ಚುನಾವಣಾ ಅಕ್ರಮಗಳ ಆರೋಪ : ಜೆಡಿಎಸ್‌ ಶಾಸಕ ಗೌರಿಶಂಕರ್‌ ಅನರ್ಹ

ಬೆಂಗಳೂರು : ಚುನಾವಣಾ ಅಕ್ರಮಗಳ ಆರೋಪದಡಿ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಈ ಕುರಿತಂತೆ ಕಾಯ್ದಿರಿಸಿದ್ದ ಮಹತ್ವದ ತೀರ್ಪನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಕಲಬುರ್ಗಿ ಪೀಠದಿಂದ ಪ್ರಕಟಿಸಿದೆ.

“ಗೌರಿಶಂಕರ್‌ ಆಯ್ಕೆಯನ್ನು ಅಸಿಂಧುಗೊಳಿಸಬೇಕು’ ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಸುರೇಶ್ ಗೌಡರ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಸುದೀರ್ಘ ವಾದ ಮಂಡಿಸಿದ್ದರು.

ಮಧ್ಯಂತರ ತಡೆ : ತೀರ್ಪು ಹೊರಬೀಳುತ್ತಲೇ, ಗೌರಿಶಂಕರ್ ಪರ ವಕೀಲ ಆರ್. ಹೇಮಂತ ರಾಜ್‌, “ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತೀರ್ಪಿಗೆ ತಡೆ ನೀಡಬೇಕು” ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ.

ಇದನ್ನೂ ಓದಿ : ಕಾರ್ಯಾಚರಣೆಗೆ ಇಳಿದ ಚುನಾವಣಾ ಆಯೋಗ; ಚಿನ್ನ, ಬೆಳ್ಳಿ, ನಗದು ವಶ

ಅನರ್ಹತೆ ಭೀತಿ: “ಆಯ್ಕೆಯನ್ನು ಹೈಕೋರ್ಟ್ ಅನೂರ್ಜಿತಗೊಳಿರುವ ಕಾರಣ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಗೌರಿಶಂಕರ್ ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬಹುದು. ಹಾಗಾಗಿ, ಈಗ ಗೌರಿಶಂಕರ್ ಮುಂದಿರುವ ಆಯ್ಕೆ ಎಂದರೆ 30 ದಿನಗಳ ಒಳಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಅಲ್ಲಿ ಹೈಕೋರ್ಟ್ ತೀರ್ಪಿಗೆ ತಡೆ ಪಡೆದರೆ ಮಾತ್ರ ಗೌರಿಶಂಕರ್ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿದೆ” ಎಂಬುದು ಕಾನೂನು ತಜ್ಞರ ಅಭಿಮತ

Donate Janashakthi Media

Leave a Reply

Your email address will not be published. Required fields are marked *