ನ್ಯೂಸ್ಕ್ಲಿಕ್ ಮೇಲೆ ಯುಎಪಿಎ ಅಡಿಯಲ್ಲಿ ಆರೋಪದ ಬಗ್ಗೆ ಪಟಿಯಾಲಾ ಹೌಸ್ ಕೋರ್ಟಿನ ವಿಶೇಷ ನ್ಯಾಯಾಧೀಶರ ನಿರ್ದೇಶದ ಅನುಸಾರ ಕೊನೆಗೂ ಪ್ರಬೀರ್ ಪುರಕಾಯಸ್ಥ ರಿಗೆ ಅಕ್ಟೋಬರ್ 5ರ ರಾತ್ರಿಯಷ್ಟೇ ದಿಲ್ಲಿ ಪೊಲೀಸ್ ವಿಶೇಷ ಕೋಷ್ಠವು ದಾಖಲಿಸಿದ ಎಫ್‌ಐಆರ್‌ನ ಪ್ರತಿಯನ್ನು ಒದಗಿಸಲಾಗಿದೆ.
ನ್ಯೂಸ್‍ಕ್ಲಿಕ್ ತಂಡ ತಕ್ಷಣ ಎಫ್‌ಐಆರ್ ರದ್ದುಗೊಳಿಸುವಂತೆ ಹಾಗೂ ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಅವರನ್ನು ಅವರ ಅಕ್ರಮ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಕೋರಿ ದಿಲ್ಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿರುವುದಾಗಿ ಹೇಳಿದೆ.
ಎಫ್‌ಐಆರ್‌ನಲ್ಲಿನ ಆರೋಪಗಳು, ಮೇಲ್ನೋಟಕ್ಕೆ ಅಸಮರ್ಥನೀಯ ಮತ್ತು ಬೋಗಸ್ ಮಾತ್ರವಲ್ಲ, ಈಗಾಗಲೇ ಮೂರು ಸರ್ಕಾರಿ ಏಜೆನ್ಸಿಗಳು – ಜಾರಿ ನಿರ್ದೇಶನಾಲಯ, ಆರ್ಥಿಕ ಅಪರಾಧ ವಿಭಾಗ, ದೆಹಲಿ ಪೊಲೀಸ್ ಮತ್ತು ಆದಾಯ ತೆರಿಗೆ ಇಲಾಖೆಗಳ ತನಿಖೆಯಲ್ಲಿ ಪದೇ ಪದೇ ಮಾಡಿರುವವುಗಳೇ ಆಗಿವೆ ಎಂದು ನ್ಯೂಸ್ ಕ್ಲಿಕ್ ಹೇಳಿದೆ. ಈ ಆರೋಪಗಳ ಮೇಲೆ ಕಳೆದ ಮೂರು ವರ್ಷಗಳಲ್ಲಿ ಈ ಯಾವುದೇ ತನಿಖೆಗಳ ಆಧಾರದಲ್ಲಿ ಯಾವುದೇ ಆರೋಪಪಟ್ಟಿ ಅಥವಾ ದೂರುಗಳನ್ನು ಈ ಏಜೆನ್ಸಿಗಳು ದಾಖಲಿಸಿಲ್ಲ. ವಾಸ್ತವವಾಗಿ, ಈ ತನಿಖೆಗಳಲ್ಲಿ ಪ್ರಬೀರ್‌ಗೆ ನ್ಯಾಯಾಲಯ ಮಧ್ಯಂತರ ರಕ್ಷಣೆಯನ್ನೂ ನೀಡಿದೆ. ಈ ಎಫ್‌ಐಆರ್ ಅನ್ನು ಈ ರಕ್ಷಣೆಯನ್ನು ತಪ್ಪಿಸಲು ಮತ್ತು ಕರಾಳ ಯುಎಪಿಎ ಅಡಿಯಲ್ಲಿ ಅಕ್ರಮ ಬಂಧನಗಳನ್ನು ಕೈಗೊಳ್ಳಲಿಕ್ಕಾಗಿ ಮಾತ್ರ ದಾಖಲಿಸಲಾಗಿದೆ ಎಂದು ಅದು ಹೇಳಿದೆ.
ಹಿಂದಿನ ಹೇಳಿಕೆಗಳಲ್ಲಿ ಹೇಳಿರುವಂತೆ, ನ್ಯೂಸ್‌ಕ್ಲಿಕ್ ಚೀನಾ ಅಥವಾ ಚೀನೀ ಸಂಸ್ಥೆಗಳಿಂದ ಯಾವುದೇ ಧನಸಹಾಯ ಅಥವಾ ಸೂಚನೆಗಳನ್ನು ಪಡೆದಿಲ್ಲ. ಇದಲ್ಲದೆ, ನ್ಯೂಸ್‌ಕ್ಲಿಕ್ ಎಂದಿಗೂ ಹಿಂಸೆ, ಪ್ರತ್ಯೇಕತೆ ಅಥವಾ ಯಾವುದೇ ಕಾನೂನುಬಾಹಿರ ಕೃತ್ಯವನ್ನು ಯಾವುದೇ ರೀತಿಯಲ್ಲಿ ಪ್ರೋತ್ಸಾಹಿಸಿಲ್ಲ, ಅಥವ ಅಂತಹ ಪ್ರಯತ್ನ ನಡೆಸಿಲ್ಲ ಎಂದು ಪುನರುಚ್ಚರಿಸಿರುವ ಅದು, ತನ್ನ ಈ ದಾವೆ ಸತ್ಯ ಎನ್ನುವುದನ್ನು ಆನ್‌ಲೈನ್‌ನಲ್ಲಿ ಮುಕ್ತವಾಗಿ ಲಭ್ಯವಿರುವ ನ್ಯೂಸ್‌ಕ್ಲಿಕ್‌ನ ಕವರೇಜ್‌ನ್ನು ಪರಿಶೀಲಿಸದರೆ ಅಷ್ಟೇ ಸಾಕಾಗುತ್ತದೆ ಎಂದೂ ಮತ್ತೆ ಹೇಳಿದೆ.
ಎಫ್‌ಐಆರ್‌ನಲ್ಲಿನ ಆರೋಪಗಳ ಸಂಪೂರ್ಣ ಅಸಂಬದ್ಧತೆಯೇ ನ್ಯೂಸ್‌ಕ್ಲಿಕ್ ವಿರುದ್ಧದ ಕ್ರಮಗಳು ಭಾರತದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕಾ ಮಾಧ್ಯಮದ ಬಾಯಿ ಮುಚ್ಚಿಸುವ ನಾಚಿಕೆಹೀನ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅದು ಹೇಳಿದೆ.
ದಿಲ್ಲಿ ಹೈಕೋರ್ಟ್ ಅಕ್ಟೋಬರ್ 6ರಂದು ಪ್ರಬೀರ್ ಪುರಕಾಯಸ್ಥ ಮತ್ತು ಅಮಿತ್ ಚಕ್ರವರ್ತಿ ಸಲ್ಲಿಸಿದ ಅರ್ಜಿಗಳ ಮೇಲೆ ನೋಟಿಸ್ ಜಾರಿಗೊಳಿಸಿದ್ದು,ಅಕ್ಟೋಬರ್ 9ರಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ.
30+ ದೇಶಗಳ 230+ ಪತ್ರಕರ್ತರು ಮತ್ತು ಇತರರ ಬೆಂಬಲ -ಬಂಧಿತರನ್ನು ಬಿಡುಗಡೆ ಮಾಡಲು ಆಗ್ರಹ
ಈ ನಡುವೆ ಜಗತ್ತಿನ ಎಲ್ಲೆಡೆಯಿಂದ 230+ ಪತ್ರಕರ್ತರು, ರಾಜಕೀಯ ನಾಯಕರು, ಕಲಾವಿದರು ಮತ್ತು ಶಿಕ್ಷಣ ರಂಗದ ವ್ಯಕ್ತಿಗಳು ನ್ಯೂಸ್‌ಕ್ಲಿಕ್‌ಗೆ ಬೆಂಬಲವಾಗಿ ಹೇಳಿಕೆಯನ್ನು ನೀಡಿರುವುದಾಗಿ ‘ಪೀಪಲ್ಸ್ ಡೆಸ್ಪ್ಯಾಚ್’ ವರದಿ ಮಾಡಿದೆ.
ನ್ಯೂಸ್‍ಕ್ಲಿಕ್ ಮಾತ್ರವಲ್ಲ, ಅದರೊಂದಿಗೆ ಸಹಯೋಗ ಹೊಂದಿರುವ ಅಂತರ್ರಾಷ್ಟ್ರೀಯ ಸಂಸ್ಥೆಗಳಾದ ‘ಪೀಪಲ್ಸ್ ಡೆಸ್ಪ್ಯಾಚ್’ ಮತ್ತು ‘ಟ್ರೈಕೊಂಟಿನೆಂಟಲ್ ರಿಸರ್ಚ್ ಸರ್ವಿಸಸ್‘ನ 100ಕ್ಕೂ ಹೆಚ್ಚ ಪತ್ರಕರ್ತರ ಮೇಲೆ ದಾಳಿಗಳನ್ನು ನಡೆಸಿರುವುದನ್ನು 30 ಕ್ಕೂ ಹೆಚ್ಚು ದೇಶಗಳ ಪ್ರತಿಷ್ಠಿತ ವ್ಯಕ್ತಿಗಳು ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕಂಡಿಸಿದ್ದಾರೆ ಮತ್ತು ಬಂಧಿತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೇರಳ | ನ್ಯೂಸ್ ಕ್ಲಿಕ್ ಮಾಜಿ ಉದ್ಯೋಗಿಯ ನಿವಾಸದ ಮೇಲೆ ದಾಳಿ ನಡೆಸಿ ಲ್ಯಾಪ್‌ಟಾಪ್ ಮೊಬೈಲ್ ವಶಕ್ಕೆ ಪಡೆದ ದೆಹಲಿ ಪೊಲೀಸ್
ಅರ್ಜೆಂಟೀನಾ, ಆಸ್ಟ್ರೇಲಿಯಾ, ಬೆನಿನ್, ಬೊಲಿವಿಯಾ, ಬ್ರೆಜಿಲ್, ಕೆನಡಾ, ಚಿಲಿ, ಚೀನಾ, ಕ್ರೊಯೇಷಿಯಾ, ಕ್ಯೂಬಾ, ಈಕ್ವೆಡಾರ್, ಈಜಿಪ್ಟ್, ಜರ್ಮನಿ, ಗ್ವಾಟೆಮಾಲಾ, ಹೈಟಿ, ಭಾರತ, ಐರ್ಲೆಂಡ್, ಇಟಲಿ, ಜಮೈಕಾ, ಕೀನ್ಯಾ, ಲೆಬನಾನ್, ಮಲೇಷ್ಯಾ, ಮೆಕ್ಸಿಕೋ, ಪೆರು, ಪೋರ್ಟೊ ರಿಕೊ, ರಷ್ಯಾ, ದಕ್ಷಿಣ ಆಫ್ರಿಕಾ, ಸ್ವೀಡನ್, ಟ್ರಿನಿಡಾಡ್ ಮತ್ತು ಟೊಬಾಗೊ, ಯುಕೆ, ಯುಎಸ್ ಮತ್ತು ವೆನೆಜುವೆಲಾ ದೇಶಗಳ 230ಕ್ಕೂ ಹೆಚ್ಚು ಪತ್ರಕರ್ತರು, ರಾಜಕೀಯ ನಾಯಕರು, ಕಲಾವಿದರು ಮತ್ತು ಶಿಕ್ಷಣ ರಂಗದ ವ್ಯಕ್ತಿಗಳು ನ್ಯೂಸ್‌ಕ್ಲಿಕ್ ಅನ್ನು ಬೆಂಬಲಿಸುವ ಬಹಿರಂಗ ಹೇಳಿಕೆಗೆ ಸಹಿ ಹಾಕಿದ್ದಾರೆ.
