ಡಿ. 22 – ಮನರೇಗದಲ್ಲಿ ಬದಲಾವಣೆಗಳನ್ನು ವಿರೋಧಿಸಿ ಅಖಿಲ ಭಾರತ ಪ್ರತಿಭಟನಾ ದಿನ: ಎಡಪಕ್ಷಗಳ ಕರೆ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ಮನರೇಗ)ಯ ಬದಲಿಗೆ ‘ವಿಕಸಿತ್‍ ಭಾರತ್- ಗ್ಯಾರಂಟಿ ಫಾರ್ ರೋಜ್‍ಗಾರ್ ಅಂಡ್‍ ಆಜೀವಿಕಾ ಮಿಷನ್‍ (ಗ್ರಾಮೀಣ)’ (ವಿಬಿ-ಜಿ-ರಾಮ್-ಜಿ) ಮಸೂದೆ, 2025 ತಂದು ಮನರೇಗದ ಮೂಲಸ್ವರೂಪವನ್ನೇ ಬದಲಿಸಲು ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರ ಮುಂದಾಗಿದ ಎಂದು ಬಲವಾಗಿ ವಿರೋಧಿಸುತ್ತ ದೇಶದ ಐದು ಎಡಪಕ್ಷಗಳು – ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಲಿಬರೇಷನ್, ಆರ್‌ಎಸ್‍ಪಿ ಮತ್ತು ಫಾರ್ವರ್ಡ್‍ ಬ್ಲಾಕ್-  ಡಿಸೆಂಬರ್ 22ರಂದು ದೇಶವ್ಯಾಪಿ  ಪ್ರತಿಭಟನೆ ನಡೆಸಲು ದೊಡ್ಡ ಸಂಖ್ಯೆಯಲ್ಲಿ ಅಣಿನೆರೆಯಬೇಕು ಎಂದು ಜನತೆಗೆ ಕರೆ ನೀಡಿವೆ.

ಯುಪಿಎ-1 ಸರಕಾರ ಎಡಪಕ್ಷಗಳ ಒತ್ತಡದಿಂದಾಗಿ ತಂದ  ಈ ಸಾರ್ವತ್ರಿಕ , ಬೇಡಿಕೆ-ಚಾಲಿತ ಕಾಯ್ದೆ ಉದ್ಯೋಗದ  ಒಂದು ಸೀಮಿತ ಹಕ್ಕನ್ನು ಕೊಟ್ಟಿದೆ. ಆದರೆ ಹೊಸ ಮಸೂದೆ ಅದರ  ಸ್ವರೂಪವನ್ನೇ ಬದಲಾಯಿಸುತ್ತದೆ ಮತ್ತು ಈ ಸೀಮಿತ ಹಕ್ಕನ್ನೂ ನಿರಾಕರಿಸುತ್ತದೆ.ಹೊಸ ಮಸೂದೆ ಒಕ್ಕೂಟ ಸರಕಾರವನ್ನು ಬೇಡಿಕೆಗೆ ಅನುಗುಣವಾಗಿ ಹಣವನ್ನು ಒದಗಿಸುವ ಹೊಣೆಗಾರಿಕೆಯಿಂದ ಮುಕ್ತಗೊಳಿಸುತ್ತದೆ.

ಖಾತ್ರಿ ಉದ್ಯೋಗವನ್ನು 100ರಿಂದ 125 ಕ್ಕೆ ಹೆಚ್ಚಿಸಲಾಗುವುದು ಎಂಬ ಸರಕಾರದ ದಾವೆ, ಈಗ ಎಲ್ಲರಿಗೂ ಚೆನ್ನಾಗಿಯೇ ತಿಳಿದಿರುವ ಅದರ ಹಲವಾರು ಜುಮ್ಲಾಗಳಲ್ಲಿ ಇನ್ನೊಂದು ಅಷ್ಟೇ ಎಂದಿರುವ ಎಡಪಕ್ಷಗಳು, ಉದ್ಯೋಗ ಚೀಟಿ(ಜಾಬ್‍ ಕಾರ್ಡ್‍)ಗಳನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಗ್ರಾಮೋಣ ಕುಟುಂಬಗಳ ದೊಡ್ಡ ವಿಭಾಗಗಳನ್ನು  ಕಾಯ್ದೆಯಿಂದ ಹೊರಗಿಡುತ್ತವೆ ಎಂದು ಟಿಪ್ಪಣಿ ಮಾಡಿವೆ. ಕೃಷಿ ಚಟುವಟಿಕೆಗಳು ಗರಿಷ್ಟ ಪ್ರಮಾಣಕ್ಕೇರುವ ಸೀಸನ್‍ಗಳಲ್ಲಿ ಉದ್ಯೋಗ ಖಾತ್ರಿಯನ್ನು 60 ದಿನಗಳ ವರೆಗೆ  ಅಮಾನತುಗೊಳಿಸುವುದು ಗ್ರಾಮೀಣ ಕೆಲಸಗಾರರಿಗೆ ಅವರಿಗೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ಕೆಲಸವನ್ನು ನಿರಾಕರಿಸುತ್ತದೆ ಮತ್ತು ಅವರನ್ನು ಭೂಮಾಲಕರ ಮೇಲೆ ಅವಲಂಬಿಸುವಂತೆ ಮಾಡುತ್ತದೆ.

ಇದನ್ನೂ ಓದಿ: ವಿಧಾನ ಪರಿಷತ್ತಿನಲ್ಲಿ ಎರಡು ಮಹತ್ವದ ತಿದ್ದುಪಡಿ ವಿಧೇಯಕಗಳಿಗೆ ಅನುಮೋದನೆ

ಡಿಜಿಟಲ್‍ ‍ಹಾಜರಾತಿಯನ್ನು ಕಡ್ಡಾಯಗೊಳಿಸುವುದು ಗ್ರಾಮೀಣ ಕೆಲಸಗಾರಿಗೆ ಕೆಲಸದ ನಷ್ಟ ಮತ್ತು ಅವರ ಹಕ್ಕುಗಳ ನಿರಾಕರಣೆ ಸೇರಿದಂತೆ ಅಪಾರ ಕಷ್ಟಗಳನ್ನು ತಂದೊಡ್ಡುತ್ತದೆ. ಇದಕ್ಕೆ ಹಣನೀಡಿಕೆಯ ವಿಧಾನವನ್ನು ಬದಲಿಸುವುದಾಗಿ ಪ್ರಸ್ತಾವಿಸುವ ಮೂಲಕ ಕೇಂದ್ರ ಸರಕಾರ ಹೊಣೇಗಾರಿಕೆಯನ್ನು ರಾಜ್ಯಗಳಿಗೆ ದಾಟಿಸುತ್ತದೆ. ಇದು ರಾಜ್ಯಸರಕಾರಗಳಿಗೆ ನಿರ್ಧಾರ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರವನ್ನು ನಿರಾಕರಿಸುತ್ತಲೇ, ಅವರು ಹೊರಲಾರದ ಹಣಕಾಸು ಹೊರೆಯನ್ನು ಹೇರುತ್ತದೆ.  ಮಿಷನ್ನ್ನಿನ ಅಡಿಯಲ್ಲಿ ನಿರುದ್ಯೋಗ ಭತ್ಯೆ ನೀಡುವ ಮತ್ತು ಕೂಲಿ ವಿಳಂಬಕ್ಕೆ ಪರಿಹಾರ ನೀಡುವುದರ ಖರ್ಚನ್ನೂ  ರಾಜ್ಯಗಳೇ ಭರಿಸಬೇಕು ಎಂದು ನಿರೀಕ್ಷಿಸಲಾಗಿದೆ. ಇವೆಲ್ಲ ಬದಲಾವಣೆಗಳ ಉದ್ದೇಶವೆಂದರೆ, ಈ ಯೋಜನೆಯ ವ್ಯಾಪ್ತಿಯನ್ನು ಕಡಿತಗೊಳಿಸುವುದು ಮತ್ತು ಒಕ್ಕೂಟ ಸರಕಾರದ ಹೊಣೆಗಾರಿಕೆಯನ್ನು ಕಡಿಮೆ ಮಾಡುವುದು. ಎಂದು ಎಡಪಕ್ಷಗಳು ಈ ಹೊಸ ಮಸೂದೆಯನ್ನು ವಿಶ್ಲೇಷಿಸುತ್ತ ಟಿಪ್ಪಣಿ ಮಾಡಿವೆ.

