ಷಿಗೆ ಕುಂದುಂಟು ಮಾಡುವ ಒಂದು ನರಮೇಧದಲ್ಲಿ ಇಸ್ರೇಲ್ ಪ್ರಸ್ತುತ ತೊಡಗಿಸಿಕೊಂಡಿದೆ ಎಂಬ ಅಂಶವನ್ನೂ ಮರೆತುಬಿಡೋಣ. ಈ ನರಮೇಧದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಬಹಳಷ್ಟು ಮಂದಿ ಯಹೂದಿ ವಿದ್ಯಾರ್ಥಿಗಳೇ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ ಎಂಬ ಅಂಶವನ್ನೂ ಮರೆತುಬಿಡೋಣ. ಇಸ್ರೇಲ್‌ನ ಬಹುಪಾಲು ಜನರೂ ಸಹ ನೆತನ್ಯಾಹು ಸರ್ಕಾರವು ಗಾಜಾದಲ್ಲಿ ಮಾಡುತ್ತಿರುವುದನ್ನು ವಿರೋಧಿಸುತ್ತಿದ್ದಾರೆ ಎಂಬ ಅಂಶವನ್ನೂ ನಾವು ಮರೆತುಬಿಡೋಣ.

ಜನಾಂಗ-ದ್ವೇಷದ ಝಿಯೊನಿಸಂ-ವಿರೋಧ ಮತ್ತು ಯೆಹೂದ್ಯ-ವಿರೋಧ ಇವೆರಡೂ ಒಂದೇ ಅಲ್ಲ ಎಂಬ ಮೂಲಭೂತ ಅಂಶವನ್ನೂ ಸಹ ನಾವು ಒಂದು ಕ್ಷಣ ಮರೆತುಬಿಡೋಣ. ಮುಖ್ಯ ವಿಷಯವೆಂದರೆ, ಯಾವುದೋ ಒಂದು ನೆಪದಲ್ಲಿ ತಾನು ಇಷ್ಟಪಡದ ಯಾರನ್ನಾದರೂ ಗಡೀಪಾರು ಮಾಡುವ ಹಕ್ಕನ್ನು ಯುಎಸ್ ಆಡಳಿತವು ತನಗೆ ತಾನೇ ಆವಾಹಿಸಿಕೊಂಡಿದೆ ಎಂಬುದು. ಯೆಹೂದ್ಯ-ವಿರೋಧಿ ಎಂಬುದು ಪ್ರಸ್ತುತ ನೆಪ. ಇದು ಆಡಳಿತದ ನಡವಳಿಕೆಗಳು ಅದರ ನಡೆ-ನುಡಿಯೊಂದಿಗೆ ಭಿನ್ನಾಭಿಪ್ರಾಯ ತೋರುವ ಯಾವುದೇ ಒಬ್ಬ ಚಿಂತನಶೀಲ ಮತ್ತು ಸೂಕ್ಷ್ಮ ಮನಃಸ್ಥಿತಿಯ ಅಂತಾರಾಷ್ಟ್ರೀಯ ವಿದ್ಯಾರ್ಥಿಯ ಮೇಲೆ ದಾಳಿ ಮಾಡುವ ಮುನ್ಸೂಚನೆಯನ್ನು ಕೊಡುತ್ತವೆ. ಭಯ

ಇಂದು ವಿದೇಶಿ ವಿದ್ಯಾರ್ಥಿ, ನಾಳೆ…!

