ಬೇಲೂರು: ಸರಿಯಾದ ಸಮಯಕ್ಕೆ ಆರೋಗ್ಯ ಸೇವೆ ದೊರೆಯದೆ ಭೂಮಿಗೆ ಬರುವ ಮೊದಲೇ ಶಿಶುವೊಂದು ಕಣ್ಮುಚ್ಚಿರುವ ಅಮಾನವೀಯ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ. ಬೇಲೂರು ಪಟ್ಟಣದ ಮೂರು ಕಿಮೀ ದೂರದಲ್ಲಿರುವ ಬಡಾವಣೆಯ ನಿವಾಸಿ ಆಶಾ ಮಗುವನ್ನು ಕಳೆದುಕೊಂಡ ತಾಯಿ.
ವೈದ್ಯರು ಆಶಾಗೆ ಆಗಸ್ಟ್15 ಕ್ಕೆ ಡೆಲಿವರಿ ಡೇಟ್ ಕೊಟ್ಟಿದ್ದರು. ಆದರೆ ಮಂಗಳವಾರ ರಾತ್ರಿ ಗರ್ಬಿಣಿ ಮಹಿಳೆ ಆಶಾಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಶಾ ಪತಿ ವಾದಿರಾಜ್ ಹಾಸನಕ್ಕೆ ಹೋಗಿದ್ದು, ಆಶಾ ಸಹೋದರ ಕೂಡ ಹೊರಗೆ ಹೋಗಿದ್ದರು. ಹೆರಿಗೆ ನೋವು ಕಾಣಿಸಿಕೊಳ್ಳುತ್ತಲೇ 108, ನಗುಮಗು ಅಂಬ್ಯಲೆನ್ಸ್‌ಗಳಿಗೆ ಆಶಾ ಪೋಷಕರು ಫೋನ್ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ಸೇವೆ ಸಿಬ್ಬಂದಿ ಕರೆಯನ್ನು ಸ್ವೀಕರಿಸಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ತುಮಕೂರು ವಿ.ವಿ:ಕಾಡುಗೊಲ್ಲ ಸಮುದಾಯದ ಮಹಿಳೆ ಎಂಎಸ್ಸಿ ಗಣಿತ ವಿಭಾಗದಲ್ಲಿ ಮೊದಲ ಶ್ರೇಣಿ
ಇದರಿಂದ ಇನ್ನಷ್ಟು ಆತಂಕಿತರಾದ ಆಶಾ ಪೋಷಕರು ಅಂಬ್ಯಲೆನ್ಸ್‌ಗಾಗಿ ಹಾಸನಕ್ಕೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಮನೆಗೆ ಬಂದ ಆಶಾ ಸಹೋದರ ಹಾಸನದಿಂದ ಅಂಬ್ಯಲೆನ್ಸ್ ಬರುವುದನ್ನು ಕಾಯದೆ ಖಾಸಗಿ ವಾಹನದಲ್ಲಿ ಕರೆ ತಂದು ಆಶಾಳನ್ನು ಬೇಲೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಮಗು ಹೊಟ್ಟೆಯೊಳಗೆ ಸಾವಿಗೀಡಾಗಿದೆ.
ಸರಿಯಾದ ಸಮಯಕ್ಕೆ ತುರ್ತುಸೇವಾ ಸಿಬ್ಬಂದಿ ಕರೆ ಸ್ವೀಕರಿಸಿ ಸಕಾಲದಲ್ಲಿ ಆಗಮಿಸಿ ಆಶಾರನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಮಗು ಜೀವಂತವಾಗಿ ಜನಿಸುತ್ತಿತ್ತು. ಮಗುವಿನ ಸಾವಿಗೆ ಅಂಬ್ಯಲೆನ್ಸ್ ಚಾಲಕರು ಹಾಗೂ ಬೇಲೂರು ಆಸ್ಪತ್ರೆಯ ಅಂಬ್ಯಲೆನ್ಸ್ ಚಾಲಕ ಬೇಜವಾಬ್ದಾರಿಯೇ ಕಾರಣ ಎಂದು ಆಶಾ ಕುಟುಂಬ ಸದಸ್ಯರು ಆರೋಪಿಸಿದ್ದು, ಮಗುವಿನ ಸಾವಿಗೆ ಕಾರಣರಾದ ಸಿಬ್ಬಂದಿ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.