 ಯೋಜನೆಯ ಹೆಸರಿನಲ್ಲಿ ಮಹಾತ್ಮ ಗಾಂಧಿಯ ಹೆಸರು ತೆಗೆದು  ಜಿ-ರಾಮ್‍-ಜಿ ಎಂದು ಮಾಡಿರುವುದು ಮಹಾತ್ಮ ಗಾಂಧಿಯವರು ಹಾಕಿಕೊಟ್ಟ ಪರಂಪರೆಯ ಬಗ್ಗೆ ಬಿಜೆಪಿ/ಆರೆಸ್ಸೆಸ್‍ನ ವೈಷಮ್ಯವನ್ನು ಬಿಂಬಿಸುತ್ತದೆ ಎಂದೂ ಎಡಪಕ್ಷಗಳು ಟೀಕಿಸಿವೆ.

ಬಿಜೆಪಿ ತಕ್ಷಣವೇ ವಿಬಿ-ಜಿ-ರಾಮ್‍-ಜಿ  ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸುತ್ತ , ಈ ಎಡಪಕ್ಷಗಳು ಡಿಸೆಂಬರ್‍ 22ರಂದು ದೇಶಾದ್ಯಂತ  ಪ್ರಸ್ತಾವಿತ ಬದಲಾವಣೆಗಳ ವಿರುದ್ಧ ಪ್ರತಿಭಟಿಸುವುದಾಗಿ ಹೇಳಿವೆ. ಜನತೆ ದೊಡ್ಡ ಸಂಖ್ಯೆಯಲ್ಲಿ ಈ ಪ್ರತಿಭಟನೆಗಳನ್ನು ಸೇರಿ ಈ ಹೊಸ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಬೇಕು ಎಂದು ಅವು ಮನವಿ ಮಾಡಿವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯನ್ನು ಸಾರ್ವತ್ರಿಕಗೊಳಿಸಿ, ಕನಿಷ್ಟ 200ದಿನಗಳ ವರೆಗಾದರೂ ಉದ್ಯೋಗವನ್ನು ಖಾತ್ರಿಪಡಿಸುವಂತೆ ಹಣಕಾಸು ನೀಡಿಕೆಯನ್ನು ಒದಗಿಸಿ  ಇದನ್ನು ಮತ್ತಷ್ಟು ಬಲಪಡಿಸಿಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ  ಎಂ ಎ ಬೇಬಿ, ಸಿಪಿಐ ಪ್ರಧಾನ ಕಾರ್ಯದರ್ಶಿ  ಡಿ.ರಾಜ, ಸಿಪಿಐ(ಎಂಲ್) ಲಿಬರೇಷನ್‍ ಪ್ರಧಾನ ಕಾರ್ಯದರ್ಶಿ  ದಿಪಂಕರ್‍ ಭಟ್ಟಾಚಾರ್ಯ, ಆರ್‌ಎಸ್‍ಪಿ ಪ್ರಧಾನ ಕಾರ್ಯದರ್ಶಿ  ಮನೋಜ ‍ಭಟ್ಟಾಚಾರ್ಯ ಮತ್ತು  ಎಐಎಫ್‍ಬಿ ಪ್ರಧಾನ ಕಾರ್ಯದರ್ಶಿ  ಜಿ.ದೇವರಾಜನ್ ಈ  ಜಂಟಿ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ನೋಡಿ: ಉದ್ಯೋಗ ಖಾತ್ರಿ | ಮನರೇಗಾ ಬದಲು ‘ವಿ.ಬಿ-ಜಿ ರಾಮ್ ಜಿ’ ಯಾಕೆ? 125 ದಿನ ಕೆಲಸ ಸಾಧ್ಯವೆ? Janashakthi Media

Donate Janashakthi Media

Leave a Reply

Your email address will not be published. Required fields are marked *