ಮುಂಬಯಿ: ʻನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಚಿತ್ರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಸಿನಿಮಾ ಬಿಡುಗಡೆಗೊಳಿಸಬಾರದೆಂದು ಆಗ್ರಹಿಸಿದ್ದಾರೆ.
ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಯೇಷನ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ. ಈ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಸಿನಿಮಾವನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ಸಿನಿಮಾದ ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ಈ ಚಿತ್ರವನ್ನು ನಿಷೇಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ನಾಥೂರಾಮ್ ಗೋಡ್ಸೆಯ ಪಾತ್ರ ಮಾಡಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಸಂಸದ ಅಮೋಲ್ ಕೋಹ್ಲೆ ಅವರಿಗೂ ಪಾತ್ರ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಹಿರಿಯ ಮುಂಖಡರು ಸಹ ಆಗಿದ್ದಾರೆ.
‘ಗಾಂಧೀಜಿ ಅವರನ್ನು ಇಡೀ ದೇಶ ಮತ್ತು ಪ್ರಪಂಚವೇ ಗೌರವಿಸುತ್ತದೆ. ಅವರ ಆದರ್ಶಗಳು ಪ್ರೀತಿ ಮತ್ತು ತ್ಯಾಗದ ಪ್ರತೀಕಗಳಾಗಿವೆ. ಅಂಥವರನ್ನು ಕೊಂದ ಗೋಡ್ಸೆಯನ್ನು ಹೀರೋ ರೀತಿಯಲ್ಲಿ ಬಿಂಬಿಸುವ ಈ ಸಿನಿಮಾವನ್ನು ನಿಷೇಧಿಸಬೇಕು. ಈ ದೇಶದಲ್ಲಿ ಗೋಡ್ಸೆಗೆ ಕಿಂಚಿತ್ತೂ ಗೌರವ ಸಲ್ಲಬೇಕಾಗಿಲ್ಲ. ಸಂವಿಧಾನದ ಪ್ರತಿಜ್ಞೆ ಮಾಡಿ ಸಂಸದ ಆಗಿರುವ ವ್ಯಕ್ತಿಯೇ ನಾಥೂರಾಮ್ ಗೋಡ್ಸೆಯ ಪಾತ್ರ ಮಾಡಿದ್ದಾರೆ. ಒಂದು ವೇಳೆ ಈ ಸಿನಿಮಾ ಬಿಡುಗಡೆಯಾದರೆ ಇಡೀ ದೇಶಕ್ಕೆ ಆಘಾತ ಆಗಲಿದೆ’ ಎಂದು ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಯೇಷನ್ ಕಡೆಯಿಂದ ಪ್ರಧಾನಿಗೆ ಬರೆಯಲಾದ ಪತ್ರದಲ್ಲಿ ಉಲ್ಲೇಖಿಸಿದೆ.
ಮಹಾರಾಷ್ಟ್ರದಲ್ಲಿ ಚಿತ್ರಕ್ಕೆ ಹೆಚ್ಚು ವಿರೋಧ ವ್ಯಕ್ತವಾಗಿದೆ. ಈ ಸಿನಿಮಾವನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಸಲ್ಲಿಸುವುದಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.
1948ರ ಜನವರಿ 30ರಂದು ಗಾಂಧೀಜಿ ಅವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದರು. ಆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಗೋಡ್ಸೆ ನೀಡಿದ ಹೇಳಿಕೆ ಆಧರಿಸಿ ಈ ಸಿನಿಮಾ ತಯಾರಿಸಲಾಗಿದೆ. ‘ಗಾಂಧಿಯನ್ನು ಕೊಂದಿದ್ದು ನಾಥೂರಾಮ್ ಗೋಡ್ಸೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹತ್ಯೆ ಮಾಡಿದ್ದಕ್ಕೆ ಕಾರಣ ಏನೆಂಬದು ಅನೇಕರಿಗೆ ತಿಳಿದಿಲ್ಲ. ಆ ಕುರಿತು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.