ಬೆಂಗಳೂರು: “ಲಖಿಂಪುರ ಕೇರಿಯಲ್ಲಿ ರೈತರ ಮೇಲೆ ಕಾರು ಹತ್ತಿಸಿದ ಸಚಿವರ ಮಗನೇ ಮೇಲೆ ಯಾವುದೆ ಕ್ರಮಜರುಗಿಸಿಲ್ಲ, ಆ ಸಚಿವರು ರಾಜೀನಾಮೆಯನ್ನು ನೀಡಲಿಲ್ಲ. ಹೀಗೆ ಆಳುವ ಸರ್ಕಾರಗಳು ರೈತರ ಮೇಲೆ ದಾಳಿ ನಡೆಸುತ್ತಿವೆ. ಈ ದಾಳಿಯ ವಿರುದ್ಧ ಪ್ರಬಲ ಹೋರಾಟ ರೂಪಿಸಬೇಕು” ಎಂದು ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜೂ ಕೃಷ್ಣನ್ ಸೋಮವಾರ ಹೇಳಿದರು. ದೆಹಲಿಯ ಐತಿಹಾಸಿಕ ರೈತ ಹೋರಾಟದ ನೆನಪಿನಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಜೆಸಿಟಿಯು ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. “ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸೋಣ, ಪರ್ಯಾಯ ನೀತಿಗಳಿಗಾಗಿ ಹೋರಾಡೋಣ ” ಎಂಬ ಬೃಹದಾಕಾರದ ಬ್ಯಾನರ್ ಪ್ರದರ್ಶಿಸುವ ಮೂಲಕ ನಗರದ ಕೊಂಡಜ್ಜಿ ಬಸ್ಸಪ್ಪ ಭವನದಲ್ಲಿ ಸಮಾವೇಶಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಜೂ ಕೃಷ್ಣನ್, “4 ಲಕ್ಕಕ್ಕೂ ಹೆಚ್ಚು ರೈತರು ಮೋದಿ ಸರ್ಕಾರದ ಅವಧಿಯಲ್ಲಿ ಮೃತರಾಗಿದ್ದಾರೆ. ದೆಹಲಿಯ ರೈತ ವಿರೋಧಿ ನೀತಿಗಳ ಮೂಲಕ ರೈತರ ಬದುಕನ್ನು ನಾಶ ಮಾಡಲಾಗಿದೆ. ರೈತರ ಪರ ನಿಂತ ನ್ಯೂಸ್ ಕ್ಲಿಕ್ ಮಾಧ್ಯಮ ಸಂಸ್ಥೆಯ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಇದು ಸರ್ವಾಧಿಕಾರಿ ಧೋರಣೆಯ ಸಂಕೇತ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದ ಕಾರಣ ರೈತರಿಗೆ ನಷ್ಟ ಉಂಟಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸೌಹಾರ್ದ-ಸಮೃದ್ಧ-ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯ ಸಮಾವೇಶ
“ಭತ್ತ, ಹತ್ತಿ, ತೊಗರಿ, ರಬ್ಬರ್‌ಗೆ ಬೆಂಬಲ ಬೆಲೆ ಸಿಗದೆ ರೈತರಿಗೆ ಕೋಟ್ಯಾಂತರ ರೂ ನಷ್ಟವಾಗುತ್ತಿದೆ. ಪರಿಣಾಮ ರೈತರ ಸಾಲ ಹೆಚ್ಚಾಗಿ ರೈತರು ಸಾಯುವ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡುತ್ತಿದೆ. ದೆಹಲಿ ಹೋರಾಟದ ವೇಳೆ ಲಖಿಂಪುರ ಕೇರಿಯಲ್ಲಿ ರೈತರ ಮೇಲೆ ಕಾರು ಹತ್ತಿಸಿದ ಸಚಿವರ ಮಗನೇ ಮೇಲೆ ಯಾವುದೆ ಕ್ರಮಜರುಗಿಸಿಲ್ಲ. ಆ ಸಚಿವರು ರಾಜೀನಾಮೆಯನ್ನು ನೀಡಲಿಲ್ಲ. ಹೀಗೆ ಆಳುವ ಸರ್ಕಾರಗಳು ರೈತರ ಮೇಲೆ ದಾಳಿ ನಡೆಸುತ್ತಿವೆ. ಈ ದಾಳಿಯ ವಿರುದ್ಧ ಪ್ರಬಲ ಹೋರಾಟ ರೂಪಿಸಬೇಕು” ಎಂದು ವಿಜೂ ಕೃಷ್ಣನ್ ಕರೆ ನೀಡಿದರು.
