ಹೈದರಾಬಾದ್: ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಪ್ರಸವ ವೇದನೆಯಿಂದ ಬಳಲುತ್ತಿದ್ದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು, ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬಾರದೆ ರಸ್ತೆ ಬದಿಯಲ್ಲಿಯೇ ಮಗುವಿಗೆ ಜನ್ಮನೀಡಿದ ಘಟನೆ ವರದಿಯಾಗಿದೆ.
ಡೀಸೆಲ್ ಖಾಲಿಯಾಗಿದ್ದರಿಂದ ಆಂಬುಲೆನ್ಸ್ ನಿಗದಿತ ಸ್ಥಳಕ್ಕೆ ತಲುಪಿರಲಿಲ್ಲ ಎನ್ನಲಾಗಿದೆ. ಪ್ರಸವ ವೇದನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕುಗ್ರಾಮವೊಂದರ ರಸ್ತೆ ಬದಿಯಲ್ಲಿಯೇ ಮಗುವಿಗೆ ಜನ್ಮನೀಡಿದ ಮನಕಲಕುವ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಗುರುವಾರ ವರದಿಯಾಗಿದೆ. ಹೆರಿಗೆ ನೋವಿಗೆ ಒಳಗಾಗಿದ್ದ ಮಹಿಳೆಯನ್ನು ಹೊತ್ತುಕೊಂಡು, ತೊರೆಯೊಂದನ್ನು ದಾಟಿಸಲಾಗಿತ್ತು. ಆದರೆ ಇನ್ನೊಂದು ತೀರಕ್ಕೆ ಬಂದು ಆಕೆಯನ್ನು ಕರೆದೊಯ್ಯಬೇಕಿದ್ದ ಆಂಬುಲೆನ್ಸ್‌ನಲ್ಲಿ ಡೀಸೆಲ್ ಖಾಲಿಯಾಗಿದ್ದರಿಂದ ಪರದಾಟ ಮತ್ತಷ್ಟು ಹೆಚ್ಚಾಗಿತ್ತು.
ಇದನ್ನೂ ಓದಿ:ಮಂಗಳೂರು: ಹೆರಿಗೆಗೆಂದು ತೆರಳಿದ ಯುವತಿ ಮೃತ; ಎ.ಜೆ. ಆಸ್ಪತ್ರೆ ನಿರ್ಲಕ್ಷ್ಯ ಆರೋಪ
ಪೆಂಬಿ ಮಂಡಲದ ತುಳಸಿಪೇಟೆ ಎಂಬ ಕುಗ್ರಾಮದ ನಿವಾಸಿಯಾಗಿರುವ ಬುಡಕಟ್ಟು ಸಮುದಾಯ ಗಂಗಾಮಣಿ ಅವರಲ್ಲಿ ಹೆರಿಗೆ ಬೇನೆ ಶುರುವಾಗಿತ್ತು. ಆದರೆ ರಸ್ತೆ ಬದಿಯಲ್ಲಿ ನಾಲ್ಕು ಗಂಟೆ ನೋವು ತಿನ್ನುತ್ತಾ ನರಳಿದ ಆಕೆ, ಅಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ್ದಾರೆ.
ಆಕೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಾಗ ಆಂಬುಲೆನ್ಸ್‌ಗೆ ಕರೆ ಮಾಡಿದ್ದೆವು. ಆದರೆ ರಸ್ತೆ ಸಂಪರ್ಕ ಇಲ್ಲದ ಕಾರಣ ಗ್ರಾಮದವರೆಗೂ ಆಂಬುಲೆನ್ಸ್ ಬರಲು ಸಾಧ್ಯವಾಗುತ್ತಿರಲಿಲ್ಲ. ಗ್ರಾಮಸ್ಥರ ಸಹಾಯದಿಂದ ಆಕೆಯನ್ನು ದೋತಿ ಹಳ್ಳವನ್ನು ದಾಟಿಸಲಾಗಿತ್ತು. ಆದರೆ ಆ ಬದಿಯ ರಸ್ತೆಗೂ ಆಂಬುಲೆನ್ಸ್ ಬರಲಿಲ್ಲ. ಅದರಲ್ಲಿ ಡೀಸೆಲ್ ಖಾಲಿಯಾಗಿದೆ ಎನ್ನುವುದು ಗೊತ್ತಾಯಿತು ಎಂದು ಗಂಗಾಮಣಿಯ ಗಂಡ ತಿಳಿಸಿದ್ದಾರೆ.”ಡೀಸೆಲ್ ತುಂಬಿಸಲು ನಾವು ಗೂಗಲ್ ಪೇ ಮೂಲಕ ಅವರಿಗೆ 500 ರೂ ಕಳುಹಿಸಿದ್ದೆವು. ಆದರೂ ಆಂಬುಲೆನ್ಸ್ ಬರಲಿಲ್ಲ. ಮಗು ರಸ್ತೆಯಲ್ಲಿಯೇ ಹುಟ್ಟಿತು” ಎಂದು ಹೇಳಿದ್ದಾರೆ.
