ವಾಚ್ ಹುಡುಕುತ್ತಾ ಚರಂಡಿ ವ್ಯವಸ್ಥೆಯ ವಿರಾಟ್ ದರ್ಶನ.. : ALT EFF 2025 ಪರಿಸರ ಚಿತ್ರೋತ್ಸವದಲ್ಲಿ ಒಂದು ದಿನ

-ವಸಂತರಾಜ ಎನ್.ಕೆ

ಇತ್ತೀಚೆಗೆ (ಡಿಸೆಂಬರ್ 6-7) ಬೆಂಗಳೂರಿನಲ್ಲಿ ‘All Living Things Environmental Film Festival (ALT EFF 2025)’ ಎಂಬ ಹೆಸರಿನ  ಚಿತ್ರೋತ್ಸವ ನಡೆಯಿತು.  ಇದು  ಪರಿಸರ ವಿಷಯಕ್ಕೆ ಮೀಸಲಾದ ಚಿತ್ರೋತ್ಸವ. ಪರಿಸರ ಮಾನವರ ಸಂಪನ್ಮೂಲವೆಂದು ತಿಳಿಯಬಾರದು. ಮಾನವ ಈ ಜೀವ ಜಗತ್ತಿನ ಭಾಗ. ಎಲ್ಲ ಜೀವಿಗಳು ಈ ಭೂಮಿಯ ಮೇಲೆ ಪರಸ್ಪರಾವಂಬಿಗಳು, ಕೂಡಿ ಬಾಳಬೇಕು ಎನ್ನುವ ಪರಿಸರದ ಬಗೆಗಿನ ಕಣ್ಣೋಟ ಇರುವ ಚಿತ್ರೋತ್ಸವ ಎಂದು ಹೇಳಲಾಗಿದೆ.  ಈ ಉತ್ಸವದಲ್ಲಿ 39 ದೇಶಗಳ 86 ಫಿಲಂಗಳು ಪ್ರದರ್ಶಿತವಾಗುತ್ತಿವೆ. ದೇಶದಲ್ಲಿ ಸುಮಾರು 40ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ನಡೆಯುವ ಚಿತ್ರೋತ್ಸವವಿದು. ಆಸಕ್ತ ಗುಂಪುಗಳಿಗೆ ‘ಇಂಟರ್ ನೆಟ್ ಮೂಲಕ ಆಯ್ದ ಫಿಲಂಗಳನ್ನು ತೋರಿಸುವ ‘ವಾಚ್ ಪಾರ್ಟಿ’ ಗಳನ್ನು ಮತ್ತು ಎಲ್ಲ ಫಿಲಂಗಳನ್ನು ಇಂಟರ್ ನೆಟ್ ನಲ್ಲಿ ಡಿಸೆಂಬರ್ 14ರ ವರೆಗೆ ತೋರಿಸುವ ಯೋಜನೆಯೂ ಇದೆ. ಬೆಂಗಳೂರಿನ ಚಿತ್ರೋತ್ಸವದಲ್ಲಿ ಒಂದು ದಿನ ಭಾಗಹಿಸಿದ್ದರ ವರದಿ ಇಲ್ಲಿದೆ.

ಪ್ರೇಮಿ/ಭಾವೀ ಪತಿ ಉಡುಗೊರೆ ಕೊಟ್ಟ ವಾಚ್ ಅಕಾಸ್ಮಾತ್ತಾಗಿ ಟಾಯ್ಲೆಟ್ ಫ್ಲಶ್ ಮಾಡುವಾಗ ಬಿದ್ದು ಹೋಗುತ್ತದೆ. ಅದು ಎಲ್ಲಾದರೂ ಸಿಗಬಹುದೆ ಎಂದು ಹುಡುಕಲು ಹೊರಟ ಹುಡುಗಿಗೆ ಬೆಂಗಳೂರಿನ ಚರಂಡಿ (ತ್ಯಾಜ್ಯ ನಿರ್ವಹಣಾ) ವ್ಯವಸ್ಥೆಯ ವಿರಾಟ್ ದರ್ಶನವಾಗುವುದು ‘ಡೌನ್ ದಿ ಡ್ರೈನ್’ (Down the Drain ಚರಂಡಿಯಲ್ಲಿ ಕಳೆದು ಹೊಯಿತು) ನ ಆಸಕ್ತಿಕಾರಕ ಕಥನ.  ಇದು ಒಂದು ಡಾಕ್ಯುಮೆಂಟರಿ ಫಿಲಂ. ಈ ಫಿಲಂ ನ ಟ್ರೈಲರ್ ಇಲ್ಲಿದೆ (https://www.youtube.com/watch?v=anCPdED7Hek)

ಇದು ಕಂಡದ್ದು ಇತ್ತೀಚೆಗೆ (ಡಿಸೆಂಬರ್ 6-7) ಬೆಂಗಳೂರಿನಲ್ಲಿ ನಡೆದ ‘All Living Things Environmental Film Festival (ALT EFF 2025)’ ಎಂಬ (https://www.alteff.in/) ಹೆಸರಿನ  ಚಿತ್ರೋತ್ಸವದಲ್ಲಿ.  ಇದು  ಪರಿಸರ ವಿಷಯಕ್ಕೆ ಮೀಸಲಾದ ಚಿತ್ರೋತ್ಸವ. ಪರಿಸರ ಮಾನವರ ಸಂಪನ್ಮೂಲವೆಂದು ತಿಳಿಯಬಾರದು. ಮಾನವ ಈ ಜೀವ ಜಗತ್ತಿನ ಭಾಗ. ಎಲ್ಲ ಜೀವಿಗಳು ಈ ಭೂಮಿಯ ಮೇಲೆ ಪರಸ್ಪರಾವಂಬಿಗಳು, ಕೂಡಿ ಬಾಳಬೇಕು ಎನ್ನುವ ಪರಿಸರದ ಬಗೆಗಿನ ಕಣ್ಣೋಟ ಇರುವ ಚಿತ್ರೋತ್ಸವ ಎಂದು ಹೇಳಲಾಗಿದೆ.  ಈ ಉತ್ಸವದಲ್ಲಿ 39 ದೇಶಗಳ 86 ಫಿಲಂಗಳು ಪ್ರದರ್ಶಿತವಾಗುತ್ತಿವೆ.  ಚಿತ್ರೋತ್ಸವದ  ಟ್ರೈಲರ್ ಇಲ್ಲಿದೆ ( https://www.youtube.com/watch?v=X_1iVJrRqw8)

ಇದು ಹೆಚ್ಚಿನ ರಾಜ್ಯಗಳಲ್ಲಿ 1ರಿಂದ 4 ದಿನಗಳ ವರೆಗೆ 1ರಿಂದ 4 ಸ್ಥಳಗಳಲ್ಲಿ ನಡೆಯುತ್ತಾ, ಡಿಸೆಂಬರ್ ನಲ್ಲಿ, ಒಟ್ಟು ದೇಶದಲ್ಲಿ ಸುಮಾರು 40ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ನಡೆಯುವ ಚಿತ್ರೋತ್ಸವ. ಕರ್ನಾಟಕದಲ್ಲಿ ಬೆಂಗಳೂರಿನ ಇಂದಿರಾನಗರದ ‘ಬೆಂಗಳೂರು ಇಂಟರ್ ನ್ಯಾಶನಲ್ ಸೆಂಟರ್’ ನಲ್ಲಿ ಅಲ್ಲದೆ ಚೆನ್ನಪಟ್ಟಣದಲ್ಲೂ (ಡಿಸೆಂಬರ್ 13ರಂದು) ನಡೆಯಲಿದೆ. ಚೆನ್ನಪಟ್ಟಣ ಸೇರಿದಂತೆ ಕೆಲವು ಕಡೆ ಕೆಲವು ಚಿತ್ರ ಪ್ರದರ್ಶನಗಳ ಜತೆ ಸ್ಥಳೀಯ ಸಮುದಾಯ ಚಟುವಟಿಕೆಗಳು ಸಹ ನಡೆಯಲಿವೆ. ಹೆಚ್ಚಿನ ಕಡೆ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಚಿತ್ರೋತ್ಸವ ಏರ್ಪಡಿಸಲಾಗಿದೆ. ಆಸಕ್ತ ಗುಂಪುಗಳಿಗೆ ‘ಇಂಟರ್ ನೆಟ್ ಮೂಲಕ ಆಯ್ದ ಫಿಲಂಗಳನ್ನು ತೋರಿಸುವ ‘ವಾಚ್ ಪಾರ್ಟಿ’ ಗಳನ್ನು (https://www.alteff.in/watchparty ) ಯೋಜಿಸಲಾಗಿದೆ. ಎಲ್ಲ ಫಿಲಂಗಳನ್ನು ರೂ 100 ಪ್ರತಿ ಫಿಲಂ ಮತ್ತು ಕಿರು ಫಿಲಂಗಳ ಗುಚ್ಛಗಳಿಗೆ ರೂ 300 ಕ್ಕೆ ಇಂಟರ್ ನೆಟ್ ನಲ್ಲಿ ಡಿಸೆಂಬರ್ 14ರ ವರೆಗೆ ತೋರಿಸುವ ಕಾರ್ಯಕ್ರಮವೂ ಇದೆ. (https://watch.eventive.org/alteff-2025)

ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಅನಾವರಣ

ಮತ್ತೆ ‘ಚರಂಡಿಯಲ್ಲಿ..’ ವಾಚ್ ಹುಡುಕುವ ಕಥನಕ್ಕೆ ಮರಳಿದರೆ, ಆಕೆ ತನ್ನ ವಾಚು ಹುಡುಕುತ್ತಾ ಪೌರ ಕಾರ್ಮಿಕರು, ಅವರ ನಾಯಕರು, ವಕೀಲರು, BBMP, BWSSB ಮತ್ತಿತರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ವಿವಿಧ ಸಂಸ್ಥೆಗಳ ಕಾರ್ಮಿಕರು, ಅಧಿಕಾರಿಗಳು, ವಿಜ್ಞಾನಿಗಳು, ಪರಿಣತರು   ಮುಂತಾದವರ ಜತೆ ಮಾತನಾಡುತ್ತಾ ಬೆಂಗಳೂರಿನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುತ್ತ ಹೋಗುತ್ತಾಳೆ. ಈ ವ್ಯವಸ್ಥೆಯ ಭಾಗಗಳಾದ STP (Sewage Treatment Plant), SBR (Sequencing Batch Reactor), SWD (Storm Water Drain), UGD (Underground Drainage) ಇವುಗಳ ಪಾತ್ರಗಳನ್ನು ತಿಳಿಯುತ್ತಾ ಹೋಗುತ್ತಾಳೆ. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಸರಣಿಯಲ್ಲಿ ಹಿಂದೊಮ್ಮೆ ಹೀಗೆ ಫ್ಲಶ್ ಆದ ಒಂದು ವಾಚ್ ಸಿಕ್ಕಿತ್ತು ಎಂದೂ ಅವಳಿಗೆ ತಿಳಿಯುತ್ತದೆ.

ಜತೆಗೆ ಒಂದು ದಿನದಲ್ಲಿ ಬೆಂಗಳೂರಿನ ಜನ ಸೃಷ್ಟಿಸುವ ತ್ಯಾಜ್ಯಗಳನ್ನು ಟ್ಯಾಂಕರ್ ಗಳಲ್ಲಿ ತುಂಬಿ ಉದ್ದಕ್ಕೂ ನಿಲ್ಲಿಸುತ್ತಾ ಹೋದರೆ ಅದು ಇರಾನಿನ ರಾಜಧಾನಿ ಟೆಹರಾನ್ ಮುಟ್ಟುತ್ತದೆ ಎಂಬ ಶಾಕಿಂಗ್ ಮಾಹಿತಿ ಸಹ ತಿಳಿಯುತ್ತಾಳೆ.  ನಗರದ ತ್ಯಾಜ್ಯ ನಿರ್ವಹಣೆಯ ಅಧ್ವಾನಗಳು, ಸವಾಲುಗಳ ಅಗಾಧತೆ ಬಗ್ಗೆ ಎಚ್ಚರಿಸುತ್ತದೆ., ಹಲವು ಬಾರಿ ಕೊಳಚೆಗುಂಡಿಗೆ ಇಳಿಯಬೇಕಾದ ಪೌರ ಕಾರ್ಮಿಕರ ದಾರುಣ ಬದುಕು, ಹೋರಾಟಗಳ ಬಗ್ಗೆ ಮಿಡಿಯುತ್ತದೆ. ತ್ಯಾಜ್ಯ ನೀರಿನ 80% ಭಾಗವನ್ನು ಸಂಸ್ಕರಿಸಿ ಮರುಬಳಕೆ ಮಾಡುವ ಬೆಂಗಳೂರು, ಕೇವಲ 50% ಮಾತ್ರ ಇರುವ ರಾಷ್ಟ್ರೀಯ ಸರಾಸರಿಗಿಂತ ಬಹಳ ಮುಂದಿದೆ. ಎಂಬ ಸಮಾಧಾನವನ್ನೂ ಕೊಡುತ್ತದೆ.  ವಾಚು ಕಳೆದು ಹೋದ ತನ್ನ ಸಮಸ್ಯೆಗಿಂತ ಎಷ್ಟೋ ಪಟ್ಟು ಹೆಚ್ಚು ಗಂಭಿರವಾದ ಸಮಸ್ಯೆ ಎಲ್ಲ ಬೆಂಗಳೂರಿಗರ ಮುಂದೆ ಇದೆ ಎಂಬ ಕಥಾನಾಯಕಿಯ ಅರಿವಿನ  ಉದ್ಗಾರದೊಂದಿಗೆ ಈ 22 ನಿಮಿಷಗಳ ಫಿಲಂ ಕೊನೆಯಾಗುತ್ತದೆ.

“ನಿಮ್ಮ ಕಸ ನಿಮಗೆ ಯಾವುದು ಬೇಡವಾದ್ದು ಎಂದು ಹೇಳುವುದಿಲ್ಲ. ಬದಲಿಗೆ ನೀವು ಯಾರು ಎಂಬುದನ್ನು ಹೇಳುತ್ತದೆ” ಎಂಬ ಫಿಲಂ ನಲ್ಲಿ ಬರುವ ಮತ್ತೊಂದು ಮರೆಯದ ಉದ್ಗಾರವಾಗುತ್ತದೆ.

ಇದು ಈ ಚಿತ್ರೋತ್ಸವದಲ್ಲಿ ತೋರಿಸಲಾದ ಒಂದು ಟಿಪಿಕಲ್ ಚಿತ್ರ. ಟಿಪಿಕಲ್ ಡಾಕ್ಯುಮೆಂಟರಿಯ ಗಂಭೀರ, ಏಕತಾನತೆ ಮತ್ತು ಬೋರಿಂಗ್ ಶೈಲಿ ಬಿಟ್ಟು  ಒಬ್ಬ ಹುಡುಗಿಯ ‘ವಾಚು ಫ್ಲಶ್ ಆದ ಕಥನವನ್ನು ಆಸಕ್ತಿಕಾರಕವಾಗಿ ಕಟ್ಟಿಕೊಡುತ್ತದೆ. ಕಥನದಲ್ಲಿ ಚಿತ್ರ, ಮ್ಯಾಪ್, ಅವುಗಳ ಮೇಲೆ ಅನಿಮೇಶನ್, ಸಂದರ್ಶನ, ನಿಜ ಘಟನೆಯ ವಿಡಿಯೊ, ಕಥಾನಾಯಕಿಯ ನಿರೂಪಣೆ – ಇವೆಲ್ಲದರ ಮಿಶ್ರಣ ಪರಿಣಾಮಕಾರಿಯಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ ಮೂರೂ ಭಾಷೆಗಳ ಬಳಕೆಯಾಗಿದೆ.  ನಿತ್ಯಾ ಮಿಶ್ರ ಇದರ ನಿರ್ದೇಶಕಿ.

