ಬಸವ ಕಲ್ಯಾಣ : ದಲಿತರು ಎಂಬ ಕಾರಣಕ್ಕೆ ಅಂಗನವಾಡಿ ಸಹಾಯಕಿ ಕೆಲಸಕ್ಕೆ ಸವರ್ಣೀಯರು ಅಡ್ಡಿಪಡಿಸಿರುವ ಘಟನೆ ಬೀದರ್‌ನ ಬಸವಕಲ್ಯಾಣದ ಹತ್ಯಾಳ್ ಗ್ರಾಮದಲ್ಲಿ ನಡೆದಿದೆ.
30 ವರ್ಷದ ದಲಿತ ಮಹಿಳೆ ಮಿಲನಾ ಬಾಯಿ ಅವರನ್ನು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಸಹಾಯಕಿಯಾಗಿ ನೇಮಕ ಮಾಡಿತು. ಅದರಂತೆ ಅವರು ಕೆಲಸಕ್ಕೆ ಹಾಜರಾಗಲು ಹೋದಾಗ ಅವರಿಗೆ ಅಂಗನವಾಡಿ ಪ್ರವೇಶಿಸದಂತೆ ಹತ್ಯಾಳ್ ಗ್ರಾಮದ ಮರಾಠರು ಹಾಗೂ ಇತರ ಸವರ್ಣೀಯರು ತಾಕೀತು ಮಾಡಿದ್ದಾರೆ. ಜಾತಿ ನಿಂದನೆ ಮೂಲಕ ಮಿಲನಾ ಬಾಯಿಯನ್ನು ಅವಮಾನಿಸಿದ್ದಾರೆ.
ಘಟನೆಯ ಹಿನ್ನಲೆ : 10 ಜೂನ್ 2021ರಂದು ಮಿಲನಾ ಬಾಯಿಯವರಿಗೆ ನೇಮಕಾತಿ ದೃಢೀಕರಣ ದೊರೆಕಿತು. ಆದರೆ ಕೋವಿಡ್ ಕಾರಣದಿಂದಾಗಿ ಅಂಗನವಾಡಿಗಳು ಆರಂಭವಾಗಿರಲಿಲ್ಲ. ಜೂನ್ 4, 2022ರಂದು ಮತ್ತೆ ಶಾಲೆಗಳು ತೆರೆದಾಗ, ಅಂಗನವಾಡಿ ಆವರಣದ ನಿರ್ವಹಣೆ ಹಾಗೂ ಅಡುಗೆ ಮಾಡುವ ನಿರೀಕ್ಷೆಯಲ್ಲಿದ್ದ ಮಿಲನಾ ಅವರಿಗೆ ಆಘಾತ ಕಾದಿತ್ತು. ದಲಿತ ಸಹಾಯಕಿ ಅಂಗನವಾಡಿಗೆ ಪ್ರವೇಶಿಸದಂತೆ ಗ್ರಾಮದ ಮರಾಠರು ಹಾಗೂ ಇತರ ಸವರ್ಣೀಯರು ತಡೆದರು ಎಂದು ಕುಟುಂಬದ ಮುಖ್ಯಸ್ಥರು ಆರೋಪಿಸಿದ್ದಾರೆ.
ಮಿಲನಾಬಾಯಿಯವರ ಪತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಜೈಪಾಲ್ ರಾಣೆಯವರು ಇತ್ತೀಚೆಗೆ ಪ್ರತಿಕ್ರಿಯೆ ನೀಡಿ, “ನಮ್ಮ ಗ್ರಾಮದಲ್ಲಿ ಮೂರು ಅಂಗನವಾಡಿಗಳಿವೆ. ನನ್ನ ಹೆಂಡತಿಯನ್ನು ಮೆರಿಟ್ (ಸಾಮಾನ್ಯ ವರ್ಗ) ಆಧಾರದ ಮೇಲೆ ಶಾಲೆಯೊಂದರಲ್ಲಿ ಸಹಾಯಕಿಯಾಗಿ ನೇಮಿಸಲಾಗಿದೆ. ಈ ಅಂಗನವಾಡಿ ಭಾಗದಲ್ಲಿ ಸವರ್ಣೀಯರು ಹೆಚ್ಚಿದ್ದಾರೆ. ಸವರ್ಣೀಯರು ನನ್ನ ಹೆಂಡತಿಗೆ ಅಂಗನವಾಡಿಯಲ್ಲಿ ಕೆಲಸ ಮಾಡಲು, ಅಡುಗೆ ಮಾಡಲು ಅವಕಾಶ ನೀಡಲಿಲ್ಲ” ಎಂದು ದೂರಿದರು. ಎರಡು ವಾರಗಳಿಂದ ಸವರ್ಣೀಯ ಹಿಂದೂ ಸಮುದಾಯದ ಇನ್ನೊಬ್ಬ ಸಹಾಯಕಿ ಅಂಗನವಾಡಿಯಲ್ಲಿ ಅಡುಗೆ ಮಾಡುತ್ತಿದ್ದಾರೆ” ಎಂದು ಜೈಪಾಲ್ ತಿಳಿಸಿದ್ದಾರೆ.
ಹತ್ಯಾಳ್ ಗ್ರಾಮದ ಮರಾಠಾ ಸಮುದಾಯಕ್ಕೆ ಸೇರಿದ ವ್ಯಕ್ತಿ ಸಿದ್ದರಾಮ ಮುಳೆ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು “ಸಹಾಯಕಿ ಹುದ್ದೆಯಿಂದ ನಿವೃತ್ತರಾದವರು ಸಾಮಾನ್ಯ ವರ್ಗದವರು. ಈಗ ಆ ಹುದ್ದೆಯನ್ನು ಎಸ್‌ಸಿ ಸಮುದಾಯದ ವ್ಯಕ್ತಿಗೆ ನೀಡಲಾಗಿದೆ. ಇದು ಸರಿಯಲ್ಲ, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ” ಎಂದು ತಿಳಿಸಿದ್ದಾರೆ.
ಇನ್ನೂ ಸಮಸ್ಯೆ ನಿವಾರಿಸಬೇಕಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಹತ್ಯಾಳ ಗ್ರಾಮದ ಸವರ್ಣೀಯರ ವಿರೋಧ ಯಾಕೆ ಕಟ್ಟಿಕೊಳ್ಳಬೇಕು ಎಂದು ಮೌನಕ್ಕೆ ಶರಣಾಗಿದ್ದಾರೆ. “ನಮ್ಮದೇನು ಸಮಸ್ಯೆ ಇಲ್ಲ, ನಾವು ನೇಮಕಾತಿ ಪತ್ರ ನೀಡಿದ್ದೇವೆ, ಆದರೆ ಗ್ರಮಾಸ್ಥರು ಸವರ್ಣೀಯರನ್ನು ನೇಮಿಸಿ ಎಂದು ಗಲಾಟೆ ಮಾಡುತ್ತಿದ್ದಾರೆ” ಎಂದು ತಪ್ಪಿಸಿ ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಹಶೀಲ್ದಾರ ಮತ್ತು ಸಮಾಜ ಕಲ್ಯಾಣಾಧಿಕಾರಿಗಳು ಈ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಹತ್ಯಾಳ್ ಗ್ರಮಾದ ದಲಿತರು ಆಗ್ರಹಿಸಿದ್ದಾರೆ. ಅವರ ನೇಮಕಾತಿಯನ್ನು ನಿರಾಕರಿಸಿದರೆ ವ್ಯಾಪಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.