ವಾಕ್ ಸ್ವಾತಂತ್ರ‍್ಯವನ್ನು ರಕ್ಷಿಸುವ ಯುಎಸ್ ಸಂವಿಧಾನದ ಮೊದಲ ತಿದ್ದುಪಡಿಯ ಹೊರತಾಗಿಯೂ, ಗ್ರೀನ್ ಕಾರ್ಡ್ ಹೊಂದಿರುವವರೂ (ಯುಎಸ್‌ನಲ್ಲಿ ಕಾಯಂಆಗಿ ವಾಸಿಸುವ ಮತ್ತು ಉದ್ಯೋಗ ಮಾಡುವ ಹಕ್ಕನ್ನು ಪಡೆದ ವ್ಯಕ್ತಿಯೂ) ಸೇರಿದಂತೆ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಮತ್ತು ಬೋಧಿಸುತ್ತಿರುವ ವಿದೇಶಿ ಶಿಕ್ಷಕರ ವಿರುದ್ಧವೇ ಇಂತಹ ದಾಳಿಯನ್ನು ನಡೆಸಬಹುದಾದರೆ, ಇದೇ ದಾಳಿಯು ಅಮೆರಿಕದ ನಾಗರಿಕರಿಗೂ ಹರಡುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಗ್ರೀನ್ ಕಾರ್ಡ್ ಹೊಂದಿರುವ ವಿದೇಶಿಯರು ಮೊದಲ ತಿದ್ದುಪಡಿಯ ಅಡಿಯಲ್ಲಿ ವಾಕ್ ಸ್ವಾತಂತ್ರ‍್ಯದ ರಕ್ಷಣೆಗೆ ಅರ್ಹರೇ ಎಂಬುದು ಒಂದು ವಿವಾದದ ವಿಷಯ ಹೌದಾದರೂ, ಅವರನ್ನು ಸಂವಿಧಾನದ ಮೊದಲ ತಿದ್ದುಪಡಿಯ ವ್ಯಾಪ್ತಿಯಿಂದ ಹೊರಗಿಡುವುದು ಸಾಧ್ಯವಾದರೆ, ಅಮೇರಿಕದ ನಿಜ ನಾಗರಿಕರನ್ನೂ ಸಹ ಅವರು “ಅಮೆರಿಕ-ವಿರೋಧಿ” ಶಕ್ತಿಗಳಿಗೆ ಸಹಾಯ ಒದಗಿಸುತ್ತಿದ್ದಾರೆ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆಧಾರದ ಮೇಲೆ ಮೊದಲ ತಿದ್ದುಪಡಿಯ ವ್ಯಾಪ್ತಿಯಿಂದ ಹೊರಗಿಡಬಹುದು. ಭಯ

ಅರವತ್ತರ ದಶಕದ ಉತ್ತರಾರ್ಧ ಮತ್ತು ಎಪ್ಪತ್ತರ ದಶಕದ ಆರಂಭದ ಕಾಲದಲ್ಲಿ ಅಮೆರಿಕದ ಕ್ಯಾಂಪಸ್‌ಗಳಲ್ಲಿ ಮತ್ತು ಇತರ ದೇಶಗಳ ಕ್ಯಾಂಪಸ್‌ಗಳಲ್ಲಿ ವಿಯೆಟ್ನಾಂ ಯುದ್ಧದ ವಿರುದ್ಧ ಜರುಗಿದ ಬೃಹತ್ ಚಳುವಳಿಗಳು ಮತ್ತು ಇಂದಿನ ಅಮೆರಿಕದ ಕ್ಯಾಂಪಸ್‌ಗಳಲ್ಲಿ ನಾವು ಕಾಣುತ್ತಿರುವ ಪರಿಸ್ಥಿತಿಯಲ್ಲಿನ ವ್ಯತ್ಯಾಸವನ್ನು ನೋಡಿದರೆ, ಯುಎಸ್ ಮತ್ತು ಬೇರೆಡೆ ಜರುಗಿದ ಈ ಎಲ್ಲ ಚಳುವಳಿಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿದ್ದ ದೇಶಗಳಿಗೆ ಸೇರಿದ ವಿದ್ಯಾರ್ಥಿಗಳಷ್ಟೇ ಸಕ್ರಿಯವಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳೂ ಸಹ ಭಾಗವಹಿಸಿದ್ದರು. ವಿದೇಶಿ ವಿದ್ಯಾರ್ಥಿಗಳು ಆಗ ಯಾವುದೇ ರೀತಿಯ ಬೆದರಿಕೆಗಳನ್ನು ಎದುರಿಸುವ ಪ್ರಶ್ನೆಯೇ ಇರಲಿಲ್ಲ. ಹಾಗಾಗಿ, ಭಯಭೀತಿಗೊಳಪಡಿಸಿ ಅವರನ್ನು ಒಪ್ಪಿಕೊಳ್ಳುವಂತೆ ಮಾಡುವ ಪ್ರಶ್ನೆಯೇ ಇರಲಿಲ್ಲ. ಆದ್ದರಿಂದ, ಸ್ವಾಭಾವಿಕವಾಗಿ ಉದ್ಭವಿಸುವ ಒಂದು ಪ್ರಶ್ನೆ ಎಂದರೆ: ಈ ವ್ಯತ್ಯಾಸ ಉಂಟಾಗಲು ಅಂದಿನಿಂದ ಇಂದಿನವರೆಗೆ ಆಗಿರುವ ಬದಲಾವಣೆಯಾದರೂ ಏನು? ಭಯ

ಮೂಲಭೂತ ವ್ಯತ್ಯಾಸವು ಸನ್ನಿವೇಶದಲ್ಲಿ ಅಡಕವಾಗಿದೆ. ಸಾಮ್ರಾಜ್ಯಶಾಹಿಯು ಈಗಿರುವಂತೆಯೇ ಆಗಲೂ ನಿರ್ದಯವಾಗಿತ್ತು. ಆದರೆ, ವಿಯೆಟ್ನಾಂನಲ್ಲಿ ಅದು ಎದುರಿಸುತ್ತಿದ್ದ ಸೋಲನ್ನು ಹೊರತುಪಡಿಸಿದರೆ, ಎರಡನೇ ಮಹಾಯುದ್ಧದಿಂದಾಗಿ ಅನುಭವಿಸಿದ ಕಷ್ಟ ನಷ್ಟಗಳನ್ನು ಜಯಿಸಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದ್ದ ಸಾಮ್ರಾಜ್ಯಶಾಹಿ ಅದಾಗಿತ್ತು. ನಿಜ, ಸೋವಿಯತ್ ಒಕ್ಕೂಟವು ಅದಕ್ಕೆ ತೀವ್ರ ಸವಾಲು ಒಡ್ಡಿತ್ತು. ಆ ಸವಾಲನ್ನು ಎದುರಿಸುವ ಆತ್ಮವಿಶ್ವಾಸವನ್ನು ಪಡೆಯುವಲ್ಲಿ ಸಾಮ್ರಾಜ್ಯಶಾಹಿಯು ಯಶಸ್ವಿಯಾಗಿತ್ತು. ಈ ಪರಿಸ್ಥಿತಿಯನ್ನೇ, ಮಾರ್ಕ್ಸ್ವಾದಿ ತತ್ವಶಾಸ್ತ್ರಜ್ಞರಾದ ಹರ್ಬರ್ಟ್ ಮಾರ್ಕ್ಯೂಸ್ ಅವರೇ ಇರಲಿ ಅಥವಾ ಮಾರ್ಕ್ಸ್ವಾದಿ ಅರ್ಥಶಾಸ್ತ್ರಜ್ಞರಾದ ಪಾಲ್ ಬರನ್ ಮತ್ತು ಪಾಲ್ ಸ್ವೀಜಿ ಅವರುಗಳೇ ಇರಲಿ, ಸಾಮ್ರಾಜ್ಯಶಾಹಿಯು ತನ್ನ ಆಂತರಿಕ ವೈರುಧ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಒಂದು ಸನ್ನಿವೇಶ ಎಂದು ವಿವರಿಸಿದ್ದದ್ದು. ಅವರು ಹೀಗೆ ಹೇಳಿದ್ದು ಸಂಪೂರ್ಣವಾಗಿ ಸರಿಯೇ ಎಂಬುದು ಮುಖ್ಯವಲ್ಲ; ಆ ಒಂದು ಪರಿಸ್ಥಿತಿಯೇ ಅಂತಹ ಒಂದು ವಿವರಣೆಯನ್ನು ತಂದಿತು ಎಂಬುದೇ ಮುಖ್ಯವಾದ ವಿಷಯ. ಭಯ

ವ್ಯವಸ್ಥೆಯ ಬಿಕ್ಕಟ್ಟಿನ ಕಾರಣದಿಂದ

ಈ ಪರಿಸ್ಥಿತಿಗೆ ವ್ಯತಿರಿಕ್ತವಾಗಿ ಇಂದಿನ ಯುಎಸ್ ಸಾಮ್ರಾಜ್ಯಶಾಹಿಯು, ಮತ್ತು ಸೂಚ್ಯವಾಗಿ ಸಮಗ್ರ ಸಾಮ್ರಾಜ್ಯಶಾಹಿಯು, ಒಂದು ಬಿಕ್ಕಟ್ಟಿಗೆ ಸಿಲುಕಿದೆ. ಕ್ಯಾಂಪಸ್‌ಗಳಿಂದ ಬರುವ ಎಲ್ಲಾ ವಿರೋಧವನ್ನು, ವಿಶೇಷವಾಗಿ ಬೌದ್ಧಿಕ ವಿರೋಧವನ್ನು ತೊಡೆದುಹಾಕುವ ಹತಾಶ ಬಯಕೆಯು ಈ ಬಿಕ್ಕಟ್ಟಿನ ಒಂದು ಲಕ್ಷಣವೂ ಹೌದು. ಅಮೇರಿಕದ ಕ್ಯಾಂಪಸ್‌ಗಳಲ್ಲಿ ಉದಾರವಾದಿಗಳು ಮತ್ತು ಎಡಪಂಥೀಯರೇ ತುಂಬಿ ಹೋಗಿದ್ದಾರೆ; ಅವರನ್ನು ಮಟ್ಟಹಾಕಬೇಕು ಎಂಬುದು ಸ್ವತಃ ಟ್ರಂಪ್ ಆಡಳಿತದ ಮಾತುಗಳೇ ಆಗಿವೆ. ಹಾಗಾಗಿ, ಕ್ಯಾಂಪಸ್ ಪ್ರತಿಭಟನೆಗಳ ಬಗ್ಗೆ ಇಂದು ಆಡಳಿತವು ಪ್ರದರ್ಶಿಸುತ್ತಿರುವ ಮುಚ್ಚುಮರೆ ಇಲ್ಲದ ದಾಳಿಯು, ವ್ಯವಸ್ಥೆಯು ಎದುರಿಸುತ್ತಿರುವ ಬಿಕ್ಕಟ್ಟಿನ ಕಾರಣದಿಂದ ಉದ್ಭವಿಸಿದೆ ಎಂಬ ಅಂಶವು ಸ್ಪಷ್ಟವಾಗುತ್ತದೆ. ಭಯ