ಮಾವಳ್ಳಿಪುರ ಲ್ಯಾಂಡ್ ಫಿಲ್ ಸ್ಟೋರಿ

“ವೇಸ್ಟ್ ಅಂಡ್ ದಿ ಸಿಟಿ – ದಿ ಮಾವಳ್ಳಿಪುರ ಲ್ಯಾಂಡ್ ಫಿಲ್ ಸ್ಟೋರಿ” (Waste and the City https://www.teepoi.com/waste-and-the-city) ಬೆಂಗಳೂರಿನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಒಂದು ಭಾಗದ ಕರಾಳ ವಾಸ್ತವ ತೋರಿಸುವ ಫಿಲಂ. ಮಾವಳ್ಳಿಪುರ ಬೆಂಗಳೂರಿನ ‘ಕಸಗುಂಡಿ’ (ಅಂದರೆ ಕಸವನ್ನು ಸುರಿಯುವ ‘ಲ್ಯಾಂಡ್ ಫಿಲ್’).  ಅಲ್ಲಿ 2003 ರಿಂದ 10 ವರ್ಷಗಳಲ್ಲಿ ಪ್ರತಿ  ದಿನ 200-300 ಟ್ರಕ್ಕುಗಳಲ್ಲಿ ಸುಮಾರು 10 ಲಕ್ಷ ಟನ್  ಕಸ ಸುರಿಯಲಾಯಿತು. ಅಲ್ಲಿ ಎರಡು ‘ಲ್ಯಾಂಡ್ ಫಿಲ್’ಗಳಿದ್ದವು. ಒಂದು ಖಾಸಗಿ ಮತ್ತು ಕಾನೂನುಬಾಹಿರ. ಇನ್ನೊಂದು ಸರಕಾರಿ ಮತ್ತು ‘ವೈಜ್ಞಾನಿಕ’.  ಮಾವಳ್ಳಿಪುರದ ಬಳಿಯಿರುವ ಗೋಮಾಳದ ಜಮೀನಿನಲ್ಲಿ ಕಾಣಿಸಿಕೊಂಡ ಇವೆರಡೂ ಈ ಹಳ್ಳಿಯ ಜನರಿಗೆ ತಂದ ಸಂಕಟಗಳ ವಿರುದ್ಧ ಇಬ್ಬರು ಪರಿಸರ ಬೆಂಬಲ ಗುಂಪಿನ (ESG – Environmental Support Group) ಬೆಂಬಲದೊಂದಿಗೆ ಹೋರಾಟ ನಡೆಸಿ, ಕೊನೆಗೆ ನ್ಯಾಯಾಂಗದ ಸಹಾಯದಿಂದ ಗಳಿಸಿದ ಜಯದ ಕಥನ ಈ ಫಿಲಂ. ಘನ, ದ್ರವ, ಸಾವಯವ, ವೈದ್ಯಕೀಯ, ರಾಸಾಯನಿಕ ಎಲ್ಲ ರೀತಿಯ ತ್ಯಾಜ್ಯ ಇಲ್ಲಿ ಮಿಶ್ರಣಗೊಂಡು ಈ ಅವಧಿಯಲ್ಲಿ ಈ ಹಳ್ಳಿಯ ಸುತ್ತಮುತ್ತ 60 ಜನ ಸತ್ತರು. ಈ ಫಿಲಂ ‘ಡೌನ್ ದಿ ಡ್ರೈನ್’ ಗೆ ಹೋಲಿಸಿದರೆ ಕಟು ವಾಸ್ತವ ಚಿತ್ರಿಸುವಂಥದ್ದು. ಕರಿಶ್ಮಾ ರಾವ್ ಮತ್ತು ವಿಶ್ವೇಶ್ ನಿರ್ದೇಶಿಸಿರುವ ಈ 29 ಮಿನಿಟುಗಳ ಫಿಲಂ ಸಾಂಪ್ರದಾಯಿಕ ಡಾಕ್ಯುಮೆಂಟರಿ ಶೈಲಿಯದ್ದು ಆದರೂ, ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳುತ್ತದೆ.

 

ಇವೆರಡು ಸ್ಯಾಂಪಲ್ ಮಾತ್ರ. ತ್ಯಾಜ್ಯ ನಿರ್ವಹಣೆ ಮತ್ತು ಅದರ ಸವಾಲುಗಳ ಕುರಿತ ಫಿಲಂಗಳ ಪ್ರದರ್ಶನದ  ನಂತರ ಈ ಫಿಲಂಗಳ ಲಭ್ಯ ನಿರ್ದೇಶಕರು ಮತ್ತು ಪರಿಣತರು, ಈ ಕ್ಷೇತ್ರದಲ್ಲಿ ಸಕ್ರಿಯರಾಗಿರುವವರ ನಡುವೆ ಸಂವಾದವಿತ್ತು.

ಈ ಚಿತ್ರೋತ್ಸವದಲ್ಲಿ 18 ಇಂಡಿಯನ್ (30 ಮಿನಿಟಿಗಿಂತ ಕಡಿಮೆ ಸಮಯದ) ಕಿರು ಫಿಲಂಗಳು, 16 ಅಂತರರಾಷ್ಟ್ರೀಯ ಕಿರು ಫಿಲಂಗಳು, 5 ಇಂಡಿಯನ್ ಫೀಚರ್ ಫಿಲಂ ಗಳು, 10 ಪರಿಸರ ಪತ್ರಕಾರಿತೆ ಫಿಲಂಗಳು, 19 ಅಂತರರಾಷ್ಟ್ರೀಯ ಫೀಚರ್ ಫಿಲಂಗಳು, 5 ಇಂಡಿಯನ್ ಫೀಚರ್ ಫಿಲಂಗಳು, 9 ಅನಿಮೇಶನ್ ಫಿಲಂ ಗಳು, 9 ವಿದ್ಯಾರ್ಥಿ ಫಿಲಂಗಳು, ಇದ್ದವು.

