ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ : ವ್ಯಾಪಕ ಆಕ್ರೋಶ

ಬೆಂಗಳೂರು :ಮುಸ್ಲಿಂ ಕ್ರಿಶ್ಚಿಯನ್ ಜೈನ್ ಬೌದ್ಧ ಮತ್ತು ಪಾರ್ಸಿ ವರ್ಗಕ್ಕೆ ಸೇರಿದ ಪಿಎಚ್ಡಿ ಹಾಗೂ ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ವರ್ಷಕ್ಕೆ 3 ಲಕ್ಷ ಶೈಕ್ಷಣಿಕ ಪ್ರೋತ್ಸಾಹ ಧನ ನೀಡುತ್ತಿತ್ತು. ಈಗ ಕೋರೋನ ಕಾರಣ ನೀಡಿ ಒಂದು ಲಕ್ಷಕ್ಕೆ ಇಳಿಸಿರುವ ವಿದ್ಯಾರ್ಥಿ ವಿರೋಧಿ ನೀತಿಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.

ಬಿಜೆಪಿ ಸರ್ಕಾರ ಬಂದ ನಂತರದಲ್ಲಿ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡುತ್ತಿರುವುದಲ್ಲದೆ ಅವರಿಗೆ ಸಿಗಬೇಕಾದ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ಕಡಿತ ಮಾಡಿದ್ದರಿಂದಾಗಿ ಶೈಕ್ಷಣಿಕ ಶುಲ್ಕಗಳು ಕಟ್ಟಲು ಸಾಧ್ಯವಾಗದೆ ಐಶ್ವರ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು.

 

ತಿಂಗಳಿಗೆ 25 ಸಾವಿರದಂತೆ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮೂರು ವರ್ಷ ಹಾಗೂ ಎಂಫಿಲ್ ಮಾಡುವವರಿಗೆ ಎರಡು ವರ್ಷ ಈ ಫೆಲೋಶಿಪ್ ಸಿಗುತ್ತಿತ್ತು. ಆದರೆ ಕಳೆದ 10 ತಿಂಗಳಿನಿಂದ ಈ ಹಣವನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಸರ್ಕಾರ ವಿಫಲವಾಗಿದೆ. ಈಗ ಏಕಾಏಕಿ ವರ್ಷಕ್ಕೆ ಒಂದು ಲಕ್ಷ ಮಾತ್ರ ನೀಡಲಾಗುವುದು ಎಂಬ ಸುತ್ತೋಲೆ ಹೊರಡಿಸಿರುವುದು ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಲಿದೆ ಎಂದು SFI ಆತಂಕ ವ್ಯಕ್ತಪಡಿಸಿದೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅವರನ್ನು ತುಳಿತಕ್ಕೆ ಒಳಪಡಿಸಿದಷ್ಟೇ ಅಲ್ಲದೇ ಈಗ ಶೈಕ್ಷಣಿಕವಾಗಿಯೂ ಅವರನ್ನು ವಂಚಿಸುವ , ದುರ್ಬಲರನ್ನಾಗಿ ಮಾಡುವ ರಾಜ್ಯ ಬಿಜೆಪಿ ಸರ್ಕಾರದ ಈ ನಡೆಯನ್ನು ಖಂಡಿಸಿರುವ SFI ಕೂಡಲೇ ಈ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಕೈ ಬಿಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಆರ್ಥಿಕ ಯೋಜನೆಗಳನ್ನು ಮುಂದುವರೆಸಬೇಕು ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್, ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಮುಖಂಡರಾದ ಶಿವಕುಮಾರ ಮ್ಯಾಗಳಮನಿ, ದಿಲಿಪ್ ಶೆಟ್ಟಿ, ಭೀಮನಗೌಡ ಸರಕಾರವನ್ನು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *