ಅಂಬೇಡ್ಕರ್ ಭಾವಚಿತ್ರಕ್ಕೆ ನ್ಯಾಯಾಧೀಶರಿಂದ ಅಪಮಾನ: ಸಿಪಿಐಎಂ ಖಂಡನೆ

ರಾಯಚೂರು ಜಿಲ್ಲೆ ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಇಡಲಾಗಿತ್ತು. ಈ ಸಂದರ್ಭದಲ್ಲಿ ಅಂಬೇಡ್ಕರ್‌ ಭಾವಚಿತ್ರವನ್ನು ತೆಗೆಸಿ ಧ್ವಜಾರೋಹಣ ಮಾಡುವೆನೆಂದು ಸಂವಿಧಾನ ಶಿಲ್ಪಿಗೆ ಮತ್ತು ಆ ಮೂಲಕ ಭಾರತದ ಸಂವಿಧಾನಕ್ಕೆ ಅಪಮಾನ ಎಸಗಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ಗಣರಾಜ್ಯೋತ್ಸವದ ದಿನವೇ ಸಂವಿಧಾನ ಶಿಲ್ಪಿಗೆ, ಅದು ಕೂಡಾ ನ್ಯಾಯಾಧೀಶರೊಬ್ಬರಿಂದ ಆಗಿರುವ ಅಪಮಾನವು ಅಕ್ಷಮ್ಯವಾಗಿದ್ದು ಈ ಕುರಿತು ಅಗತ್ಯ ಕ್ರಮವಹಿಸುವಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಒತ್ತಾಯಿಸಿದ್ದಾರೆ.

ನ್ಯಾಯಾಲಯಗಳಲ್ಲಿ ಇಂತಹ ಜಾತಿವಾದಿ, ಕೋಮುವಾದಿ ಮನಸ್ಸುಗಳು ತುಂಬಾ ಅಪಾಯಕರ ಎಂದು ಸಿಪಿಐ(ಎಂ) ಹೇಳಿದೆ. ರಾಜ್ಯದಾದ್ಯಂತ ಈ ಸಂವಿಧಾನ ವಿರೋಧಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲು ಸಿಪಿಐ(ಎಂ) ಪಕ್ಷವು ಕರೆ ನೀಡಿತ್ತು.

ನ್ಯಾಯಾಧೀಶ ಮಲ್ಲಿಕಾರ್ಜುನಗೌಡರನ್ನು ಸೇವೆಯಿಂದ ವಜಾಗೊಳಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಿಂಧನೂರು ತಾಲ್ಲೂಕು ಸಿಪಿಐ(ಎಂ) ಪಕ್ಷದಿಂದ ಉಚ್ಚನ್ಯಾಯಾಲಯದ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದಾರೆ.

ಕಲಬುರಗಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು, ಈ ಸಂದರ್ಭದಲ್ಲಿ  ಅಂಬೇಡ್ಕರ್ ಭಾವಚಿತ್ರ ತೆಗೆಸಿ ಅಪಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನಿಸಿ ಉದ್ಧಟತನ ತೋರಿದ ನ್ಯಾಯಾಧೀಶರ ಮೇಲೆ ಕ್ರಮ ಜರುಗಿಸಲು ಆಗ್ರಹಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಬಾಗೇಪಲ್ಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

Donate Janashakthi Media

Leave a Reply

Your email address will not be published. Required fields are marked *