ನವದೆಹಲಿ: ಪೆಗಾಸಸ್ ಬೇಹುಗಾರಿಕೆ ತಂತ್ರಾಂಶಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಸತ್ಯಾಂಶವಿದ್ದರೆ ನಿಜಕ್ಕೂ ಅದು ಗಂಭೀರವಾದದ್ದಾಗಿದೆ ಎಂದು ದೇಶದ ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಪೆಗಾಸಸ್ ಸ್ಪೈವೇರ್ ಪ್ರಕರಣದ ಕುರಿತು ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಈ ರೀತಿಯಾಗಿ ಹೇಳಿತು.
ಹಿರಿಯ ಪತ್ರಕರ್ತ ಎನ್ ರಾಮ್, ಶಶಿಕುಮಾರ್, ಸಿಪಿಐ(ಎಂ) ಸಂಸದ ಜಾನ್ ಬ್ರಿತ್ತಾಸ್ ಹಾಗೂ ವಕೀಲ ಎಂಎಲ್ ಶರ್ಮಾ ಸಲ್ಲಿಸಿದ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿದರು. ಎಲ್ಲಾ ಅರ್ಜಿದಾರರು ತಮ್ಮ ಅರ್ಜಿಯ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠವು ವಿಚಾರಣೆಗೆ ಕೇಂದ್ರವು ಹಾಜರಾಗಬೇಕು. ಸತ್ಯ ಹೊರಬರಬೇಕು. ಯಾರ ಹೆಸರುಗಳಿವೆ ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದೆ.
ಇದನ್ನು ಓದಿ: ಪೆಗಾಸಸ್ ವಿವಾದ: ಮುಂದಿನ ವಾರ ವಿಚಾರಣೆಗೆ ಸುಪ್ರೀಂಕೋರ್ಟ್ನಿಂದ ಒಪ್ಪಿಗೆ
ವಿಶೇಷ ತನಿಖೆ ನಡೆಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ನ್ಯಾಯಪೀಠವು ಮಾಧ್ಯಮಗಳ ವರದಿ ಸರಿಯಾಗಿದ್ದರೆ ಆರೋಪಗಳು ಗಂಭೀರವಾಗಿದೆ ಎಂದು ಹೇಳಿದೆ. ದೇಶದ ಪ್ರಮುಖ ಪ್ರತಿಪಕ್ಷದ ನಾಯಕರು, ಪತ್ರಕರ್ತರು ಹಾಗೂ ಇತರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶದ ಮೂಲಕ ಗೂಢಚರ್ಯೆ ನಡೆಸಲಾಗುತ್ತಿದೆ ಎಂಬ ಆರೋಪ ಇದೀಗ ದೇಶವ್ಯಾಪಿ ವ್ಯಾಪಕ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಭಾರತದ ಎಡಿಟರ್ಸ್ ಗಿಲ್ಡ್ ಸಹಿತ ಹಲವರು ಸೂಕ್ತ ತನಿಖೆ ನಡೆಸುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಗಳ ವಿಚಾರಣೆಯನ್ನು ಇಂದು ಆರಂಭ ಮಾಡಿದೆ.
ಅರ್ಜಿಗಳ ವಿಚಾರಣೆ ವೇಳೆ ಎರಡು ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ಈ ವಿಚಾರ ಎತ್ತಿದ್ದೇಕೆ? ಎಂದು ಮುಖ್ಯ ನ್ಯಾಯಮೂರ್ತಿ ರಮಣ ಪ್ರಶ್ನಿಸಿದರು. 2019ರಲ್ಲಿಯೂ ಇದೇ ರೀತಿಯ ವಿಷಯ ಬೆಳಕಿಗೆ ಬಂದಿತ್ತಾದರೂ ಇಷ್ಟು ವಿಳಂಬಕ್ಕೆ ಕಾರಣವೇನು ಎಂದು ಕೇಳಿದರು ಮತ್ತುವಿಳಂಬವು ವಿಚಾರಣೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು. ಪೀಠವು, ಪ್ರತೀ ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಅಗತ್ಯವಿರುವವರು ಟೆಲಿಗ್ರಾಫ್ ಕಾಯ್ದೆಯಡಿ ದೂರುಗಳನ್ನು ದಾಖಲಿಸಬಹುದು ಎಂದು ಹೇಳಿತು.
ಇದನ್ನು ಓದಿ: ಪೆಗಾಸಸ್: ಸರ್ವಾಧಿಕಾರಶಾಹಿಯ ಸೈಬರ್ ಆಯುಧ
ಇದಕ್ಕೆ ಉತ್ತರಿಸಿದ ಕಪಿಲ್ ಸಿಬಲ್ ಅವರು, ನಾವು ವಾಷಿಂಗ್ಟನ್ ಪೋಸ್ಟ್ ವರದಿ ಹಾಗೂ ಇತರ ಮಾಧ್ಯಮ ಸಂಸ್ಥೆಗಳಿಂದ ಇದನ್ನು ತಿಳಿದುಕೊಂಡೆವು. ಮಾಜಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಹಾಗೂ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್‌ಗಳ ಫೋನ್‌ಗಳನ್ನು ಸ್ಪೈವೇರ್ ಬಳಸಿ ತಡೆಹಿಡಿಯಲಾಗಿದೆ ಎಂದು ಅಂಶ ಬೆಳಕಿಗೆ ಬಂದಿದೆ ಎಂದು ಹೇಳಿದರು. ಸ್ಪೈವೇರ್ ಅನ್ನು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. “ಎನ್ ಎಸ್ ಒ ತಂತ್ರಜ್ಞಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೊಡಗಿಸಿಕೊಂಡಿದೆ ಎಂದು ಕಪಿಲ್ ಸಿಬಲ್ ಕೋರ್ಟ್ ಗೆ ಮಾಹಿತಿ ನೀಡಿದರು.
ಅಂತೆಯೇ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಪೆಗಾಸಸ್ ಕುತಂತ್ರಾಂಶ ಬಳಸಿ ದೇಶದ 300ಕ್ಕೂ ಹೆಚ್ಚು ಜನರ ಮೊಬೈಲ್ ಸಂಖ್ಯೆಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟ ಇತ್ತೀಚೆಗೆ ವರದಿ ಮಾಡಿತ್ತು.