ಬೆಂಗಳೂರು : ‘ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಶಿಫಾರಸು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ, ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಈ ಕುರಿತಂತೆ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ಹೈಕೋರ್ಟ್‌ನ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪೂರ್ಣಗೊಳಿಸಿತು. ಬಾಕಿ ಉಳಿದಿದ್ದ ತಮ್ಮ ವಾದ ಮುಂದುವರಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್, ‘ಇಂತಹುದೇ ತನಿಖಾ ಸಂಸ್ಥೆಯು ತನಿಖೆ ನಡೆಸಬೇಕು ಎಂದು ಹೇಳುವುದಾಗಲೀ ಅಥವಾ ಇಂತಹುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸುವ ಹಕ್ಕನ್ನಾಗಲೀ ಆರೋಪಿ ಹೊಂದಿಲ್ಲ. ವಿಶೇಷ ಅಧಿನಿಯಮವಾದ, ದೆಹಲಿ ಪೊಲೀಸ್ ಸ್ಥಾಪನಾ ಕಾಯ್ದೆ-1947ರ ಕಲಂ 6ರ ಅಡಿಯಲ್ಲಿ ತನಿಖೆಗೆ ನೀಡಲಾದ ಒಪ್ಪಿಗೆಯ ಕಾರಣಗಳನ್ನು ಸಿಬಿಐ ವಿವರಿಸುವ ಅಗತ್ಯವೇ ಇಲ್ಲ’ ಎಂದರು.
‘ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಇಂತಹದೇ ಮೇಲ್ಮನವಿಯನ್ನು ರಾಜ್ಯ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ 2020ರಲ್ಲೇ ವಜಾಗೊಳಿಸಿದೆ. ಈ ಅರ್ಜಿಯನ್ನು 2020ರಲ್ಲೇ ಸಲ್ಲಿಸಿದ್ದರೂ ಇದಕ್ಕೆ ತಡೆ ಸಿಕ್ಕಿಲ್ಲ. ಆದಕಾರಣ ಕಾನೂನು ರೀತ್ಯಾ ಶಿವಕುಮಾರ್ ಅವರ ಈ ಅರ್ಜಿ ಊರ್ಜಿತವಾಗುವುದಿಲ್ಲ’ ಎಂದು ವಿವರಿಸಿದರು. ‘ಎರಡೂವರೆ ವರ್ಷಗಳಲ್ಲಿ ಸಿಬಿಐ ಈಗಾಗಲೇ ಶೇ 90ರಷ್ಟು ತನಿಖೆ ಪೂರ್ಣಗೊಳಿಸಿದೆ. ಈ ಕುರಿತಂತೆ ತನಿಖೆಯ ವಸ್ತುಸ್ಥಿತಿ ವರದಿಯನ್ನು ಕೋರ್ಟಿಗೂ ಸಲ್ಲಿಸಲಾಗಿದೆ. ಇಷ್ಟೆಲ್ಲಾ ಸಮಯ ಕಳೆದ ಮೇಲೆ ಅರ್ಜಿದಾರರು ಅಧಿಸೂಚನೆ ಪ್ರಶ್ನಿಸುವುದಾ
ಗಲೀ ಅಥವಾ ರದ್ದುಗೊಳಿಸಿ ಎಂದು ಕೋರುವುದಾಗಲಿ ಕಾನೂನು ಪ್ರಕಾರ ಸಾಧ್ಯವಿಲ್ಲ. ಇದು ಆದಾಯ ತೆರಿಗೆ ಕಾನೂನುಗಳ ಪ್ರಕಾರ ದಾಖಲಾಗಿಸಿರುವ ವಿಶೇಷ ಕ್ರಿಮಿನಲ್ ಪ್ರಕರಣ. ಹೀಗಾಗಿ, ಡಿ.ಕೆ. ಶಿವಕುಮಾರ್ ಸಿಬಿಐ ಮುಂದೆ ಹಾಜರಾಗಿ ಕೋಟ್ಯಂತರ ರೂಪಾಯಿಗಳನ್ನು ಎಲ್ಲಿಂದ, ಹೇಗೆ ಸಂಪಾದಿಸಿದರು ಎಂಬುದನ್ನು ವಿವರಿಸಲೇಬೇಕಿದೆ’ ಎಂದು ಪ್ರತಿಪಾದಿಸಿದರು. ಇದನ್ನು ಬಲವಾಗಿ ಅಲ್ಲಗಳೆದ ಶಿವಕುಮಾರ್ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು, ‘ಈ ಪ್ರಕರಣವನ್ನು ದಾಖಲಿಸಿರುವ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ಈಗಾಗಲೇ ಆದಾಯ ತೆರಿಗೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಶಿವಕುಮಾರ್ ಗೆದ್ದಿದ್ದಾರೆ. ಇದು ನಾಲ್ಕನೇ ಎಫ್‌ಐಆರ್. ಜನಪ್ರತಿನಿಧಿಗಳ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಿಸುವ ಮುನ್ನ ವಿಧಾನಸಭಾಧ್ಯಕ್ಷರ ಅನುಮತಿ ಪಡೆಯಬೇಕಿತ್ತು. ಅಂತೆಯೇ, ತನಿಖೆಗೆ ನೀಡಲಾಗಿರುವ ಆಡಳಿತಾತ್ಮಕ ನಿರ್ಧಾರಕ್ಕೆ ಸಕಾರಣವೂ ಇಲ್ಲ. ಹೀಗಾಗಿ, ತನಿಖೆಗೆ ಶಿಫಾರಸು ಮಾಡಲಾದ ಕ್ರಮವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.
ಇದನ್ನೂ ಓದಿ : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ : ಡಿಕೆಶಿ ಸದ್ಯಕ್ಕೆ ಸೇಫ್
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ತೀರ್ಪು ಕಾಯ್ದಿರಿಸಿರುವುದಾಗಿ ಪ್ರಕಟಿಸಿತು. ಇದೇ ವೇಳೆ ಸಿಬಿಐ ತನಿಖೆಗೆ ಹೈಕೋರ್ಟ್ 2023ರ ಫೆಬ್ರುವರಿ 10ರಂದು ನೀಡಿರುವ ಮಧ್ಯಂತರ ತಡೆಯನ್ನು ವಿಸ್ತರಿಸಿತು.
ಪ್ರಕರಣವೇನು?:
‘ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 13 (2), 13 (1)(ಇ) ಅಡಿಯಲ್ಲಿ 2020ರ ಅಕ್ಟೋಬರ್ 3ರಂದು ಸಿಬಿಐ ಪ್ರಕರಣ ದಾಖಲಿಸಿದ್ದು; ಸಿಬಿಐ ತನಿಖೆಗೆ ಒಪ್ಪಿಸಲಾದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಶಿವಕುಮಾರ್ ಈ ಅರ್ಜಿ ಸಲ್ಲಿಸಿದ್ದಾರೆ