ಮಾಜಿ ಮಖ್ಯಮಂತ್ರಿ ಅಮರೀಂದರ್ ಸಿಂಗ್ ಅವರಿಂದ ಶೀಘ್ರದಲ್ಲೇ ಹೊಸ ಪಕ್ಷ ಸ್ಥಾಪನೆ

ನವದೆಹಲಿ: ಪಂಜಾಬ್‌ನ ನಿಕಟಪೂರ್ವ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಅವರು ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶೀಘ್ರದಲ್ಲೇ ತಮ್ಮದೇ ಆದ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಬಹಿರಂಗಪಡಿಸಿದ್ದಾರೆ. ಪಂಜಾಬ್​ನ ಉತ್ತಮ ಭವಿಷ್ಯಕ್ಕಾಗಿ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನನ್ನ ಹೊಸ ರಾಜಕೀಯ ಪಕ್ಷವನ್ನು ಶೀಘ್ರ ಘೋಷಿಸುತ್ತೇನೆ. ಪಂಜಾಬ್ ರಾಜ್ಯ ಮತ್ತು ಅದರ ಜನರ ಹಿತಾಸಕ್ತಿಗಳನ್ನು ಕಾಪಾಡುತ್ತೇನೆ. ಕಳೆದ ಒಂದು ವರ್ಷಗಳಿಂದ ಉಳಿವಿಗಾಗಿ ಹೋರಾಡುತ್ತಿರುವ ರೈತರ ಪರವಾಗಿ ನಿಲ್ಲುತ್ತೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

ಇದನ್ನು ಓದಿ: ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ!

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಉಂಟಾಗಿ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡ ಅಮರೀಂದರ್‌ ಸಿಂಗ್‌ ನಂತರದಲ್ಲಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿ ಆಗಿದ್ದು, ಅವರು ಬಿಜೆಪಿಗೆ ಸೇರಲಿದ್ದಾರೆಯೇ ಎಂಬ ಪ್ರಶ್ನೆಯೂ ಆ ಸಂದರ್ಭದಲ್ಲಿ ಹರಿದಾಡಿತ್ತು.

ಅಮರೀಂದರ್‌ ಸಿಂಗ್‌ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ ಸರಣಿ ಟ್ವೀಟ್‌ ಮಾಡಿದ್ದು, “ಪಂಜಾಬ್‌ನ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟವು ಈಗಲೂ ಮುಂದುವರಿದಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಆರಂಭಿಸುವ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡುತ್ತೇನೆ” ಎಂದು ಅಮರೀಂದರ್‌ ಹೇಳಿಕೆಯನ್ನು ಟ್ವೀಟ್‌ ಮಾಡಿದ್ದಾರೆ.

“ರೈತರ ಪ್ರತಿಭಟನೆಗಳು ಅಂತ್ಯಗೊಂಡು ರೈತರ ಪರವಾಗಿ ನಿರ್ಧಾರಗಳು ಬಂದರೆ, ಮುಂಬರುವ 2022ರ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು. ಹಾಗೆಯೇ ಅದೇ ರೀತಿಯ ಸಿದ್ಧಾಂತವನ್ನು ಹೊಂದಿರುವ ಅಕಾಳಿದಳದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದೆ ತೀರ್ಮಾನಿಸಲಾಗುತ್ತದೆ. ವಿಶೇಷವಾಗಿ ದಿಂಡಾಸ ಮತ್ತು ಬ್ರಹ್ಮಪುರ ಬಣಗಳೊಂದಿಗೆ” ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿಲಾಗಿದೆ.

ಇದನ್ನು ಓದಿ: ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಅಘಾತ: ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ನವಜೋತ್ ಸಿಂಗ್ ಸಿಧು

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ದೀರ್ಘಕಾಲದ ಆಂದೋಲನವು ಶೀಘ್ರದಲ್ಲೇ ಮುಗಿಯಲಿದೆ ಎಂಬ ಸುಳಿವನ್ನು ನೀಡಿದ್ದಾರೆ.