ಮಗು ಜನಿಸಿದ ಬಳಿಕ 108 ಆಂಬುಲೆನ್ಸ್ ಅಲ್ಲಿಗೆ ಆಗಮಿಸಿದೆ. ಅದರಲ್ಲಿದ್ದ ಸಿಬ್ಬಂದಿ ಹೊಕ್ಕಳು ಬಳ್ಳಿ ಕತ್ತರಿಸಿ, ತಾಯಿ ಮತ್ತು ನವಜಾತ ಶಿಶುವನ್ನು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಮಗು ಹಾಗೂ ಅಮ್ಮ ಇಬ್ಬರೂ ಆರೋಗ್ಯವಂತರಾಗಿ ಇದ್ದಾರೆ ಎಂದು ವರದಿಯಾಗಿದೆ.
ವರದಿ ನಿರಾಕರಿಸಿದ ಜಿಲ್ಲಾಧಿಕಾರಿ:
ಸೆಪ್ಟೆಂಬರ್ 22ರಂದು ಮಗು ಜನಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸುಮಾರು ಒಂದು ತಿಂಗಳು ಮುಂಚೆಯೇ ಡೆಲಿವರಿ ಆಗಿದೆ ಎಂದು ನಿರ್ಮಲ್ ಜಿಲ್ಲಾಧಿಕಾರಿ ವರುಣ್ ರೆಡ್ಡಿ ತಿಳಿಸಿದ್ದಾರೆ.
“ಸಾಮಾನ್ಯವಾಗಿ ದೂರದ ಹಳ್ಳಿಗಳಿಗೆ ಸಂಪರ್ಕ ಸಾಧಿಸುವುದು ಸುಲಭವಲ್ಲ. ಹೀಗಾಗಿ ಪ್ರಸವ ದಿನಾಂಕಕ್ಕೂ ಕೆಲವು ದಿನ ಮುನ್ನವೇ ನಾವು ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆತರುತ್ತೇವೆ. ಆದರೆ ಈ ಪ್ರಕರಣದಲ್ಲಿ ನಿರೀಕ್ಷಿತ ದಿನಾಂಕಕ್ಕಿಂತ ನಾಲ್ಕು ವಾರಗಳ ಮುಂಚೆಯೇ ಹೆರಿಗೆ ನೋವು ಶುರುವಾಗಿದೆ” ಎಂದು ಅವರು ಹೇಳಿದ್ದಾರೆ.
ಡೀಸೆಲ್ ಕೊರತೆಯಿಂದ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಿಲ್ಲ ಎಂಬ ವರದಿಗಳನ್ನು ಜಿಲ್ಲಾಧಿಕಾರಿ ರೆಡ್ಡಿ ಅಲ್ಲಗಳೆದಿದ್ದಾರೆ. “ಆಂಬುಲೆನ್ಸ್ ಸ್ಥಳಕ್ಕೆ ತೆರಳಿತ್ತು. ಆದರೆ ಆಕೆಗೆ ಆಗಲೇ ಹೆರಿಗೆ ನೋವು ಶುರುವಾಗಿದ್ದರಿಂದ ಆಕೆಯನ್ನು ಕರೆದೊಯ್ಯಲಿಲ್ಲ. ಅಲ್ಲಿಯೇ ಮಗುವಿನ ಹೆರಿಗೆ ಮಾಡಿಸಲು ಅವರು ನಿರ್ಧರಿಸಿದ್ದರು. ಈಗ ಮಹಿಳೆ ಮತ್ತು ಮಗು ಇಬ್ಬರೂ ಖಾನಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದು, ಆರೋಗ್ಯದಿಂದ ಇದ್ದಾರೆ” ಎಂದು ವಿವರಿಸಿದ್ದಾರೆ.
ಕಳೆದ ವರ್ಷ ಭಾರಿ ಮಳೆಯಿಂದ ಪ್ರವಾಹ ಉಂಟಾಗಿತ್ತು. ಆಗ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ತುಳಸಿಪೇಟೆ ಗ್ರಾಮಕ್ಕೆ ಯಾವುದೇ ರಸ್ತೆ ಸಂಪರ್ಕವಿಲ್ಲ. ಹೊಸ ಸೇತುವೆ ನಿರ್ಮಿಸಲು ನಾವು ಟೆಂಡರ್ ಆಹ್ವಾನಿಸಿದ್ದೇವೆ. ಆದರೆ ಯಾರೊಬ್ಬರೂ ಇದುವರೆಗೂ ಸ್ಪಂದಿಸಿಲ್ಲ ಎಂದು ಅವರು ಹೇಳಿದ್ದಾರೆ.