ಈ ಪ್ರತಿಪಾದನೆಯನ್ನು ಅನೇಕರು ಒಪ್ಪಲಿಕ್ಕಿಲ್ಲ್ಲ. ಬದಲಾಗಿ ಇಂದಿನ ಮತ್ತು ಅರವತ್ತರ ದಶಕದ ಉತ್ತರಾರ್ಧ ಮತ್ತು ಎಪ್ಪತ್ತರ ದಶಕದ ಆರಂಭ ಕಾಲದ ಪರಿಸ್ಥಿತಿಗಳ ನಡುವಿನ ವ್ಯತ್ಯಾಸವು ಸಾರಭೂತವಾಗಿ ನವ-ಫ್ಯಾಸಿಸ್ಟ್ ಮನಸ್ಥಿತಿಯನ್ನು ಹೊಂದಿರುವ ಟ್ರಂಪ್ ಎಂಬ ಒಬ್ಬ ವ್ಯಕ್ತಿಯು ಇಂದು ಅಮೆರಿಕದ ಅಧ್ಯಕ್ಷರಾಗಿದ್ದಾರೆ ಎಂಬ ಅಂಶದಲ್ಲಿದೆ ಎಂದು ಅವರು ವಾದಿಸಬಹುದು. ಆದರೆ, ಟ್ರಂಪ್‌ನಂತಹ ಒಬ್ಬ ವ್ಯಕ್ತಿಯೇ ಅಧ್ಯಕ್ಷರಾಗಿ ಆಯ್ಕೆಯಾಗುವ ನಿಖರವಾದ ಕಾರಣವು ಬಿಕ್ಕಟ್ಟಿನ ಒಂದು ಅಭಿವ್ಯಕ್ತಿಯೇ ಹೌದು. ಹಿಂದಿನ ಹಳೆಯ ಫ್ಯಾಸಿಸಂ ಮುನ್ನೆಲೆಗೆ ಬಂದ ರೀತಿಯಲ್ಲೇ ಇಂದಿನ ನವ-ಫ್ಯಾಸಿಸಂ ಕೂಡ, ಬಿಕ್ಕಟ್ಟಿನ ಅವಧಿಯಲ್ಲಿ ಆಳುವ ವರ್ಗಗಳು ತಮ್ಮ ಪ್ರಾಬಲ್ಯಕ್ಕೆ ಎದುರಾಗುವ ಯಾವುದೇ ಸವಾಲನ್ನು ನಿವಾರಿಸಿಕೊಳ್ಳುವ ಸಲುವಾಗಿ ನವ-ಫ್ಯಾಸಿಸ್ಟ್ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡ ಸನ್ನಿವೇಶದಲ್ಲಿ ಮಾತ್ರವೇ ಮುನ್ನೆಲೆಗೆ ಬರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನರೇಂದ್ರ ಮೋದಿಯೇ ಆಗಲಿ ಅಥವಾ ಜೇವಿಯರ್ ಮಿಲೀ ಆಗಲಿ ಮತ್ತು ಅವರದ್ದೇ ರೀತಿಯ ಇತರರೇ ಆಗಲಿ, ಅವರ ರೀತಿಯಲ್ಲೇ ಟ್ರಂಪ್ ಅಧಿಕಾರ ಹಿಡಿದುದೇ ಬಿಕ್ಕಟ್ಟಿನ ಮೂಲ ಕಾರಣವಲ್ಲ. ಬಿಕ್ಕಟ್ಟಿನ ಪ್ರವರವನ್ನು ಸ್ವತಃ ಅದುವೇ ಮಾಡಿಕೊಳ್ಳುತ್ತದೆ ಮತ್ತು ಅದರ ಬಹಳ ಹತ್ತಿರದ ವಿವರಣೆಯು ಬಂಡವಾಳಶಾಹಿಯು ಪ್ರಸ್ತುತ ಎದುರಿಸುತ್ತಿರುವ ಒಂದು ಅಭೂತಪೂರ್ವ ಬಿಕ್ಕಟ್ಟಿನಲ್ಲಿಯೇ ಅಂತರ್ಗತವಾಗಿದೆ. ಭಯ

ಇಲ್ಲಿ ಜೆಎನ್‌ಯು- ಅಲ್ಲಿ ಹಾರ್ವರ್ಡ್

ಹಾರ್ವರ್ಡ್: ನನಗೇನಾಗುತ್ತಿದೆ

ಎಂದು ನಿನಗೆ ಹೇಳುತ್ತೇನೆ

“ನನಗೆ ಗೊತ್ತು”

ಹಾರ್ವರ್ಡ್: ನಿನಗೆ ಹೇಗೆ ಗೊತ್ತು?

“ನಾನು ಜೆಎನ್‌ಯು”

ವ್ಯಂಗ್ಯಚಿತ್ರ:

ಅಲೋಕ್ ನಿರಂತರ್, ಸಕಾಳ್

 

ಈ ಬಿಕ್ಕಟ್ಟಿನ ಒಂದು ವಿಶಿಷ್ಟ ಲಕ್ಷಣವೆಂದರೆ, ಅದನ್ನು ಪರಿಹರಿಸಲು ವ್ಯವಸ್ಥೆಯೊಳಗೇ ಮಾಡುವ ಎಲ್ಲಾ ಪ್ರಯತ್ನಗಳೂ ಅದನ್ನು ಉಲ್ಬಣಗೊಳಿಸುವಲ್ಲಿ ಮಾತ್ರ ಯಶಸ್ವಿಯಾಗಿವೆ ಎಂಬುದು. ಟ್ರಂಪ್ ಅವರು ಕೈಗೊಂಡ ಕ್ರಮಗಳು ಈ ಅಂಶವನ್ನು ಎಷ್ಟರ ಮಟ್ಟಿಗೆ ಸಮರ್ಥಿಸುತ್ತವೆ ಎಂದರೆ, ಬಿಕ್ಕಟ್ಟನ್ನು ನಿರಾಕರಿಸುವವರು ಅದನ್ನು ಉಲ್ಬಣಗೊಳಿಸುವಲ್ಲಿ ಈ ಕ್ರಮಗಳು ವಹಿಸಿದ ಪಾತ್ರ ಮತ್ತು ಅವು ಸೃಷ್ಟಿಸಿದ ವಿಕೃತ ಪರಿಣಾಮವನ್ನು ಮಾತ್ರವೇ ನೋಡುತ್ತಾರೆ ಅಥವಾ ಅವು ಬಿಕ್ಕಟ್ಟನ್ನು ಸೃಷ್ಟಿಸಿವೆ ಎಂದು ಗ್ರಹಿಸಿ ಟ್ರಂಪ್ ಅವರನ್ನು “ತಲೆಕೆಟ್ಟವನು” ಎಂದು ಚಿತ್ರಿಸುತ್ತಾರೆ.

ಆದರೆ, ಈ “ತಲೆಕೆಟ್ಟ” ವ್ಯಕ್ತಿಯು ಕೈಗೊಂಡ ಕ್ರಮಗಳ ತಳದಲ್ಲಿ ದಾಟಲಾಗದ ಒಂದು ಬಿಕ್ಕಟ್ಟಿದೆ ಎಂಬುದನ್ನು ಅವರು ಗ್ರಹಿಸುವುದಿಲ್ಲ. ಈ ರೀತಿಯಲ್ಲಿ, ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸುಂಕ ವಿಧಿಸುವ ಮೂಲಕ “ತಯಾರಿಕೆಯನ್ನು ಅಮೆರಿಕಕ್ಕೆ ಮರಳಿ ತರುವ” ಟ್ರಂಪ್ ಅವರ ಪ್ರಯತ್ನವು ಎಲ್ಲೆಡೆಯೂ ಒಂದು ಭಾರಿ ಅನಿಶ್ಚಿತತೆಯನ್ನು ಮತ್ತು ಅಮೆರಿಕದಲ್ಲೇ ಆರ್ಥಿಕ ಹಿಂಜರಿತದ ಪರಿಸ್ಥಿತಿಯನ್ನು ನಿರ್ಮಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ ಮತ್ತು ಸುಂಕವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವಲ್ಲಿ ನಿಂತಿದೆ. ಅದೇ ರೀತಿಯಲ್ಲಿ, “ಅಪ-ಡಾಲರೀಕರಣ”ವನ್ನು ಉತ್ತೇಜಿಸುವ ದೇಶಗಳ ವಿರುದ್ಧ ಪ್ರತೀಕಾರದ ಬೆದರಿಕೆ ಹಾಕುವ ಮೂಲಕ ಡಾಲರ್ ಮೌಲ್ಯವನ್ನು ವೃದ್ಧಿಸುವಲ್ಲಿ ಟ್ರಂಪ್ ಮಾಡಿದ ಪ್ರಯತ್ನವು, ಡಾಲರ್‌ಅನ್ನು ಚಲಾವಣೆಯ ಮಾಧ್ಯಮವಾಗಿ ಕಡೆಗಣೆಸುವ ಸ್ಥಳೀಯ ವ್ಯಾಪಾರ ಏರ್ಪಾಟುಗಳನ್ನು ಉತ್ತೇಜಿಸಿದೆ ಮತ್ತು ಆ ಮೂಲಕ ದೀರ್ಘಾವಧಿಯಲ್ಲಿ ಡಾಲರ್‌ನ ಸ್ಥಾನವನ್ನು ದುರ್ಬಲಗೊಳಿಸುವಲ್ಲಿ ಮಾತ್ರ ಯಶಸ್ವಿಯಾಗಿದೆ.

ಅಮೆರಿಕನ್ ವಿವಿಗಳಿಗೆ ಬೌಧ್ಧಿಕ ನಷ್ಟ

ಅದೇ ರೀತಿಯಲ್ಲಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ಆಡಳಿತವು ಅನುಮತಿಸುವುದನ್ನು ಮಾತ್ರ ಕಲಿಸುವ ತರಗತಿಗಳಿಗೆ ಬಾಯಿ ಮುಚ್ಚಿಕೊಂಡು ಹಾಜರಾಗುವಂತೆ ಒತ್ತಾಯಿಸುವ ಪ್ರಯತ್ನ ಮತ್ತು ಮಾನವಕೋಟಿಯು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಯಾವುದೇ ಅಭಿಪ್ರಾಯಗಳನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸುವುದನ್ನು ತಪ್ಪಿಸಲು ಟ್ರಂಪ್ ಮಾಡುತ್ತಿರುವ ಪ್ರಯತ್ನವು ಅಮೆರಿಕದ ಶೈಕ್ಷಣಿಕ ವ್ಯವಸ್ಥೆಗೆ ಒಂದು ತಿರುಗುಬಾಣವಾಗಿ ಪರಿಣಮಿಸುತ್ತದೆ. ಅಮೆರಿಕದಲ್ಲಿ ಪ್ರಸ್ತುತ ಸುಮಾರು 1.1 ಮಿಲಿಯನ್ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ಶುಲ್ಕ ಪಾವತಿಸುವ ವಿದ್ಯಾರ್ಥಿಗಳಾಗಿರುವುದರಿಂದ ಅವರು ತೆರುವ ಶುಲ್ಕಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಾರ್ಯಸಾಧ್ಯವಾಗಿ ಮಾಡಿದೆ.

ಆದರೆ, ಟ್ರಂಪ್ ಕೈಗೊಂಡಿರುವ ಕ್ರಮಗಳಿಂದಾಗಿ ಬೇರೆ ಬೇರೆ ದೇಶಗಳಿಂದ ಬರುತ್ತಿರುವ ಇಂಥಹ ವಿದ್ಯಾರ್ಥಿಗಳು ಇನ್ನು ಮುಂದೆ ಅಮೆರಿಕಕ್ಕೆ ಬರುವುದನ್ನು ನಿಲ್ಲಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಕೊಲಂಬಿಯಾ ಮತ್ತು ಹಾರ್ವರ್ಡ್‍ ನಂತಹ ವಿಶ್ವವಿದ್ಯಾಲಯಗಳು “ಯೆಹೂದ್ಯ- ವಿರೋಧಿ” ಶಕ್ತಿಗಳನ್ನು ಪೋಷಿಸಿದವು ಎಂದು ಆರೋಪಿಸಿ ಅವುಗಳಿಗೆ ಶಿಕ್ಷೆಯಾಗಿ ಆಡಳಿತವು ಒದಗಿಸುತ್ತಿದ್ದ ನಿಧಿಯನ್ನು ನಿಲ್ಲಿಸಿದ್ದಷ್ಟೇ ಅಲ್ಲ, ಹಲವಾರು ವಿಶ್ವವಿದ್ಯಾನಿಲಯಗಳಿಗೆ ಒದಗುತ್ತಿರುವ ಫೆಡರಲ್ ನಿಧಿಯನ್ನು ಕಡಿತ ಮಾಡುತ್ತಿರುವುದರಿಂದಾಗಿ ಮತ್ತು ಹೊರ ದೇಶಗಳ ವಿದ್ಯಾರ್ಥಿಗಳು ಅಮೆರಿಕಕ್ಕೆ ಬಾರದ ಕಾರಣದಿಂದಾಗಿ ಉಂಟಾಗುವ ಆದಾಯದ ನಷ್ಟವು ಅಮೇರಿಕದ ಹಲವಾರು ವಿಶ್ವವಿದ್ಯಾಲಯಗಳನ್ನು ಆರ್ಥಿಕವಾಗಿ ಸೊರಗಿಸುತ್ತದೆ. ಮತ್ತು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇಲ್ಲದಿರುವುದು ಮತ್ತು ಅದರೊಂದಿಗೇ ಬರುವ ಆಳುವ ವರ್ಗಗಳ ಯೋಚನೆಗಳನ್ನು ಒಪ್ಪಿಕೊಳ್ಳುವ ಮನೋಭಾವ ಅಮೇರಿಕದ ವಿಶ್ವವಿದ್ಯಾಲಯಗಳಲ್ಲಿ ಒಂದು ದೊಡ್ಡ ಬೌದ್ಧಿಕ ನಷ್ಟಕ್ಕೆ ಕಾರಣವಾಗುತ್ತದೆ.

