- ಬರಾಕ್ ಒಬಾಮ ಅಧ್ಯಕ್ಷೀಯ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬಿಡನ್
ವಾಷಿಂಗ್ಟನ್ : ಕೊರೋನಾ ವೈರಸ್ ಹೆಚ್ಚುತ್ತಿರುವ ಮಧ್ಯೆಯೇ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿದೆ. ಮತದಾನ ಪೂರ್ಣಗೊಂಡ ಬೆನ್ನಲ್ಲೇ ಮತ ಎಣಿಕೆ ಪ್ರಾರಂಭವಾಗಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ 215 ಕಡೆಗಳಲ್ಲಿ ಗೆಲುವು ಸಾಧಿಸಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 171 ಕಡೆಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಇಂಡಿಯಾನಾದಲ್ಲಿ ಗೆಲುವು ಸಾಧಿಸಿದ್ದು, ಫ್ಲೋರಿಡಾದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಉತ್ತರ ಕ್ಯಾರೋಲಿನಾ ಸೇರಿ ಹಲವು ಕಡೆಗಳಲ್ಲಿ ಟ್ರಂಪ್ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ.
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, ಸುಮಾರು 23.9 ಕೋಟಿ ಅರ್ಹ ಮತದಾರರ ಪೈಕಿ ಮೂರನೇ ಒಂದರಷ್ಟು ಮಂದಿ ಮುಂಚಿತ ಮತದಾನದ ಮೊರೆ ಹೋಗಿದ್ದಾರೆ. ಸುಮಾರು 10 ಕೋಟಿಯಷ್ಟು ಜನರು ಮುಂಚಿತ ಮತದಾನದ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಬರಾಕ್ ಒಬಾಮ ಅವರ ಆಡಳಿತದ ವೇಳೆ ಜೋ ಬಿಡೆನ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಮೆರಿಕದ ಜನರು ಜೋ ಬಿಡೆನ್ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ ಎನ್ನಲಾಗಿದೆ. ಈಗಾಗಲೇ 205 ಕ್ಷೇತ್ರದಲ್ಲಿ ಅವರು ಮುನ್ನಡೆ ಸಾಧಿಸಿರುವುದರಿಂದ ಮ್ಯಾಜಿಕ್ ಸಂಖ್ಯೆ ಪಡೆಯಲು ಇನ್ನು ಕೆಲವೇ ಸ್ಥಾನಗಳ ಅಗತ್ಯತೆ ಇದೆ.
ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಮತ ಎಣಿಕೆ ಆರಂಭವಾಗಿದೆ. ಹೀಗಾಗಿ ಬುಧವಾರ ಸಂಜೆ ವೇಳೆಗೆ ಫಲಿತಾಂಶ ಸ್ಪಷ್ಟವಾಗಿ ಗೋಚರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.