ಬೀದರ್: ಕರ್ನಾಟಕದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇವೆ. ಚಾಮರಾಜನಗರದ ಯಡವನಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಸಾಲು ಸಾಲು ಘಟನೆ-ಆರೋಪಗಳು ಕೇಳಿರುವ ಇದರ ಬೆನ್ನಲ್ಲೇ ಇದೀಗ ಬೀದರ್ ತಾಲೂಕಿನ ಹಳ್ಳಿಖೇಡ್ (ಕೆ) ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಶಾಲೆಯ ಪ್ರಾಂಶುಪಾಲ ನಾಗಶೆಟ್ಟಿ ಕುಲಕರ್ಣಿ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಲೆಯ 20ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಂಭೀರ ಸ್ವರೂಪದಲ್ಲಿ ಆರೋಪ ಮಾಡಿದ ಹಿನ್ನೆಲೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಐದು ಜನ ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿದ್ದರು. ಈ ತಂಡ ತನಿಖೆ ನಡೆಸಿ ವರದಿ ಸಲ್ಲಿಸಿದ ಆಧಾರದ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರಿನ ಮೇಲೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರಿನ ಮೇಲೆ ಚಿಟಗುಪ್ಪ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ : ಪ್ರಾಚಾರ್ಯ ಸೇರಿ ಇಬ್ಬರ ಬಂಧನ
ಏನಿದು ಪ್ರಕರಣ: ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಲೈಂಗಿಕ ಕಿರುಕುಳ ಬಗ್ಗೆ ಜುಲೈ-20 ರಂದು ಮಾಧ್ಯಮಗಳಲ್ಲಿ ವರದಿಯಾಗಿದ್ದ ಸುದ್ದಿಯನ್ನಾದರಿಸಿ ಜಿಲ್ಲಾಧಿಕಾರಿಗಳು ಐವರು ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಈ ಬಗ್ಗೆ ವರದಿ ಸಲ್ಲಿಸುವಂತೆ ತಿಳಿಸಿತ್ತು.
ಅದರಂತೆ ಸದರಿ ತಂಡವು ನಿನ್ನೆ ಜುಲೈ-21 ರಂದು ದಿನ ವಸತಿ ಶಾಲೆಗೆ ಭೇಟಿ ನೀಡಿದ್ದ ತಂಡ ಮೊದಲಿಗೆ ಪ್ರಾಂಶುಪಾಲ ನಾಗಶೆಟ್ಟಿಯನ್ನು ವಿಚಾರಣೆ ನಡೆಸಿತು. ಬಳಿಕ ಭೋದಕ ಮತ್ತು ಭೋದಕೇತರ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿತು. ಇದಾದ ಬಳಿಕ 8ನೇ,9ನೇ ಮತ್ತು 10ನೇ ತರಗತಿಯ ಮಕ್ಕಳೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಎಲ್ಲಾರ ಮೌಖಿಕ ಮತ್ತು ಲಿಖಿತ ಹೇಳಿಕೆಗಳನ್ನು ಪಡೆದುಕೊಂಡರು.
ವರದಿ ಪ್ರಕಾರ ಇದೇ ತಿಂಗಳು 7 ರಂದು ವಿದ್ಯಾರ್ಥಿನಿಯೊಬ್ಬರ ಜನ್ಮದಿನವಿತ್ತು. ಹೀಗಾಗಿ ಆ ದಿನ ಬೆಳಿಗ್ಗೆ 9 ಗಂಟೆಗೆ ತಮ್ಮವಸತಿ ಗೃಹದ ಕಸಗೂಡಿಸಲು ಮಕ್ಕಳನ್ನು ಕರೆದಿದ್ದಾರೆ. ಆ ದಿನದಿಂದ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಾಂಶುಪಾಲರು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಅರೋಪದ ವರದಿಯನ್ನು ಹಾಗೂ ವಿದ್ಯಾರ್ಥಿಗಳ ಹೇಳಿಕೆಯನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದ್ದಾರೆ. ವರದಿ ಪರಿಶೀಲನೆ ಮಾಡಿದ ನಂತರ ಕೂಡಲೇ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಅಲ್ಲಿನ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಘಟನೆ ಕುರಿತು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.