ಇದನ್ನೂ ಓದಿ:ಲೈಂಗಿಕ ದೌರ್ಜನ್ಯದ ವಿರುದ್ಧ ರಾಜ್ಯ ಮಟ್ಟದ ಸಮಾವೇಶ
ನವೆಂಬರ್ 26,27,28 ರಂದು ಮೂರು ದಿನಗಳ ಕಾಲ ನಡೆಯುವ ಹೋರಾಟದ ಸ್ವರೂಪವನ್ನು ಕರ್ನಾಟಕ ಜನಶಕ್ತಿಯ ನೂರ್ ಶ್ರೀಧರ್ ಮಂಡಿಸಿದರು. ಮೂರು ದಿನಗಳ ಕಾಲ ನಡೆಯುವ ಹೋರಾಟದ ಹಕ್ಕೊತ್ತಾಯ ನಿರ್ಣಯವನ್ನು ಕರ್ನಾಟಕ ಪ್ರಾಂತರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್, ಸಿದ್ದುಗೌಡ ಮೋದಗಿ ಮಂಡಿಸಿದರು. ಮೂರುದಿನಗಳ ಕಾಲ ನಡೆಯುವ ಈ ಹೋರಾಟದಲ್ಲಿ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳಾ-ಯುವಜನ ಸಂಘಟನೆಗಳು, ದಲಿತ ಸಂಘಟನೆಗಳ ನೇತೃತ್ವದಲ್ಲಿ 1 ಲಕ್ಷಕ್ಕೂ ಅಧಿಕ ಜನ ಮೂರು ದಿನಗಳ ಕಾಲ ನಡೆಯುವ ಮಹಾಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾದ ಕರ್ನಾಟಕ ಸಂಚಾಲಕ ಬಡಗಲಪುರ ನಾಗೇಂದ್ರ ಮತ್ತು ಜೆಸಿಟಿಯು ಕರ್ನಾಟಕ ಸಂಚಾಲಕರಾದ ಕೆ.ವಿ ಭಟ್ ಪ್ರಾಸ್ಥಾವಿಕವಾಗಿ ಮಾತನಾಡಿದರು. ದಲಿತ ಹಕ್ಕುಗಳ ನಾಯಕ ಮಾವಳ್ಳಿ ಶಂಕರ್, ರೈತ ನಾಯಕ ಸಿದ್ದನಗೌಡ ಪಾಟೀಲ್, ಯೂಸೂಫ್ ಕನ್ನಿ, ದೇವಿ, ನಿರ್ವಾಣಪ್ಪ ಪ್ರತಿಕ್ರಿಯೆ ನೀಡಿದರು.
ವೇದಿಕೆಯಲ್ಲಿ ಬಿಕೆಯು ಪ್ರಧಾನ ಕಾರ್ಯದರ್ಶಿ ಅವತಾರ್ ಸಿಂಗ್, ಎಐಕೆಎಸ್ ನ ರಾಷ್ಟ್ರೀಯ ನಾಯಕ ಆರ್ ವೆಂಕಯ್ಯ, ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪ, ಚಾಮರಸ ಮಾಲೀಪಾಟೀಲ್, ಸಿಐಟಿಯುನ ಸೈಯ್ಯದ್ ಮುಜೀಬ್, ಸ್ವರ್ಣ ಭಟ್, ರಮ್ಯ ರಾಮಣ್ಣ, ಮಲ್ಲಿಗೆ ಸಿರಿಮನೆ, ಆಶಾ ಸಂಘಟನೆಯ ನಾಗಲಕ್ಷ್ಮಿ, ಅಪ್ಪಣ್ಣ ಸೇರಿದಂತೆ ಅನೇಕರು ಇದ್ದರು. ದೆಹಲಿ
ರೈತ ನಾಯಕ, ಎಚ್.ಆರ್. ನವೀನ್ ಕುಮಾರ್, ರವಿಕಿರಣ್ ಪುಣಚ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಕುಮಾರ ಸಮತಳ ಸ್ವಾಗತಿಸಿ, ಚಂದ್ರಪ್ಪ ಹೊಸ್ಕೇರಾ ವಂದಿಸಿದರು. ವಿವಿಧ ಜಿಲ್ಲೆಗಳಿಂದ ಸಮಾವೇಶಕ್ಕೆ ನೂರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳಾ-ಯುವಜನ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.