ವಿಶಿಷ್ಟ ಸೃಜನಶೀಲ ಅನಿಮೇಟೆಡ್ ಫಿಲಂಗಳು

ಮೇಲೆ ನಿರೂಪಿಸಿದ್ದು ಎರಡು ಇಂಡಿಯನ್ ಕಿರು ಫಿಲಂಗಳು. ನಾನು ನೋಡಿದ 2 ಅನಿಮೇಟೆಡ್ ಫಿಲಂಗಳು ವಿಶಿಷ್ಟವಾಗಿದ್ದವು. ಅನಿಮೇಶನ್ ಮತ್ತು ಕಥನ ಶೈಲಿ, ವಿಷಯ ಎಲ್ಲದರಲ್ಲೂ ಅತ್ಯಂತ ವಿಶಿಷ್ಟ ಮತ್ತು ಸೃಜನಶೀಲವಾಗಿದ್ದವು.  ‘ದಿ ಗರ್ಲ್ ಅಂಡ್ ದಿ ಪಾಟ್’ (The Girl and the Pot https://www.youtube.com/watch?v=r6BvV3sacyI) ನಲ್ಲಿ ಒಬ್ಬ ಹುಡುಗಿ ಹಲವು ರಹಸ್ಯಗಳನ್ನು ಬಚ್ಚಿಟ್ಟ ತನ್ನ ಪಿಂಗಾಣಿ ಕೊಡವನ್ನು ಒಡೆಯುತ್ತಾಳೆ. ಇದರಿಂದ ಆಕೆ ಒಂದು ಸಮಾನಾಂತರ ವಿಶ್ವಕ್ಕೆ ತೆರೆದುಕೊಳ್ಳುತ್ತಾಳೆ. ಆಕೆ ಸಹ ರೂಪಾಂತರ ಹೊಂದಿ ಒಂದು ಹೊಸ ವಿಶ್ವದ ಸೃಷ್ಟಿ ಸಾಧ್ಯವಾಗುತ್ತದೆ. ‘ಆಶೆನ್ ಸನ್’ ( Ashen Sun – https://www.youtube.com/watch?v=ODSWEm1B46U  ) ನಲ್ಲಿ ಇಬ್ಬರು ಹುಡುಗಿಯರು ಒಂದು ಮೊಟೆಲ್ ನೋಡಿಕೊಳ್ಳುತ್ತಿರುವಾಗ ಕಡಲ ತೀರದ ಕನಸು ಕಾಣುತ್ತಾರೆ. ರೇಡಿಯೊದಲ್ಲಿ ಹವಾಮಾನ ಕುಸಿತದ ಭವಿಷ್ಯ ಬರುತ್ತಿದ್ದು, ಒಮ್ಮೆಗೆ ಅದು ವಾಸ್ತವಕ್ಕೆ ನೆಗೆಯುತ್ತದೆ. ಎರಡೂ ಅನಿಮೇಶನ್ ಫಿಲಂ ಗಳಲ್ಲೂ ವಿಶಿಷ್ಟ ಸೈಜನಶೀಲತೆ ಮತ್ತು ಕಥನಶೈಲಿಗೆ ಗಮನಸೆಳೆಯುತ್ತವೆ.

 