‘ಜಾಕೋಬಿನ್ ಮ್ಯಾಗಜೀನ್’ನ ಸಂಸ್ಥಾಪಕ ಮತ್ತು ‘ದಿ ನೇಷನ್’ನ ಅಧ್ಯಕ್ಷ ಭಾಸ್ಕರ್ ಸುಂಕರ, ‘ಎಂಪೈರ್ ಫೈಲ್ಸ್’ನ ಅಬ್ಬಿ ಮಾರ್ಟಿನ್ ಮತ್ತು ಮೈಕ್ ಪ್ರೈಸ್ನರ್, ‘ದಿ ಇನ್‌ಸೈಟ್ ನ್ಯೂಸ್‌ಪೇಪರ್’ನ ವ್ಯವಸ್ಥಾಪಕ ಸಂಪಾದಕ , ಘಾನಾದ ‘ಪ್ಯಾನ್ ಆಫ್ರಿಕನ್ ಟೆಲಿವಿಷನ್’ನ ಸಂಸ್ಥಾಪಕ ಕ್ವೆಸಿ ಪ್ರ್ಯಾಟ್, ಇತಿಹಾಸಕಾರ ಮತ್ತು ‘ಪೆಸಿಫಿಕಾ ರೇಡಿಯೊ’ ಮತ್ತು ‘ಕೆಪಿಎಫ್‌ಕೆ-ಲಾಸ್ ಏಂಜಲೀಸ್’ನ ಪತ್ರಕರ್ತ ಜೆರಾಲ್ಡ್ ಹಾರ್ನ್, ‘ದಿ ಮಾರ್ನಿಂಗ್ ಸ್ಟಾರ್’ ಸಂಪಾದಕರಾದ ಬೆನ್ ಚಾಕೊ ಮತ್ತು ರೋಜರ್ ಮೆಕೆಂಜಿ, ಹಾಸ್ಯನಟ ಮತ್ತು ಪತ್ರಕರ್ತ, ‘ಡೇಂಜರಸ್ ಮೈಂಡ್ಸ್’ ನ ಲೀ ಕ್ಯಾಂಪ್ , ಮತ್ತು’ ‘ಬ್ರೇಕ್‌ಥ್ರೂ ನ್ಯೂಸ್’ನ ರಾನಿಯಾ ಖಲೆಕ್ ಮತ್ತು ಯುಜೀನ್ ಪುರ್‌ಇಯರ್ ಮುಂತಾದ ಹೆಸರಾಂತ ಪತ್ರಕರ್ತರು ಮತ್ತು ಲೇಖಕರು ಈ ಬಹಿರಂಗ ಹೇಳಿಕೆ ಸಹಿ ಹಾಕಿದ್ದಾರೆ..
“ನ್ಯೂಸ್‌ಕ್ಲಿಕ್ ನಿಖರವಾಗಿ, ಘನತೆ ಮತ್ತು ಬದಲಾವಣೆಗಾಗಿ ಹಂಬಲಿಸುವ ಸಮಾಜದ ಅಂಚಿನಲ್ಲಿರುವ ಮತ್ತು ದನಿಯಿಲ್ಲದ ವಲಯಗಳಿಗೆ ಧ್ವನಿ ನೀಡಿ, ಬೆಳಕನ್ನು ಬೆಳಗಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ರೀತಿಯ ಮಾಧ್ಯಮವೇ ಆಗಿದೆ” ಎಂದು ಈ ಹೇಳಿಕೆ ವರ್ಣಿಸಿದೆ.
ವಿಡಿಯೋ ನೋಡಿ: “ಬಿಜೆಪಿ ತೊಲಗಿಸಿ, ಮಹಿಳೆಯರನ್ನು ರಕ್ಷಿಸಿ, ದೇಶ ಉಳಿಸಿ”ಅಕ್ಟೋಬರ್ 5ರಂದು ಮಹಿಳೆಯರ ‘ಮಹಾ ಧರಣಿ’ Janashakthi Media