ಬಳ್ಳಾರಿ : ಅಕ್ರಮ ಅದಿರು ಸಾಗಣೆ ಆರೋಪದ ಹಿನ್ನೆಲೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ 54 ಜನರ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಾಗಿದೆ.
ಬಳ್ಳಾರಿ ತಾಲೂಕಿನಿಂದ ತಮಿಳುನಾಡಿಗೆ 19 ಲಾರಿಗಳಲ್ಲಿ ಅಕ್ರಮವಾಗಿ ಅದಿರು ಸಾಗಿಸಿದ ಆರೋಪದಡಿ ಪಾರ್ವತಿ ಟ್ರೇಡರ್ಸ್ನ ಶಶಿಧರ್, ಬಳ್ಳಾರಿ ಮಣಿಕಂಠ ಟ್ರಾನ್ಸ್‌ಫೋರ್ಟ್‌ನ ಸೀನಾ, ಸಾಹಿತಿ ಟ್ರಾನ್ಸ್‌ಫೋರ್ಟ್‌ನ ಮಲ್ಲಿಕಾರ್ಜುನ, ಇಸ್ಪಾತ್‌ನ ಭವಾನಿಸಿಂ, ಕಪಿಲ್ ಅಲಿಯಾಸ್ ಸಂಜಯಕುಮಾರ್ ಸೇರಿದಂತೆ 54 ಜನರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬಿ.ಆರ್. ಮಮತಾ ಅವರು ದೂರು ದಾಖಲಿಸಿದಾರೆ. 19 ಲಾರಿಗಳಲ್ಲಿ 570 ಮೆಟ್ರಿಕ್ ಟನ್ ಅದಿರನ್ನು ಜೂ. 19ರಂದು ಸಾಗಿಸಲಾಗುತ್ತಿತ್ತು. ಪೊಲೀಸರು ತಡೆದು ಮಾಹಿತಿ ನೀಡುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿತ್ತಲ್ಲದೆ, 8,12,001 ಮೌಲ್ಯದ ಅದಿರನ್ನು ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ : ಹೊರ ರಾಜ್ಯಗಳಿಗೆ ಅಕ್ರಮವಾಗಿ ಅದಿರು ಸಾಗಾಣೆ : 20 ಲಾರಿಗಳು ವಶಕ್ಕೆ
ಅಕ್ರಮ ಅದಿರು ಸಾಗಣೆಯ ಪ್ರಮುಖ ರೂವಾರಿಯ ಹೆಸರನ್ನೇ ಎಫ್‌ಐಆರ್‌ನಿಂದ ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅಕ್ರಮ ಅದಿರು ಸಾಗಣೆ ಹಿಂದೆ ಪ್ರಭಾವಿಗಳ ಕೈವಾಡವಿದೆ. ಹೀಗಾಗಿಯೇ ನಗರದಿಂದ ನಿತ್ಯ ಲಾರಿಗಳ ಓಡಾಟವಾದರೂ ಪೊಲೀಸರು ಈವರೆಗೆ ಯಾವುದೇ ಕ್ರಮ ವಹಿಸದೆ ಹಿಂದೇಟು ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಅಕ್ರಮ ಗಣಿಗಾರಿಕೆಗೆ ಕುಖ್ಯಾತಿ ಪಡೆದ ಬಳ್ಳಾರಿಯಲ್ಲಿ ಅಕ್ರಮ ವ್ಯವಹಾರ ಮುಗೀತು ಎಂದುಕೊಳ್ಳುತ್ತಿರುವಾಗಲೇ ಮತ್ತೆ ಅಕ್ರಮದ ದುರ್ವಾಸನೆ ಬರುತ್ತಿರುವುದು ಜಿಲ್ಲೆಯಲ್ಲಿ ಇನ್ನೂ ಅಕ್ರಮ ಗಣಿಗಾರಿಕೆ ಜೀವಂತವಾಗಿದೆ ಎಂಬುದನ್ನು ಸಾಕ್ಷೀಕರಿಸಿದೆ. ಸರ್ಕಾರ ಈ ಕುರಿತು ಸೂಕ್ತ ನಿಗಾ ಹಾಗೂ ಕ್ರಮದ ಹೆಜ್ಜೆ ಇಡದಿದ್ದರೆ ಬಳ್ಳಾರಿ ಜಿಲ್ಲೆಯಲ್ಲಿ ತೆರೆಮರೆಯಲ್ಲಿಯೇ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆದರೂ ಅಚ್ಚರಿ ಇಲ್ಲ ಎಂದು ಪರಿಸರ ಪ್ರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.