ಇವಲ್ಲದೆ ದಕ್ಷಿಣ ಕೊರಿಯಾದ ದ್ವೀಪವೊಂದರಲ್ಲಿ ಸಾಗರದಾಳದಿಂದ ಚಿಪ್ಪು ಆರಿಸಿ ತರುವ ಕೆಲಸ ಮಾಡುವ ಮಹಿಳೆಯೊಬ್ಬಳ ಜೀವನದ ಕಥನ ‘ಡಾಟರ್ಸ್ ಆಫ್ ದಿ ಸೀ’ (Daughters of the Sea https://www.youtube.com/watch?v=K7D3_LQxOn4) ಎಂಬ ಕಿರು ಫಿಲಂ. ಇದಲ್ಲದೆ ‘ಬ್ಲಾಕ್ ಬಟರ್ ಫ್ಲೈಸ್’ (Black Butterflies https://www.youtube.com/watch?v=HB9AEKysvKY) ಮೂರು ಖಂಡಗಳ (ಏಶ್ಯಾ, ಆಫ್ರಿಕಾ, ಮತ್ತು ಲ್ಯಾಟಿನ್ ಅಮೆರಿಕ) ಮೂವರು ಮಹಿಳೆಯರು ಪರಿಸರ ವಿಪತ್ತಿನಿಂದ ಪಾರಾಗಲು ಅಭಿವೃದ್ಧ ದೇಶಗಳಿಗೆ ವಲಸೆ ಹೋದವರು ಅಲ್ಲಿಯೂ ಪಡುವ ಪಾಡಿನ ಕಥನ. 83 ನಿಮಿಷಗಳ ಫೀಚರ್ ಫಿಲಂ ಆದರೂ ಪೂರ್ತಿ ನೈಜ ಶೈಲಿಯ ಚಿತ್ರಗಳ ಅನಿಮೇಶನ್ ಫಿಲಂ ಎನ್ನುವುದು ವಿಶೇಷ. ‘ಹಿಮಾಲಯ ಪರ್ವತ ಶ್ರೇಣಿಯಲ್ಲಿ ನಶಿಸಿ ಹೋಗುತ್ತಿರುವ ಪ್ರಾಣಿಗಳಲ್ಲಿ ಒಂದಾದ ಸ್ನೋ ಲೆಪರ್ಡ್ (ಹಿಮ ಚಿರತೆ) ನ ಗಣತಿ ಮಾಡುವ ಪ್ರಾಜೆಕ್ಟಿನಲ್ಲಿ ತೊಡಗಿರುವ ಇಬ್ಬರು ಮೂಲನಿವಾಸಿ ಮಹಿಳೆಯರ ಸ್ಫೂರ್ತಿದಾಯಕ ಕತೆ ಸ್ನೋ ಲೆಪರ್ಡ್ ಸಿಸ್ಟರ್ಸ್’ (Snow leopard Sisters https://www.youtube.com/watch?v=BWfLxMnM-KE). ಹಿರಿಯ ಮಹಿಳೆ ಈ ಪ್ರಾಜೆಕ್ಟಿನಲ್ಲಿ ಪರಿಣತೆಯಾಗಿದ್ದು ಕಿರಿಯಳಿಗೆ ತರಬೇತಿ ನೀಡುತ್ತಿದ್ದಾಳೆ. ಕಿರಿಯಳು ಬಲವಂತದ ಮದುವೆಯಿಂದ ತಪ್ಪಿಸಿಕೊಂಡು ಒಂದು ಉದ್ಯೋಗ ಮಾಡಲು ಕಾತುರಳಾಗಿರುವವಳು. ‘ಬ್ಲಾಕ್ ಸ್ನೋ’ ರಶ್ಯದ ಸೈಬೀರಿಯಾದ (Black Snow https://www.youtube.com/watch?v=gBlXj2ZS4dM)   ದೂರದ ನಗರವೊಂದರಲ್ಲಿ ಹಳೆಯ ಕಲ್ಲಿದ್ದಲು ಗಣಿಯಿಂದ ಭೂಮಿಯೊಳಗಿಂದ ಬಂದ  ವಿಷಗಾಳಿ ಬೀಸಲು ಆರಂಭವಾಗುತ್ತದೆ. ಆ ನಗರದ ಸಂತ್ರಸ್ತ ಜನತೆಯ ಅಹವಾಲನ್ನು ಮುಟ್ಟಿಸಿ ಸರಕಾರವನ್ನು ಎಚ್ಚರಿಸಲು ಪತ್ರಕರ್ತೆಯಾದ ಒಬ್ಬ ಗೃಹಿಣಿಯ ಗಂಭೀರ ಪ್ರಯತ್ನಗಳ ಮತ್ತು ಅದಕ್ಕೆ ಸರಕಾರಿ ಯಂತ್ರದ ಪ್ರತಿಕ್ರಿಯೆಯ ಕಥನವಿದು.

