ಕೊಡಗು : ಅಕ್ರಮವಾಗಿ ಸಂಗ್ರಹಿಸಿದ್ದ ವಿವಿಧ ಜಾತಿಯ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳ ನಾಟಾಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ಮಿಥುನ್ ಎಂಬಾತ ತನ್ನ ಮನೆಯೊಳಗೆ ಅಕ್ರಮವಾಗಿ ಬೀಟೆ, ತೇಗ, ನಂದಿ ಮತ್ತು ಅರಿಶಿಣ ತೇಗದ ಮರಗಳ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದಾನೆ.
ಹಾನಗಲ್ಲು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷನಾಗಿರುವ ಮಿಥುನ್, ಈ ಬಾರಿಯ ಚುನಾವಣೆಯಲ್ಲೂ ಸ್ಪರ್ಧಿಸಿದ್ದಾನೆ. ಮಡಿಕೇರಿ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷನೂ ಆಗಿದ್ದಾನೆ. ಒಟ್ಟು 176 ಸಿಎಫ್‍ಟಿ ಮರವನ್ನು ಅಕ್ರಮವಾಗಿ ಸಂಗ್ರಹಿಸಿದ್ದು, ಮಡಿಕೇರಿ ಡಿಎಫ್‍ಓ ಪ್ರಭಾಕರನ್ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಗಳು ಈತನ ಮನೆಮೇಲೆ ದಾಳಿ ನಡೆಸಿ ಮರಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.