ಬೆಂಗಳೂರು: ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ವಕೀಲರಿಗೆ ಸೂಕ್ತ ರಕ್ಷಣೆ ಅಗತ್ಯವಿದೆ. ಅಲ್ಲದೇ ಕಾನೂನು ವಿದ್ಯಾರ್ಥಿಗಳು ಹಾಗೂ ಯುವ-ಕಿರಿಯ ವಕೀಲರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸಬೇಕಿದೆ ಎಂಬುದೂ ಸೇರಿದಂತೆ ವಕೀಲರ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಅಖಿಲ ಭಾರತ ವಕೀಲರ ಒಕ್ಕೂಟ (AILU) ಸರ್ಕಾರಕ್ಕೆ ಮನವಿ ಮಾಡಿದೆ. ಜೂನ್ 20 ರಂದು ರಾಜ್ಯದ ಕಾನೂನು ಸಚಿವರಾದ ಎಚ್.ಕೆ. ಪಾಟೀಲ್ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿದ AILU ಕರ್ನಾಟಕ ರಾಜ್ಯ ಸಮಿತಿ ಹಾಗೂ ಬೆಂಗಳೂರು ಜಿಲ್ಲಾ ಸಮಿತಿಯ ಮುಖಂಡರು ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದಾರೆ. ರಕ್ಷಣೆ
ಪ್ರಸ್ತುತ ಕರ್ನಾಟಕದಲ್ಲಿ ನ್ಯಾಯ ಕೇಳಿ ಜನಸಾಮಾನ್ಯರು ನ್ಯಾಯಾಲಯಗಳಿಗೆ ಬರುತ್ತಿರುವುದು ಹೆಚ್ಚಾಗಿದೆ. ನ್ಯಾಯ ನಿರೀಕ್ಷೆಯಲ್ಲಿರುವ ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಶ್ರಮಿಸುತ್ತಿರುವ ವಕೀಲರು ಈ ಪ್ರಕ್ರಿಯೆಯಲ್ಲಿ ಹಲವು ಅಡೆತಡೆಗಳನ್ನು ಹಾಗೂ ಬೆದರಿಕೆಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಲ್ಲಿ ವಕೀಲರ ಮೇಲೆ ಹಲ್ಲೆ ನಡೆದಿರುವ ಮತ್ತು ವಕೀಲರ ಕೊಲೆ ನಡೆದಿರುವ ವರದಿಗಳಿವೆ. ರಾಜ್ಯ ಸರ್ಕಾರ ವಕೀಲರ ಸಂರಕ್ಷಣೆ ಕಾಯ್ದೆ ತಂದಿದ್ದರೂ ಅದರಿಂದ ಯಾವುದೇ ಪ್ರಯೋಜನ ಇಲ್ಲ. ಅದು ಕೇವಲ ಕಕ್ಷಿದಾರರಿಂದ ಮಾತ್ರವೇ ರಕ್ಷಣೆ ನೀಡುತ್ತದೆ ಹೊರತು, ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ರಕ್ಷಣೆ ನೀಡುವುದಿಲ್ಲ. ಹೀಗಾಗಿ ವಕೀಲರ ಸಂರಕ್ಷಣೆ ಕಾಯ್ದೆ-2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು ಎಂಬುದೂ ಸೇರಿದಂತೆ ವಕೀಲರ ವಿವಿಧ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು AILU ಮುಖಂಡರು ಆಗ್ರಹ ಪೂರ್ವಕ ಮನವಿ ಮಾಡಿದ್ದಾರೆ.
