ಬೆಂಗಳೂರು: ರಕ್ತಚಂದನ ಮರದ ದಿಮ್ಮಿಗಳನ್ನು ಅಕ್ರಮವಾಗಿ ತಮಿಳುನಾಡಿಗೆ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ರಮ ಜಾಲವನ್ನು ಪತ್ತೆಹಚ್ಚಿರುವ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಸುಮಾರು 1400 ಕೆ.ಜಿ. ರಕ್ತಚಂದನವನ್ನು ಜಪ್ತಿ ಮಾಡಿದ್ದಾರೆ.
ಸಿದ್ಧರಾಜು, ಪ್ರಜ್ವಲ್, ಲೋಕೇಶ್, ದೇವರಾಜ್, ಗೋವಿಂದ ಸ್ವಾಮಿ ಬಂಧಿತ ಆರೋಪಿಗಳಾಗಿದ್ದು, ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ರಕ್ತಚಂದನ ದಿಮ್ಮಿಗಳನ್ನು ಬೊಲೇರೋ ವಾಹನದಲ್ಲಿ ಟೊಮೆಟೊ ಬಾಕ್ಸಿನ ಅಡಿಯಲ್ಲಿ ಇಟ್ಟು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದರು.
ಗೋಣಿ ಚೀಲದಲ್ಲಿ ರಕ್ತಚಂದನದ ತುಂಡುಗಳನ್ನು ತಂದಿದ್ದ ಆರೋಪಿಗಳು, ಇಸ್ಕಾನ್ ದೇವಸ್ಥಾನ ಸಮೀಪದ ಜ್ಯೂಸ್ ಕಾರ್ಖಾನೆ ಬಳಿ ನಿಂತಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ದಾಳಿ ಮಾಡಿದ ಪೊಲೀಸರು ಆರೋಪಗಳನ್ನು ಬಂಧಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ ಅವರು ‘ಆರಂಭದಲ್ಲಿ 11 ಕೆ.ಜಿ. ತೂಕದ ರಕ್ತಚಂದನದ ಎರಡು ತುಂಡುಗಳು ಮಾತ್ರ ಸಿಕ್ಕಿದ್ದವು. ಬಂಧಿತ ಆರೋಪಿಗಳ ವಿಚಾರಣೆ ನಡೆಸಿದಾಗ, ಆರೋಪಿಯೊಬ್ಬನ ಹೊಲದ ಮನೆಯಲ್ಲಿ ರಕ್ತಚಂದನದ ತುಂಡುಗಳು ಇರುವುದು ಗೊತ್ತಾಯಿತು. ಅಲ್ಲಿಗೆ ಹೋಗಿ ಶೋಧ ನಡೆಸಿದ ವಿಶೇಷ ತಂಡ, ಮತ್ತಷ್ಟು ರಕ್ತಚಂದನ ತುಂಡುಗಳನ್ನು ಜಪ್ತಿ ಮಾಡಿದೆ. ಒಟ್ಟು 1400 ಕೆ.ಜಿ ರಕ್ತಚಂದನ ಸಿಕ್ಕಿದೆ’ ಎಂದರು.
ಮಂಡ್ಯದ ದೇವಲಾಪುರ ಕಾಡಿನಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ರಕ್ತಚಂದನ ಮರಗಳನ್ನು ಕಳ್ಳತನ ಮಾಡಿ ಅವುಗಳನ್ನು ತಮಿಳುನಾಡು ಭಾಗಕ್ಕೆ ಸಾಗಿಸಲು ಆರೋಪಿಗಳು ಯತ್ನಿಸಿದ್ದರು. ಆರೋಪಿಗಳ ಪೈಕಿ ಗೋವಿಂದ ಸ್ವಾಮಿ ಮೇಲೆ ಆಂಧ್ರ ಪ್ರದೇಶ, ತಮಿಳುನಾಡು ಭಾಗದಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.