ಜಾತಿ ನಿಂದನೆ ಆರೋಪ| ಪುನೀತ್ ಕೆರೆಹಳ್ಳಿ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಕ್ರಿಮಿನಲ್ ಕೇಸ್ಗಳನ್ನು ಎದುರಿಸುತ್ತಿರೊ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಮತ್ತು ಅವಾಚ್ಚ ಶಬ್ದಗಳ ಬಳಕೆ ಮಾಡಿದ್ದ ಬಗ್ಗೆ ಭೈರಪ್ಪ ಹರೀಶ್ ಕುಮಾರ್ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಾತಿ ನಿಂದನೆ, ಬೆದರಿಕೆ ಹಾಗೂ ಅವಾಚ್ಚ ಶಬ್ದಗಳ ಬಳಕೆ ಮಾಡಿದಕ್ಕೆ ಪ್ರಕರಣ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ:ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲು; ಬಂಧನ

“ದಲಿತನಾಗಿರುವ ಕಾರಣ ತನ್ನನ್ನು ಪುನೀತ್ ಕೆರೆಹಳ್ಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜಾತಿ ನಿಂದನೆ ಮಾಡಿದ್ದಾನೆ. ನಾನೊಬ್ಬ ಕನ್ನಡಪರ ಹೋರಾಟಗಾರನಾಗಿದ್ದು, ಇತ್ತೀಚೆಗೆ ಇದ್ರೀಸ್ ಪಾಷಾ ಕೊಲೆ ಆರೋಪದಲ್ಲಿ ಜೈಲು ಶಿಕ್ಷೆಯಿಂದ ಬಿಡುಗಡೆಗೊಂಡ ಬಳಿಕವೂ ಸಮಾಜದ ಸ್ವಾಸ್ಥ್ಯ ಕದಡಲು ಯತ್ನಿಸುತ್ತಿದ್ದ ಪುನೀತ್ ಕೆರೆಹಳ್ಳಿಯ ಬಗ್ಗೆ ಜಾಗೃತರಾಗಿರುವಂತೆ ಸಾಮಾಜಿಕ ಕಳಕಳಿಯಿಂದ ಮಾಧ್ಯಮ ವರದಿಯನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ದಿನಾಂಕ 17-10-2023 ರಂದು ಪುನೀತ್ ಕೆರೆಹಳ್ಳಿ, ನನ್ನ ಮತ್ತು ನನ್ನ ಪತ್ನಿ, ಮಕ್ಕಳ ವಿರುದ್ಧ ನಿಂದನಾತ್ಮಕ ಮಾತುಗಳನ್ನಾಡಿದ್ದಾನೆ. ನನ್ನ ಪತ್ನಿ ,ಮಕ್ಕಳು ತಲೆ ಎತ್ತಿ ನಡೆಯಂದಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ” ಎಂದು ಭೈರಪ್ಪ ಹರೀಶ್ ಕುಮಾರ್ ಅವರು ದೂರಿನಲ್ಲಿ ತಿಳಿಸಿದ್ದರು.

ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿಯನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ತನ್ನನ್ನು ಬಂಧಿಸಿರುವುದು ಅಕ್ರಮವೆಂದು ಆರೋಪಿಸಿ ಪುನೀತ್‌ ಕೆರೆಹಳ್ಳಿ ಹೈಕೋರ್ಟ್‌ ಮೊರೆ ಹೋಗಿದ್ದ. ಇದರ ವಿಚಾರಣೆಗಾಗಿ ಸರ್ಕಾರವು ಸಲಹಾ ಸಮಿತಿ ರಚಿಸಿತ್ತು. ವಿಚಾರಣೆ ನಡೆಸಿದ್ದ ಸಮಿತಿ, ‘ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿಲ್ಲ’ ಎಂದು ಅಭಿಪ್ರಾಯಪಟ್ಟು ವರದಿ ನೀಡಿತ್ತು. ವರದಿಯನ್ವಯ ಆದೇಶ ಹೊರಡಿಸಿದ ಸರಕಾರ, ಪುನೀತ್ ನನ್ನು ಬಂಧನಮುಕ್ತಗೊಳಿಸುವಂತೆ ಪೊಲೀಸ್‌ ಇಲಾಖಗೆ ಸೂಚನೆ ನೀಡಿತ್ತು.

ಈಗಾಗಲೇ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಪುನೀತ್‌ ಕೆರೆಹಳ್ಳಿ 2013ರಲ್ಲಿ ವೇಶ್ಯಾವಾಟಿಕೆ ಪ್ರಕರಣವೊಂದರಲ್ಲಿ ಸಿಲುಕಿ ಬಿದ್ದಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಆ ಪ್ರಕರಣ ಖುಲಾಸೆಯಾಗಿರುವುದು ಇತ್ತೀಚೆಗೆ ಬಯಲಾಗಿತ್ತು. ಗೋ ರಕ್ಷಣೆ ಹೆಸರಲ್ಲಿ ಇದ್ರೀಸ್ ಪಾಷಾ ಎಂಬ ವ್ಯಕ್ತಿಯನ್ನು ಕೊಂದ ಆರೋಪವೂ ಪುನೀತ್‌ ಕೆರೆಹಳ್ಳಿ ಅಂಡ್ ಗ್ಯಾಂಗ್ ಮೇಲೆ ಇದೆ.

ವಿಡಿಯೋ ನೋಡಿ:ಬಳ್ಳಿ ಮಾತ್ರವಲ್ಲ ಬೇರುಗಳನ್ನು ಕೂಡಾ ನಾಶ ಪಡಿಸಬೇಕು: ಚೈತ್ರ ಕುಂದಾಪುರ ವಂಚನೆ ಹಗರಣದ ಬಗ್ಗೆ ಹೋರಾಟಗಾರರ ಆಗ್ರಹ

Donate Janashakthi Media

Leave a Reply

Your email address will not be published. Required fields are marked *