ನ್ಯಾಯದಾನ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ಹಾಗೂ ನ್ಯಾಯದಾನ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ರಾಜ್ಯದ ನ್ಯಾಯಾಲಯಗಳಲ್ಲಿ ವಿಲೇವಾರಿಗಾಗಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಸಾಕಷ್ಟಿದೆ. ಕಕ್ಷಿದಾರರಿಗೆ ನ್ಯಾಯದಾನ ವಿಳಂಬವಾಗುತ್ತಿದೆ. ನ್ಯಾಯಾಲಯಗಳು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ನ್ಯಾಯಾಂಗ ಇಲಾಖೆ ಸೇರಿದಂತೆ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಅಗತ್ಯವಿರುವ ಹುದ್ದೆಗಳನ್ನು ಮಂಜೂರು ಮಾಡಲು ಸರ್ಕಾರ ಮುಂದಾಗಬೇಕಿದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: `ಕಾಲ್ತುಳಿತ ತಡೆಗೆ ಹೊಸ ಕಾನೂನು : ಇನ್ಮುಂದೆ 3 ವರ್ಷ ಜೈಲು, 5 ಲಕ್ಷ ದಂಡ ಫಿಕ್ಸ್
ರಾಜ್ಯದೆಲ್ಲೆಡೆ ವಕೀಲರ ಸಹಿ ಸಂಗ್ರಹ
ವಕೀಲರ ಬೇಡಿಕೆಗಳಿಗೆ ಸಂಬಂಧಿಸಿ, ರಾಜ್ಯದಲ್ಲಿನ ವಕೀಲರ ಮತ್ತು ಕಾನೂನು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚಿಸಿದ AILU ಕರ್ನಾಟಕ ರಾಜ್ಯ ಸಮಿತಿಯು, ಜೂನ್ 13. 2025 ರಂದು ರಾಜ್ಯದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಕೀಲರ ಸಹಿ ಸಂಗ್ರಹಿಸಲು ಹಾಗೂ ಸರ್ಕಾರಕ್ಕೆ ಮನವಿ ನೀಡಲು ಕರೆ ನೀಡಿತ್ತು. ಅದರಂತೆ ಎ.ಐ.ಎಲ್.ಯು ನೇತೃತ್ವದಲ್ಲಿ ರಾಜ್ಯಾದ್ಯಂತ ವಕೀಲರ ಸಹಿಸಂಗ್ರಹ ಮಾಡಲಾಗಿದೆ.
ರಾಜ್ಯ ಸಮಿತಿಯ ಕರೆಯ ಮೇರೆಗೆ ರಾಜ್ಯಾದ್ಯಂತ ಅಖಿಲ ಭಾರತ ವಕೀಲರ ಒಕ್ಕೂಟದ ನೇತೃತ್ವದಲ್ಲಿ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹಲವು ಕಡೆಗಳಲ್ಲಿ ವಕೀಲರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ವರದಿಗಳು ಬಂದಿವೆ. ಇದರ ಭಾಗವಾಗಿ ಜೂನ್ 20 ರಂದು AILU ಕರ್ನಾಟಕ ರಾಜ್ಯ ಸಮಿತಿ ಹಾಗೂ ಬೆಂಗಳೂರು ಜಿಲ್ಲಾ ಸಮಿತಿಯು ಕಾನೂನು ಸಚಿವರಿಗೆ ಮನವಿ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದ್ದಾರೆ.
ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು
ಬೇಡಿಕೆಗಳ ಕುರಿತು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ರಾಜ್ಯಾಧ್ಯಕ್ಷರಾದ ಹರೀಂದ್ರ, ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಕುಮಾರ, ಖಜಾಂಚಿ ರಾಮಚಂದ್ರರೆಡ್ಡಿ, ಬೆಂಗಳೂರು ಜಿಲ್ಲಾಧ್ಯಕ್ಷರಾದ ಕೆ.ಆರ್.ವೆಂಕಟೇಶ್ ಗೌಡ, ಜಿಲ್ಲಾ ಪದಾಧಿಕಾರಿಗಳಾದ ಆನಂದ್, ಶರಣಬಸವ ಮರದ್, ಹುಳ್ಳಿ ಉಮೇಶ್, ಭೀಮನಗೌಡ, ಹೊಸಕೋಟೆಯ ರಮೇಶ್ ರವಿಕುಮಾರ್, ಹನುಮಂತರಾವ್, ಜಿಲ್ಲಾ ಸಮಿತಿ ಸದಸ್ಯರಾದ ಮೈಲೇಶ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ಇತರೆ ಬೇಡಿಕೆಗಳು
ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕು. ಕಿರಿಯ ವಕೀಲರಿಗೆ 2 ವರ್ಷಗಳ ಕಾಲ ರೂ.10.000 ಮಾಸಿಕ ಸಹಾಯಧನ ನೀಡಬೇಕು. ರಾಜ್ಯದ ಎಲ್ಲಾ ತಾಲ್ಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ರೂ. 5 ಲಕ್ಷ ಮತ್ತು ಜಿಲ್ಲಾ ವಕೀಲರ ಸಂಘಗಳಿಗೆ ರೂ. 10 ಲಕ್ಷ ಅನುದಾನ ಮಂಜೂರು ಮಾಡಬೇಕು.
ರಾಜ್ಯ ಸರ್ಕಾರವು ವಕೀಲರಿಗೆ ವೈದ್ಯಕೀಯ ಹಾಗೂ ಜೀವ ವಿಮೆ ನೀಡಬೇಕು. ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಸ್ಥಾಪಿಸಬೇಕು ಹಾಗೂ ಈಗಿರುವ ಅನುದಾನಿತ ಮತ್ತು ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರ್ಕಾರ ನಿಯಂತ್ರಣ ಮಾಡಬೇಕು. ಹಾಲಿ ಇರುವ ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
ಇದನ್ನೂ ನೋಡಿ: ಭೂಸ್ವಾಧೀನ ವಿರೋಧಿಸಿ ‘ಸಂಯುಕ್ತ ಹೋರಾಟ’ದಿಂದ ‘ದೇವನಹಳ್ಳಿ ಚಲೋJanashakthi Media
ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಆಕಾಡೆಮಿಗಳನ್ನು ಸ್ಥಾಪಿಸಬೇಕು. ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಬೇಕು. ಹಾಗೆಯೇ ಈಗಿರುವ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿನ ಎಲ್ಲ ನ್ಯಾಯಾಲಯದ ಆವರಣಗಳಲ್ಲಿ ವಕೀಲರಿಗೆ ಚೇಂಬರ್ ಗಳನ್ನು ಸ್ಥಾಪಿಸಬೇಕು. ಕಾನೂನು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುವ ಮತ್ತು ಅವರ ಭವಿಷ್ಯವನ್ನು ಅಭದ್ರತೆಯಲ್ಲಿಡುವ ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ(AIBE) ರದ್ದು ಪಡಿಸಬೇಕು.
ಕಂದಾಯ ಪ್ರಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು. ವಕೀಲರ ಸಂಘದ/ ಪರಿಷತ್ತಿನ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾತಿನಿಧ್ಯ ನೀಡಬೇಕು. ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂಬ ೧೩ ಬೇಡಿಕೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಭಾರತ ಸಂವಿಧಾನ ಪೀಠಿಕೆಯಲ್ಲಿನ ಅಂಶಗಳಾದ ಪ್ರಜಾಪ್ರಭುತ್ವ, ಜಾತ್ಯಾತೀತತೆ, ನ್ಯಾಯ, ಸಮಾಜವಾದದ ಉದ್ದೇಶಗಳ ಅಡಿಯಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ (AILU) 1982ರಲ್ಲಿ ಸ್ಥಾಪನೆಯಾಗಿ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ರಕ್ಷಿಸಲು ಹೋರಾಡುತ್ತಿದೆ. ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ದಿವಂಗತ ವಿ.ಆರ್.ಕೃಷ್ಣ ಆಯ್ಕರ್, ಹೆಚ್.ಆರ್. ಖನ್ನಾ, ಎ.ಸಿ. ಗುಪ್ತಾ ಅವರುಗಳು ಹಾಗೂ ಬ್ಯಾರಿಸ್ಟರ್ ಹಾಗೂ ಹಿರಿಯ ವಕೀಲರಾದ ಡ್ಯಾನಿಶ್ ಆಲಿ ಲಲೇಫ್, ಭಾರತದ ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ. ಗೋಪಾಲಗೌಡ ಮತ್ತು ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್, ದಿ ಬ್ಯಾರಿಸ್ಟರ್ ಹೆಚ್.ಕೆ. ವಾಸುದೇವ ರೆಡ್ಡಿ ದೇಶದ ಮತ್ತು ರಾಜ್ಯದ ಇತರ ಹಿರಿಯ ವಕೀಲರ ಮುಂದಾಳತ್ವದಲ್ಲಿ AILU ಸಂಘಟನೆಯು ವಕೀಲರ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುತ್ತಿದೆ. ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯುತ್ತಾ, ಸಂವಿಧಾನದ ಆಶಯಗಳಿಗೆ ತಕ್ಕಂತೆ ಹಲವಾರು ಕಾರ್ಯಕ್ರಮಗಳ ಮೂಲಕ ವಕೀಲರ ನಡುವೆ ಕಾರ್ಯನಿರ್ವಹಿಸುತ್ತಾ ಬಂದಿದೆ. ಅಲ್ಲದೇ ಜನಸಾಮಾನ್ಯರ ಬದುಕನ್ನು ಉತ್ತಮಗೊಳಿಸಲು ಹಲವಾರು ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