ಇವೆಲ್ಲದರ ಜತೆ ಎರಡು ವಿಶಿಷ್ಟ ಅನುಭವ ನೀಡುವ ವಿಶೇಷ ಪ್ರದರ್ಶನಗಳೂ ಇದ್ದವು. ಒಂದು ಕೊಣೆಯಲ್ಲಿ ಎಲ್ಲ ಕಡೆ ಫಿಲಂ ಪ್ರೊಜೆಕ್ಟ್ ಮಾಡಿ ನಾವು ಅದೇ ಸ್ಥಳದಲ್ಲಿರುವ ಅನುಭವ ಕೊಡುವ ‘ದಿ ಜಯಂಟ್ಸ್” ಎಂಬ ‘ಇಮ್ಮರ್ಸಿವ್ ಎಕ್ಸ್ ಪೀರೆನ್ಸ್’ ಶೋ. ಇದರಲ್ಲಿ 12 ನಿಮಿಷದ ಮಟ್ಟಿಗೆ ಆಸ್ಟ್ರೇಲಿಯದ ಟಸ್ಮಾನಿಯದಲ್ಲಿರುವ 110 ಮೀಟರ್ ಗಿಂತಲೂ ಹೆಚ್ಚು ಎತ್ತರ ಇರುವ ದಟ್ಟ ಕಾಡಿಗೆ ಕರೆದುಕೊಂಡು ಹೋಗುತ್ತದೆ ಈ ಅನುಭವ. ಆ ಮರಕ್ಕೆ ನಿಧಾನವಾಗಿ ಏರುತ್ತಾ (ಹಗಲಲ್ಲೂ, ರಾತ್ರಿಯಲ್ಲೂ) ಇಡೀ ಕಾಡನ್ನು ನೋಡುವ ಅದ್ಭುತ ಅನುಭವ. ಮತ್ತೊಂದು ವಿ.ಆರ್ (ವರ್ಚುವಲ್ ರಿಯಲಿಟಿ) ಶೋ ನಲ್ಲಿ ಅಮೆಜಾನ್ ಕಾಡುಗಳಲ್ಲಿ ಓಡಾಡುವ ಅನುಭವ ಸಹ ವಿಶಿಷ್ಟವಾಗಿತ್ತು.

ಒಟ್ಟಾರೆಯಾಗಿ ಪರಿಸರದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳ ಕುರಿತು ಅರಿವು, ಅದರ ಬಗ್ಗೆ ಏನಾದರೂ ಮಾಡಲು ಉತ್ತೇಜಿಸುವ ಈ ಚಿತ್ರೋತ್ಸವದ ಪ್ರಯತ್ನ ಶ್ಲಾಘನೀಯವಾದರೂ, ಇದು ಹಲವು ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಹೆಚ್ಚಿನ ಫಿಲಂಗಳು ಇಂಗ್ಲೀಷಿನಲ್ಲಿರುವುದು, ಈ ಚಿತ್ರೋತ್ಸವಕ್ಕೆ ಬಂದವರು ಹೆಚ್ಚಿನವರು ಉಚ್ಛ ಮಧ್ಯಮ ವರ್ಗದವರಾಗಿದ್ದು, ಇದು ತಲುಪಬೇಕಾದವರಿಗೆ ತಲುಪುತ್ತಿದೆಯೇ ? ವಿದ್ಯಾರ್ಥಿ-ಯುವಜನರನ್ನು, ಸಾಮಾನ್ಯ ಜನತೆಯನ್ನು, ಜನ ವಿಜ್ಞಾನ ಸಂಘಟನೆಗಳನ್ನು ತೊಡಗಿಸಲು ಪ್ರಯತ್ನಗಳಾದಂತೆ ಕಾಣಲಿಲ್ಲ.  ಈ ಚಿತ್ರೋತ್ಸವದ ಮತ್ತು ಫಿಲಂಗಳ ಪ್ರಾಯೋಜಕರು, ಸಹಯೋಗ ಕೊಡುವವರು ಕಾರ್ಪೋರೇಟುಗಳು, ವಿದೇಶೀ ಸರಕಾರಗಳ ಬೆಂಬಲದ ಎನ್.ಜಿ.ಒ ಗಳಾಗಿರುವುದರರಿಂದ ಈ ಸಮಸ್ಯೆ ಬರುತ್ತಿದೆಯೇ? ಸಮಕಾಲೀನ ಪರಿಸರ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸರಕಾರ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳು ಈ ಕಾಯಕದಲ್ಲಿ ತೊಡಗಬೇಕಲ್ಲವೆ? ಸರಕಾರ ಪರಿಸರ ಮುಂತಾದವುಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕಾರ್ಪೊರೇಟುಗಳಿಗೂ, ಎನ್.ಜಿ.ಒ ಗಳಿಗೆ ಒಪ್ಪಿಸಿಬಿಟ್ಟಿದ್ದೀವಾ? – ಈ ಕೆಲವು ಪ್ರಶ್ನೆಗಳು ಕಾಡುತ್ತವೆ.

 

Donate Janashakthi Media

Leave a Reply

Your email address will not be published. Required fields are marked *