ದೆಹಲಿಯಲ್ಲಿ ಮತದಾನ ಕೇಂದ್ರಗಳೇ ಕೋವಿಡ್ ಲಸಿಕಾ ಕೇಂದ್ರಗಳು: ಅರವಿಂದ್‌ ಕೇಜ್ರಿವಾಲ್‌

ನವದೆಹಲಿ: 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನ‌ ಇಂದಿನಿಂದ ಆರಂಭವಾಗಿದೆ. ಮುಂದಿನ ನಾಲ್ಕು ವಾರಗಳಲ್ಲಿ ದೆಹಲಿಯಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದರು.

ಮತದಾನದ ಕೇಂದ್ರಗಳೇ ಈಗ ಲಸಿಕೆ ಕೇಂದ್ರಗಳಾಗಿದೆ. ಅಲ್ಲೆಲ್ಲ ಲಸಿಕೆ ಅಭಿಯಾನ ನಡೆಯುತ್ತಿದೆ. ದೆಹಲಿಯಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ಲಸಿಕೆ ಅಭಿಯಾನ ಪ್ರಾರಂಬವಾಗಿದೆ.

ಇದನ್ನು ಓದಿ: ಲಸಿಕೆ ಪೂರೈಕೆಯನ್ನು ತುರ್ತಾಗಿ ವಿಸ್ತರಿಸಬೇಕಾಗಿದೆ ಮತ್ತು ಅದು ಸಾಧ್ಯವಿದೆ-ಜನವಿಜ್ಞಾನ ಜಾಲದ ಹೇಳಿಕೆ

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌‌ ಮಾತನಾಡಿ ”ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ನಾಲ್ಕು ವಾರಗಳಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಹಾಕಿಸುವ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗಿದೆ. ಎಲ್ಲಿ ಜನರು ಮತದಾನ ಮಾಡುತ್ತಾರೋ, ಅಲ್ಲೇ ಜನರಿಗೆ ಲಸಿಕೆ ಹಾಕಲಾಗುವುದು” ಎಂದು ಕೇಜ್ರಿವಾಲ್‌ ತಿಳಿಸಿದರು.

ದೆಹಲಿಯಲ್ಲಿ ಸುಮಾರು 280 ವಾರ್ಡ್‌ಗಳಿವೆ. ಬೂತ್ ಮಟ್ಟದ ಅಧಿಕಾರಿಗಳು ನಾಳೆಯಿಂದ 72 ವಾರ್ಡ್‌ ಗಳಿಗೆ ಭೇಟಿ ನೀಡುವರು. 45 ವರ್ಷಕ್ಕೆ ಮೇಲ್ಪಟ್ಟ ಎಲ್ಲರನ್ನು ಗುರುತಿಸಿ ಲಸಿಕಾ ಕೇಂದ್ರಗಳಿಗೆ ಕಳುಹಿಸಲಾಗುವುದು. ನಾಲ್ಕು ವಾರಗಳಲ್ಲಿ 280 ವಾರ್ಡ್‌ಗಳನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಮೂರು ತಿಂಗಳ ಬಳಿಕ ಎರಡನೇ ಡೋಸ್‌ ಅನ್ನು ನೀಡಲು ಇದೇ ರೀತಿಯ ಅಭಿಯಾನವನ್ನು ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಇದನ್ನು ಓದಿ: ಕೋವಿಡ್‌-19: ಲಸಿಕೆಯೇ ಅಂತಿಮ ಅಸ್ತ್ರ

“45 ವರ್ಷಕ್ಕಿಂತ ಮೇಲ್ಪಟ್ಟ ಕೆಲವು ಜನರಿಗೆ ಲಸಿಕೆ ಲಭಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಬೂತ್ ಮಟ್ಟದ ಅಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳದವರ ಮನೆಗೆ ಭೇಟಿ ನೀಡಿ ಲಸಿಕೆ ನೀಡುತ್ತಾರೆ. ಲಸಿಕೆ ಪಡೆಯಲು ಹಿಂಜರಿಯುವವರಿಗೆ ಮನವೊಲಿಸಲಾಗುವುದು” ಎಂದು ತಿಳಿಸಿದ್ದಾರೆ.

“ಒಂದು ತಂಡವು ಪ್ರತಿ ಮನೆಗೆ ತೆರಳಿ ವ್ಯಾಕ್ಸಿನೇಷನ್ ಪಡೆಯಲು ಅರ್ಹವಾಗಿರುವವರಿಗೆ ಡೋಸ್‌ ನೀಡುತ್ತದೆ. ಕೊರೊನಾ ಲಸಿಕೆ ಪಡೆಯಲು ಸಾಧ್ಯವಾಗದ ಹಾಗೂ ಅರ್ಹ ನಾಗರಿಕರನ್ನು ಅವರ ಮನೆಗಳಿಂದ ಲಸಿಕಾ ಕೇಂದ್ರಗಳಿಗೆ ಕರೆತರಲು ಇ-ರಿಕ್ಷಾ ವ್ಯವಸ್ಥೆ ಮಾಡಲಾಗುತ್ತದೆ” ಎಂದು ಹೇಳಿದರು.

“ದೆಹಲಿಯಲ್ಲಿ 45 ವರ್ಷದೊಳಗಿನ 57 ಲಕ್ಷ ಜನರಿದ್ದಾರೆ. ಈಗಾಗಲೇ, 27 ಲಕ್ಷ ಜನರು ಲಸಿಕೆಯ ಮೊದಲ ಡೋಸ್‌ ಪಡೆದಿದ್ದರೆ, 30 ಲಕ್ಷ ಜನರು ಇನ್ನೂ ಲಸಿಕೆ ಹಾಕಿಸಿಕೊಂಡಿಲ್ಲ. ಈ ಹಿನ್ನೆಲೆ ಲಸಿಕೆ ಜನರಿಗೆ ಸುಲಭವಾಗಿ ದೊರೆಯುವಂತೆ ನೋಡಲಾಗುವುದು. ಮತದಾನ ಕೇಂದ್ರಗಳೇ ಲಸಿಕಾ ಕೇಂದ್ರಗಳಾಗಿವೆ. ಆದ್ದರಿಂದ ಲಸಿಕೆ ಪಡೆಯಲು ಜನರು ಹೆಚ್ಚು ದೂರ ಪ್ರಯಾಣಿಸಬೇಕಾದ ಸ್ಥಿತಿ ಬರುವುದಿಲ್ಲ” ಎಂದು ವಿವರಿಸಿದ್ದಾರೆ.

“18-44 ವರ್ಷದವರಿಗೆ ನಾವು ಸಾಕಷ್ಟು ಪ್ರಮಾಣ ಲಸಿಕೆ ಪಡೆದ ಬಳಿಕ ಇದೇ ರೀತಿ ಲಸಿಕೆ ಪಡೆಯಲು ಆಹ್ವಾನ ನೀಡಲಾಗುವುದು. ಎರಡು ತಿಂಗಳೊಳಗೆ ನಾವು ಈ ವರ್ಗಕ್ಕೆ ಲಸಿಕೆ ಹಾಕಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *