ಬೆಂಗಳೂರು: ಅಲ್ಪಸಂಖ್ಯಾತರ ಮೇಲಿನ ದಾಳಿ ಮತ್ತು ಅವರ ಸಾಂವಿಧಾನಿಕ ಹಕ್ಕುಗಳ ದಮನ ಖಂಡಿಸಿ ಸಿಪಿಐ(ಎಂ) ಕೇಂದ್ರ ಸಮಿತಿಯ ಕರೆಯ ಮೇರೆಗೆ ದೇಶದಾದ್ಯಂತ ಪ್ರತಿಭಟನೆ ಭಾಗವಾಗಿ ಇಂದು ಬೆಂಗಳೂರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿ ಅಡಿಯಲ್ಲಿ ಪ್ರತಿಭಟನೆ ನಡೆಯಿತು.
ಇದನ್ನು ಓದಿ: ಅಲ್ಪಸಂಖ್ಯಾತರ ಮೇಲೆ ದಾಳಿ ಖಂಡಿಸಿ-ಸಂವಿಧಾನ ಬದ್ಧ ರಕ್ಷಣೆ ನೀಡಲು ಸಿಪಿಐ(ಎಂ) ರಾಜ್ಯವ್ಯಾಪಿ ಪ್ರತಿಭಟನೆ
ಭಾರತದ ಬಹುತ್ವ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಿರುವ ಬಿಜೆಪಿ ಮತ್ತದರ ಗುಂಪುಗಳು ದೇಶದ ಎಲ್ಲ ಕಡೆಗಳಲ್ಲೂ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಹಿಂಸೆ, ಹಲ್ಲೆ, ದಾಳಿ ನಡೆಸುತ್ತಿರುವ ಕೃತ್ಯವನ್ನು ಖಂಡಿಸಲಾಯಿತು. ದೇಶದ ಎಲ್ಲಾ ಸಮಸ್ಯೆಗಳಿಗೂ ‘ಮುಸ್ಲಿಮರೇ’ ಕಾರಣ ಎಂದು ಜನಮಾನಸದಲ್ಲಿ ದ್ವೇಷದ ಬೀಜ ಬಿತ್ತುತ್ತಿರುವ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕೆಂದು ಕರೆ ನೀಡಲಾಯಿತು. ಅದೇ ಸಮಯದಲ್ಲಿ ಅಲ್ಪಸಂಖ್ಯಾತರ ಮಧ್ಯೆ ಇರುವ ಮೂಲಭೂತವಾದಿ ಪ್ರವೃತ್ತಿಯನ್ನು ತೊಡೆದುಹಾಕಬೇಕೆಂದು ವಿನಂತಿ ಮಾಡಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯೆ ವಿಮಲಾ ಕೆ ಎಸ್, ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಉತ್ತರ ಜಿಲ್ಲಾ ಕಾರ್ಯದರ್ಶಿ ಪ್ರತಾಪ್ ಸಿಂಹ, ಉತ್ತರ ದಕ್ಷಿಣ ಜಿಲ್ಲಾ ಮುಖಂಡರಾದ ಮುನಿರಾಜು ಮತ್ತು ಬಿ.ರಾಜಶೇಖರ್ ಮೂರ್ತಿ ಮಾತನಾಡಿದರು. ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಟಿ.ಲೀಲಾವತಿ ಕಾರ್ಯಕ್ರಮ ನಡೆಸಿಕೊಟ್ಟರು.