“ಕಳೆದ ಎರಡು ತಿಂಗಳಲ್ಲಿ ಕಾಂಗ್ರೆಸ್ ನಾಯಕತ್ವದಿಂದ ನಾನು ಮೂರು ಬಾರಿ ಅವಮಾನಕ್ಕೊಳಗಾಗಿದ್ದೇನೆ. ಕಾಂಗ್ರೆಸ್ ನಾಯಕತ್ವ ಎರಡು ಬಾರಿ ಶಾಸಕರನ್ನು ದೆಹಲಿಗೆ ಕರೆಸಿಕೊಂಡಿದೆ ಹಾಗೂ ಬಳಿಕ ಶಾಸಕಾಂಗ ಸಭೆಯನ್ನು ಕರೆದಿದೆ. ಕಾಂಗ್ರೆಸ್ ನಾಯಕತ್ವಕ್ಕೆ ನನ್ನ ಮೇಲೆ ವಿಶ್ವಾಸವಿಲ್ಲ, ಈಗ ಕಾಂಗ್ರೆಸ್ ನಾಯಕತ್ವ ವಿಶ್ವಾಸವಿರುವ ಯಾರನ್ನಾದರೂ ನೇಮಿಸಿಕೊಳ್ಳಲಿ” ಎಂದು ಅಮರೀಂದರ್ ಸಿಂಗ್ ಈ ಹಿಂದೆ ಹೇಳಿಕೆ ನೀಡಿದ್ದರು.

ಇದನ್ನು ಓದಿ: ಪಂಜಾಬ್‌: ನಾಳೆ 15 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

79 ವರ್ಷದ ಕ್ಯಾಪ್ಟನ್ ಅಮರಿಂದರ್ ಸಿಂಗ್‌ ನಾಲ್ಕು ದಶಕಕ್ಕೂ ಹೆಚ್ಚು ಸಮಯದಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಪಂಜಾಬ್‌ನ ಪ್ರಭಾವಿ ರಾಜಕಾರಣಿಯೂ ಹೌದು. ನವಜೋತ್ ಸಿಂಗ್ ಸಿಧು ಹಾಗೂ ಒಂದು ವರ್ಗದ ಶಾಸಕರಿಂದ ತೀವ್ರ ಅವಮಾನಕ್ಕೆ ಒಳಗಾಗಿದ್ದನ್ನು ಅವರು ರಾಜೀನಾಮೆ ಬಳಿಕ ಒಪ್ಪಿಕೊಂಡಿದ್ದರು. ತಮ್ಮಲ್ಲಿ ಇನ್ನೂ ಸಾಕಷ್ಟು ರಾಜಕೀಯ ಚಟುವಟಿಕೆಯ ಶಕ್ತಿ ಉಳಿದಿದೆ. ಅದಕ್ಕೆ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎಂದು ಕೆಲವು ದಿನಗಳ ಹಿಂದೆ ಹೇಳಿದ್ದರು.

ಕ್ಯಾಪ್ಟನ್ ಅಮರೀಂದರ್‌ ಸಿಂಗ್ ಹೊಸ ಪಕ್ಷದ ಘೋಷಣೆಯೊಂದಿಗೆ, ರಾಜಕೀಯ ಪಕ್ಷಗಳ ಪ್ರತಿಕ್ರಿಯೆಗಳು ಬರಲಾರಂಭಿಸಿದೆ. ಅಕಾಲಿದಳದ ನಾಯಕ ಹರ್ಸಿಮ್ರತ್ ಕೌರ್ ಬಾದಲ್ ಕೆಲವು ದಿನಗಳ ನಂತರ ಕ್ಯಾಪ್ಟನ್ ಪಕ್ಷವು ಬಿಜೆಪಿಯ ಬಿ ತಂಡವೆಂದು ಸಾಬೀತುಪಡಿಸುತ್ತದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *