ಚೆನ್ನೈ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ(ಇಡಬ್ಲ್ಯೂಎಸ್) ಶೇ 10ರ ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಶನಿವಾರ(ನವೆಂಬರ್ 12) ನಡೆದ ಶಾಸಕಾಂಗ ಪಕ್ಷಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪೊನ್ಮುಡಿ, ತಮಿಳುನಾಡು ಸರ್ಕಾರ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವುದಿಲ್ಲ. ಏಕೆಂದರೆ ಇದು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಖಂಡರು ಮುಖಂಡರು ಇಡಬ್ಲ್ಯೂಎಸ್‌ಗೆ ಶೇ. 10 ರಷ್ಟು ಮೀಸಲಾತಿಯನ್ನು ತಿರಸ್ಕರಿಸುವ ನಿರ್ಣಯ ಅಂಗೀಕರಿಸಿದರು. ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್ ಅವರು, ಇಡಬ್ಲ್ಯೂಎಸ್‌ಗೆ ಶೇ. 10 ರಷ್ಟು ಮೀಸಲಾತಿಯನ್ನು ಒಪ್ಪಿಕೊಳ್ಳುವುದರಿಂದ ಸಾಮಾಜಿಕ ನ್ಯಾಯದ ಮೂಲವನ್ನೇ ಅಸ್ಥಿರಗೊಳಿಸಲು ದಾರಿ ಮಾಡಿಕೊಡುತ್ತದೆ ಎಂದರು.
ಸಾಮಾಜಿಕ ನ್ಯಾಯದ ವಿರುದ್ಧ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ
‘ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10 ಮೀಸಲಾತಿ ನೀತಿಯು ಸಂವಿಧಾನ ಕಲ್ಪಿಸಿರುವ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ವಿವಿಧ ತೀರ್ಪುಗಳಿಗೂ ಇದು ವಿರುದ್ಧವಾಗಿದೆ ಹಾಗೂ ಬಡವರಲ್ಲಿ ಜಾತಿ ತಾರತಮ್ಯ ಸೃಷ್ಟಿಸುವ ಕಾರಣದಿಂದ ಪ್ರಗತಿ ಸಾಧಿಸಿರುವ ಜಾತಿಗಳಿಗೆ ಶೇ 10ರಷ್ಟು ಮೀಸಲಾತಿ ನೀಡುವ 103ನೇ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುತ್ತೇವೆ ಎಂದು ಸರ್ವಪಕ್ಷ ಸಭೆ ನಿರ್ಣಯಿಸಿದೆ.
ಶೇ 10ರ ಮೀಸಲಾತಿ ನೀತಿಯು ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪು ಹಿಂದಿನ ವಿವಿಧ ತೀರ್ಪುಗಳಿಗೆ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು ಮತ್ತು ತಮಿಳುನಾಡು ಸರ್ಕಾರ ತನ್ನ ಬಲವಾದ ವಾದವನ್ನು ಮಂಡಿಸಬೇಕು ಎಂದು ನಿರ್ಣಯಿಸಿದೆ.
ಸ್ಟಾಲಿನ್ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಸಭೆಯಲ್ಲಿ ಆಡಳಿತರೂಢ ಡಿಎಂಕೆ ಪಕ್ಷದ ಮುಖಂಡರು, ಕಾಂಗ್ರೆಸ್, ಎಡಪಕ್ಷಗಳು, ಎಂಡಿಎಂಕೆ ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಎನ್‌ಡಿಎ ಘಟಕ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಭಾಗವಹಿಸಿದ್ದವು. ನವೆಂಬರ್ 08ರಂದು ಪ್ರಕಟಗೊಂಡ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುಂದಿನ ಕ್ರಮದ ಕುರಿತು ಚರ್ಚಿಸಲು ತಮಿಳುನಾಡು ರಾಜ್ಯ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಕರೆದಿತ್ತು.
ಕಾಂಗ್ರೆಸ್ ಮತ್ತು ಸಿಪಿಐ(ಎಂ) ಪಕ್ಷದ ಪ್ರತಿನಿಧಿಗಳು ಡಿಎಂಕೆ ಸರ್ಕಾರ ರಾಜ್ಯದಲ್ಲಿ ತೆಗೆದುಕೊಂಡ ನಿಲುವನ್ನು ಬೆಂಬಲಿಸಿದ್ದಾರೆ. ಈ ಮೀಸಲಾತಿಯಲ್ಲಿ ಡಿಎಂಕೆ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಪ್ರತಿಪಾದಿಸಿದ ಎಐಎಡಿಎಂಕೆ ಹಾಗೂ ಈ ಮೀಸಲಾತಿಯನ್ನು ಸ್ವಾಗತಿಸಿದ ಬಿಜೆಪಿ ಸಭೆಯನ್ನು ಬಹಿಷ್ಕರಿಸಿದ್ದವು.