ಈ ಸನ್ನಿವೇಶವು ದಕ್ಷಿಣದ ದೇಶಗಳಿಂದ ಅಮೆರಿಕದತ್ತ ಹರಿಯುತ್ತಿರುವ “ಪ್ರತಿಭಾ ಪಲಾಯನ”ವನ್ನು ಕೊನೆಗೊಳಿಸಲು ಮತ್ತು ತಮ್ಮ ಅತ್ಯುತ್ತಮ ಪ್ರತಿಭೆಗಳನ್ನು ಉಳಿಸಿಕೊಂಡು ತಮ್ಮದೇ ಆದ ಶಿಕ್ಷಣ ವ್ಯವಸ್ಥೆಯನ್ನು ಹೊಸದಾಗಿ ರೂಪಿಸಿಕೊಳ್ಳುವ ಅವಕಾಶವನ್ನು ದಕ್ಷಿಣದ ದೇಶಗಳಿಗೆ ಒದಗಿಸಿದೆ. ಮೋದಿ ಸರ್ಕಾರವು ಈ ಕಾರ್ಯವನ್ನು ಕೈಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗದು. ಆದರೆ, ಮೋದಿಯನ್ನು ಬದಲಿಸುವ ಯಾವುದೇ ಪ್ರಜಾಸತ್ತಾತ್ಮಕ ಪರ್ಯಾಯವು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಜರ್ಮನಿಯಲ್ಲಿ ನಾಜಿಗಳು ಅಧಿಕಾರಕ್ಕೆ ಬಂದಾಗ, ಆ ದೇಶದಿಂದ ವಿದ್ವಜ್ಜನರು, ವಿಶೇಷವಾಗಿ ಯಹೂದಿ ವಿದ್ವಜ್ಜನರು ವಲಸೆ ಹೋಗುತ್ತಾರೆ ಎಂಬುದನ್ನು ಅರಿತಿದ್ದ ರವೀಂದ್ರನಾಥ ಟ್ಯಾಗೋರ್, ಅವರಲ್ಲಿ ಕೆಲವರನ್ನು ವಿಶ್ವ ಭಾರತಿಗೆ ಆಕರ್ಷಿಸಲು ಯೋಜನೆಗಳನ್ನು ರೂಪಿಸಿದ್ದರು. ನಮ್ಮ ದೇಶದ ಪ್ರಜಾಪ್ರಭುತ್ವ ಶಕ್ತಿಗಳು ಇಂದು ಬಂಡವಾಳಶಾಹಿ ಬಿಕ್ಕಟ್ಟು ಒದಗಿಸುವ ಅವಕಾಶಗಳ ಬಗ್ಗೆ ಇದೇ ರೀತಿಯ ಅರಿವನ್ನು ತೋರಿಸಬೇಕು.

ಇದನ್ನೂ ನೋಡಿ: ಮೇ ದಿನದ ವಿಶೇಷ | ಕನಿಷ್ಠ ವೇತನಕ್ಕೆ ಯಾಕಿಷ್ಟು ವಿಳಂಬ – ಮೀನಾಕ್ಷಿ ಸುಂದರಂ Janashakthi Media

Donate Janashakthi Media

Leave a Reply

Your email address will not be published. Required fields are marked *